ಡಿಸೆಂಬರ್ 14, 2021

“ಸನ್ ಸಿಟಿ ಸ್ಟಾರ್” ನಿನಾಸಂ ಠಾಕೂರ್

 

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ದೇಸಿ ಪ್ರತಿಭೆ ತುಳಜಾರಾಂಸಿಂಗ್ ಠಾಕೂರ್. “ನಿನಾಸಂ ಠಾಕೂರ್” ಎಂದೇ ಕರೆಯಿಸಿಕೊಳ್ಳುವ ಈ ಕಲಬುರಗಿಯ ಯುವಕ ಕಲ್ಯಾಣ ಕರ್ನಾಟಕದಿಂದ ೩ ರಂಗ ಪದವಿ ಪಡೆದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಲಬುರಗಿಯಲ್ಲಿ ೧೯೮೭ರಲ್ಲಿ ಜನಿಸಿದ ತುಳಜಾರಾಮ ಸಿಂಗ್ ಠಾಕೂರ್ ಓದಿದ್ದು ಪಿ.ಯು.ಸಿ. ಶಾಲಾ ದಿನಗಳಲ್ಲಿ ಕರಾಟೆ ಮತ್ತು ಹಾಡಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಕಲಾ ಪ್ರಪಂಚದ ಹವ್ಯಾಸವನ್ನ ಅಂಟಿಸಿಕೊಂಡವರು.

ತಂದೆ ತಾಯಿ ಕಟ್ಟಡ ಕಾರ್ಮಿಕರು. ಶಾಲೆ ಹೊಗಿದ್ದು ಕಡಿಮೆ ತಂದೆ ತಾಯಿಯೊಂದಿಗೆ ಕೆಲಸ ಮಾಡಿದ್ದೆ ಹೆಚ್ಚು. ಕೆಲಸ ಮಾಡುವಾಗ ಅಧಿಕಾರಿಯೊಬ್ಬರ ಮಾರ್ಗದರ್ಶನದಂತೆ ನಾಟಕ ಪ್ರಪಂಚಕ್ಕೆ ಕಾಲಿಟ್ಟರು.

ನಂತರ ರಂಗ ಶಿಕ್ಷಣ ಡಿಪ್ಲೋಮಾವನ್ನು ನೀನಾಸಂ, ಸಾಣೆಹಳ್ಳಿ ಹಾಗೂ ಎನ್‌ಎಸ್‌ಡಿ ಬೆಂಗಳೂರು ಚಾಪ್ಟರ್ ರಂಗ ಶಾಲೆಗಳಲ್ಲಿ ಸೇರಿ ಅಭಿನಯ ಮತ್ತು ರಂಗ ಪರಿಕರಗಳ ಎಲ್ಲಾ ವಿಭಾಗದ ತರಬೇತಿಯನ್ನೂ ಪಡೆದುಕೊಳ್ಳುತ್ತಾರೆ.

ನಾಟಕಗಳಲ್ಲಿ ಅಭಿನಯಿಸುತ್ತ ನಾಟಕ ನಿರ್ದೇಶಕನಾಗಿ, ತಂತ್ರಜ್ಞನಾಗಿ, ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟನಾಗಿ ಅಭಿನಯಿಸುತ್ತಿದ್ದಾರೆ. ಸುಮಾರು ೧೭ ವರ್ಷಗಳಿಂದ ಹವ್ಯಾಸಿ ಮತ್ತು ರಂಗಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಟನೆಯೊಂದಿಗೆ ಕಳಾರಿ ಯುದ್ಧ ಕಲೆ, ಮಾರ್ಶ್ಯಲ್ ಆರ್ಟ್, ಕಂಸಾಳೆ, ಕೋಲಾಟ, ಸಂಗೀತ ನಿರ್ದೇಶನ, ನಾಟಕ ನಿರ್ದೇಶನ, ಬೆಳಕಿನ ವಿನ್ಯಾಸ, ಕಾರ್ಯಕ್ರಮ ಸಂಯೋಜನೆ ಕೂಡಾ ಕರಗತ ಮಾಡಿಕೊಂದಿದ್ದಾರೆ.

೨೦೦೨-೦೩ರಲ್ಲಿ ರಾಷ್ಟ್ರೀಯ ಸಮುದಾಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗಿ.

೨೦೦೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು ಗುಲಬರ್ಗಾದಲ್ಲಿ ನಡೆಸಿದ ಜಾನಪದ ಸಮಾವೇಶ ೨೦೦೬ ಕಾರ್ಯಕ್ರಮದಲ್ಲಿ ಜಾನಪದ ಕಲೆ ಪ್ರದರ್ಶನ.

೨೦೦೭-೦೮, ೨೦೦೮-೦೯ನೇ ಸಾಲಿನಲ್ಲಿ ಸತತವಾಗಿ ೨ ವರ್ಷಗಳ ಕಾಲ ಸಮುದಾಯ ಸಾಂಸ್ಕöÈತಿಕ ಸಂಘಟನೆ ಏರ್ಪಡಿಸಿದ “ಚಿಣ್ಣರ ಚಿನ್ಮೇಳ” ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ.

೨೦೦೭ರಲ್ಲಿ ಭಾರತ ಸರಕಾರದ ಧ್ವನಿ ಮತ್ತು ಬೆಳಕು ವಿಭಾಗದ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಿದ “ಕರ್ನಾಟಕ ವೈಭವ” ಕಾರ್ಯಕ್ರಮದಲ್ಲಿ ೮ ಪ್ರಮುಖ ಪಾತ್ರಗಳಲ್ಲಿ ಅಭಿನಯ.

೨೦೦೮ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ರಂಗಾಯಣ ಧಾರವಾಡ ಘಟಕ ಆಯೋಜಿಸಿದ “ಯುವರಂಗ ಸಾಂಸ್ಕöÈತಿಕ ಕಾರ್ಯಾಗಾರ”ದಲ್ಲಿ “ತಾಜಮಹಲ್ ಟೆಂಡರ್” ನಾಟಕದಲ್ಲಿ ಅಭಿನಯ.

೨೦೦೮ರಲ್ಲಿ ಕರ್ನಾಟಕ ಸರಕಾರ ವಾರ್ತಾ ಇಲಾಖೆ ಬೆಂಗಳೂರು ನಡೆಸಿದ “ಮನುಷ್ಯ ಜಾತಿ ತಾನೊಂದೇ ವಲಂ”ನ ಧ್ವನಿ-ಬೆಳಕು ದೃಶ್ಯ ವೈಭವ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಣೆ

೨೦೦೮ರಲ್ಲಿ ಕೇರಳದಲ್ಲಿ ನಡೆದ “ಮಳೆಬಿಲ್ಲು ಫೆಸ್ಟಿವಲ್”ನಲ್ಲಿ ನಾಟಕಗಳಿಗೆ ಬೆಳಕಿನ ನಿರ್ವಹಣೆ

೨೦೦೮ರಲ್ಲಿ ಬೆಳಗಾವಿಯಲ್ಲಿ ನಡೆದ “ಮಳೆಬಿಲ್ಲು ಫೆಸ್ಟಿವಲ್”ನಲ್ಲಿ ನಾಟಕಗಳಿಗೆ ಬೆಳಕಿನ ನಿರ್ವಹಣೆ.

೨೦೧೦ರಲ್ಲಿ ಪಾಂಡಿಚರಿಯಲ್ಲಿ ಇರುವ ಆದಿ ಶಕ್ತಿಯಲ್ಲಿ ನಡೆಸಿದ ವಿಶೇಷ ನಟನಾ ತರಬೇತಿ ಕಾರ್ಯಾಗಾರದಲ್ಲಿ ವೀಣಾ ಪಾಣಿಚಾಲ್ವಾರಿಂದ ಒಂದು ವಾರ ತರಬೇತಿ

೨೦೧೦ರಲ್ಲಿ ಶ್ರೀ ಶಿವಕುಮಾರ ಕಲಾ ಸಂಘ (ರಿ) ಮತ್ತು ರಂಗ ಪ್ರಯೋಗಶಾಲೆ ಸಾನಿಹಳ್ಳಿ ವತಿಯಿಂದ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಬೆಳಕಿನ ವಿನ್ಯಾಸ ಕಾರ್ಯನಿರ್ವಹಿಸಿದ್ದೇನೆ.

