ಜೂನ್ 28, 2020

ಗಜಲ್ ಲೋಕದಲ್ಲೊಂದು ಸುತ್ತು...


ಬದುಕಿನ ಅನೂಹ್ಯ ಬಣ್ಣಗಳ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯದ ಕಡಲಿನಿಂದ ಯಾವ ವಿಷಯವೂ ಹೊರಗೆ ಉಳಿದಿಲ್ಲ, ಉಳಿಯುವುದೂ ಇಲ್ಲ. ಭಾಷೆಯ ಜೊತೆ ಜೊತೆಗೆ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟ ಭಾಷೆಯ, ಗಡಿಯ ಹಂಗಿಲ್ಲ. ಕನ್ನಡದ ಅರ್ವಾಚೀನ ಸಾಹಿತ್ಯವನ್ನೊಮ್ಮೆ ಅವಲೋಕಿಸಿದಾಗ ಸಂಸ್ಕೃತ ಭಾಷೆಯ, ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವವನ್ನು ಗುರುತಿಸಬಹುದು. ಮುಂದೆ ಹನ್ನೆರಡನೇಯ ಶತಮಾನದ ಅನನ್ಯ ಸಾಹಿತ್ಯ ಪ್ರಕಾರ 'ವಚನ' ವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸಿತು..ಕವಲೊಡೆದ ಕಾಲ ಗರ್ಭದಲ್ಲಿ ಹೊಸಗನ್ನಡಕ್ಕೆ ಪಾಶ್ಚಾತ್ಯ ಸಾಹಿತ್ಯವೇ ದಾರಿ ದೀಪವಾಯಿತು. ನೆಲೆಯಲ್ಲಿ ನೋಡಿದಾಗ ಸಾಹಿತ್ಯವು ಪಾದರಸದಂತೆ ಚಲಿಸುತ್ತಿರುತ್ತದೆ.

ಹಿನ್ನೆಲೆಯಲ್ಲಿ 'ಗಜಲ್' ಸಾಹಿತ್ಯ ರೂಪದ ಪಯಣ ಹೃದಯವನ್ನು ತಟ್ಟಿಬಿಡುತ್ತದೆ. ಇದು ಅರೇಬಿಕ್, ಪಾರ್ಸಿ, ಉರ್ದುವಿನ ಮುಖಾಂತರ ಕನ್ನಡ ಸಾರಸ್ವತ ಲೋಕಕ್ಕೆ ಹೆಜ್ಜೆ ಇಟ್ಟಿದೆ. ಗಜಲ್ ಇದೊಂದು ಸುಂದರ ಪ್ರೇಮಮಯ ಕಾವ್ಯ, ಸಂಗೀತಮಯ ಪ್ರೇಮ. ಹಾಗಂತ ಪ್ರೇಮ ಗೀತೆಗಳೆಲ್ಲವೂ ಗಜಲ್ ಆಗುವುದಿಲ್ಲ. ಗಜಲ್ ಗೆ ತನ್ನದೆಯಾದ   ಗೇಯತೆಯುಳ್ಳ ಲಕ್ಷಣಗಳನ್ನು ಹೊಂದಿದೆ. ಹಿಂದಿಯ 'ದೋಹಾ'ದಂತೆ ಕಂಡರೂ ದೋಹಾವಲ್ಲ!  ದ್ವಿಪದಿಗಳ ಮಾದರಿಯಲ್ಲಿ 'ರಗಳೆ' ಗೆ ಹೋಲಿಕೆಯಾದರೂ ರಗಳೆಯಲ್ಲ.. !!

ಸಾಮಾನ್ಯವಾಗಿ ಒಂದು ಗಜಲ್ ಐದರಿಂದ ಇಪ್ಪತ್ತೈದರವರೆಗೆ ದ್ವಿಪದಿಗಳನ್ನು ಹೊಂದಿರುತ್ತದೆ. ಇತ್ತೀಚಿನ ಹೆಚ್ಚಿನ ಗಜಲ್ ಕಾರರು ಬರೆದಿದ್ದು, ಬರೆಯುತ್ತಿರುವುದು ಐದು ದ್ವಿಪದಿಗಳನ್ನು ಮಾತ್ರ ! ಆರಂಭದ ದ್ವಿಪದಿಯನ್ನು ಮತ್ಲಾ ಎಂದು ಕರೆದರೆ ಗಜಲ್ ಕೊನೆಯ ದ್ವಿಪದಿಯನ್ನು ಮಕ್ತಾ ಎಂದು ಕರೆಯಲಾಗುತ್ತದೆ. ಗಜಲ್ ಪ್ರತಿಯೊಂದು ದ್ವೀಪದಿಗೆ ಷೇರ್ ಎಂದೂ,  ಅದರ ಚರಣಗಳಿಗೆ ಮಿಸ್ರಾ ಎಂದು ಕರೆಯಲಾಗುತ್ತದೆ. ಮಿಸ್ರಾಗಳು ಒಳಗೊಂಡಿರವ ಅನುಪಮ ಲಕ್ಷಣಗಳೆಂದರೆ  ರದೀಫ್ ಮತ್ತು ಕಾಫಿಯಾ. ರದೀಫ್ ಗಜಲ್ ಉದ್ದಕ್ಕೂ ಬಳಕೆಯಾಗುವ ಕೊನೆಯ ಪದ. ಇದು ಒಂದು ಪದವಾಗಿರಬಹುದು ಅಥವಾ ಸಂಪೂರ್ಣ ಅರ್ಥ ನೀಡುವ ಕೆಲವು ಪದಗಳ ಗುಚ್ಛವಾಗಿರಲೂ ಬಹುದು.  ರದೀಫ್ ಗಜಲ್ ಗೆ ಅನಿವಾರ್ಯವಲ್ಲ, ಆದರೆ ಇದ್ದರೆ ಮಾತ್ರ ಗಜಲ್ ಗೆ ಒಂದು ಮೆರಗು ಬರುತ್ತದೆ.

