ಮೇ 16, 2021

ಚೇತನಾ ಶಕ್ತಿ ಶೋಭಾ ರಂಜೋಳ್ಕರ್


        ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅಪರೂಪದ ಕಲಾವಿದೆಯಾಗಿ ಗುರುತಿಸಿಕೊಂಡು ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ ಹಿರಿಯ ಕಲಾವಿದೆ ಶೋಭಾ ರಂಜೋಳ್ಕರ್ ಈಗ ನೆನಪು ಮಾತ್ರ. ತಮ್ಮ 67ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ ಈ ಭಾಗದ ಕಲಾ ಹೃದಯಗಳನ್ನು ಮಮ್ಮಲ ಮರಗುವಂತೆ ಮಾಡಿದ್ದಾರೆ.

        ಶೋಭಾ ರಂಜೋಳ್ಕರ್ ಚಲನಚಿತ್ರ ನಟಿಯಾಗಿ, ರಂಗ ನಿರ್ದೇಶಕಿಯಾಗಿ ಕಲಾ ರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮಡಿವಂತಿಕೆಯ ಸಮಯದಲ್ಲಿ ಹೆಣ್ಣುಮಕ್ಕಳು ಕಲಾ ರಂಗದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸುವುದರ ಜೊತೆಗೆ ಅದೆಷ್ಟು ಹೆಣ್ಣುಮಕ್ಕಳು ಈ ಕ್ಷೇತ್ರದಲ್ಲಿ ಧುಮುಕಲು ಪ್ರೇರಕ ಶಕ್ತಿಯೂ ಆಗಿದ್ದಾರೆ.

        ಮೂಲತಃ ತೆಲಂಗಾಣ ರಾಜ್ಯದ ಕೊಡಂಗಲ್‌ನವರಾದ ಶೋಭಾ ಅವರು ಮದುವೆಯಾಗಿ ಕರುನಾಡಿಗೆ ಬರುತ್ತಾರೆ. ಸೇಡಂನ ರಂಜೋಳದ ಇಂಜಿನೀಯರ್ ಭೀಮರಾವ್ ಕುಲಕರ್ಣಿ ಅವರ ಮಡದಿಯಾಗಿ. ಮನೆಯಲ್ಲಿ ಇವರ ಆಸಕ್ತಿಗೆ ದೊರೆತ ಪುಷ್ಟಿಯಿಂದ ಈ ಕಲಾರಂಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ರಂಗ ಮಾಧ್ಯಮ ಕಲಾ ತಂಡ ಹಾಗೂ ಸಂಗಮೇಶ್ವರ ಮಹಿಳಾ ಮಂಡಳದಿಂದ ಮೂಡಿಬಂದ ನಾಟಕಗಳಲ್ಲಿ ಬಣ್ಣ ಹಚ್ಚುತಲೇ ಎರಡು ತಂಡಗಳು ಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವಲ್ಲಿ ಶ್ರಮ ವಹಿಸುತ್ತಾರೆ. ಅನೇಕ ನಾಟಕಗಳನ್ನು ತಾವೆ ನಿರ್ಮಾಣ ಕೂಡಾ ಮಾಡುತ್ತಾರೆ.

        ಕಳೆದ ವರ್ಷವಷ್ಟೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಎಲ್ಲಾ 35 ಪಾತ್ರಗಳಲ್ಲಿ ಮಹಿಳೆಯರೆ ಪಾತ್ರ ನಿರ್ವಹಿಸಿದ “ಯುದ್ಧ ಭಾರತ ನಾಟಕವನ್ನು ಶೋಭಾ ರಂಜೋಳ್ಕರ್ ಪ್ರದರ್ಶನ ಮಾಡಿದ್ದರು. ಖರೋಖರಾ , ಆನಿ ಬಂತಾನಿ, ಹರಕೆಯ ಕುರಿ , ಕೇಳು ಜನಮೇಜಯ, ಶಾಂತತಾ ಕೋರ್ಟ್ ಚಾಲು ಆಹೆ, ಆಧುನಿಕ ದ್ರೋಣ, ಕಾಡು ಕುದುರೆ, ಶರಣು ಶರಣಾರ್ಥಿ, ನಾಪತ್ತೆಯಾದ ಪ್ರೇಮ ಪಸಂಗ, ಮಾತನಾಡುವ ಟೊಂಗೆಗಳು, ನೆಳಲೆಯ ಪ್ರಸಂಗ, ಜಯಿಸಿದ ನಾಯಕ, ಓಕಳಿ, ಅಮೈನಪುರದ ಸಂತೆ, ಗ್ರಹಣ, ಹುಲಿಯ ನೆಲು, ಹಾಸ್ಯ ತರಂಗ, ಅಳಿಯನ ಅವಾಂತರ, ಜೀವನ ಚಕ್ರ, ಜೀವನ ಸಂಘರ್ಷ, ಲಕ್ಕವನ ನಂದಿ, ಸ್ತ್ರೀಲೋಕ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