೨೦೧೦ರಲ್ಲಿ ೨೨-೨೭ ಜೂನ್ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಮತ್ತು ಸಂಚಯ ಬೆಂಗಳೂರು ವತಿಯಿಂದ ನಡೆದ ಬೆಳಕಿನ ವಿನ್ಯಾಸ ತರಬೇತಿ ಶಿಬಿರದಲ್ಲಿ ತರಬೇತಿ

೨೦೧೦ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಚಾಪ್ಟರ್ ವತಿಯಿಂದ ನಡೆದ ೩ ತಿಂಗಳವರೆಗಿನ ರಂಗ ತರಬೇತಿ (ಅಭಿನಯ) ಶಿಬಿರದಲ್ಲಿ ಭಾಗವಹಿಸಿರುತ್ತೇನೆ.

೨೦೧೧ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಚಾಪ್ಟರ್ ವತಿಯಿಂದ ನಡೆದ ೩ ತಿಂಗಳವರೆಗಿನ ರಂಗ ತರಬೇತಿ (ರಂಗ ತಂತ್ರ) ಶಿಬಿರದಲ್ಲಿ ಭಾಗವಹಿಸಿರುತ್ತೇನೆ.

೧೧-೩೧ನೇ ಮೇ ೨೦೧೨ರಲ್ಲಿ ನೀನಾಸಂ ಹೆಗ್ಗೋಡು ಆಶ್ರಯದಲ್ಲಿ ನಡೆಸಲಾದ ಬೇಸಿಗೆ ರಂಗ ಕಮ್ಮಟ ಶಿಬಿರದಲ್ಲಿ ಭಾಗಿ.

೦೭-೧೩ ಅಕ್ಟೋಬರ್ ೨೦೧೨ರಲ್ಲಿ ನೀನಾಸಂ ಸಾಂಸ್ಕöÈತಿಕ ಶಿಬಿರದಲ್ಲಿ ಭಾಗಿ.

೨೦೧೨-೧೩ರಲ್ಲಿ ಬುದ್ಧ ವಿಹಾರ ಗುಲಬರ್ಗಾದ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿನ ಎರಡು ನಾಟಕಗಳಿಗೆ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ.

೨೦೧೩-೧೪ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳಾದ ಶಾಲೆ ಬಿಟ್ಟ ಮಕ್ಕಳಿಗೆ ಶಾಲೆಗೆ ಸೇರಿಸಿ, ವಿಶೇಷ ದಾಖಲಾತಿ ಆಂದೋಲನದಂತಹ ಕಾರ್ಯಕ್ರಮಗಳಿಗೆ ಬೀದಿ ನಾಟಕಗಳ ಮುಖಾಂತರ ಜನತೆಯಲ್ಲಿ ಅರಿವು ಮೂಡಿಸಲಾಯಿತು.

೨೦೧೩-೧೪ನೇ ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ಡೈಯಟ್ ಕಮಲಾಪೂರ (ಗುಲಬರ್ಗಾ)ದ ಸಹಯೋಗದಲ್ಲಿ ನಡೆದ ಶಾಲಾ ಮಕ್ಕಳಿಗಾಗಿ “ವಿಜ್ಞಾನ ನಾಟಕ ಸ್ಪರ್ಧೆ” ಏರ್ಪಡಿಸಲಾಗಿತ್ತು. ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಮುಖ್ಯ ತೀರ್ಪುಗಾರನಾಗಿ ಕಾರ್ಯ ನಿರ್ವಹಣೆ.


ನಟನಾಗಿ ಅಭಿನಯಿಸಿದ ಪ್ರಮುಖ ನಾಟಕಗಳು:

೧. “ಭಾರತ ಯಾತ್ರೆ” ನಿರ್ದೇಶಕರು: ಕೆ. ವಿ. ಅಕ್ಷರ (ಎನ್. ಎಸ್. ಡಿ)

೨. “ಉತ್ತರಾಮ ಚರಿತ್ರೆ” ನಿರ್ದೇಶಕರು: ಚಿದಂಬರ್ ರಾವ್ ಜಂಬೇ (ಎನ್. ಎಸ್. ಡಿ.)

೩. “ಕತ್ತಲೆಗೆ ಹತ್ತು ತಲೆ” ನಿರ್ದೇಶಕರು: ಚಿದಂಬರ್ ರಾವ್ ಜಂಬೇ (ಎನ್. ಎಸ್. ಡಿ.)

೪. “ಈ ಕೆಳಗಿನವರು” ನಿರ್ದೇಶಕರು: ಬಿ. ಆರ್. ವೆಂಕಟರಮಣ ಐತಾಳ

೫. “ತಾಜ್ ಮಹಲ್ ಟೆಂಡರ್” ನಿರ್ದೇಶಕರು: ಸಿ. ಬಸವಲಿಂಗಯ್ಯ (ಎನ್. ಎಸ್. ಡಿ.)

೬. “ವಿಜಯ ನರಸಿಂಹ” ನಿರ್ದೇಶಕರು: ಮಂಜು ಕೊಡಗು

೭. “ಹರೀಶ ಚಂದ್ರ ಕಾವ್ಯ” ನಿರ್ದೇಶಕರು: ಮಹಾಬಲೇಶ್ವರ (ಕೆ. ಜಿ. ಎಂ.)

೮. “ಚರಿ ಹಣ್ಣಿನ ತೋಟ” ನಿರ್ದೇಶಕರು: ಭಾರುಲ್ ಇಸ್ಲಾಂ (ಎನ್. ಎಸ್. ಡಿ.)

೯. “ಅಗ್ನಿ ಮತ್ತು ಮಳೆ” ನಿರ್ದೇಶಕರು: ಸುರೇಶ ಆನಗಳ್ಳಿ (ಎನ್. ಎಸ್. ಡಿ.)

೧೦. “ಸೀತಾ ಸ್ವಯಂವರ” ನಿರ್ದೇಶಕರು: ಮಂಜು ಬಡಿಗೇರ

೧೧. “ಶೇಕ್ಸ್ಪಿಯರ್‌ನ ಪುಟಗಳು” ನಿರ್ದೇಶಕರು: ದೇಶಿಕ್ ವಾನ್ಸಾದಿಯಾ (ಗುಜರಾತ)

೧೨. “ಮನುಷ್ಯನ ನೆರಳು” ನಿರ್ದೇಶಕರು: ತಲೇಕಾಡು ಗುರುರಾಜ

೧೩. “ಕ್ರಮ-ವಿಕ್ರಮ” ನಿರ್ದೇಶಕರು: ನಟರಾಜ ಹೊನ್ನಳಿ

೧೪. “ರಾವಿ ನದಿಯ ದಂಡೆಯಲ್ಲಿ” ನಿರ್ದೇಶಕರು: ಶಂಕ್ರಯ್ಯ ಆರ್. ಘಂಟಿ

೧೫. “ಸುಲ್ತಾನ್ ಟಿಪುö್ಪ” ನಿರ್ದೇಶಕರು: ವಾಸುದೇವ ಗಂಗೇರ

೧೬. “ಗಾಂಧಿ ಪಾರ್ಕ್” ನಿರ್ದೇಶಕರು: ಸುಷ್ಮಾ ಬೆಂಗಳೂರು

೧೭. “ಅಲೆಗಳಲ್ಲಿ ರಾಜಹಂಸ” ನಿರ್ದೇಶಕರು: ಮಹಾದೇವ ಹಡಪದ

೧೮. “ಏಕಲವ್ಯ” ನಿರ್ದೇಶಕರು: ಶಿವಶಂಕರ

೧೯. ಭೋಳೆಶಂಕರಯ್ಯ ನಿರ್ದೇಶಕರು: ಶಿವಶಂಕರ

ನಿರ್ದೇಶನ ಮಾಡಿದ ಪ್ರಮುಖ ನಾಟಕಗಳು:

