ಜಗತ್ತು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ ಮತ್ತು ತುಂಬಾ ವೇಗವಾಗಿ ಓಡುತ್ತಿದೆ. ಈ ವೇಗದ ಹಾದಿಯಲ್ಲಿ ನಾವೂ ಮುಂದೆ ಓಡಬೇಕೋ ಇಲ್ಲ ಹಿಂದೆ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೆವೆ. ಈ ಗೊಂದಲದ ಮೂಲವೇ "ಎಐ ಜಗತ್ತು". ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಐತಿಹಾಸಿಕ ತಂತ್ರಜ್ಞಾನ. ಇದು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಾಂತಿ ತಂದಿದೆ. ಈ ಕ್ರಾಂತಿ ಪ್ರಗತಿಗೋ ಇಲ್ಲ ಅವನತಿಗೋ ಎಂಬ ಶಂಕೆಯಂತೂ ಖಂಡಿತಾ ಮೂಡಿಸುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಎಐ ಈ ಜಗತ್ತಿನ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆ ಮಾಡುವುದು ಅತೀ ಅಗತ್ಯವಾಗಿದೆ.
ಎಐ ನಮ್ಮ ಜೀವನದಲ್ಲಿ ತಂದ ಬದಲಾವಣೆ
ಎಐ ಬಂದ ನಂತರ, ಮನುಷ್ಯನು ಮಾಡಬೇಕಾದ ಎಲ್ಲಾ ಕೆಲಸವನ್ನು ಅಷ್ಟೇ ಅಲ್ಲ, ಮನುಷ್ಯನು ಮಾಡಲಾಗದ ಕೆಲಸವನ್ನೂ ಕ್ಷಣಾರ್ಧದಲ್ಲಿ ಮಾಡಿ ಬೀಸಾಕುತ್ತಿದೆ. ಉದಾಹರಣೆಗೆ, ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆಯು ಡಯಾಗ್ನೋಸಿಸ್‌ನಲ್ಲಿ ಅತ್ಯಂತ ಪ್ರಮಾಣ ಬದ್ಧತೆಯನ್ನು ತರುತ್ತದೆ. ಇದರಿಂದ ರೋಗಿಗಳ ಜೀವಿತಾವಧಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಎಐ ನಿಯಂತ್ರಣ ವ್ಯವಸ್ಥೆಗಳಲ್ಲಿಯೂ, ತಂತ್ರಜ್ಞಾನದಲ್ಲಿಯೂ ನಮ್ಮ ಬದುಕನ್ನು ಸುಲಭಗೊಳಿಸಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರಿಗೆ ವೈಯಕ್ತಿಕೀಕೃತ ಸೇವೆಗಳನ್ನು ನೀಡಲು, ಎಐ ಆಧಾರಿತ ಆನ್ಲೈನ್ ಶಾಪಿಂಗ್ ಪ್ರಕ್ರಿಯೆಯು ವೇಗವಾಗಿ ಬೆಳೆಯುತ್ತಿದೆ. ಸಿನಿಮಾ, ಕಿರುತೆರೆ, ದ್ವನಿ, ತದ್ರೂಪಿ, ಕಚೇರಿ ಕೆಲಸ, ವ್ಯವಹಾರ, ಬರವಣಿಗೆ, ಮಾರ್ಗದರ್ಶನ ಹೀಗೆ ನೀವು ಏನು ಬೇಕಾದರೂ ಊಹಿಸಬಹುದು. ಕೆಲವೊಮ್ಮೆ ಊಹಿಸಲಾಗದ ಕ್ಷೇತ್ರಕ್ಕೂ ಈ "ಎಐ" ದಾಳಿ ಇಟ್ಟಿದೆ.
ಎಐಯಿಂದ ಎದುರಾಗುವ ಸವಾಲುಗಳು
ಈ ಎಲ್ಲಾ ಸುಧಾರಣೆಗಳ ಜೊತೆಗೆ ಎಐ ಹಲವು ಸವಾಲುಗಳನ್ನು ನಮ್ಮೆದುರು ತರುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಎಐ ತಾಂತ್ರಿಕತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಇದರಿಂದ ಪರಂಪರಾಗತ ಉದ್ಯೋಗಗಳು ಅಪಾಯಕ್ಕೆ ಈಗಾಗಲೇ ಒಳಗಾಗಿವೆ. ಒಂದು ಬದಿಯಲ್ಲಿ ಎಐ ಉತ್ಪಾದಕತೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತಿದೆ. ಮತ್ತೊಂದು ಬದಿಯಲ್ಲಿ, ಕೃತಕ ಬುದ್ಧಿಮತ್ತೆಯು ಮನುಷ್ಯರ ಅಗತ್ಯವನ್ನು ಕಡಿಮೆಮಾಡುತ್ತಿದೆ. ಮನುಷ್ಯನಿಗೆ ಇದ್ದ ಜ್ಞಾನ, ಅನುಭವ ಮತ್ತು ಶ್ರಮಕ್ಕೆ ತಕ್ಕ ಪ್ರಮಾಣದಲ್ಲಿ ಮೌಲ್ಯ ಇಲ್ಲವಾಗಬಹುದೇ ಎಂಬ ಅನುಮಾನ ಮೂಡಿಸುತ್ತಿದೆ.
ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು, ಎಐ ಬಂದು ತಮ್ಮ ಸ್ಥಾನವನ್ನು ಕಬಳಿಸಿಕೊಳ್ಳಲಿದೆ ಎಂಬ ಆತಂಕದಲ್ಲಿದ್ದಾರೆ. ಈ ಆತಂಕವು ಸ್ವಾಭಾವಿಕವಾದರೂ, ನಮಗೆ ಹೊಸ ಕಾಲಘಟ್ಟದಲ್ಲಿ ಹೆಜ್ಜೆಯಿಡಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಬೇಕಾಗಿದೆ ಎನ್ನುವುದು ಗಮನಿಸಬೇಕಾದ ಅಂಶ ಎನ್ನುವವರೂ ಇದ್ದಾರೆ. ಹೊಸ ರೀತಿಯ ಉದ್ಯೋಗಗಳು, ಅವುಗಳಲ್ಲಿರುವ ಹೊಸ ಸವಾಲುಗಳು, ಮತ್ತು ಕೌಶಲ್ಯಗಳ ಅಗತ್ಯವನ್ನು ಅರಿತುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳುವುದು, ಮುಂದಿನ ಪೀಳಿಗೆಗೆ ಶ್ರೇಯಸ್ಕರ ಎಂದೂ ಹೇಳಲಾಗುತ್ತಿದೆ..
ಭವಿಷ್ಯದಲ್ಲಿ ಏನಾಗಬಹುದು?
ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಕ್ರಿಯೆ ಮುಂದುವರಿದರೆ, ಮನುಷ್ಯರು ಕೇವಲ ತಂತ್ರಜ್ಞಾನದ ಸೇವಕರು ಮಾತ್ರ ಆಗಿ ಬಾಳಬಹುದು. ಆದರೆ, ಇದು ಅಪಾಯಕಾರಿಯೂ ಆಗಬಹುದು. ಮಾನವೀಯ ಹೃದಯ ಬುದ್ದಿಯು ಕಡಿಮೆಗೊಳ್ಳುವ ಭೀತಿ ಕೂಡ ಇದೆ. ತಂತ್ರಜ್ಞಾನದಲ್ಲಿ ಜ್ಞಾನವಿದೆ, ಆದರೆ ಮಾನವೀಯತೆ, ಮಾನವೀಯ ಹೃದಯಬುದ್ದಿ ಎಂಬುದು ಅಲ್ಲಿ ಇಲ್ಲ. ಆದ್ದರಿಂದ, ಎಐ ಮನುಷ್ಯರನ್ನು ಸಂಪೂರ್ಣವಾಗಿ ಪ್ರತಿಸ್ಪರ್ಧಿಸಲಾಗದು. ಆದರೆ, ಈ ಕ್ಷಿಪ್ರಗತಿಯ ಪಥದಲ್ಲಿ ನಾವೆಲ್ಲರೂ ಎಐಯನ್ನು ಸರಿಯಾಗಿ ಬಳಸಿಕೊಂಡು, ಮನುಷ್ಯತ್ವವನ್ನು ಉಳಿಸಿಕೊಳ್ಳಲು ಯತ್ನಿಸಬೇಕಾದ ಗುರುತರ ಜವಾಬ್ದಾರಿ ಹೋರಬೇಕಾಗಿದೆ.ಎಐ ಪ್ರಬಲವಾಗಿ ನಮ್ಮ ಆರ್ಥಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕ ಬೌದ್ಧಿಕತೆಯನ್ನು ರೂಪಿಸುತ್ತಿರುವುದರಿಂದ, ಮುಂದಿನ ಹತ್ತು ವರ್ಷಗಳಲ್ಲಿ ನಾವು ಹೇಗೆ ಬದುಕಬೇಕು ಎಂಬುದರ ಬಗೆಗೆ ಹೆಚ್ಚು ಯೋಚನೆ ಮಾಡಬೇಕಾಗಿದೆ. ಎಐಯು ನಮ್ಮ ಸಾಧನೆಗಳನ್ನು ಎತ್ತರಕ್ಕೆ ಎತ್ತುವ ಸಾಮರ್ಥ್ಯವಿದ್ದರೂ, ನಾವು ಎಐಯನ್ನು ಎಂತಹ ಮಿತಿಯಲ್ಲಿ ಬಳಸಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ.