ಇನ್ನೂ ಕಾಫಿಯಾ..... ಗಜಲ್ ಜೀವಾಳ. ಮತ್ಲಾದ ಎರಡೂ ಮಿಸ್ರಾಗಳಲ್ಲಿ ರದೀಫ್ ಗಿಂತಲೂ ಮುಂಚೆ ಬರುತ್ತದೆ. ನಂತರದಲ್ಲಿ ಪ್ರತಿ ಷೇರ್ ಎರಡನೇಯ ಮಿಸ್ರಾದ ಕೊನೆಯಲ್ಲಿ ಮಾತ್ರ ಬರುತ್ತದೆ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸವ ಒಳಪ್ರಾಸವಾಗಿದೆ. ಇಲ್ಲಿ ಕಾಫಿಯಾ ಕೊನೆಯ ಅಕ್ಷರಕ್ಕೆ ರವಿ ಎನ್ನುತ್ತಾರೆ. ರವಿಯ ಪೂರ್ವದ ಅಕ್ಷರಕ್ಕೆ ರೌಫ್ ಎಂತಲೂ, ಅದಕ್ಕಿಂತಲೂ ಮುಂಚಿನ ಅಕ್ಷರಕ್ಕೆ ಕೈದ್ ಎಂತಲು ಕರೆಯುತ್ತಾರೆ. ರೌಫ್ ನಲ್ಲಿ ಒಂದೇ ಅಕ್ಷರ ಪುನರ್ ಬಳಕೆಯಾದರೆ ಅದನ್ನು ಏಕ ಅಲಾಮತ್ ಎಂದೂ ಅಕ್ಷರ ಬೇರೆ ಬೇರೆ ಆಗಿದ್ದಲ್ಲಿ ಬಹು ಅಲಾಮತ್ ಎಂದು ಕರೆಯಲಾಗುತ್ತದೆ. ಕಾಫಿಯಾದ ಹರವು ಅದರ ಮಹತ್ವವನ್ನು ಪ್ರತಿನಿಧಿಸುತ್ತದೆ !! 
-ಡಾ. ಮಲ್ಲಿನಾಥ ಶಿ. ತಳವಾರ
ಕನ್ನಡ ಪ್ರಾಧ್ಯಾಪಕರು,
ನೂತನ ಪದವಿ ಮಹಾವಿದ್ಯಾಲಯ,

ಕಲಬುರಗಿ 585 103

ಜೂನ್ 22, 2020

ಹರಕೆಯ ಕುರಿ
        ಅಂಗುಳ್ ತುಂಬಾ ನೆಳ್ಳು ಹರುವುಕೊಂಡು ಝುಂಪುಳ್ ಆಗಿದ್ದ ಬೇಯಿನ್ ಮರ ತಂಪು ಸುರೀತಾ ಬೆಳೆದು ನಿಂತಾದ. ಅದುರ್ ಕೆಳಗ ಕುರ್ರ್... ಕುರ್ರ್... ಅವಾಜ್ ಮಾಡ ಮುರುಕು ಹೊರಸಿನ ಮ್ಯಾಲ್ ಭೀಮಣ್ಣ ಮುತ್ತ್ಯಾ ಕಾಲು ಮಡಚಿ, ತೆಲಿ ಬುಡುಕ ಬಲಗೈ ಇಟ್ಟುಕೊಂಡು ಏನೋ ಚಿಂತಿ ಒಳಗ ಅಡ್ಡಾಗಿದ್ದ. ಅಲ್ಲೆ ಛಪ್ಪುರ್ ಗುಂಜಿಗಿ ಕಟ್ಟಿದ ಕುರಿಮರಿ ತನ್ನ ಪಾದ ನೆಕ್ಕದು ಗೊತ್ತಾಗಿ ಚಿಂತಿಯೊಳಗಿಂದು ಹೊರಗ ಬಂದು ಮ್ಯಾಲೆದ್ದು ಕುಂತ. ಹಣಿಮ್ಯಾಲ್ ಕೈಇಟ್ಟುಕೊಂಡು ಬೇಯಿನ್ ಮರದ ತಪ್ಪುಲ್ ಒಳಗಿಂದು ಸೂರ್ಯನಿಗಿ ನೋಡ್ದ. ಬ್ಯಾಸ್ಗಿ ಸೂರ್ಯ ನೆತ್ತಿಮ್ಯಾಲಿಂದು ಸರ್ದು ಬಾಜು ಬಂದಿದ್ದ.

