ಮೇ 14, 2021

"ಗಾಲಿಬ್ ಸ್ಮೃತಿ" ಎಂಬ ಸುರೆಯ ಗುಂಗಲ್ಲಿ-ಅರುಣಾ ನರೇಂದ್ರ

 

        ಗಜಲ್ ನಾದಲೋಕ ವಾಟ್ಸಪ್ ಗ್ರೂಪ್ ನಿಂದ ಪರಿಚಿತರಾದ ಡಾ. ಮಲ್ಲಿನಾಥ ತಳವಾರ ಅವರು ತಮ್ಮ ನೇರ ನಡೆ-ನುಡಿ, ಪ್ರಯೋಗಶೀಲ ಬರವಣಿಗೆಯಿಂದಾಗಿ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಬುರ್ಗಿಯ ನೂತನ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಇವರು ಈಗಾಗಲೇ 12 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಗಜಲ್ ಗಳ ಜೊತೆಗೆ ಹಾಯ್ಕು, ತಂಕಾ ದಂತಹ ಹೊಸ ಕಾವ್ಯ ಪ್ರಕಾರಗಳಲ್ಲೂ ಕೃಷಿ ಮಾಡುತ್ತಿದ್ದಾರೆ. ತಮ್ಮ ಕೃತಿಗಳ ಬಗ್ಗೆ ಬರೆಯಬೇಕೆಂದು  ಬಳಿ ಬಂದ ಹಲವಾರು ಯುವ ಕವಿಗಳ ಕೃತಿಗಳಿಗೆ ಮೌಲಿಕವಾದ ಮುನ್ನುಡಿ, ಬೆನ್ನುಡಿಗಳನ್ನು ಬರೆದು ಪ್ರೋತ್ಸಾಹಿಸುತ್ತಿದ್ದಾರೆ.

        ಕನ್ನಡ ಗಜಲ್ ಸಾಹಿತ್ಯ ಕುರಿತು ಹಲವಾರು ಪುಸ್ತಕಗಳನ್ನು ಆಕರವಾಗಿಟ್ಟುಕೊಂಡು ಅಧ್ಯಯನ ಮಾಡಿ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿದ್ದಾರೆ. ಗಜಲ್ ಸಾಹಿತ್ಯಾಸಕ್ತರಿಗೆ, ಗಜಲ್ ಬರೆಯಲು ಕಲಿಯುತ್ತಿರುವವರಿಗೆ, ಉದಯೋನ್ಮುಖ ಗಜಲ್ ಬರಹಗಾರರಿಗೆ ಉತ್ತಮ ಮಾಗ೯ದಶ೯ಕ ಕೈಪಿಡಿ ಇದಾಗಿದೆ.

        ಅಂತರಂಗದ ಕಾವ್ಯದ ಮೂಲಕ ಪ್ರೀತಿಸುವ ಹೃದಯಗಳ ಚಡಪಡಿಕೆಗಳನ್ನು, ಸಾಮಾಜಿಕ ಕಳಕಳಿಯನ್ನು, ಲೌಕಿಕದಿಂದ ಅಲೌಕಿಕತೆಯ ಆನಂದವನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಸುಂದರವಾಗಿ, ಛಂದೋಬದ್ಧವಾಗಿ ಪ್ರತಿಮಾತ್ಮಕವಾಗಿ ಹೆಣೆದು ಕೊಟ್ಟಿದ್ದಾರೆ. ಗಜಲ್ ಬರೆಯುವುದೆಂದರೆ ಅದೊಂದು ಧ್ಯಾನ, ಅದೊಂದು ತಪಸ್ಸು, ಅದೊಂದು ಆತ್ಮದ ಅನುಸಂಧಾನವೂ ಆಗಿದೆ.

        ಚಿರು ಪ್ರಕಾಶನದಿಂದ ಪ್ರಕಟಗೊಂಡಿರುವ ಗಾಲಿಬ್ ಸ್ಮೃತಿ ಗಜಲ್ ಸಂಕಲನ ಅತ್ಯಂತ ಆಕರ್ಷಕವಾಗಿದೆ. ಮಿಜಾ೯ ಗಾಲಿಬ್ ಅವರ ಭಾವಚಿತ್ರವಿರುವ ಮುಖಪುಟ ಗಜಲ್ ಪ್ರಿಯರ ಮನ ಸೆಳೆಯುತ್ತದೆ. ಕೃತಿಗೆ ಹಿರಿಯ ಪತ್ರಕರ್ತರು, ಸಾಹಿತಿಗಳು ಆಗಿರುವ ಜಿ. ಸುಬ್ರಾಯ ಬಟ್ ಬಕ್ಕಳ ಅವರು ಡಾ. ಮಲ್ಲಿನಾಥ್ ತಳವಾರ ಅವರ ಗಜಲ್ ಯಾನಕ್ಕೆ ತಂಬೆಲರಿನ ತಂಪು ಸೂಸಿದ್ದಾರೆ. ಪ್ರೊ. ಡಿ.ವಿ ಪರಮಶಿವಮೂರ್ತಿ ಪ್ರಾಧ್ಯಾಪಕರು ಹಾಗೂ ಡೀನ್ ತುಮಕೂರು ವಿಶ್ವವಿದ್ಯಾಲಯ, ಇವರು ಭರವಸೆಯ ಬೆನ್ನುಡಿ ಬರೆದಿದ್ದಾರೆ.