೧. ಏಕಲವ್ಯ (ನೀನಾಸಂ ಠಾಕೋರ)

೨. ಬೆಪ್ಪುತಕ್ಕಡಿ ಭೋಳೆಶಂಕರ (ನೀನಾಸಂ ಠಾಕೋರ)

೩. ಸಾಕ್ರಟೆಸ್ (ನೀನಾಸಂ ಠಾಕೋರ)

೪. ಓಥೇಲೊ (ನೀನಾಸಂ ಠಾಕೋರ)

೫. ಸತ್ರು ಅಂದ್ರೆ ಸಾಯ್ತಾರ? (ನೀನಾಸಂ ಠಾಕೋರ)

೬. ಪ್ರೀತಿಯ ಕಾಳು (ನೀನಾಸಂ ಠಾಕೋರ)


ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಮಾಡಿದ ಪ್ರಮುಖ ನಾಟಕಗಳು:

೧. ಹುಟ್ಟುದ್ದು ಹೋಲೆಯುರು

೨. ಕುಲಂ

೩. ಸೀತಾ ಸ್ವಯಂವರ

೪. ಸುಜಾತಾ ಕೀ ಖೀರ್

೫. ಅಹಿಂಸಕ

೬. ಪದ್ಮಪಾಣಿ

೭. ಮಾಂಟೋನ ಕಥೆಗಳು

೮. ಏಕಲವ್ಯ

೯. ಭೋಳೆಶಂಕರ

೧೦. ಸಾಕ್ರೇಟಿಸ್

೧೧. ಸನ್ಮಾನ್ಯ ಸಚಿವರ ಸಾವು

೧೨. ಒಥೇಲೊ

೧೩. ಯುಗಾಂತರ

೧೪. ಸತ್ರು ಅಂದ್ರೆ ಸಾಯ್ತಾರ?

೧೫. ಪ್ರೀತಿಯ ಕಾಳು

೧೬. ಬೋಧಿ ಜ್ಞಾನಾಮೃತ

೧೭. ಪುಷ್ಪರಾಣಿ

೧೮. ಬೆಟ್ಟಗಳು ನಡೆದಾವ

ಕಿರುತೆರೆಯಲ್ಲಿ ಅಭಿನಯಿಸಿದ ಪ್ರಮುಖ ಧಾರಾವಾಹಿಗಳು:

೧. “ಸ್ವಾತಿ ಮುತ್ತು” ನಿರ್ದೇಶಕರು: ದಿನೇಶಬಾಬು

೨. “ರಾಘವೇಂದ್ರ ವೈಭವ” ನಿರ್ದೇಶಕರು: ಬಾಲಾ ಸುರೇಶ್

೩. ಸೀತೆ

೪. “ಸಾಯಿ ಬಾಬಾ” ನಿರ್ದೇಶಕರು: ವಾಸು


ಬೆಳ್ಳಿತೆರೆಯಲ್ಲಿ ಅಭಿನಯಿಸಿದ ಪ್ರಮುಖ ಚಲನಚಿತ್ರಗಳು:

೧. "ರಣಚಂಡಿ" ನಿರ್ದೇಶಕರು: ಆನಂದ ಪಿ. ರಾಜು

೨. "ಜ್ವಲತಂ" ನಿರ್ದೇಶಕರು: ಅಂಬ್ರೀಶ

೩. "ಜೀವನ" ನಿರ್ದೇಶಕರು: ಪ್ರವೀಣ ರಾಜ

೪. "ಶಿವಕಾಶಿ" ನಿರ್ದೇಶಕರು: ರಾಜು

೫. "ಪ್ರೇಮಂ ಚಿರಂ" ನಿರ್ದೇಶಕರು: ಶ್ರೀನಿವಾಸ

ರಣಚಂಡಿ, ಜ್ವಲತಂ, ಜೀವನ, ಶಿವಕಾಶಿ ಚಿತ್ರಗಳಲ್ಲಿ ಖಲನಟನಾಗಿ ಮತ್ತು ಪ್ರೇಮಂ ಚಿರಂ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ತಮ್ಮ ತಂದೆ-ತಾಯಿಯರನ್ನು ದೊಡ್ಡ ವೇದಿಕೆಯಲ್ಲಿ ನಿಲ್ಲಿಸಬೇಕೆನ್ನುವುದು ಇವರ ದೊಡ್ಡ ಆಸೆ. ಆದರೆ ತಂದೆ ಅಗಲಿ ಎರಡುವರೆ ವರ್ಷ ಆಯಿತು. ತಾಯಿಯನ್ನಾದರೂ ದೊಡ್ಡ ವೇದಿಕೆಗೆ ಕರೆದುಕೊಂಡು ಹೋಗಬೇಕೆಂಬ ಮಹಾದಾಸೆಯಿಟ್ಟಕೊಂಡು ಬಿಗ್‌ಬಾಸ್ ಸೀಸನ್ ೯ರಲ್ಲಿ ಸ್ಪರ್ಧಿಯಾಗಿ ಹೋಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನೆ, ನಿರ್ದೇಶನ ಮತ್ತು ವಿವಿಧ ಪ್ರಕಾರಗಳಲ್ಲಿ ಕಲಾ ಸೇವೆ ಮಾಡುತ್ತ ಕಲಿಯುತ್ತಿರುವ ವಿದ್ಯಾರ್ಥಿ ನಾನು. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ಆಶೀರ್ವಾದ ಸದಾ ಹೀಗೆ ಇರಲಿ ಎಂದು ವಿನಮ್ರತೆಯಿಂದ ಹೇಳುತ್ತಾರೆ. ಇಂಥ ಅಪರೂಪದ ಕಲ್ಯಾಣ ಕರ್ನಾಟಕದ ಪ್ರತಿಭೆಗೆ ನಾವೆಲ್ಲರೂ ಬೆಂಬಲಿಸೋಣ. ಅವರ ಆಸೆ ಕನಸುಗಳು ಈಡೇರಲಿ ಎಂದು ಹಾರೈಸೋಣ.

ಆಗಸ್ಟ್ 06, 2021

ಹುತಾತ್ಮ ಯೋಧ ರಾಜಕುಮಾರ ಮಾವಿನರಿಗೆ ಅಂತಿಮ ವಿದಾಯ

 

ತ್ರಿಪುರ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೀರ ಮರಣವನ್ನಪ್ಪಿದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ವೀರ ಯೋಧ ರಾಜಕುಮಾರ ಮಾವಿನ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನಸಾಗರ ಅಶ್ರು ತರ್ಪಣವನ್ನು ಸಲ್ಲಿಸಿತು. “ರಾಜಕುಮಾರ ಮಾವಿನ ಅಮರ್ ರಹೆ” ಎಂಬ ಘೋಷಣೆಯೊಂದಿಗೆ ಮೆರವಣಿಗೆಯ ಮೂಲಕ ಸಾಗಿ ಸಕಲ ಸರಕಾರಿ ಗೌರವ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು.

ಮಂಗಳವಾರ ಬೆಳಿಗ್ಗೆ ತ್ರಿಪುರಾದ ದಲೈ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಗಡಿ ಭದ್ರತಾ ಪಡೆಯ ಕಾನಸ್ಟೇಬಲ್ ರಾಜ್‍ಕುಮಾರ್ ಎಂ. ಮಾವಿನ್ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ಮಧ್ಯಾಹ್ನ ಆಳಂದ ತಾಲೂಕಿನ ಚಿಂಚನಸೂರ್‍ನಲ್ಲಿ ನೆರವೇರಿಸಲಾಯಿತು.

ಬಿಎಸ್‍ಎಫ್ ಕಾನ್‍ಸ್ಟೇಬಲ್ ರಾಜ್‍ಕುಮಾರ್ ಮಾವಿನ್ ಮೃತದೇಹವನ್ನು ಬುಧವಾರ ಮಧ್ಯರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣದಿಂದ ಚಿಂಚನಸೂರ್‍ಗೆ ತರಲಾಯಿತು. ಅಗಲಿದ ಆತ್ಮಕ್ಕೆ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಲು ಅನುಕೂಲವಾಗುವಂತೆ ಗುರುವಾರ ಮಧ್ಯಾಹ್ನದ ವರೆಗೆ ದರ್ಶನಕ್ಕಾಗಿ ಇರಿಸಲಾಗಿತ್ತು.