 

          ಕುರಿಮರಿ ಎಡ್ಡ್ ಸಲ ಒದರಿ ಅವನಕಡಿಗಿ ನೋಡ್ತು. ಹೊರಸಿನ್ ಮ್ಯಾಲಿಂದು ಎದ್ದು ಆಕಡಿ ಈಕಡಿ ನೋಡ್ದ. ಬೇಯಿನ್ ಮರದ ನೆಳ್ಳಿಗಿ ಮುಂಜಾನಿ ಹೊಲಕ್ಕ್ ಹೋಗಿ ತಂದಿದ್ದ ಆರಿ ತಪ್ಪುಲು ಒಂದು ಹಿಡ್ಕಿ ಹಿಡ್ಕೊಂಡು ಒಯ್ದು ಅದುರ್ ಮುಂದಿನ್ ಗುಂಜಿಗಿ ಕಟ್ಟಿದ. ಹಸ್ದಿದ್ದ ಕುರಿಮರಿ ಆರಿ ತಪ್ಪುಲು ಕಡಕೊಂಡು ತಿಲ್ಲತುತು. ಅಲ್ಲೆ ಕುಂತು ಅದರ ನುಣ್ಣನ ಮೈ ಒರೆಸ್ದ. “ಛಂದ್ ತಿಂದಿ ಝಲ್ದಿ ಧಮ್ ಆಗು. ನುಣ್ಣುಗ್ ಬೆಳ್ದಿ ಅಂದುರ ಪಿರೆ ಮಾರ್ತಿ. ತೋಲೆ ರೊಕ್ಕ ಬಂದ್ವು ಅಂದ್ರ ನಾ ಬಂಬೈಗಿ ಹೋಗಿ ನನ್ನ್ ಮಗನ್ ಮಾರಿ ನೋಡ್ತಿನಿ. ನನ್ ಆಸಿ ನಡಿಸಿಕೊಡೊದು ನಿನ್ ಮ್ಯಾಲೆ ಅದ ! ಅವ್ನಿಗೇ ಬಂಧ್ಹೋಗೋ ಮಗಾ ಅಂದ್ರ ’ನನ್ಗ ಬರ್ಲಾಕ ಪುರ್ಸತ್ಗಿನೆ ಇಲ್ಲೊ ಯಪ್ಪ. ಧಂದ್ಯಾ ಪೂರಾ ನನ್ ಮ್ಯಾಲೆ ಅದಾ. ಯಾಕಂದ್ರ ಆಪೀಸ್ನಾಗ ನಾನೆ ದೊಡ್ದಾಂವಿದ್ದಿನಿ. ಹಂಗೆಲ್ಲ ಬಿಟ್ಟಿ ಬರ್ಲಾಕ್ ಬರಲ್ಲ. ಬೇಕಾದ್ರ ನೀನೆ ಬಂದು ಹೋಗು’ ಅಂದಾನ. ಸರ್ರ್... ಅಂತ ಹೋಗ್ಲಾಕ ಬಂಬೈ ಶ್ಯಾರ್ ಏನು ಇಲ್ಲೆ ಕೂಗಳ್ತ್ಯಾಗದಾನ. ಎಲ್ಲೋ ಸಮ್ದೂರು ಬಲ್ಲ್ಯಾಕ್ ಅದಾ ಅಂತ. ಅಲ್ಲಿಗಿ ಹೊಗ್ಲಾಕ ಪೂರಾ ಒಂದ್ ದಿನಾನೆ ಬೇಕಂತ. ಏನ್ ಮಾಡ್ಲಿ ವೊಟು ದೂರ್ ಅದಾ. ಮತ್ತ ಮೊಟಾರ್ ಗಾಡಿಗಿ ಕಿರಾಯಿಯೇನು ಹತ್ತಿಪ್ಪತ್ತು ರೂಪಾಯಿ ಇರ್ತದ... ಅದಲ್ದೆ ಮಗನ್ ಬಲ್ಲಿಕಿ ಹೊಟಿನಂದ್ರ ಹಂಗೇ ಖಾಲಿ ಕೈಲಿ ಹ್ಯಾಂಗ್ ಹೋಗ್ಲಿಕ್ಕಿ ಬರ್ತದ. ಏನರ ಒಯ್ಲಕ್ಕ ಒಂದೀಸು ಹೆಚ್ಚಿಗೇ ರೊಕ್ಕ ಬೇಕೇ ಆಗ್ತಾವ. ಅದೆಲ್ಲಾ ಬರಾಬರಿ ಆಗ್ಬೇಕಂದ್ರ ನಿನಗ ಮಾರ್ಬೇಕು. ಪಿರೆ ಮಾರ್ಬೇಕು ! ಅದ್ಕೆ ನಿನ್ಗ ಸಲುವಿನಿ”. ಮನಸಿನ್ಯಾಗಿನ್ ಮಾತು ಛೊಲೋ ಜೊರಿಲೆ ಬಂದಿದ್ವು. ಒಂದ್ಸಲ ಕುರಿ ಮರಿ ಇವನ ಮಾರಿ ನೋಡಿ ಸುಮ್ಮನಾಯ್ತು.