        ಮಲ್ಲಿ  ಎಂಬ ತಖುಲ್ಲುಸ್ ನಾಮದಿಂದ ಬರೆದಿರುವ ಇವರ ಗಜಲ್ ಗಳಲ್ಲಿ ಪ್ರೀತಿ,ಪ್ರೇಮ, ವಿರಹ, ನೋವು, ನಿರಾಸೆ, ಹತಾಶೆ, ಅಸಹಾಯಕತೆ, ವಿಡಂಬನೆ, ಬಂಡಾಯದ ಧ್ವನಿ ಹೆಪ್ಪುಗಟ್ಟಿರುವುದನ್ನು ಕಾಣಬಹುದು.

        ಗಾಲಿಬ್ ಸ್ಮೃತಿ ಯಲ್ಲಿ ಒಟ್ಟು 101 ಗಜಲ್ ಗಳಿವೆ. ಕೆಲವು ಗಜಲ್ ಗಳಂತೂ ಸಾಕಿ ನೀಡುವ ಮಧು ಬಟ್ಟಲಿನಂತೆ ನಶೆ ಏರಿಸುತ್ತವೆ.ಕೆಲವು ಗಜಲ್ ಗಳು ಚಿಂತನೆಗೆ ಒಡ್ಡುತ್ತವೆ. ಕೆಲವು ಮೈ ಮನಗಳಲ್ಲಿ ಹರಿದಾಡಿ ಪುಳಕಗೊಳಿಸುತ್ತವೆ.

        ಗಜಲ್ ಲೋಕದಲ್ಲಿ ಒಂದು ಸುತ್ತು ಸುತ್ತಾಡಿಸಿ ಡಾ. ಮಲ್ಲಿನಾಥ ಅವರು ಗಜಲ್ ಅರ್ಥ, ಹುಟ್ಟು, ಛಂದೋ ಲಕ್ಷಣಗಳನ್ನು, ವೈಶಿಷ್ಟ್ಯಗಳನ್ನು ಹಾಗೂ ವಿಧಗಳನ್ನು ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ಇಡೀ ಗಜಲ್ ಇತಿಹಾಸವನ್ನು ನಮ್ಮೆದುರು ಹೇಳುತ್ತಾ ಹೋಗುತ್ತಾರೆ. ಗಜಲ್ ಪ್ರಕಾರಗಳಾದ ಮುರದ್ದಫ್ ಗಜಲ್, ಗೈರ್ ಮುರದ್ದಫ್ ಗಜಲ್, ಜುಲ್ ಕಾಫಿಯ ಗಜಲ್, ಹುಸ್ನ--ಮತ್ಲಾ ಗಜಲ್, ಸಂಪೂರ್ಣ ಮತ್ಲಾ ಗಜಲ್, ಆಜಾದ್ ಗಜಲ್, ಸೆಹ್ ಗಜಲ್, ಸ್ವರ ಕಾಫಿಯಾ ಗಜಲ್, ನಜರಿ ಗಜಲ್, ತರಹಿ ಗಜಲ್, ಮುಸಲ್ ಸಲ್ ಗಜಲ್, ಗೈರ್ ಮುಸಲ್ ಸಲ್ ಗಜಲ್, ಜಿನ್ ಸಿ ಗಜಲ್, ಸೂಫಿ ಗಜಲ್, ಆಂಟಿ ಗಜಲ್ .... ಹೀಗೆ ಎಲ್ಲಾ ಗಜಲ್ ಪ್ರಕಾರಗಳ ಬಗ್ಗೆ ತಮ್ಮ ಗಜಲ್ಗಳನ್ನೇ  ಉದಾಹರಣೆ ನೀಡುತ್ತಾ  ವಿವರವಾಗಿ ತಿಳಿಸಿದ್ದಾರೆ.

