ಜೂನ್ 04, 2021

ಅಗಲಿದ “ಹಾರೈಕೆ ಕವಿಗೆ” ನುಡಿ ನಮನ

 

ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯಲೋಕದ ಅಚ್ಚಳಿಯದ ನಕ್ಷತ್ರವೊಂದು ಕಳಚಿ ಬಿದ್ದಿದೆ . ಈ ಭಾಗದ ಸಾಹಿತ್ಯ ವಲಯದ ಎಲ್ಲಾ ಮಗ್ಗುಲುಗಳಲ್ಲಿ ಗುರುತಿಸಿಕೊಂಡು ಹಲವು ಯುವ ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿ ಇದ್ದ ಹಿರಿಯ ಜೀವವೊಂದು ಕಣ್ಮರೆಯಾಗಿದೆ.

ಅಕ್ಷರಶಃ ಈ ಭಾಗ ಇವರಿಲ್ಲದೇ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದೆ. ಪ್ರೋ. ವಸಂತ ಕುಷ್ಟಗಿ ಅವರು ಇಂದು (ಶುಕ್ರವಾರ) ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗಷ್ಟೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ “ಹಾರೈಕೆ ಕವಿ” ಅಸ್ತಂಗತರಾಗಿದ್ದಾರೆ.

ಎಂಥ ವಿಪರ್ಯಾಸವೆಂದರೆ ಇಂದು ಆಕಾಶವಾಣಿಯಲ್ಲಿ ಕಾರ್ಯಕ್ರಮ ವಿವರಣೆಯ ಸಂದರ್ಭದಲ್ಲಿ ನಾನು ಅವರದ್ದೆ ಕಾರ್ಯಕ್ರಮದ ಉದ್ಯೋಷಣೆ ಮಾಡಿದ್ದೆ “ಇಂದು ಬೆಳಿಗ್ಗೆ 9 ಗಂಟೆ 30 ನಿಮಿಷಕ್ಕೆ ಗಾಂಧಿಸ್ಕೃತಿ ಪ್ರಸಾರವಾಗಲಿದೆ, ಪ್ರೋ. ವಸಂತ ಕುಷ್ಟಗಿ ಅವರಿಂದ” ಎಂದು. ಅವರ ಕಾರ್ಯಕ್ರಮವೇನೋ ಸರಿಯಾದ ಸಮಯಕ್ಕೆ ಬಿತ್ತರ ಮಾಡಿದೆ. ಆದರೆ ಅದಾಗಲೇ ಅವರು ಈ ಲೋಕದಿಂದ ನಿರ್ಗಮನ ಮಾಡಿದ್ದರು. ಸಹುದ್ಯೋಗಿ ಮಿತ್ರ ದತ್ತಾತ್ರೇಯ ಪಾಟೀಲ್ ಕರೆ ಮಾಡಿ “ರಾಘು, ಪ್ರೋ. ವಸಂತ ಕುಷ್ಟಗಿ ಸರ್ ಅವರ ಗಾಂಧಿಸ್ಕೃತಿ ಕಾರ್ಯಕ್ರಮ ಇದೆ ಅಂತೇನೋ ಹೇಳಿದ್ರಿ ಆದ್ರೆ ಅವರು ಆಗಲೇ ಹೋಗಿಬಿಟ್ರಂತೆ” ಎಂದು ಹೇಳಿದಾಗ ಆಘಾತವಾಯಿತು.