 

ಎದುರ ಹಾದಿಗುಂಟಾ ಹೊಲಕ್ಕ ಹೊಂಟಿದ್ದ ಬಾಜು ಮನಿ ಬುದರೇರು ಬಕ್ಕಪ್ಪಾ ಒಬ್ನೆ ಮಾತಾಡ್ತಿದ್ದ ಭೀಮಣ್ಣಗ ನೋಡಿ ಮೂಗಿನಾಗೆ ನಗ್ತಾ ”ಏನೋ ಭೀಮಣ್ಣಾ ! ಕುರಿಮರಿ ಸಂಗಾಟ ಏನೋ ಛೋಲೊನೆ ಮಾತು ಹೇಳ್ಲತ್ತಿದಿ....” ಅಂತ ಅನ್ಕೋತಾ ಬಂದು ಹೊರಸಿನ ಮ್ಯಾಲ ಕುಂತು ಅಂಗಿಯೊಳಗಿನ ಬನೀನ್ ಕಿಸ್ಯಾದಾಗಿಂದು ಚುಟ್ಟದ ಎಲಿ ತೆಗೆದ.

          “ಬಾರೋ ಬಕ್ಕಪ್ಪಾ ಬಾ, ಕುಂದುರ್ರು... ಏನ್ ಮಾಡ್ಲಿ ! ಮಗಾ ಬಂಬೈಗಿ ಹೋಗಿ ಐದು ವರ್ಷ ಆಗ್ಲಾಕ್ ಬಂತು ಈ ಹೋಳಾ ಹುಣ್ಣಿಗಿ. ಅವ್ನಿಗಿ ಬಾ ಅಂದ್ರ ಹಾಪಿಸ್ ಕೆಲ್ಸ ಬಿಟ್ಟು ಬರ್ಲಾಕ್ ಆಗಲ್ಲಂತಾನ. ನಾನೆ ಹೋಗ್ಬೇಕಂದ್ರ ಏನ್ ಸನಿ ಊರಾ... ಈಗಿನ ಕಾಲ್ದಾಗೇನು ಹೋಗಿ ಬರ್ಲಾಕ ಛೋಲೊನೆ ಸವಲತ್ತದ. ಆದ್ರ ರೊಕ್ಕ ಬೇಕಲ್ಲಪ್ಪಾ. ಅದ್ಕೆ ನೋಡು ಈ ಕುರಿಮರಿ ಸಲುವಿನಿ” ಅಂತಂದ ಭೀಮಣ್ಣ ಕುರಿಮರಿ ಮುಂದಿಂದು ಎದ್ದು ಹೊರಸಿನ ಮ್ಯಾಲ ಬಕ್ಕಪ್ಪನ ಬಾಜು ಬಂದು ಕುಂತ.

 

          ಚುಟ್ಟದಾಗ ತಂಬಾಕು ತುಂಬುತ್ತ ಬಕ್ಕಪ್ಪಾ “ಹೂಂ ಛೋಲೊ ಹಿಕಮತಿನೆ ಮಾಡಿದಿ... ಕುರಿಮರಿನೂ ಎಣ್ಣ್ಯಾಗ್ ತೋಳದಂಗ್ ನುಣ್ಣುಗ್ ಅದಾ. ಇನ್ನೊಂದು ಥೊಡೆ ದಿನ ಹಂಗೆ ಬೆಳ್ಸು ದೋನ್-ತೀನ್ ಹಜಾರ್ಕರ ಮಾರ್ತದ...” ಅಂತಂದ.

 

          ಅನುಮಾನದಿಂದ ಭೀಮಣ್ಣ “ಅಂದ್ರ ಇಷ್ಟು ರೊಕ್ಕದಾಗ ಹೊಗಾಬರಾ ಖರ್ಚಾ ಬರಾಬರಿ ಆಗ್ತದಂತಿ”” ಅಂತ ಕೇಳಿದಕ್ಕ “”ಏಯ್ ಮನಾರ್ ಆಯ್ತಾವೊ ಭೀಮಣ್ಣಾ ಬರಾಬ್ಬರೀ ಆಯ್ತವ. ಅದ್ರಾಗ್ ಮತ್ತ್ ನೀ ಮಗನಿಗಿ ಏನರ ತೊಕೊಂಡು ಹೋಗ್ಲಾಕ ಒಂಥೊಡೆ ರೂಪಾಯ್ನೂ ಉಳಿತಾವ... ಏನ್ ಅಂಜಬ್ಯಾಡ” ಅಂತಂದಾಗ ಭೀಮಣ್ಣನ ಎದಿಮ್ಯಾಲಿನ ಕಲ್ಲು ಎತ್ತಿಟ್ಟಂಗಾಯ್ತು.