ಕಲಬುರಗಿ-ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡು ಚಿಂಚನಸೂರ್‍ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು ಮತ್ತು ರಾಜಕುಮಾರ್ ಪ್ರತಿಮೆಯನ್ನು ಸ್ಥಾಪಿಸಲು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹುತಾತ್ಮ ಯೋಧ ರಾಜ್‍ಕುಮಾರ್ ಮಾವಿನ್ ಅವರ ಗೌರವಾರ್ಥವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು.

ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ ಉಗ್ರಗಾಮಿ ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆಸಿದ ನಂತರ ಆರ್‍ಸಿ ನಾಥ್ ಗಡಿ ಠಾಣೆ ಬಳಿ ಗಸ್ತು ತಿರುಗುತ್ತಿದ್ದಾಗ ಬಿಎಸ್‍ಎಫ್ ಸಬ್ ಇನ್ಸ್‍ಪೆಕ್ಟರ್ ಭೂರು ಸಿಂಗ್ ಮತ್ತು ರಾಜಕುಮಾರ್ ಮಾವಿನ್ ಹುತಾತ್ಮರಾಗಿದ್ದಾರೆ. ಅವರಿಗೆ ಇಡೀ ದೇಶದ ಜನತೆಯ ವತಿಯಿಂದ ಭಾವಪೂರ್ಣ ನಮನಗಳು.

ಜುಲೈ 26, 2021

ಕಾರ್ಗಿಲ್ ವಿಜಯ ದಿವಸ: ಕಾರ್ಗಿಲ್ ಕಲಿಗಳ ಒಂದು ನೆನಪು

ಹದಿನಾರು ಸಾವಿರ ಅಡಿ ಎತ್ತರದ ಕಾರ್ಗಿಲ್ ಬೆಟ್ಟ ರಕ್ಷಣೆಗಾಗಿ ಕರುನಾಡಿನ ಹದಿನಾರು ಯೋಧರು ಪ್ರಾಣ ಚೆಲ್ಲಿದ್ದರು...! ದೇಶದ ಗಡಿ ರಕ್ಷಣೆಗಾಗಿ ದೇಶದ ಹಾಗೂ ರಾಜ್ಯದ ಯೋಧರನ್ನು ನೆನಪಿಸಿಕೊಳ್ಳುವ ದಿನ ಮತ್ತೆ ಬಂದಿದೆ. ಮೋಸದಿಂದ ಭಾರತದ ಗಡಿ ಆಕ್ರಮಿಸಿದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯದ ನಗೆ ಬೀರಿದ ಭಾರತೀಯ ಸೈನಿಕರ ತ್ಯಾಗ ಸ್ಮರಣೆ ಮಾಡುವ ಕಾರ್ಗಿಲ್ ವಿಜಯ ದಿನ ಆರಂಭಗೊಂಡು ಜುಲೈ 26ಕ್ಕೆ 22 ವರ್ಷ ತುಂಬದೆ.

1999ರಲ್ಲಿ ಜಮ್ಮು-ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಯಾರಿಗೂ ಸುಳಿವು ಕೊಡದ ರೀತಿಯಲ್ಲಿ ಪಾಕಿಸ್ತಾನ ಸೇನಾಪಡೆ ವಶಪಡಿಸಿಕೊಂಡಿತು. ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ದೇಶದ ಸಾವಭೌಮತ್ವಕ್ಕೇ ಪ್ರಶ್ನೆ ಮಾಡಿತು. ಪಾಕ್ ಪಡೆಯನ್ನು ಹೊಡೆದೋಡಿಸುವುದು ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಭಾರತೀಯ ಪಡೆಗಳಿಗೆ ಅಷ್ಟು ಸುಲಭವಾಗಿರಲಿಲ್ಲ. 60 ದಿನಗಳ ಕಾಲ ಕಾದಾಡಿದ ಭಾರತೀಯ ಯೋಧರು 1999ರ ಜುಲೈ 26ರಂದು ಪಾಕಿಸ್ತಾನ ಪಡೆಗಳನ್ನು ದೇಶದ ಗಡಿದಾಟಿಸಿ ಅಟ್ಟುವುದರಲ್ಲಿ ಯಶಸ್ವಿಯಾಗಿದ್ದರು.

ಆದರೆ ಈ ಯುದ್ಧದಲ್ಲಿ ನಮ್ಮ ಸೇನಾಪಡೆಯ 527 ಯೋಧರು ಮೃತಪಟ್ಟರು. ಸಾವಿರಾರು ಜನರು ಗಾಯಗೊಂಡರು. ದೇಶ ರಕ್ಷಣೆ ವಿಚಾರ ಬಂದಾಗ ಸದಾ ಒಂದು  ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು ಮಂದಿ ಯೋಧರು ಈ ಯುದ್ಧದಲ್ಲಿ ವೀರಸ್ವರ್ಗವನ್ನು ಅಪ್ಪಿದರು.

ಬೆಳಗಾವಿಯ ದೋಂಡಿಭಾಯ್ ದೇಸಾಯಿ, ಕೊಪ್ಪಳದ ಶಿವಬಸವಯ್ಯ, ಮಡಿಕೇರಿಯ ಎಸ್.ಕೆ.ಮೇದಪ್ಪ, ಕೊಪ್ಪಳದ ಸಿ.ಎಂ.ಮಲ್ಲಯ್ಯ, ಮಡಿಕೇರಿಯ ಪಿ.ಡಿ.ಕಾವೇರಪ್ಪ, ಬೆಳಗಾವಿಯ ಯಶವಂತ ಡಿ.ಕೋಳ್ಕರ್, ಬಾಗಲಕೋಟೆಯ ದಿಲೀಪ್ ಪಿ.ಪೂತರಾಜ್, ಬೆಳಗಾವಿಯ ಭರತ್ ಮಸ್ಕಿ, ಬಸಪ್ಪ ಚೌಗಲೆ,  ಬಾಗಲಕೋಟೆಯ ಶಂಕರಪ್ಪ ಕೋಟಿ, ಬೆಳಗಾವಿಯ ಬಾಹುಬಲಿ ಬರಮಪ್ಪ, ಮಂಡ್ಯದ ಬಿ.ಕೆ.ಸುಧೀರ್, ಬಾಗಲಕೋಟೆಯ ಅಶೋಕ ಭೀಮಪ್ಪ ಜಾದವ್, ಬೆಂಗಳೂರಿನ ಅಜಿತ್ ಭಂಡಾರ್ಕರ್, ಬಿಜಾಪುರದ ದಾವಲ್ಲಾ, ಮಡಿಕೇರಿಯ ಎಚ್.ವಿ.ವೆಂಕಟ ಸೇರಿದಂತೆ ಹದಿನಾರು ಮಂದಿ ಯೋಧರು 16 ಸಾವಿರ ಅಡಿ ಎತ್ತರದ ಶಿಖರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಉತ್ತರಕನ್ನಡ ಜಿಲ್ಲೆ ರಮಾಕಾಂತ್ ಸಾವಂತ್, ಧಾರವಾಡದ ಬಸಪ್ಪ ತಳವಾರ್, ಬೈಲಹೊಂಗಲದ ಮಲ್ಲಪ್ಪ ಮುನವಳ್ಳಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಇವರೆಲ್ಲರ ತ್ಯಾಗ ಬಲಿದಾನಗಳನ್ನು ಮತ್ತೆ ನೆನಪಿಸುವ ದಿನವೇ ಕಾರ್ಗಿಲ್ ವಿಜಯ ದಿವಸ್. 


ದವಲಸಾಬ ಪರಾಕ್ರಮ: ಕಾರ್ಗಿಲ್ ಯುದ್ಧದಲ್ಲಿ ವೈರಿ ಪಡೆಯೊಂದಿಗೆ ಹೋರಾಡಿ ಯುದ್ಧ ಮಾಡುತ್ತಲೇ ಹುತಾತ್ಮನಾದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಡ ಗ್ರಾಮದ ಯುವಕ ದಾವಲಸಾಬ ನಬಿಸಾಬ ಕಂಬಾರ(27) ಎಲ್ಲರಲ್ಲೂ ದೇಶ ಭಕ್ತಿ ಉಕ್ಕಿಸುತ್ತಾರೆ.