ಪ್ರತಿ ಶುಕ್ರವಾರ ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಮೂಡಿಬರುವ ಗಾಂಧಿಸ್ಕೃತಿ ಕಾರ್ಯಕ್ರಮದಲ್ಲಿ ತಮ್ಮ ದೃಷ್ಟಿಕೋನದಲ್ಲಿ ಗಾಂಧಿಜಿಯವರ ಜೀವನ ವೃತ್ತಾಂತಗಳನ್ನು ಅತ್ಯಂತ ಮಾರ್ಮಿಕವಾಗಿ ಹೇಳುತಿದ್ದವರು ಪ್ರೊ. ವಸಂತ ಕುಷ್ಟಗಿ. ಅದರಂತೆಯೇ ಗಾಂಧಿಜಿಯವರ ತತ್ವ ಆದರ್ಶಗಳನ್ನು ಜೀವನ ಪರ್ಯಂತ ಅಳವಡಿಸಿಕೊಂಡು ಬಂದವರು. ತಮ್ಮ ಇಡೀ ಜೀವನದುದ್ದಕ್ಕೂ ಗಾಂಧಿಜಿಯವರು ಹೇಳಿದಂತೆ ಖಾದಿ ವಸ್ತ್ರಗಳನ್ನೇ ತೊಟ್ಟವರು. ನಡೆಯಲು ಎಷ್ಟೇ ಕಷ್ಟವಾದರೂ ಸಹ ತಾವೇ ಸ್ವತಃ ಆಕಾಶವಾಣಿ ಸ್ಟುಡಿಯೋಗೆ ಆಗಮಿಸಿ ಕಳೆದ ಕೊರೋನಾ ಮಹಾಮಾರಿ ಆಗಮನಕ್ಕೂ ಮುಂಚಿನ ವರೆಗೆ ಗಾಂಧಿಸ್ಕೃತಿ ಕಾರ್ಯಕ್ರಮಕ್ಕಾಗಿ ಧ್ವನಿಮುದ್ರಣ ಮಾಡಿ ಹೋಗುತ್ತಿದ್ದರು. ಆದರೆ ಇನ್ನು ಮುಂದೆ ಆಕಾಶವಾಣಿ ಕೇಂದ್ರಕ್ಕೆ ಅವರ ಆಗಮನ ಇಲ್ಲ ಎಂದಾಗ ಬಹಳಷ್ಟು ನೋವಾಗುತ್ತದೆ. ಆದರೆ ಅವರ ಧ್ವನಿ ಮಾತ್ರ ನಮ್ಮ ಆಕಾಶವಾಣಿಯಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ನಮ್ಮ ಧ್ವನಿ ಮುದ್ರಣ ಭಂಡಾರದಲ್ಲಿ ಅವರದ್ದೆಷ್ಟೋ ಕಾರ್ಯಕ್ರಮಗಳು ಆಕಾಶವಾಣಿ ಇರುವ ವರೆಗೂ ಕೇಳುಗರಿಗೆ ನೆನಪಾಗುತ್ತಲೇ ಇರುತ್ತಾರೆ. ಆಕಾಶವಾಣಿಯ ಕೇಳುಗರ ಪರವಾಗಿ ಸಾಹಿತ್ಯಲೋಕದ ಎಲ್ಲರ ಪರವಾಗಿ ಪ್ರೋ. ವಸಂತ ಕುಷ್ಟಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

"ಹಾರೈಕೆ ಕವನ ವಸಂತ ಕುಷ್ಟಗಿ ವಾಚನ" ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೋ. ವಸಂತ ಕುಷ್ಟಗಿ ಅವರ ಪರಿಚಯ:

ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ ಕಲಬುರ್ಗಿಯ ಸಾಹಿತ್ಯ ಪ್ರಿಯರಿಗೆ ಸಾಹಿತ್ಯಿಕ, ಶೈಕ್ಷಣಿಕ ವಿಷಯಗಳನ್ನು ತಮ್ಮ ಚಟುವಟಿಕೆಗಳ ಮುಖಾಂತರ ಪರಿಚಯಿಸುತ್ತಿರುವ ವಸಂತ ಕುಷ್ಟಗಿಯವರು ಹುಟ್ಟಿದ್ದು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ (ಬಾಗಲಕೋಟೆ ಜಿಲ್ಲೆ) ೧೯೩೬ ರ ಅಕ್ಟೋಬರ್ ೧೦ ರಂದು. ತಂದೆ ರಾಘವೇಂದ್ರ ಕುಷ್ಟಗಿಯವರು ನಿಜಾಂ ಆಡಳಿತದ ಜಿರಾಯತ್‌ (ವ್ಯವಸಾಯ) ಖಾತೆಯಲ್ಲಿ ಮದದ್‌ಗಾರರಾಗಿ (ಸಹಾಯಕರಾಗಿ) ಕೆಲಸ ಮಾಡಿದವರು, ತಾಯಿ ಸುಂದರಾಬಾಯಿ.