 

          ಬಕ್ಕಪ್ಪನ ತಲ್ಯಾಗ ಮತ್ತೆನೋ ವಿಚಾರ ಹೊಳ್ದು “ಇನ್ನೊಂದೋ ಭೀಮಣ್ಣ, ನೀ ಈ ಬಸ್ಸಿಗಿಸ್ಸಿಗಂತ ಹೋಗ್ಲಕ ಹೋಗ್ಬ್ಯಾಡ. ಇಲ್ಲಿಂದ ಕಲ್ಬುರ್ಗಿ ತನಕ ಆದುರ್ ಬಸ್ಸಿಗಿ ಹೋಗು. ಆದ್ರ ಕಲ್ಬುರ್ಗಿಲಿಂದ ರೈಲ್ಗಾಡಿಗೆ ಹೋಗು. ಯಾಕಂದ್ರ ರೈಲ್ಗಾಡಿಗಿ ಕಿರಾಯಿ ಬಸ್ಸಿಗಿಂತ ಭಾಳ್ ಕಮ್ಮಿರ್ತದಂತೋ... ಬಸ್ಸಿಗಿ ಹ್ವಾದಿ ಅಂದ್ರ ಪೂರಾ ರೊಕ್ಕ ಅದಕ್ಕೆ ಬಡಿಬೇಕು !” ಅಂದಾಗ ಭೀಮಣ್ಣಗ ಭಾಳ ಸಮಾಧಾನ ಆಯ್ತು. ಇಷ್ಟು ಹೇಳಿ ಬಕ್ಕಪ್ಪ ಹೊರಸಿನ ಮ್ಯಾಲಿಂದು ಎದ್ದು “ಭೀಮಣ್ಣ, ನಾ ಜರಾ ಹೊಲದಕಡಿ ಹೋಗಿ ಬರ್ತಿನಿ” ಅಂತಂದು ಹೊಂಟ.

 

“ಹ್ಞೂಂ ಹೋಗಿ ಬಾ” ಅಂತ ಬಕ್ಕಪ್ಪನ್ನ ಕಳಿಸಿ ತಾನೂ ಮ್ಯಾಲೆದ್ದು ಒಂದು ಸಣ್ಣ ಬುಟ್ಟಿಯೊಳಗ ನೀರು ತೊಕೊಂಡು ಬಂದು ಕುರಿಮರಿ ಮುಂದ ತಂದಿಟ್ಟ. ಮುಂದ ಹಾಕಿದ್ದ ಆರಿತಪ್ಪುಲು ಪೂರಾ ತಿಂದು ನೀರಡಿಸಿದ್ದ ಕುರಿಮರಿ ’ಜೊರ್ರ್... ಜೊರ್ರ್...’ ಅಂತ ಹೊಟ್ಟಿತುಂಬ ನೀರು ಕುಡಿದು ಸಮಧಾನಗೊಂಡು ಕುಂದುರ್ತು. ಭೀಮಣ್ಣಾನೂ ಅಲ್ಲಿಂದ ಮತ್ತ ಹೋಗಿ ಹೊರಸಿನ ಮ್ಯಾಲ ಕುಂತು ಏನೋ ವಿಚಾರದಾಗ ಮುಣುಗಿ ಹೋದ.

          ಮಂದಿ ಅಂತಾರ ಈಗ ಕಾಲಾ ಪೂರಾ ಬದಲಾಗಿ ಬಿಟ್ಟಾದ. ಹಿಂದಿನ್ಹಂಗ ಎದುಕ್ಕೂ ಕಷ್ಟ ಪಡೋದು ಬೇಕಾಗಿಲ್ಲ ಅಂತ. ಜಗತ್ತಿನ ಯಾವುದೋ ಮೂಲ್ಯಾಗ ಏನೋ ಆಗಿದ್ದನ್ನ ಟಿವಿದಾಗ ತೋರಿಸ್ತಾರ. ದೂರ ಊರಾಗಿದ್ದೋರ್ ಗುಡಾ ಫೊನ್ನಾಗ ಮಾತಾಡಕ್ಕ ಬರ್ತದ. ನಮ್ಮೂರಾಗೂ ಆ ಮಾಸ್ಟರ್ ಸಾಬುರ್ ಮನ್ಯಾಗ ಟಿವಿ, ಫೋನು ಅವ. ಅವ್ರ ಟಿವ್ಯಾಗ ನಾಕೈದು ಖೆಪಿ ನಾ ಚಿತ್ರಾ ನೋಡಿನಿ, ಅವು ಮಾತೂ ಆಡ್ತಾವ ! ಅವ್ರ ಫೋನಿನಾಗ ನನ್ನ ಮಗನ ಗೂಡ ಮೂರು ಸಲ ಮಾತಾಡಿನಿ. ಅಕಡಿಂದು ಅಂವ “ನಾ ಎಲ್ಲ ಛೊಲೊ ಇದ್ದಿನಿ... ನಿ ಏನ್ ಕುದಿ ಮಾಡಬ್ಯಾಡ... ನೀ ಛಂದಿರು” ಅಂತ ಹೇಳಿ ಗಪ್ಪಾದ. ನಾನು ಮಗನ ಗೂಡ ಮಾತಾಡಬೇಕಂತ ಬಾಯಿ ತೆಗ್ದುರ ಅಂವಾ ಅಲ್ಲಿ ಫೊನೆ ಇಟ್ಟಿನಂತ. ಅದೂ ಮಾಸ್ಟರ್ ಸಾಬೂರ್ ಮೊಮ್ಮಗಳು ಚಿನ್ನು ನನ್ನ ಕೈಯಾಗಿಂದು ಫೊನ್ ಕಸ್ಕೊಂಡು ತನ್ನ ಕಿವಿಗಿಟ್ಟುಕೊಂಡು ಹೇಳಿದ್ ಮ್ಯಾಗ್ ನನಗ ಗೊತ್ತಾಯ್ತು.ಮನಸಿಗಿ ತೋಲು ಬ್ಯಾಸರಾಯ್ತು. ಅಲ್ಲಾ ಇವೆಲ್ಲ ಬಂದು ಯಾರಿಗಿ ಒಂದು ಮಾಡ್ಲತಾವ ? ಅಂತ ತನ್ನ ಮನಸಿನೊಳಗೆ ಪ್ರಶ್ನೆ ಹಾಕ್ಕೊಂಡ. ಆದ್ರ ಉತ್ರ ಅವನಿಗಿ ಗೊತ್ತಿತ್ತು...!

