ಜೂನ್ 20, 2021

ಅದ್ಭುತ ಪರಿಕಲ್ಪನೆಯಲ್ಲಿ ವೃತ್ತಾಕಾರ ನಗರನೀವು ಡ್ರೋನ್ ಛಾಯಾಗ್ರಹಣಕ್ಕಾಗಿ ವಿಶಿಷ್ಟವಾದ ಭೂದೃಶ್ಯವನ್ನು ಹುಡುಕುತ್ತಿದ್ದಿರಿ ಅಂದ್ರೆ ನಿಮಗೊಂದು ಅತ್ಯದ್ಭುತವಾದ ಸ್ಥಳದ ಬಗ್ಗೆ ಮಾಹಿತಿ ಕೊಡುತ್ತೇನೆ. ಆ ಸ್ಥಳವನ್ನು ನೀವೇನಾದರು ನೋಡಿದರೆ ಖಂಡಿತವಾಗಿ ಇದು ಭೂಲೋಕದ ಸ್ವರ್ಗನಾ ! ಅಂತ ಉದ್ಗಾರ ತೆಗೆಯುವುದಂತೂ ನಿಜ. ಬನ್ನಿ ಹಾಗಾದರೆ ಆ ಸ್ಥಳವನ್ನು ನೋಡಿಕೊಂಡು ಬರೋಣ. ತಮ್ಮಲ್ಲರಿಗೂ ಎವಿ ಮೀಡಿಯಾ ಯೂಟ್ಯೂಬ್ ಚಾನಲ್ಲಿಗೆ ಸ್ವಾಗತ.

ಎಲ್ಲಿ ನೋಡಿದರಲ್ಲಿ ಬರೀ ಹಸಿರುಮಯ ಹುಲ್ಲು ಹಾಸು. ತಾಜಾ ಗಾಳಿ ಬೀಸುವ ಉಲ್ಲಾಸದಾಯಕ ಅನುಭವ ನಿಮ್ಮದಾಗಬೇಕು ಅಂದರೆ ಯೂರೋಪ್ ಖಂಡದ ಡೆನ್ಮಾರ್ಕ್‌ ದೇಶದಲ್ಲಿನ ಬ್ರಾಂಡ್‌ಬಿ ಗಾರ್ಡನ್ ಸಿಟಿಗೆ ಬನ್ನಿ. ಇಲ್ಲಿ ನಿಜವಾದ ಅನನ್ಯ ಮತ್ತು ಪರಿಸರ ಸ್ನೇಹಿ ನಗರ ನಿಮ್ಮನ್ನು ಅಕ್ಷರಶಃ ಸ್ವರ್ಗದಂತೆ ಸಿಂಗಾರಗೊಂಡು ನಿಮ್ಮನ್ನು ಸ್ವಾಗತಿಸುತ್ತದೆ.


ಡೆನ್ಮಾರ್ಕ್‌ ದೇಶದ ವೃತ್ತಾಕಾರದಿಂದ ಕೂಡಿದ ಉದ್ಯಾನ ನಗರ ಬ್ರಾಂಡ್‌ಬಿ ಹ್ಯಾವ್‌ಬೈ ಸುಂದರ ಮನೆಗಳ ಸಮೂಹವಾಗಿದೆ. ಇವುಗಳನ್ನು ವಲಯಗಳ ರೂಪದಲ್ಲಿ ಆಯಕಟ್ಟಿನ ರೀತಿಯಲ್ಲಿ ಜೋಡಿಸಲಾಗಿದೆ.  ನಗರದ ಅತ್ಯದ್ಭುತ ದೃಶ್ಯವನ್ನು ವೈಮಾನಿಕ ನೋಟದಲ್ಲಿ ನೋಡಿದರೆ ಬೆಕ್ಕಸ ಬೆರಗಾಗಬಹುದು.

ಈ ಬ್ರಾಂಡ್‌ಬಿ ಹ್ಯಾವ್‌ಬೈ ನಗರ ಪ್ರದೇಶದ ಸುತ್ತಮುತ್ತಲಿನ ವಿಶಾಲ ಉದ್ಯಾನಗಳು, ಇಲ್ಲಿ ಇಷ್ಟೊಂದು ಸ್ಥಳಾವಕಾಶದಲ್ಲಿ ನಿರ್ಮಿಸಿದ ಮನೆಗಳು ನೋಡಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಇಲ್ಲಿನ ನಿವಾಸಿಗಳು ಅಷ್ಟೊಂದು ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆಯೇ ಎಂದು. ಅಲ್ಲದೆ ಇದು ಸದ್ದುಗದ್ದಲವಿಲ್ಲದ ನಗರಗಳಿಂದ ಮತ್ತು ಧಾವಂತದ ನಗರ ಜೀವನದಿಂದ ತುಂಬಾ ದೂರವಿದೆ. ಹೀಗಾಗಿ ಹಸಿರಿನಿಂದ ಸುತ್ತುವರೆದಿರುವ ವೃತ್ತಾಕಾರದ ಮನೆಗಳು, ಅವುಗಳ ಸುತ್ತಲಿನ ಉದ್ಯಾನ, ಹಚ್ಚಹಸುರಿನ ಮೈಮನ ಮರೆಸುವ ವಾತಾವರಣ, ಅಲ್ಲಿ ವಾಸ ಮಾಡುವ ನಿವಾಸಿಗಳ ಏಕಾಂತವನ್ನು ಶಾಂತಿಯುತವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ.