ಎಐ ಭಾವಿ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ
ಎಐ ಮುಂದಿನ ತಲೆಮಾರಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಕೇವಲ ಊಹಿಸಬಹುದು. ಶಾಲಾ ಶಿಕ್ಷಣದಿಂದ ಹಿಡಿದು ಉದ್ಯೋಗ ಪ್ರಾಪ್ತಿಯವರೆಗೆ, ಕೌಟುಂಬಿಕ ಸಂಬಂಧಗಳಿಂದ ಹಿಡಿದು ಸಾಮಾಜಿಕ ಜೀವನದವರೆಗೆ, ಎಲ್ಲವನ್ನೂ ಎಐ ಆವರಿಸಿಕೊಳ್ಳಲಿದೆ. ಬಹುಶಃ ನಮ್ಮ ಚಿಂತನೆಗಳು, ನಮ್ಮ ತೀರ್ಮಾನಗಳು, ಮತ್ತು ನಮ್ಮ ಅಭಿಪ್ರಾಯಗಳನ್ನೂ ಸಹ ಎಐ ರೂಪಿಸುತ್ತದೆಯೋ ಎಂಬ ಆತಂಕವಂತೂ ಇದೆ. ಆ ದಿನಗಳು ಬಹಳ ದೂರವೇನಿಲ್ಲ ಎಂಬ ಭಯ ಈಗಲೇ ಆವರಿಸುತ್ತಿದೆ.
ಆದರೆ, ನಾವು ಎಐಯನ್ನು ಹಿತಕರವಾಗಿ ಬಳಸಿದರೆ, ಇದು ಮುಂಚಿನ ಯಾವುದೇ ತಂತ್ರಜ್ಞಾನದಂತೆ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ನಾವು ಎಐಯನ್ನು ನಿಯಂತ್ರಣದಲ್ಲಿ ಬಳಸದೆ ಹೋದರೆ, ನಾವು ತಂತ್ರಜ್ಞಾನದ ಬಲೆಗೆ ಸಿಲುಕುವ ಅಪಾಯವಿದೆ ಎನ್ನುವುದನ್ನೂ ತಳ್ಳಿ ಹಾಕುವಂತಿಲ್ಲ.
ಅಂತಿಮವಾಗಿ...
ಎಐ ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಸುಧಾರಿಸುತ್ತದೆ, ಮತ್ತು ಪರಿಣಾಮಕಾರಿಯಾಗಿಸುತ್ತದೆ ನಿಜ. ಆದರೆ ಅದರೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ಮುಖ್ಯ. ಎಐಯನ್ನು ನಮ್ಮ ನೆರವಿಗೆ ಬಳಸಿಕೊಂಡು, ನಮ್ಮ ಸೃಜನಶೀಲತೆ, ಮಾನವೀಯ ಮೌಲ್ಯಗಳು, ಮತ್ತು ನೆನೆಪಿನ ಶಕ್ತಿ ಉಳಿಸಿಕೊಂಡು ಮುಂದುವರಿಯುವುದು ಜಾಣತನವಾಗಿದೆ. ಅತಿ ಹೆಚ್ಚು ಆಧರಿಸದೆ, ಸಮತೋಲನದಿಂದ ಎಐಯನ್ನು ಬಳಸಿದರೆ, ಈ ತಂತ್ರಜ್ಞಾನವು ನಮ್ಮ ಜೀವನದಲ್ಲಿ ನಿಜವಾದ ಪ್ರಗತಿಯನ್ನು ತರುತ್ತದೆ.ಈ ಎಐ ಜಗತ್ತಿನಲ್ಲಿ, ನಾವು ಪಶ್ಚಾತ್ತಾಪದಿಂದ ಬದುಕಬೇಕೋ ಅಥವಾ ಪ್ರಗತಿಯಲ್ಲಿ ಮುನ್ನುಗ್ಗಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ. ನಾವು ಈ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡುತ್ತೇವೆ ಎಂಬುದು ಮಾತ್ರವೇ ಈ ತಂತ್ರಜ್ಞಾನ ನಮಗೆ ಆನಂದವನ್ನೇ ತರಬಲ್ಲದೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.