ಯಾದಗಿರಿಯಲ್ಲಿ ಪ್ರಾರಂಭಿಕ ಶಿಕ್ಷಣ. ಉಪಾಧ್ಯಾಯರಾಗಿ ದೊರೆತ ಶಂಕರರಾವ್‌ ಕುಲಕರ್ಣಿಯವರ ಮೇಲ್ವಿಚಾರಣೆಯಲ್ಲಿ ಕಲಿತ ಉರ್ದುಭಾಷೆ. ‘ಮಕ್ಕಳ ಸ್ಕೂಲು ಮನೇಲಲ್ವೆ’ ಎನ್ನುವಂತೆ ತಾಯಿ ಸುಂದರಾಬಾಯಿಯವರಿಂದ ಕಲಿತ ಕನ್ನಡಭಾಷೆ. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಧ್ಯಮಿಕ ಶಾಲಾಭ್ಯಾಸ ಶಹಾಪೂರದಲ್ಲಿ. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಕಲಿತದ್ದು ಪ್ರೌಢಶಾಲೆಯವರೆಗೆ. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿದ ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎ. ಪದವಿ. ಉಪನ್ಯಾಸಕರಾಗಿ ಸೇರಿದ್ದು ಬೀದರಿನ ಎಚ್‌.ಕೆ.ಇ. ಸೊಸೈಟಿಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ. ನಂತರ ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಕಲಬುರ್ಗಿಯ ಎಂ.ಎಸ್‌.ಐ. ಕಾಲೇಜು, ಮತ್ತು ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೆ ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ. ಸ್ಥಾಪನೆಯಾದಾಗ (೧೯೮೦ – ೮೨) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾಯಿ ಸುಂದರಾಬಾಯಿಯವರು ಅಕ್ಷರಾಭ್ಯಾಸ ಮಾಡಿಸಿದರೆ ತಂದೆ ರಾಘವೇಂದ್ರ ಕುಷ್ಟಗಿಯವರು ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ತಂದೆಯು ವರ್ಗವಾಗಿ ಹೋದೆಡೆಯಲ್ಲೆಲ್ಲಾ ಸಾಹಿತಿಗಳ ಸ್ನೇಹ ಸಂಪಾದಿಸಿ ನಡೆಸುತ್ತಿದ್ದ ಸಾಹಿತ್ಯಕೂಟದಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಗೋಕಾಕ್‌, ಸಿಂಪಿಲಿಂಗಣ್ಣ, ಮುಗಳಿ ಮುಂತಾದವರೆಲ್ಲರೂ ಹಾಜರಿರುತ್ತಿದ್ದರು.

ವಸಂತ ಕುಷ್ಟಗಿ ಅವರು ಹಲವಾರು ನಾಟಕಗಳನ್ನು ಬರೆದುದಲ್ಲದೆ ರಂಗನಟರಾಗಿಯೂ ಪಾಲ್ಗೊಳ್ಳುತ್ತಿದ್ದರು. ಹೀಗೆ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿದ್ದಾಗ ಕಾಲೇಜಿನ ಪತ್ರಿಕೆಗೂ ಬರೆಯ ತೊಡಗಿದ್ದರು. ಗಳಗನಾಥರಂತಹವರು ತಮ್ಮ ಪುಸ್ತಕಗಳನ್ನು ಗೋಣಿ ಚೀಲದಲ್ಲಿ ಹೊತ್ತು, ಮಾರಾಟಮಾಡಲು ಬರುತ್ತಿದ್ದುದನ್ನು ಕಂಡ ಕುಷ್ಟಗಿಯವರು ಈ ರೀತಿ ನನ್ನ ಪುಸ್ತಕವೂ ಮಾರಾಟವಾಗುವುದು ಯಾವಾಗ ಎಂದು ಯೋಚಿಸುತ್ತಿದ್ದವರು.

