ಏಪ್ರಿಲ್ 03, 2011

ಯುಗಾದಿ

ಯುಗಾದಿಯ ಮಂದಾನಿಲ ಬೀಸುತ್ತಿದೆ
ಮರಗಿಡ ಬಳ್ಳಿಗಳಿಂದ
ಹಸಿರು ಚೇತನವಾಗಿ
ಪುಷ್ಪದುಸಿರು ಹೇಳುತ್ತಿದೆ
ಆವಣಿಯ ಆಲಂಗಿಸಿ ಆಗಮಿಸಿದೆ ಯುಗಾದಿ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಇಂಚರದ ಕೊರಳಿಂದ
ಆಹ್ಲಾದದ ಆಹ್ವಾನವಿತ್ತು
ಮಯೂರ ಸಾಂಗತ್ಯದ
ಸಾಂವತ್ಸರ 'ಸಂಗೀತ ಸಂಜೆ' ಸವಿಯುವ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಬೇವುಬೆಲ್ಲ ಸಿಹಿಕಹಿ
ಸುಖದುಖಃ ಸಮರಸದಲಿ
ಜೀವನ ಸಾಗುತಲಿರಲಿ
ಯುಗಾಂತ ಯುಗಾಂತರ ಯುಗಾದಿ ಚಕ್ರದಲ್ಲಿ...

ಗುಲ್ಬರ್ಗಾ ಉತ್ಸವ...

ಬಹು ಸಂಸ್ಕೃತಿಯ ಸಂಗಮದಲಿ
ಸಹಬಾಳ್ವೆಯ ಸಮರಸ
ಸರ್ವಧರ್ಮ ಸಮನ್ವಯತೆಯಲಿ
ಸೂರ್ಯನಗರಿಯೇ ವಿಹಂಗಮ....

ಈ ಬಿಸಿಲೂರು ಫಲವತ್ತು...
ಪಡೆಯಿರಿ ಇದರ ಸವಲತ್ತು...

ಕಲ್ಯಾಣಕೆ ತೆರೆದಿಹ ಹೆಬ್ಬಾಗಿಲು
ಕವಿ ಕಲಾವಿದರಿಗೆ ತೂಗಿ ತೊಟ್ಟಿಲು
ಸಂಗೀತ ಸಾಹಿತ್ಯ ಶಿಲ್ಪಕಲೆಯ ಮೆಟ್ಟಿಲು
ಇತಿಹಾಸ ಹೇಳುತ್ತಿವೆ ಕೋಟೆ ಕೊತ್ತಲು...

ಹೂವರಳಿ ನಿಂತ ಜಿಲ್ಲೆಯ...
ಭವ್ಯ ಚರಿತೆ ನೀ ಬಲ್ಲೆಯ...

ಬಾನೆತ್ತರ ಬಿಡಿಸಿಟ್ಟ ಬಣ್ಣದ ಕನಸುಗಳೇ
ನನಸು ಮಾಡಲು ಎಷ್ಟೋ ಮನಸುಗಳಿವೆ
ಗರಿಗೆದರಿದ ನೂರಾಸೆಗಳ ಮುಂದಿದೆ ಉಜ್ವಲ ಭವಿಷ್ಯ
ಮುನ್ನುಗ್ಗು ಶ್ರಮಜೀವಿ ನಿನಗೀ ಉತ್ಸವ...

ಉತ್ಸವ ಉತ್ಸವ ಗುಲ್ಬರ್ಗಾ ಉತ್ಸವ...
ಇದು ’ಅನಂತ ಶಕ್ತಿ’ಯ ಉತ್ಸಾಹ...