ದ್ವಿತೀಯ ಪಿಯುಸಿ ಪಾಸಾಗಿದ್ದ ಕಂಬಾರ ಗಡಿ ರಕ್ಷಣಾ ಪಡೆ(ಬಿಎಸ್ಎಫ್) ಸೇರಿದ್ದರು. ಸುಮಾರು 7 ವರ್ಷಗಳವರೆಗೆ ಅವರು ಕಾರ್ಗಿಲ್ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಫೈರಿಂಗ್ನಲ್ಲಿ ಚಾಣಾಕ್ಷನಾಗಿದ್ದ ದಾವಲಸಾಬನಿಗೆ ವೈರಿ ಪಡೆಗಳನ್ನು ಹೊಡೆದುರುಳಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.  141 ಬಿಎಸ್ಎಫ್ ಬಟಾಲಿಯನ್ನಲ್ಲಿ ಕಾನ್ಸ್ಟೇಬಲ್ ಆಗಿದ್ದ ಇವರಿಗೆ ಯುದ್ಧದ ಸಂದರ್ಭದಲ್ಲಿಯೇ ವೈರಿ ಪಡೆಗಳು ಹಾರಿಸಿದ್ದ ಗುಂಡು ಕಾಲಿಗೆ ತಗುಲಿತ್ತು. ಆದರೂ ಧೃತಿಗೆಡದೆ ಕಾಲಿಗೆ ಕರವಸ್ತ್ರ ಕಟ್ಟಿಕೊಂಡು ಮತ್ತೆ ವೈರಿ ಪಡೆಗಳತ್ತ ಗುಂಡಿನ ಸುರಿಮಳೆಗರೆದು ಮೂವರು ವೈರಿಗಳನ್ನು ಬಲಿತೆಗೆದುಕೊಂಡಿದ್ದರು. ನಂತರ ವೈರಿ ಪಡೆಯಿಂದ ಬಂದ ಗುಂಡು ದಾವಲಸಾಬನ ಕಣ್ಣು ಗುಡ್ಡೆಯ ಮೇಲ್ಭಾಗದ ಹಣೆ ಹಾಗೂ ಎದೆಗೆ ತಗುಲಿ 13-6-1999ರಲ್ಲಿ ವೀರ ಮರಣವನ್ನಪ್ಪಿದರು.

"ಪ್ರೀತಿಯ ಅಪ್ಪ, ಅಮ್ಮ ಹಾಗೂ ಅಜ್ಜಿ,

ಈ ಪತ್ರ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ನಿಮ್ಮನ್ನು ಸ್ವರ್ಗದಿಂದಲೇ ನೋಡುತ್ತಿರುತ್ತೇನೆ. ಏನೇನೂ ಖೇದವಿಲ್ಲ. ಮತ್ತೆ ಮನುಷ್ಯನಾಗಿ ಹುಟ್ಟಿದರೆ ಭಾರತೀಯ ಸೇನೆಯನ್ನು ಸೇರಿ ದೇಶಕ್ಕೋಸ್ಕರ ಹೋರಾಡುತ್ತೇನೆ. ಸಾಧ್ಯವಾದರೆ ಒಂದು ಸಲ ಬಂದು ನಿಮ್ಮ ನಾಳೆಗಳಿಗೋಸ್ಕರ ನಾವು ಹೋರಾಡಿದ ಜಾಗವೆಂಥದು ಎಂಬುದನ್ನು ನೋಡಿ. ನನ್ನ ದೇಹದ ಯಾವ್ಯಾವ ಅಂಗಗಳನ್ನು ದಾನ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿಬಿಡಿ. ಅನಾಥಾಶ್ರಮಕ್ಕೆ ದುಡ್ಡು ಕೊಡುವುದನ್ನು ಹಾಗೂ ರುಕ್ಸಾನಾಳಿಗೆ ತಿಂಗಳಿಗೆ ಐವತ್ತು ರುಪಾಯಿ ಕಳಿಸುವುದನ್ನು ಮಾತ್ರ ಮರೆಯಬೇಡಿ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಕ್ಷಮಿಸಿ. ನಾನಿಲ್ಲವೆಂದು ದುಃಖಿಸುವ ಬದಲು ಹೆಮ್ಮೆ ಪಡಿ. ಸರಿ, ನಾನೀಗ ಹೊರಟೆ, ಎಲ್ಲರಿಗೂ ಒಳ್ಳೆಯದಾಗಲಿ. ಭರಪೂರ ಅನುಭವಿಸಿ ನೀವೆಲ್ಲರೂ ಈ ಬದುಕನ್ನು.

ನಿಮ್ಮ ರಾಬಿನ್"


ಕಾರ್ಗಿಲ್ ಯುದ್ಧದಲ್ಲಿ ತನ್ನ ತುಕಡಿಯನ್ನು ಮುನ್ನಡೆಸುತ್ತಿದ್ದ 22ರ ಹರೆಯದ ಕ್ಯಾಪ್ಟನ್ ವಿಜಯಂತ್ ಥಾಪರ್ ಯುದ್ಧಕ್ಕೆ ಹೊರಡುವ ಕೊನೆ ಘಳಿಗೆಯಲ್ಲಿ ತನ್ನ ಡೇರೆಯಿಂದ ಬರೆದ ಸಾಲುಗಳಿವು. ತಾನು ಹಿಂತಿರುಗದಿದ್ದರೆ ಮನೆಯವರಿಗೆ ಇದನ್ನು ತಲುಪಿಸಿ ಎಂದು ಇಟ್ಟು ಹೋದದ್ದು. ಮನೆಯವರ ಪಾಲಿಗೆ ಪ್ರೀತಿಯ 'ರಾಬಿನ್' ಆಗಿದ್ದ ವಿಜಯಂತ್ ಹಿಂತಿರುಗಿ ಬರಲಿಲ್ಲ. 1998ರ ಡಿಸೆಂಬರ್ನಲ್ಲಿ ಡೆಹರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ವಿಜಯಂತ್ ಮೊದಲು ಕಳುಹಿಸಲ್ಪಟ್ಟಿದ್ದೇ ಉಗ್ರರ ಬೀಡಾಗಿದ್ದ, ಕಾಶ್ಮೀರದ ಕುಪ್ವಾರ ಎಂಬ ಜಾಗಕ್ಕೆ. ಜೀವವನ್ನೂ ಲೆಕ್ಕಿಸದೆ ಕಾದಾಡಿ ಉಗ್ರರನ್ನು ಹತ್ತಿಕ್ಕಿದ ವಿಜಯಂತ್ಗೆ ಅಲ್ಲಿ ಸಿಕ್ಕಿದವಳು ಆರು ವರ್ಷದ ಪುಟಾಣಿ ರುಕ್ಸಾನಾ. ಕಾದಾಟವೊಂದರಲ್ಲಿ ಕಣ್ಣೆದುರೇ ತನ್ನ ಅಪ್ಪ ಹತನಾಗಿದ್ದನ್ನು ನೋಡಿ ಘಾಸಿಗೊಂಡಿದ್ದ ಆ ಮಗುವನ್ನು ಅಕ್ಕರೆಯಿಂದ ಜೋಪಾನ ಮಾಡಿದ ವಿಜಯಂತ್, ತಾನು ಅಲ್ಲಿಂದ ಹಿಂದಿರುಗಿದ ಮೇಲೂ ಆ ಮಗುವಿಗೆ ಪ್ರತಿ ತಿಂಗಳೂ 50 ರುಪಾಯಿ ಕಳಿಸುತ್ತಿದ್ದ. ಸಾಯುವ ಮುನ್ನ ಬರೆದ ಪತ್ರದಲ್ಲಿ ತನ್ನ ತಂದೆ-ತಾಯಿಗೂ ಅದನ್ನೇ ನೆನಪಿಸಿದ್ದ!