        ನಾಟಕ ರಂಗವಷ್ಟೇ ಅಲ್ಲದೇ ಬೆಳ್ಳಿ ತೆರೆಯಲ್ಲೂ ತಮ್ಮ ಕಲಾವಂತಿಕೆಯನ್ನು ತೋರಿಸಿದ ಶೋಭಾ ರಂಜೋಳ್ಕರ್ ಅವರು ಕಲಬುರಗಿಯ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರು, ಚಂದ್ರಶೇಖರ ಕಂಬಾರ ಅವರೊಂದಿಗೆ ಬೆಳದಿಂಗಳಾಗಿ ಬಾ, ಗೌತಮ ಸೇರಿದಂತೆ ಮುಂತಾದ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

        ಚಿಕ್ಕ ವಯಸ್ಸಿನಲ್ಲಿಯೇ ಈ ಕಲಾರಂಗಕ್ಕೆ ಪ್ರವೇಶ ಮಾಡಿದ್ದ ಶೋಭಾ ರಂಜೋಳ್ಕರ್ ಅವರನ್ನು ಕಲಾ ಸರಸ್ವತಿ ಸರಿಸುಮಾರು ನಾಲ್ಕು ದಶಕಗಳ ವರೆಗೆ ಬಾಚಿ ತಬ್ಬಿಕೊಂಡು ಆರೈಕೆ ಮಾಡಿದ್ದಳು. ಹೀಗಾಗಿ ರಂಗ ಕ್ಷೇತ್ರದಲ್ಲಿ ಅಪಾರ ಕೊಡುಗೆ ಸಲ್ಲಿಸಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ.

        ನಾಟಕ, ಸಿನಿಮಾ, ಧಾರಾವಾಹಿಗಳು ಸೇರಿದಂತೆ ಆಕಾಶವಾಣಿಯಲ್ಲಿ ಕಲಾವಿದೆಯಾಗಿ ಅದೆಷ್ಟೋ ಬಾನುಲಿ ನಾಟಕಗಳಿಗೆ ತಮ್ಮ ಮನೋಜ್ಞ ಅಭಿನಯದ ಮೂಲಕ ಜೀವಂತಿಕೆಯನ್ನು ತಂದುಕೊಟ್ಟಿದ್ದಾರೆ. ದೂರದರ್ಶನದಲ್ಲಿಯೂ ಅನೇಕ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಆಬಿನಯದ ಜೊತೆಗೆ ಶೋಭಾ ರಂಜೋಳ್ಕರ್ ಅವರು ಅನೇಕ ನಾಟಕಗಳನ್ನು ಸ್ವತಃ ನಿರ್ದೇಶನ ಮಾಡಿ ಅದರಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಭಾವಹಿಸುತ್ತಿದ್ದ ಶೋಭಾ ರಂಜೋಳ್ಕರ್ ಅವರು ಸಾಹಿತ್ಯದ ಕಡೆಗೂ ಅಪಾರ ಆಸಕ್ತಿಯನ್ನು ಹೊಂದಿದವರಾಗಿದ್ದರು. 

        ಮಹಿಳಾ ಜಾಗೃತಿಯ ಬಗ್ಗೆ ಇವರ ಮನಸ್ಸು ಸದಾ ಮಿಡಿಯುತ್ತಿತ್ತ. ಹೀಗಾಗಿ ಕಲಬುರಗಿ ನಗರದಲ್ಲಿ ಸಂಮೆಶ್ವರ ಮಹಿಳಾ ಮಂಡಳದ ಮೂಲಕ ಮಹಿಳೆಯರಲ್ಲಿ ಧೈರ್ಯ ಮತ್ತು ಜಾಗೃತಿ ಮೂಡಿಸುವ ಅದೇಷ್ಟೋ ಪೇರಣದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು . ಹೀಗೆ ಶೋಭಾ ರಂಜೋರ್‌ ಕೇವಲ ಒಬ್ಬ ಮಹಿಳೆಯಾಗಿರದೇ ಒಬ್ಬ ಕಲಾವಿದೆಯಾಗಿರದೇ ಒಂದು ಶಕ್ತಿಯಾಗಿ ನಿಂತಿದ್ದರು. ಆ ಮೂಲಕ ಅದೇಷ್ಟೋ ಮಹಿಳೆಯರಿಗೆ ಚೇತನವನ್ನು ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