 

          ಇದೆ ವಿಚಾರದಾಗ ಹೊತ್ತ್ ಮುಣುಗಿದ್ದು ಭೀಮಣ್ಣಗ ಗೊತ್ತಾಗಿ ಎದ್ದು ಕುರಿಮರಿಗಿ ಒಯ್ದು ಪಡಸಾಲ್ಯಾಗ ಕಟ್ಟಿ, ಉಳಿದಿದ್ದ ಆರಿ ತಪ್ಪುಲು ಒಯ್ದು ಅದರ ಮುಂದ ಗುಂಜಿಗಿ ಕಟ್ಟಿದ. ಅಲ್ಲೆ ಮಾಡದಾಗಿನ ಚಿಮಣಿ ತೊಕೊಂಡು ಅದಕ್ಕ ಬಂದಿದ್ದ ಕುಡಿ ತೆಗೆದು ದೀಪ ಹಚ್ಚಿ ಒಲಿಮುಂದ್ ಬಂದು ಕುಂತ. ಗಡಗಿ ತೆಗೆದು ನೋಡಿದ. ಮುಂಜಾನಿ ಮಾಡಿದ್ದ ಬ್ಯಾಳಿ ಇನ್ನಾ ಇತ್ತು. ರೊಟ್ಟಿ ಬುಟ್ಟ್ಯಾಗ ಭೆಳ್ಳನ ಪಾವಡದಾಗ ಸುತ್ತಿಟ್ಟಿದ್ದ ಎರಡ್ ರೊಟ್ಟಿ ತೊಗೊಂಡು ಗಂಗಾಳದಾಗ ಒಡಮುರ್ದು ಹಾಕಿ ಮ್ಯಾಲ ಬ್ಯಾಳಿ ಸುರ್ಕೊಂಡು ಉಂಡ. ಖರ್ರಾನ್ ಕರಮಸಿ ಆಗಿದ್ದ ಗಿಲಾಟಿನ ಬೊಗೊಣಿ ಎತ್ತಿ ಮುಸಿ ನೊಡ್ದ. “ಜರಾ ಮಾರಿ ಕಿಡಿಸ್ಯಾದ, ಇನ್ನೊಂಜರಾ ತಡ ಆಯ್ತಿತ್ತು ಅಂದ್ರ ಮುಸ್ರಿಗೇ ಹಾಕ್ಬೇಕಿತ್ತು” ಅಂದ್ಕೊಂಡು ಅದಿಷ್ಟು ಅನ್ನ, ಬ್ಯಾಳಿ ಕಲ್ಸ್ಕೊಂಡು ಹೊಟ್ಟಿ ತುಂಬ ಉಂಡ. ಗಂಗಾಳು, ಅನ್ನದ ಬೊಗೊಣಿ ಮತ್ತ ಬ್ಯಾಳಿ ಗಡಗಿ ತೊಳ್ದಿಟ್ಟು ಬಾಗುಲು ಮುಂದುಕ್ಕ ಮಾಡಿ ಹಣಮಂದೇವ್ರು ಗುಡಿ ಕಡಿಗಿ ಭಜನಿ ಹಾಕ್ಲಕಂತ ಹೊಂಟ.