1999ರ ಜೂನ್ ತಿಂಗಳ ಮೊದಲನೇ ವಾರ. ಜಮ್ಮು-ಕಾಶ್ಮೀರದಲ್ಲಿರುವ ಶ್ರೀನಗರದಿಂದ 205 ಕಿಮೀ ದೂರವಿರುವ ಕಾರ್ಗಿಲ್ ಎಂಬ ಪಟ್ಟಣದ ನೆತ್ತಿಯ ಬೆಟ್ಟಗಳನ್ನೆಲ್ಲ, ಹೇನು-ಸೀರುಗಳಂತೆ ಕಚ್ಚಿ ಹಿಡಿದಿದ್ದರು ಪಾಕಿಸ್ತಾನದ ಸೈನಿಕರು. ಅವರನ್ನು ಹೆಕ್ಕಿ ತೆಗೆದು, ಆ ಪ್ರದೇಶಗಳನ್ನು ಮತ್ತೆ ಕೈವಶಮಾಡಿಕೊಳ್ಳಲು ಕಟಿಬದ್ಧವಾಗಿ ನಿಂತಿತ್ತು ಭಾರತೀಯ ಸೇನೆ. ಅಂಥ ಅತಿ ದುರ್ಗಮವಾದ ಬೆಟ್ಟಗಳಲ್ಲೊಂದು, ಟೊಲೋಲಿಂಗ್. ಅದನ್ನು ವಶಪಡಿಸಿಕೊಳ್ಳಲು ಅಲ್ಲಿಯವರೆಗೆ ನಡೆಸಿದ್ದ ಎಲ್ಲ ಯತ್ನಗಳೂ ವಿಫಲವಾಗಿದ್ದವು. ತನ್ನ ಕಮಾಂಡರ್ ಮೇಜರ್ ಪದ್ಮಪಾಣಿ ಆಚಾರ್ಯರೊಂದಿಗೆ ಅಲ್ಲಿಗೆ ಧಾವಿಸಿದ ವಿಜಯಂತ್, ತನ್ನ ತುಕಡಿಯೊಂದಿಗೆ ಸೇರಿ, ಪಾಕ್ ಸೈನಿಕರನ್ನು ಹೊಸಕಿಹಾಕಿದ. ಕಾರ್ಗಿಲ್ ಯುದ್ಧಕ್ಕೆ ಒಂದು ಮುಖ್ಯ ತಿರುವು ದೊರೆತದ್ದೇ ವಿಜಯಂತ್ ದೊರಕಿಸಿಕೊಟ್ಟ ಟೊಲೋಲಿಂಗ್ ಗೆಲುವಿನಿಂದ. ಈ ಯಶಸ್ಸಿನ ಗುಂಗಿನಲ್ಲಿದ್ದ ವಿಜಯಂತ್ನ ತಂಡಕ್ಕೆ ಸವಾಲಾಗಿದ್ದದ್ದು ನೋಲ್ ಎಂಬ ಮತ್ತೊಂದು ಬೆಟ್ಟ. ಟೊಲೋಲಿಂಗ್ ಮತ್ತು ಟೈಗರ್ ಹಿಲ್ಗಳ ಮಧ್ಯೆ ಇರುವ ಇದರ ಎತ್ತರ 15000 ಅಡಿ. ಇಲ್ಲಿಯ ಉಷ್ಣಾಂಶ -15 ಡಿಗ್ರಿ! ದುರದೃಷ್ಟವೆಂದರೆ ಕೆಳಗಿನಿಂದ ಹತ್ತುವವರಿಗೆ ರಕ್ಷಣೆಯಾಗಬಲ್ಲ ಯಾವ ನೈಸರ್ಗಿಕ ತಡೆಗೋಡೆಯೂ ಈ ಬೆಟ್ಟದಲ್ಲಿಲ್ಲ. ಆದ್ದರಿಂದಲೇ, ಇದನ್ನು ಹತ್ತಿ ಹೋಗಿ, ಸೂಕ್ತ ತಯಾರಿಯೊಂದಿಗೆ ಆಯಕಟ್ಟಿನ ಜಾಗಗಳಲ್ಲಿ ಅಡಗಿ ಕುಳಿತಿದ್ದ ಪಾಕ್ ಸೈನಿಕರನ್ನು ಸದೆಬಡಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು. ಹಾಗೆಂದು ಶತ್ರುವನ್ನು ಸಹಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳುವ ಹಾಗೂ ಇರಲಿಲ್ಲ.

ಅಂದು 1999ರ ಜೂನ್ ತಿಂಗಳ 28ನೇ ತಾರೀಖು. ಅಂದಿಗೆ ವಿಜಯಂತ್ ಸೇನೆಯನ್ನು ಸೇರಿ ಆರು ತಿಂಗಳಾಗಿತ್ತಷ್ಟೆ. ಅಂದು ರಾತ್ರಿ  ಬೆಟ್ಟವನ್ನು ಹತ್ತಿಯೇ ತೀರುವುದೆಂದು ನಿರ್ಧಾರವಾಯಿತು. ಒಮ್ಮೆ ಹತ್ತತೊಡಗಿದರೆ ಹಿಂತಿರುಗುವುದು ಸುಲಭವಲ್ಲವೆಂಬುದು ಎಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ಹೊರಡುವ ಮುನ್ನ ಪತ್ರ ಬರೆದಿಟ್ಟ ವಿಜಯಂತ್. ಬೆಟ್ಟ ಹತ್ತುತ್ತಿದ್ದಂತೆ ಶುರುವಾಯಿತು ನೋಡಿ ಗುಂಡಿನ ದಾಳಿ. ಇಡೀ ತುಕಡಿ ಚೆಲ್ಲಾಪಿಲ್ಲಿಯಾಯಿತು. ಹಂಚಿ ಹೋದ ಸೈನಿಕರು ಹೋರಾಡುತ್ತಲೇ, ಇಂಚಿಂಚೇ ಮೇಲೆ ಸಾಗಿದರು. ಕಡೆಗೊಂದು ಸಲ ಎಲ್ಲರೂ ಒಟ್ಟುಗೂಡಿದಾಗ ಆಘಾತ ಕಾದಿತ್ತು. ಮೇಜರ್ ಆಚಾರ್ಯ ಹೆಣವಾಗಿದ್ದರು! ಕುದ್ದು ಹೋದ ವಿಜಯಂತ್ ಶತ್ರುವನ್ನು ಕೊಂದೇ ತೀರುವ ಹಟಕ್ಕೆ ಬಿದ್ದ. ತೀರಾ ಸನಿಹಕ್ಕೆ ಹೋಗಿ ಕೆಚ್ಚಿನಿಂದ ಕಾದಾಟಕ್ಕೆ ನಿಂತ. ಮಾಡು ಇಲ್ಲವೇ ಮಡಿ ಎಂಬುದು ಅಕ್ಷರಶಃ ಅನಿವಾರ್ಯವಾಗಿತ್ತು. ಒಂದೂವರೆ ಗಂಟೆಗಳ ಘೋರ ಕದನದ ಕೊನೆಯಲ್ಲಿ ವಿಜಯಂತ್ನ ತಲೆಗೆ ಬಡಿದ ಗುಂಡುಗಳು ಅವನ ಜೀವ ತೆಗೆದರೆ, ನೋಲ್ ನಮ್ಮದಾಗಿತ್ತು. ಶವವಾಗಿ ಬಂದ ವಿಜಯಂತ್ನನ್ನು ಕಳುಹಿಸಿಕೊಡಲು ಅವನ ಊರು ನೋಯ್ಡಾದಲ್ಲಿ ನೆರೆದಿದ್ದವರು ಒಂದು ಲಕ್ಷ ಜನ. 22ರ ಹರೆಯದ ಮೊಮ್ಮಗನ ಶೌರ್ಯಕ್ಕೆ ಪ್ರತಿಫಲವಾಗಿ ಸಿಕ್ಕ ವೀರ ಚಕ್ರವನ್ನು ಸ್ವೀಕರಿಸಿದ್ದು 82ರ ಹರೆಯದ ಅವನ ಪ್ರೀತಿಯ ಅಜ್ಜಿ. ಅವನೇನೋ ಗಟ್ಟಿಗ ಸರಿ, ಆ ಮುದುಕಿಯ ಗುಂಡಿಗೆ ಇನ್ನೆಂಥದ್ದಿರಬೇಕು?!


