ಇಂದು ಅಪರಾಹ್ನದಿಂದ ಹರಿದಾಡುತ್ತಿರುವ ಸುದ್ದಿಗಳನ್ನು ಕೇಳಿ ಮನಸು
ಬಹಳ ಮರುಗುತ್ತಿದೆ. ಒಮ್ಮೆಲೆ ಸಾವಿನ ಸುದ್ದಿ ಕೇಳಿ ಕುಸಿದಿದ್ದ ಆದೆಷ್ಟೋ ಮನಸುಗಳು ಮತ್ತೆ ತಮಗೇ
ಜೀವ ಬಂದಂತೆ ಆಶಾಭಾವವನ್ನು ತಾಳುವಂತಾಗಿತ್ತು. ಸಂಚಾರಿ ವಿಜಯ್ ಇನ್ನು ಉಸಿರಾಡುತ್ತಿದ್ದಾರೆ. ಅವರಿನ್ನು
ನಮ್ಮಿಂದ ಅಗಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು. ಸಂಜೆ ನಡೆಸುವ ಮುಖ್ಯ ಪರೀಕ್ಷೆ
ನಡಿಸಿದ ಮೇಲೆ ಅಂತಿಮ ವರದಿ ಹೇಳಲಾಗುವುದು ಎಂದಿದ್ದರು.
ಅವಾಗಿನಿಂದ ಸಂಜೆ ಏಳುವರೆ ವರೆಗೆ ಅದೆಷ್ಟೋ ಜೀವಗಳು ಸಂಚಾರಿ ವಿಜಯ್
ಅವರ ಜೀವಕ್ಕಾಗಿ ಪ್ರಾರ್ಥನೆ ಸಲ್ಲಿಸಿದವರು ಮೆದುಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಬರಲಿ ಎಂದು.
ಆದರೆ...
ಸಂಜೆ ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ.ಅರುಣ ನಾಯ್ಕ್ ಮೆದುಳು
ಪರೀಕ್ಷೆಯ ವರದಿ ಹೇಳಿದರು. ಅದರಂತೆ ಸಂಚಾರಿ ವಿಜಯ್ ಅವರ ಮೆದುಳು
ಸಂಪೂರ್ಣ ಡೆಡ್ ಆಗಿದೆ ಎಂದು.
ಆದರೆ ಅವರ ಹೃದಯ, ಕಿಡ್ನಿ, ಲೀವರ್, ಕಣ್ಣು ಸೇರಿದಂತೆ ಉಳಿದೆಲ್ಲ
ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಅವರ ಕಿಡ್ನಿ, ಲೀವರ್, ಕಣ್ಣು ಅಂಗಗಳನ್ನು ಅವರ
ಕುಟುಂಬದವರು ದಾನ ಮಾಡಲು ಒಪ್ಪಿರುವುದರಿಂದ ಅಂಗಾಂಗ ಕಸಿ ಮಾಡಲು ವೈದ್ಯರು ಇಂದು ರಾತ್ರಿ
ತಯ್ಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿಯಲು ಮುಂಜಾನೆ ಐದು ಗಂಟೆ ಆಗಬಹುದು.
ಇದರ
ಪ್ರಕಾರ ಸಂಚಾರಿ ವಿಜಯ್ ಮುಂಜಾನೆ ಐದು ಗಂಟೆಯ ವರೆಗೆ ಮಾತ್ರ ಜೀವಂತ. ಅಲ್ಲಿಯ ವರೆಗೆ ಸಂಚಾರಿ
ವಿಜಯ್ ದೇಹ ಉಸಿರಾಡುತ್ತದೆ. ಮೆದುಳು ಒಂದು ಬಿಟ್ಟು.
ಎಂಥಾ ಕಠೋರ ಗಳಿಗೆಗಳಿವು ಅವರ ಕುಟುಂಬಕ್ಕೆ
ಅವರ ಅಭಿಮಾನಿಗಳಿಗೆ ಎಂದು ವಿಚಾರ ಮಾಡಿದರೆ ಕರುಳು ಕಿವುಚಿ ಬರುತ್ತದೆ. ಅವರ ಕೊನೆ
ಉಸಿರೆಳೆಯುವುದನ್ನು ಕಾಯಬೇಕಲ್ಲ. ಇಷ್ಟೊಂದು ಸಮಯವಿದ್ದರೂ ಅವರನ್ನು ಉಳಿಸಿಕೊಳ್ಳಲು ಆಗದ ಅನಿವಾರ್ಯ ಪರಿಸ್ಥಿತಿ.
ಸಂಚಾರಿ ವಿಜಯ್ ಮೊನ್ನೆ ರಾತ್ರಿಯಷ್ಟೆ ರಸ್ತೆ ಅಪಘಾತದಿಂದ ತಲೆಗೆ
ತೀವ್ರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳು ನಿಷ್ಕ್ರೀಯಗೊಂಡಿದೆ ಅಂದು ವೈದ್ಯರು ಹೇಳಿದ್ದರು.
ಅಪಾರ ಅಭಿಮಾನಿಗಳು ಅವರು ಹೇಗಾದರು ಸರಿ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು.