 

ಮನ ಮುದಗೊಳಿಸಿದ ಕೆಲವು ಗಜಲ್ಗಳ ಮಿಸ್ರಾಗಳು.

 

ಆಶಾವಾದ ಬೇಕು ಬದುಕು ಸಾಗಿಸಲು ಮಲ್ಲಿ

ಉಸಿರುಗಟ್ಟಿಸುವುದೇ ಕರಗತವಾಗಿದೆ ಇಂದು

 

ಕತ್ತಲಾಯಿತೆಂದು ಕಳವಳ ಪಡದಿರು ಬೆಳಕಾಗುವುದು ಸುಮ್ಮನಿರು

ನಕಾರಾತ್ಮಕ ಚಿಂತನೆ ಮಾಡದಿರು ಬೆಳಕಾಗುವುದು ಸುಮ್ಮನಿರು

 

ನಿನ್ನನ್ನು ಮುದ್ದಿಸುವ ಮಹದಾಸೆ ಮನದಲ್ಲಿದೆ

ನಿನ್ನ ಅನುಪಮ ಸೌಂದರ್ಯವು  ಕಂಗಳಲ್ಲಿದೆ

 

ಅನುದಿನವು ನಾನು ಮಧುಶಾಲೆಗೆ ಹೋಗಬೇಕು ಹೋಗಲು ಬಿಡಿ

ಪ್ರತಿ ದಿನವೂ ನಾನು ಮದಿರೆಯೊಂದಿಗೆ ಬದುಕಬೇಕು ಬದುಕಲು ಬಿಡಿ

 

ಒಂಟಿಯಾಗಿ ಬಂದ ದೇಹಕ್ಕೆ ಜೆಂಟಿಯಾಗುವ ಬಯಕೆಯೇಕೆ

ಬೆತ್ತಲಾಗಿ ಬಂದ ಶರೀರಕ್ಕೆ ರೇಷ್ಮೆಯ ವಸ್ತ್ರಗಳ ಹಂಗೇಕೆ

 

ಎದೆಯ ಬ್ಯಾನಿಗೆ ಮದ್ ಕೊಡತೈತಿ ಬವ೯ಣಿಗೆ

ಬ್ಯಾಸತ್ತ ಮನ್ಸಿಗಿ ಜೀವ ತುಂಬತೈತಿ ಬವ೯ಣಿಗಿ

 

ಆಸೆಯೆಂಬ ಅಲಗು ನೆಮ್ಮದಿಯನ್ನು ಕೊಲ್ಲುವುದು ಗಾಲಿಬ್

ತನುವನ್ನು ನೋವ ಮಡಿಲು ಮಾಡಿ ಉಸಿರುಗಟ್ಟಿಸುವುದು ಗಾಲಿಬ್

 

ಮನಸ್ಸಿಗೆ ತೃಪ್ತಿಯ ಬೇಲಿಯ ಹಾಕಿ ಸಂತೈಸುತ್ತಿರು ಅನುದಿನವು

ನಿನ್ನದಲ್ಲದ ವಸ್ತುವಿನಿಂದ ನಿನ್ನ ಹೃದಯವು ಪರಿತಪಿಸುವುದು ಗಾಲಿಬ್

 

ಗಜಲಿನ ಪ್ರತಿ ಮಿಸ್ರಾವು ನಿನಗಾಗಿ ಕಾಯುತಿದೆ ಸಾಕಿ

ಮತ್ಲಾವು ನಿನ್ನ ಕಂಗಳ ಹೊಳಪನ್ನು ಬಯಸುತಿದೆ ಸಾಕಿ

 

ಹೀಗೆ ಸಂಕಲನದಲ್ಲಿ ತುಂಬಾ ಆಪ್ತವೆನ್ನಿಸುವ ಸಾಲುಗಳು ಮಧುರಾನುಭೂತಿಯನ್ನು ನೀಡುತ್ತವೆ.

 

        ಗಾಲಿಬ್ ಸ್ಮೃತಿ ಡಾ.ಮಲ್ಲಿನಾಥ ತಳವಾರ ಅವರಿಗೆ ಒಳ್ಳೆಯ ಹೆಸರು ತಂದು ಕೊಡುವ ಕೃತಿ ಆಗಿದೆ.

ಇವರಿಂದ ಇನ್ನೂ ಹೆಚ್ಚು ಹೆಚ್ಚು ಉತ್ತಮ ಕೃತಿಗಳು ಬರಲಿಸದಾ ಶುಭ ಕೋರುವೆ

 

ಅರುಣಾ ನರೇಂದ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