ವಸಂತ ಕುಷ್ಟಗಿ ಅವರ ಮೊದಲ ಕವನ ಸಂಕಲನ ‘ಭಾವದೀಪ್ತಿ’ ಪ್ರಕಟವಾದದ್ದು ೧೯೭೦ರಲ್ಲಿ. ನಂತರ ಬಂದ ಕವನ ಸಂಕಲನಗಳು ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ ೯ ಕವನ ಸಂಕಲನಗಳು. ನಂತರ ಗದ್ಯಸಾಹಿತ್ಯದಲ್ಲಿಯೂ ಹಲವಾರು ಕೃತಿ ರಚಿಸಿರುವ ವಸಂತ ಕುಷ್ಟಗಿಯವರು ಬರೆದ ಮೊದಲ ಕೃತಿ ಭಕ್ತಿಗೋಪುರ. ಮುಂಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದ ವ್ಯಕ್ತಿ ಚಿತ್ರ ಕೃತಿಗಳು; ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾ ನಂತರದ ಹರಿದಾಸ ಸಾಹಿತ್ಯ ಮುಂತಾದ ದಾಸ ಸಾಹಿತ್ಯದ ಕೃತಿಗಳು; ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಸುಮಾರು ೨೦ ಕ್ಕೂ ಹೆಚ್ಚೂ ಕೃತಿಗಳನ್ನು ರಚಿಸಿದ್ದಾರೆ. ಕೃತಿ ಸಂಪಾದನೆಯ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಕುಷ್ಟಗಿಯವರು ಕಾವ್ಯಶ್ರೀ, ತೊದಲು, ಅಜ್ಜಿಹೇಳಿದ್ದು ಮೊಮ್ಮಕ್ಕಳು ಬರೆದದ್ದು ಶ್ರೀರಾಘವೇಂದ್ರ ಮಹಿಮೆ, ಕಂದಗಲ್‌ ಕೃತ ಶ್ರೀ ಚಂದ್ರಲಾ ಪರಮೇಶ್ವರಿ ನಾಟಕ ಮುಂತಾದ ವಿವಿಧ ಪ್ರಕಾರಗಳ ಸುಮಾರು ೧೫ ಕೃತಿಗಳ ಜೊತೆಗೆ ಇತರರೊಡನೆ ಸೇರಿ ಸುಮಾರು ೨೦ ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.

ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೆ, ಇತರ ಸಾಹಿತಿಗಳ ಕೃತಿಗಳೂ ಸೇರಿ ಸುಮಾರು ೨೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ, ಇತಿಹಾಸ ಅಕಾಡಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್‌, ಗುಲಬರ್ಗಾ ವಿ.ವಿ.ದ ಸೆನೆಟ್‌, ಕೋಲ್ಕತ್ತಾದ ಏಷಿಯಾಟಿಕ್‌ ಸೊಸೈಟಿ ಆಫ್‌ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ದುಡಿಯುತ್ತಿರುವ ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೆ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ ೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು ದೊರೆತಿವೆ.

ವಸಂತ ಕುಷ್ಟಗಿ ಅವರ ಸಾಹಿತ್ಯ ಮತ್ತು ವ್ಯಕ್ತಿ ಪರಿಚಯದ ‘ಹಾರಯಿಕೆಯ ಕವಿ ಪ್ರೊ. ವಸಂತ ಕುಷ್ಟಗಿ’ ಕೃತಿಯು ೨೦೧೦ರಲ್ಲಿ ಪ್ರಕಟಗೊಂಡಿದೆ. ಪ್ರೊ. ವಸಂತ ಕುಷ್ಟಗಿಯವರ ಜೀವನ ಮತ್ತು ಕಾವ್ಯ: ಒಂದು ಅಧ್ಯಯನ ಸಂಪ್ರಬಂಧಕ್ಕೆ ಶ್ರೀಮತಿ ರೂತಾ ಎಸ್‌. ಪ್ರಭುಶಂಕರ ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್‌. ಪದವಿ ದೊರೆತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