ನಿವಾಸಿಗಳು ತಮ್ಮ ತಮ್ಮ ಹವ್ಯಾಸಗಳಲ್ಲಿ ಮತ್ತು ಈ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಈ ವಾತಾವರಣ ಪ್ರೋತ್ಸಾಹಿಸುತ್ತದೆ. ಇಲ್ಲಿನ ವಿಹಂಗಮವಾದ ಸೌಂದರ್ಯಕ್ಕೆ ಇಲ್ಲಿನ ನಿಸರ್ಗವಷ್ಟೆ ಮುಖ್ಯ ಆಕರ್ಷಣೆಯಲ್ಲ ಅಥವಾ ಮುಖ್ಯ ಕಾರಣವಲ್ಲ. ಈ ಉದ್ಯಾನಗಳಿಗೆ ವೃತ್ತಾಕಾರದ ವಿನ್ಯಾಸವನ್ನು ರೂಪಿಸಲಾಗಿದೆಯಲ್ಲ ಅದುವೆ ಇದಕ್ಕೆಲ್ಲ ಮುಖ್ಯ ಕಾರಣ.  ವೃತ್ತಾಕಾರದ ಆಕಾರದಿಂದ ಕೂಡಿರುವ ಈ ಉದ್ಯಾನ ನಗರದಲ್ಲಿ ವಾಸಿಸುವ ಜನರಲ್ಲಿ ಸ್ನೇಹಪರತೆ, ಸಾಮಾಜಿಕ ಸಂವಹನ, ಪರಸ್ಪರ ಸಾಮರಸ್ಯ ಹೆಚ್ಚಿಸಿ ಬದುಕು ಸಾಗಿಸಲು ಪ್ರೋತ್ಸಾಹಿಸುತ್ತದೆ. ಬಹುಶಃ ಇಂಥಹ ಉದ್ದೇಶವನ್ನು ಇಟ್ಟುಕೊಂಡೇ ಇಂಥ ನಗರವೊಂದನ್ನು ನಿರ್ಮಿಸಲಾಗಿರಬಹುದು.

ಮನೆಗಳನ್ನು ವಿಶಾಲ ಜಾಗದಲ್ಲಿ ನಿರ್ಮಿಸಿ ಇನ್ನೊಂದು ಮನೆಯಿಂದ ಮತ್ತೊಂದು ಮನೆಗೆ ಸ್ವಲ್ಪ ದೂರ ಎನ್ನುವಂತೆ ಬೇರ್ಪಡಿಸಲಾಗಿದ್ದರೂ, ವೃತ್ತಾಕಾರದ ಆಕಾರವು ನಿವಾಸಿಗಳ ನಡುವೆ ನಿಕಟ ಮತ್ತು ಸ್ನೇಹಶೀಲ ಸಾಮೀಪ್ಯವನ್ನು ಬಲಗೊಳಿಸುತ್ತದೆ. ಜೊತೆಗೆ ಬಹು ಮುಖ್ಯವಾಗಿ ಹಲವು ರಸ್ತೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಿದೆ. ಎಲ್ಲರಿಗೂ ಒಂದೇ ರಸ್ತೆ. ಎಂಥಾ ಪರಿಕಲ್ಪನೆ ಅಲ್ಲವೇ !

ಆದ್ದರಿಂದ, ಮುಂದಿನ ಬಾರಿ ನೀವು ಡೆನ್ಮಾರ್ಕ್‌ಗೆ ಏನಾದರೂ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡರೆ ಬ್ರಂಡ್‌ಬಿ ಹ್ಯಾವ್‌ಬಿಯನ್ನು ನೆನಪಿನಲ್ಲಿಡಿ. ನಿಮ್ಮನ್ನು ಖಂಡಿತವಾಗಿಯೂ ಆ ಪರಿಸರ ಅಪ್ಯಾಯಮಾನವಾಗಿ ಸ್ವಾಗತಿಸುತ್ತದೆ.

ಬ್ರಾಂಡ್‌ಬಿ ಹ್ಯಾವ್‌ಬೈ ಸುಂದರ ಮನೆಗಳ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