೨೦೧೫ ರಲ್ಲಿ “ನಾನು ಅವನಲ್ಲ ಅವಳು” ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ಪಡೆದಿದ್ದರು ಅದ್ಭುತ ನಟ ಸಂಚಾರಿ ವಿಜಯ್. ಎಂಥಾ ದುರ್ದೈವ ಎಂದರೆ ಕೊರೋನಾದಿಂದ
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಓಡಾಡುತ್ತಿರುವಾಗಲೇ ರಸ್ತೆ ಅಪಘಾತಕ್ಕಿಡಾಗಿದ್ದಾರೆ.
ಈ ಕೋವಿಡ್ ಸಂಕಷ್ಟದಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ಫುಡ್ ಕಿಟ್, ಹಣ ಸಹಾಯ
ಇತ್ಯಾದಿಗಳನ್ನು ಮಾಡುತ್ತಿದ್ದರು. ಮೊದಲಿನಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ
ಸಂಚಾರಿ ವಿಜಯ್ ಅವರ ತಂಡ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ
ಸಕ್ರಿಯವಾಗಿತ್ತು.
ಮೊನ್ನೆ ತಮ್ಮ
ಸ್ನೇಹಿತ ನವೀನ್ ಎಂಬುವವರ ಮನೆಗೆ ಹೋಗಿ ಫುಡ್ ಕಿಟ್ ವಿತರಿಸುವ ಬಗ್ಗೆ ಮಾತುಕತೆ ನಡೆಸಿ
ತಡರಾತ್ರಿ ಹೊರಟಿದ್ದರಂತೆ. ಸ್ನೇಹಿತ ನವೀನ್ ತನ್ನ ಬೈಕ್ ನಲ್ಲಿ ವಿಜಯ್ ಅವರನ್ನು ಡ್ರಾಪ್ ಮಾಡಲು
ಬಂದಿದ್ದರು, ಸಂಚಾರಿ ವಿಜಯ್ ಬೈಕ್ ನಲ್ಲಿ ಹಿಂದೆ ಕುಳಿತಿದ್ದರಂತೆ. ಸ್ವಲ್ಪ
ದೂರ ಹೋದ ಮೇಲೆ ಬೈಕ್ ಸ್ಕಿಡ್ ಆಗಿ ಎಡಬದಿಯಲ್ಲಿ ಕರೆಂಟ್ ಪೋಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ
ಹೊಡೆದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಹಿಂದೆ ಕುಳಿತಿದ್ದ ಸಂಚಾರಿ
ವಿಜಯ್ ಅವರ ತಲೆ ಮತ್ತು ತೊಡೆಗೆ ತೀವ್ರ ಪೆಟ್ಟಾಗಿದೆ. ನವೀನ್
ಅವರೇ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಂತೆ. ಸ್ಥಳಕ್ಕೆ ಬಂದ ಸ್ನೇಹಿತರು
ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಂಚಾರಿ
ವಿಜಯ್ ಅವರ ಸೋದರ ಸಿದ್ಧೇಶ್ ಕುಮಾರ್, ವಿಜಯ್ ನಮ್ಮ
ಕುಟುಂಬದ ಆಧಾರಸ್ತಂಭವಾಗಿದ್ದರು. ಅವರು ಸುಮ್ಮನೆ ಕೂರುವ ವ್ಯಕ್ತಿ ಅಲ್ಲವೇ ಅಲ್ಲ. ಲಾಕ್ ಡೌನ್
ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಶನಿವಾರವೂ (ಜೂನ್ 12) ಅಂತಹುದೇ ಕೆಲಸ
ಮುಗಿಸಿ ಬರುವಾಗ ಅವಘಡವಾಗಿದೆ. ವೈದ್ಯರು 48 ಗಂಟೆ
ಅಬ್ಸರ್ವರ್ವೇಷನ್ ನಲ್ಲಿ ಇರಿಸಿದ್ದಾರೆ. ನಾಳೆಗೆ 48 ಗಂಟೆ ಕಂಪ್ಲೀಟ್
ಆಗಲಿದೆ. ಈ ಅಪಾಯದಿಂದ ಹೊರಬರಲಿ ಎಂದು ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ’ ಎಂದು ಕೇಳಿಕೊಂಡಿದ್ದರು.
ಆದರೆ ಅವರ ಮತ್ತು ಎಲ್ಲರ ಕೋರಿಕೆ ದೇವರಿಗೆ ಮುಟ್ಟಲಿಲ್ಲ.
'ನಾನು
ಅವನಲ್ಲ ಅವಳು ಚಿತ್ರದ ನಟನೆಗೆ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಒಗ್ಗರಣೆ, ದಾಸವಾಳ, ಸಿಪಾಯಿ, ಜಂಟಲ್
ಮನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು
ಲೆಕ್ಕಕ್ಕಿಲ್ಲ, ಅವಸ್ಥಾಂತರ ಸಿನಿಮಾಗಳು ತೆರೆಗೆ
ಬರಲು ಸಿದ್ಧವಾಗಿದ್ದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