ಇಂಥ ನೂರಾರು ವಿಜಯಂತ್ರನ್ನು ಕಳೆದುಕೊಂಡು ಗೆದ್ದೆವು ಕಾರ್ಗಿಲ್ ಕದನವನ್ನು. ನಮ್ಮ ಗೆಲವಿಗೆ ಈಗ ಸರಿಯಾಗಿ 22 ವರ್ಷಗಳಾಗುತ್ತವೆ. ಬಹಳಷ್ಟಿರಬೇಕು ನಮ್ಮಲ್ಲಿ ಅಭಿಮಾನ ಮತ್ತು ಹರ್ಷ. 

ಹಿಮಾಲಯದ ತಪ್ಪಲಿನಲ್ಲಿ ಸುಮಾರು 15ಡಿಗ್ರಿಯಷ್ಟು ತಾಪಮಾನದಲ್ಲಿ ಮೇ 4 1999 ರಿಂದ ಜುಲೈ 26 1999 ರವರೆಗೆ ನಡೆದ ಕಾರ್ಗಿಲ್ ಕದನದಲ್ಲಿ ”ಆಪರೇಷನ್ ವಿಜಯ್” ಹೆಸರಿನಭಾರತೀಯ ಸೈನಿಕರ ದಿಟ್ಟ ಕಾರ್ಯಾಚರಣೆ ಯಶಸ್ವಿಯಾಗಿತ್ತು. 

ನಮ್ಮ-ನಿಮ್ಮೆಲ್ಲರ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಆ ಪುಣ್ಯಜೀವಿಗಳನ್ನು ಕಾರ್ಗಿಲ್ ವಿಜಯ ದಿನವಾದ ಇಂದು ನಾವೆಲ್ಲಾಹೃಅದಯತುಂಬಿ ಸ್ಮರಿಸಿಕೊಳ್ಳೋಣ್ವಲ್ಲವೆ? ಓ ಭಾರತದ ನವ ಜವಾನರೇ ನಿಮಗಿದೋ ನಮ್ಮ ಸೆಲ್ಯೂಟ್!

ಜೈ ಹಿಂದ್!

ಜೈ ಭಾರತಾಂಬೆ!

(ಸಂಗ್ರಹದಿಂದ)

ಜೂನ್ 26, 2021

ಹುತಾತ್ಮ ಸೈನಿಕ ತಂದೆಯ ತ್ಯಾಗ

ಈ ದೇಶಕ್ಕಾಗಿ ನಮ್ಮ ಬದುಕು. ಎಲ್ಲದಕ್ಕೂ ಸಿದ್ಧರಾಗಿರಬೇಕು ಎಂಬ ಮಾತಿಗೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಸಾಕ್ಷಿಯಾಗಿದ್ದಾರೆ.

ಅವರ ಮಗ 2ನೇ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ. 23 ಪಂಜಾಬ್ ಎಸ್ಸಿಯಲ್ಲಿ ಕಾರ್ಯನಿರ್ವಹಿಸಿದವರು.

1996ರಲ್ಲಿ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ ಜಮ್ಮು ಕಾಶ್ಮೀರದಲ್ಲಿ ವೈರಿಗಳೊಂದಿಗಿನ ಹೋರಾಟದಲ್ಲಿ ಹುತಾತ್ಮರಾಗುತ್ತಾರೆ.

ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರೂ ಕೂಡಾ ಸೇನೆಯಲ್ಲಿದ್ದವರು. ಕಮಾಂಡಿಂಗ್ ಆಫೀಸರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರಿಗೆ ದೇವರು ಈಗ ತನ್ನ ಮಗ ಮತ್ತು ತನ್ನ ಮಡದಿಯನ್ನು ಕಳೆದುಕೊಂಡ ದುಃಖವನ್ನು ‌ಸಹಿಸುವ ಶಕ್ತಿ ಕೊಡಲಿ.

ಏಕೆಂದರೆ ೩ನೇ ಬಾರಿ ಕ್ಯಾನ್ಸರಿಂದ ಬಳಲಿ ಅವರ ಮಡದಿ ತೃಪ್ತಾ ಸಲಾರಿಯಾ ಕೂಡ ಈಗ ಇಹಲೋಕವನ್ನು ತ್ಯಜಿಸಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರು ನೇತೃತ್ವ ವಹಿಸಿದ್ದ ತುಕಡಿಯಲ್ಲೇ ಮಗ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ ಸೈನಿಕರಾಗಿ ಕಾರ್ಯನಿರ್ವಹಿಸಿದ್ದರು.


ಇತಿಹಾಸದಲ್ಲೇ ಮೊದ‌ಲ‌ ಬಾರಿಗೆ ಇರಬೇಕು ಕಮಾಂಡಿಂಗ್ ಆಫೀಸರ್ ಆಗಿ ಮಗನ ಸಾವಿನ ಸುದ್ದಿಯನ್ನು ಪತ್ನಿಗೆ ಹೇಳಬೇಕಾದ ಅನಿವಾರ್ಯತೆ‌ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರದ್ದು.

ಹೇಗಾಗಿರಬಹುದು ಅವರಿಗೆ? ಮಗನ ದೇಹ ಹೊಕ್ಕ ಬುಲೆಟ್ ಅವರೇ ಹುಡುಕಾಡಿ ತೆಗೆದದ್ದು, ಅದು ಅವರ ಜೊತೆ ಭದ್ರವಾಗಿದೆ.

ಅದಾಗಿ ಪತ್ನಿಯ ‌ಸುದೀರ್ಘ ಆರೋಗ್ಯದ ಹೋರಾಟ. ಕೊನೆಗೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಈಗ ಪತ್ನಿ ಮತ್ತು ಮಗನ ನೆನಪಲ್ಲಿ ಕಾಲ ಕಳೆಯುವ ಸ್ಥಿತಿ. ಎಂಥಾ ತ್ಯಾಗ ಇವರದ್ದು. ಈ ತ್ಯಾಗಕ್ಕೆ ಬೆಲೆ ಕಟ್ಟಲಾದಿತೆ ? ಅವರ ಸೇವೆ ಬಲಿದಾನ, ದೇಶಕ್ಕಾಗಿ ಮಾಡಿದ ಸಮರ್ಪಣೆ ಎಂಥದ್ದು...

ಸಲಾರಿಯ ಕುಟುಂಬಕ್ಕೆ ನಮ್ಮ ಸಲಾಂ.

ಜೂನ್ 20, 2021

ಅದ್ಭುತ ಪರಿಕಲ್ಪನೆಯಲ್ಲಿ ವೃತ್ತಾಕಾರ ನಗರನೀವು ಡ್ರೋನ್ ಛಾಯಾಗ್ರಹಣಕ್ಕಾಗಿ ವಿಶಿಷ್ಟವಾದ ಭೂದೃಶ್ಯವನ್ನು ಹುಡುಕುತ್ತಿದ್ದಿರಿ ಅಂದ್ರೆ ನಿಮಗೊಂದು ಅತ್ಯದ್ಭುತವಾದ ಸ್ಥಳದ ಬಗ್ಗೆ ಮಾಹಿತಿ ಕೊಡುತ್ತೇನೆ. ಆ ಸ್ಥಳವನ್ನು ನೀವೇನಾದರು ನೋಡಿದರೆ ಖಂಡಿತವಾಗಿ ಇದು ಭೂಲೋಕದ ಸ್ವರ್ಗನಾ ! ಅಂತ ಉದ್ಗಾರ ತೆಗೆಯುವುದಂತೂ ನಿಜ. ಬನ್ನಿ ಹಾಗಾದರೆ ಆ ಸ್ಥಳವನ್ನು ನೋಡಿಕೊಂಡು ಬರೋಣ. ತಮ್ಮಲ್ಲರಿಗೂ ಎವಿ ಮೀಡಿಯಾ ಯೂಟ್ಯೂಬ್ ಚಾನಲ್ಲಿಗೆ ಸ್ವಾಗತ.