 

          ರಾತ್ರಿ ಹನ್ನೆರಡು ಬಡಿಲಾಕ ಮನಿಗಿ ಬಂದು ಕುರಿಮರಿಗಿ ನೋಡ್ತಾನ. ಅದು ಮುದುಡಿಕೊಂಡು ಮಲಗಿತ್ತು. ಅಲ್ಲೆ ಘೂಟುಕ್ ಸಿಗ್ಸಿದ್ದ್ ಕಂಬ್ಳಿ ತೊಕೊಂಡು ಹೊರಗ ಅಂಗಳದಾಗ ಬಂದು ಹೊರಸು ಹಾಕ್ಕೊಂಡು ಮೊಕೊಂಡ. ಆದ್ರ ನಿದ್ದಿನೆ ಬರುವಲ್ದು. ಅವತ್ತೊಂದಿನ ಮಗಂದು ಫೋನ್ ಬರ್ತದೇನೋ ಅಂತ ಮಾಸ್ಟರ್ ಸಾಬೂರ್ ಮನಿಗಿ ಹೋಗಿದ್ದ. ಫೋನ್ ಬರಲಿಲ್ಲ. ಆದ್ರ ಮಾಸ್ಟರ್ ಸಾಬೂರು “ಈ ವಿಜ್ಞಾನ ಅನ್ನೊದು ಬೆಳೆದುಬಿಟ್ಟು ಜಗತ್ತನ್ನೊದು ಒಂದು ಸಣ್ಣ ಹಳ್ಳಿ ಆಗ್ಯಾದ” ಅಂದಿದ್ರು. ಅವರ ಮಾತೇನೋ ಖರೆ ಅದ ಆದ್ರ ಈ ಮನಸ್ಯಾನ ಮನಸ್ಸು, ಕರುಳಿನ ಸಂಬಂಧ, ತನ್ನೊರ್ ಮ್ಯಾಲಿನ ಮಾಯ-ಮಮತಾ ಇವೆಲ್ಲ ದೂರ ಅಂದ್ರ ದೂರ ಹೊಂಟ್ ಬಿಟ್ಟಾವ. ಇನ್ನೊಂದು ಥೋಡೆ ದಿನ ಆದ್ರ ಕಣ್ಣಿಗೂ ಕಾಣ್ಲಿಕ್ಕಿಲ್ಲ. ಮತ್ತ ನನ್ನ ಮಗಾನೂ ಇವೆಲ್ಲ ಬಿಟ್ಟು ದೂರ ನಡದಾನ. ಹಿಂಗೆ ಸಡ್ಲ ಬಿಟ್ರ ಒಂದಿನ ನನಗೆ ನೀ ಯಾರು ಅಂತ ಕೇಳಾ ಪೈಕಿ...! ಅಂವಾ ಅಂತೂ ಬರಲ್ಲ, ನಾನೇ ಅವನ ಬಲ್ಲಿಕಿ ಹೋಗ್ಬೇಕು.

 

          ನನಗ ಅಂವಾ ಬಿಟ್ರ ಯಾರ್ ಹರಾ. ತಾಳಿಕಟ್ಟಿದ್ದ ಹೆಣ್ತಿ ಮುತ್ತೈದಿ ಆಗಿ ಸಿವನ ಪಾದ ಸೇರಿ ತೆರಾ ವರ್ಷ ಆಯ್ತು. ಇರಾ ಒಬ್ಬ ಮಗನ ಗುಂಗಿನಾಗ ಗುಂಗಿ ಹುಳಧಂಗ ಗುಂಯಿ ಗುಂಯಿ ಅಲ್ಲತ್ತಿನಿ. ಇಲ್ಲರ ಇರೊದು ಒಂದು ಝೊಪಡಿ ಅಷ್ಟೆ. ದುಡ್ದುರ ಹೊಟ್ಟಿಗಿ ಸಿಗ್ತದ. ದುಡಿಲಿಲ್ಲ ಅಂದ್ರ ಬಿಟ್ಟಿ ಯಾರೂ ಕೊಡಲ್ಲ. ಈಗ ಪೈಲೆಧಾಂಗ ದುಡಿಲಾಕ ಕೈಕಾಲ್ದಾಗ ಸಗ್ತಿ ಅನ್ನೊದೂ ಇಲ್ಲ. ಎಲ್ಲಾ ಉಡುಗಿ ಹೋಗ್ಯಾದ. ಸಾಯ ಕಾಲಕ್ಕ ಮಗನ ಬಲ್ಯಾಕೆ ಇದ್ದು ಅವನ ಬಲ್ಲೆ ಜಿವಾ ಬಿಡ್ತಿನಿ. ನಂದು ಅದೊಂದೆ ಆಸಿ. ಈ ಕುರಿಮರಿ ಎಟುಕ್ಯಾಕ ಹೊಗುವಲ್ದು. ನಾಳಿ ಮುಂಜಾನಿ ಅದಕ್ಕ ಮಾರ್ಕೊಂಡು ಬಂದು ಬಂಬೈಗಿ ಹೋಗಬೇಕೆ ಅಂತ ಫೈಸ್ಲಾ ಮಾಡಿ ಕಣ್ಣ್ ಮುಚ್ಚಿದ. ಅವಾಗ ನಿದ್ದಿ ಅನ್ನೊದು ಜೇನು ನೋಣ ಜೇನಿಗಿ ಮುಕ್ಕರಿಧಂಗ ಬಂದು ಅವನ್ನ ಮುಕ್ಕರಿದ್ವು.

 

          ರಾತ್ರಿ ಕಳಿತು. ಮರುದಿನ ಛಂದೆ ಭೆಳಾರಾಗಿತ್ತು. ರಾತ್ರಿ ಕತ್ತುಲ್ ತನ ಎಚ್ಚರಕಿ ಇದ್ದ ಭೀಮಣ್ಣಗ ಮುಂಜಾನಿ ಏಳಕ್ಕ ಜರ ತಡಾನೆ ಆಗಿತ್ತು. “ಭಗವಾನ್ ಈಶ್ವರ” ಅಂತ ಮಾರಿ ಸವರ್ಕೊತಾ ಎದ್ದು ಹೊರಾಗ ಹೋಗಿ ಬಂದ್ ಮ್ಯಾಲ, ಅಂಗಳದಾಗಿನ್ ಬೆಯಿನ್ ಗಿಡದ ಕಡ್ಡಿ ಮುರ್ಕೊಂಡು ಹಲ್ಲು ತಿಕ್ಕೊತಾ ಬೊರಿಂಗಿಗಿ ಹೋಗಿ, ಒಂದು ಕೊಡ ನೀರು ತೊಕೊಂಡು ಬಂದು ಮಾರಿ ತೊಳ್ಕೊಂಡ. ಒಂದು ತೆಂಬಿಗಿ ತುಂಬಾ ತಂದಿದ್ ನೀರು ಗಟ ಗಟ ಅಂತ ಕುಡ್ದ. ಹೆಗಲ ಮ್ಯಾಲಿನ ಶಲ್ಯಲಿಂದ ಮಾರಿ ಸೂಟಕೊತಾ ‘ಕುರಿಮರಿಗರ ಹೊರಾಗ ತಂದು ಕಟ್ಟರಿ’ ಅಂತಂದು ಮನಿ ಒಳಗ ಬಂದು ನೋಡ್ತಾನ ! ಜಿವ ಧಸ್ ಅಂತು. ರಾತ್ರಿ ಘುಟುಕ್ ಕಟ್ಟಿದ್ದ್ ಕುರಿಮರಿನೇ ಇರಲಿಲ್ಲ.

ಜೂನ್ 18, 2020

ಅಪ್ಪ

ಅಪ್ಪ
ಎಲ್ಲಪ್ಪ...

ಅಲ್ಲಿ ಮುಳುಗಿದ ಸೂರ್ಯ
ಇಲ್ಲಿ ಮತ್ತೆ ಮೂಡಿಹನು
ಕತ್ತಲು ಕರಗಿಸಿ
ಬೆಳಕು ಅರಳಿಸಿಹನು...

ಹಾಗೆ
ನನ್ನ ಸೂರ್ಯ ಮುಳುಗಿ
ಮತ್ತೆ ಮೂಡಬೇಕಲ್ಲ !

ಅಪ್ಪ
ಬಾರಪ್ಪ !
ಕತ್ತಲು ಬೇಸತ್ತಿದೆ
ಬೆತ್ತಲಾಗಿ,
ತೊಡಿಸು ಬಾ ಬೆಳಕು.
ನಿದ್ದೆಯಿಲ್ಲದೆ ಮಲಗಿರುವೆ,
ಎಬ್ಬಿಸು ಬಾ ಕರೆದು
ಮಗನೇ....!

ಅಪ್ಪ‌
ಎಲ್ಲಪ್ಪ !

ಜೂನ್ 14, 2020

ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್

“ಧೋನಿ ದಿ ಅನ್‍ಟೊಲ್ಡ್ ಸ್ಟೋರಿ” ಸಿನಿಮಾ ಖ್ಯಾತಿಯ ಬಾಲಿವುಡ್‍ನ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.
ತಮ್ಮ ಅದ್ಭುತ ಅಭಿನಯದಿಂದ ಬಹಳ ಬೇಗನೆ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಖಾಸಗಿ ವಾಹಿನಿಯ ಅತ್ಯಂತ ಜನಪರೀಯಗೊಂಡ “ಪವಿತ್ರ ರಿಶ್ತಾ” ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಮಟ್ಟದ ಜನಪ್ರೀಯತೆ ಗಳಿಸಿದ್ದರು. “ಕೈ ಪೋ ಚೇ” ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು.
ತದನಂತರ ಬಿಡುಗಡೆಯಾಗಿದ್ದ “ಶುದ್ಧ್ ದೇಶಿ ರೊಮ್ಯಾನ್ಸ್” ಚಿತ್ರದಲ್ಲಿನ ನಟನೆ ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರ ವಾಗಿತ್ತು. ಇದಾದ ಮೇಲೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಚಲನಚಿತ್ರ “ಧೋನಿ ದಿ ಅನ್‍ಟೊಲ್ಡ್ ಸ್ಟೋರಿ”ಯÀಲ್ಲಿ ಧೋನಿ ಪಾತ್ರ ಮಾಡಿದರು. ಈ ಸಿನಿಮಾ ಸುಶಾಂತ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.
ಆದರೆ ಚಿತ್ರರಂಗದಲ್ಲಿ ಇನ್ನು ಬೆಳೆಯಬೇಕಾದ ಸಮಯದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ವಿಷಾದನೀಯ. ಆ ದೇವರು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಕ್ಕೆ ಶಾಂತಿ ನೀಡಲಿ.