ಎಲ್ಲಿ ನೋಡಿದರಲ್ಲಿ ಬರೀ ಹಸಿರುಮಯ ಹುಲ್ಲು ಹಾಸು. ತಾಜಾ ಗಾಳಿ ಬೀಸುವ ಉಲ್ಲಾಸದಾಯಕ ಅನುಭವ ನಿಮ್ಮದಾಗಬೇಕು ಅಂದರೆ ಯೂರೋಪ್ ಖಂಡದ ಡೆನ್ಮಾರ್ಕ್‌ ದೇಶದಲ್ಲಿನ ಬ್ರಾಂಡ್‌ಬಿ ಗಾರ್ಡನ್ ಸಿಟಿಗೆ ಬನ್ನಿ. ಇಲ್ಲಿ ನಿಜವಾದ ಅನನ್ಯ ಮತ್ತು ಪರಿಸರ ಸ್ನೇಹಿ ನಗರ ನಿಮ್ಮನ್ನು ಅಕ್ಷರಶಃ ಸ್ವರ್ಗದಂತೆ ಸಿಂಗಾರಗೊಂಡು ನಿಮ್ಮನ್ನು ಸ್ವಾಗತಿಸುತ್ತದೆ.


ಡೆನ್ಮಾರ್ಕ್‌ ದೇಶದ ವೃತ್ತಾಕಾರದಿಂದ ಕೂಡಿದ ಉದ್ಯಾನ ನಗರ ಬ್ರಾಂಡ್‌ಬಿ ಹ್ಯಾವ್‌ಬೈ ಸುಂದರ ಮನೆಗಳ ಸಮೂಹವಾಗಿದೆ. ಇವುಗಳನ್ನು ವಲಯಗಳ ರೂಪದಲ್ಲಿ ಆಯಕಟ್ಟಿನ ರೀತಿಯಲ್ಲಿ ಜೋಡಿಸಲಾಗಿದೆ.  ನಗರದ ಅತ್ಯದ್ಭುತ ದೃಶ್ಯವನ್ನು ವೈಮಾನಿಕ ನೋಟದಲ್ಲಿ ನೋಡಿದರೆ ಬೆಕ್ಕಸ ಬೆರಗಾಗಬಹುದು.

ಈ ಬ್ರಾಂಡ್‌ಬಿ ಹ್ಯಾವ್‌ಬೈ ನಗರ ಪ್ರದೇಶದ ಸುತ್ತಮುತ್ತಲಿನ ವಿಶಾಲ ಉದ್ಯಾನಗಳು, ಇಲ್ಲಿ ಇಷ್ಟೊಂದು ಸ್ಥಳಾವಕಾಶದಲ್ಲಿ ನಿರ್ಮಿಸಿದ ಮನೆಗಳು ನೋಡಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಇಲ್ಲಿನ ನಿವಾಸಿಗಳು ಅಷ್ಟೊಂದು ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆಯೇ ಎಂದು. ಅಲ್ಲದೆ ಇದು ಸದ್ದುಗದ್ದಲವಿಲ್ಲದ ನಗರಗಳಿಂದ ಮತ್ತು ಧಾವಂತದ ನಗರ ಜೀವನದಿಂದ ತುಂಬಾ ದೂರವಿದೆ. ಹೀಗಾಗಿ ಹಸಿರಿನಿಂದ ಸುತ್ತುವರೆದಿರುವ ವೃತ್ತಾಕಾರದ ಮನೆಗಳು, ಅವುಗಳ ಸುತ್ತಲಿನ ಉದ್ಯಾನ, ಹಚ್ಚಹಸುರಿನ ಮೈಮನ ಮರೆಸುವ ವಾತಾವರಣ, ಅಲ್ಲಿ ವಾಸ ಮಾಡುವ ನಿವಾಸಿಗಳ ಏಕಾಂತವನ್ನು ಶಾಂತಿಯುತವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ.


ನಿವಾಸಿಗಳು ತಮ್ಮ ತಮ್ಮ ಹವ್ಯಾಸಗಳಲ್ಲಿ ಮತ್ತು ಈ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಈ ವಾತಾವರಣ ಪ್ರೋತ್ಸಾಹಿಸುತ್ತದೆ. ಇಲ್ಲಿನ ವಿಹಂಗಮವಾದ ಸೌಂದರ್ಯಕ್ಕೆ ಇಲ್ಲಿನ ನಿಸರ್ಗವಷ್ಟೆ ಮುಖ್ಯ ಆಕರ್ಷಣೆಯಲ್ಲ ಅಥವಾ ಮುಖ್ಯ ಕಾರಣವಲ್ಲ. ಈ ಉದ್ಯಾನಗಳಿಗೆ ವೃತ್ತಾಕಾರದ ವಿನ್ಯಾಸವನ್ನು ರೂಪಿಸಲಾಗಿದೆಯಲ್ಲ ಅದುವೆ ಇದಕ್ಕೆಲ್ಲ ಮುಖ್ಯ ಕಾರಣ.  ವೃತ್ತಾಕಾರದ ಆಕಾರದಿಂದ ಕೂಡಿರುವ ಈ ಉದ್ಯಾನ ನಗರದಲ್ಲಿ ವಾಸಿಸುವ ಜನರಲ್ಲಿ ಸ್ನೇಹಪರತೆ, ಸಾಮಾಜಿಕ ಸಂವಹನ, ಪರಸ್ಪರ ಸಾಮರಸ್ಯ ಹೆಚ್ಚಿಸಿ ಬದುಕು ಸಾಗಿಸಲು ಪ್ರೋತ್ಸಾಹಿಸುತ್ತದೆ. ಬಹುಶಃ ಇಂಥಹ ಉದ್ದೇಶವನ್ನು ಇಟ್ಟುಕೊಂಡೇ ಇಂಥ ನಗರವೊಂದನ್ನು ನಿರ್ಮಿಸಲಾಗಿರಬಹುದು.

ಮನೆಗಳನ್ನು ವಿಶಾಲ ಜಾಗದಲ್ಲಿ ನಿರ್ಮಿಸಿ ಇನ್ನೊಂದು ಮನೆಯಿಂದ ಮತ್ತೊಂದು ಮನೆಗೆ ಸ್ವಲ್ಪ ದೂರ ಎನ್ನುವಂತೆ ಬೇರ್ಪಡಿಸಲಾಗಿದ್ದರೂ, ವೃತ್ತಾಕಾರದ ಆಕಾರವು ನಿವಾಸಿಗಳ ನಡುವೆ ನಿಕಟ ಮತ್ತು ಸ್ನೇಹಶೀಲ ಸಾಮೀಪ್ಯವನ್ನು ಬಲಗೊಳಿಸುತ್ತದೆ. ಜೊತೆಗೆ ಬಹು ಮುಖ್ಯವಾಗಿ ಹಲವು ರಸ್ತೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಿದೆ. ಎಲ್ಲರಿಗೂ ಒಂದೇ ರಸ್ತೆ. ಎಂಥಾ ಪರಿಕಲ್ಪನೆ ಅಲ್ಲವೇ !

ಆದ್ದರಿಂದ, ಮುಂದಿನ ಬಾರಿ ನೀವು ಡೆನ್ಮಾರ್ಕ್‌ಗೆ ಏನಾದರೂ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡರೆ ಬ್ರಂಡ್‌ಬಿ ಹ್ಯಾವ್‌ಬಿಯನ್ನು ನೆನಪಿನಲ್ಲಿಡಿ. ನಿಮ್ಮನ್ನು ಖಂಡಿತವಾಗಿಯೂ ಆ ಪರಿಸರ ಅಪ್ಯಾಯಮಾನವಾಗಿ ಸ್ವಾಗತಿಸುತ್ತದೆ.

ಬ್ರಾಂಡ್‌ಬಿ ಹ್ಯಾವ್‌ಬೈ ಸುಂದರ ಮನೆಗಳ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.