ಜುಲೈ 26, 2021

ಕಾರ್ಗಿಲ್ ವಿಜಯ ದಿವಸ: ಕಾರ್ಗಿಲ್ ಕಲಿಗಳ ಒಂದು ನೆನಪು

ಹದಿನಾರು ಸಾವಿರ ಅಡಿ ಎತ್ತರದ ಕಾರ್ಗಿಲ್ ಬೆಟ್ಟ ರಕ್ಷಣೆಗಾಗಿ ಕರುನಾಡಿನ ಹದಿನಾರು ಯೋಧರು ಪ್ರಾಣ ಚೆಲ್ಲಿದ್ದರು...! ದೇಶದ ಗಡಿ ರಕ್ಷಣೆಗಾಗಿ ದೇಶದ ಹಾಗೂ ರಾಜ್ಯದ ಯೋಧರನ್ನು ನೆನಪಿಸಿಕೊಳ್ಳುವ ದಿನ ಮತ್ತೆ ಬಂದಿದೆ. ಮೋಸದಿಂದ ಭಾರತದ ಗಡಿ ಆಕ್ರಮಿಸಿದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯದ ನಗೆ ಬೀರಿದ ಭಾರತೀಯ ಸೈನಿಕರ ತ್ಯಾಗ ಸ್ಮರಣೆ ಮಾಡುವ ಕಾರ್ಗಿಲ್ ವಿಜಯ ದಿನ ಆರಂಭಗೊಂಡು ಜುಲೈ 26ಕ್ಕೆ 22 ವರ್ಷ ತುಂಬದೆ.

1999ರಲ್ಲಿ ಜಮ್ಮು-ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಯಾರಿಗೂ ಸುಳಿವು ಕೊಡದ ರೀತಿಯಲ್ಲಿ ಪಾಕಿಸ್ತಾನ ಸೇನಾಪಡೆ ವಶಪಡಿಸಿಕೊಂಡಿತು. ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ದೇಶದ ಸಾವಭೌಮತ್ವಕ್ಕೇ ಪ್ರಶ್ನೆ ಮಾಡಿತು. ಪಾಕ್ ಪಡೆಯನ್ನು ಹೊಡೆದೋಡಿಸುವುದು ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಭಾರತೀಯ ಪಡೆಗಳಿಗೆ ಅಷ್ಟು ಸುಲಭವಾಗಿರಲಿಲ್ಲ. 60 ದಿನಗಳ ಕಾಲ ಕಾದಾಡಿದ ಭಾರತೀಯ ಯೋಧರು 1999ರ ಜುಲೈ 26ರಂದು ಪಾಕಿಸ್ತಾನ ಪಡೆಗಳನ್ನು ದೇಶದ ಗಡಿದಾಟಿಸಿ ಅಟ್ಟುವುದರಲ್ಲಿ ಯಶಸ್ವಿಯಾಗಿದ್ದರು.

ಆದರೆ ಈ ಯುದ್ಧದಲ್ಲಿ ನಮ್ಮ ಸೇನಾಪಡೆಯ 527 ಯೋಧರು ಮೃತಪಟ್ಟರು. ಸಾವಿರಾರು ಜನರು ಗಾಯಗೊಂಡರು. ದೇಶ ರಕ್ಷಣೆ ವಿಚಾರ ಬಂದಾಗ ಸದಾ ಒಂದು  ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು ಮಂದಿ ಯೋಧರು ಈ ಯುದ್ಧದಲ್ಲಿ ವೀರಸ್ವರ್ಗವನ್ನು ಅಪ್ಪಿದರು.

ಬೆಳಗಾವಿಯ ದೋಂಡಿಭಾಯ್ ದೇಸಾಯಿ, ಕೊಪ್ಪಳದ ಶಿವಬಸವಯ್ಯ, ಮಡಿಕೇರಿಯ ಎಸ್.ಕೆ.ಮೇದಪ್ಪ, ಕೊಪ್ಪಳದ ಸಿ.ಎಂ.ಮಲ್ಲಯ್ಯ, ಮಡಿಕೇರಿಯ ಪಿ.ಡಿ.ಕಾವೇರಪ್ಪ, ಬೆಳಗಾವಿಯ ಯಶವಂತ ಡಿ.ಕೋಳ್ಕರ್, ಬಾಗಲಕೋಟೆಯ ದಿಲೀಪ್ ಪಿ.ಪೂತರಾಜ್, ಬೆಳಗಾವಿಯ ಭರತ್ ಮಸ್ಕಿ, ಬಸಪ್ಪ ಚೌಗಲೆ,  ಬಾಗಲಕೋಟೆಯ ಶಂಕರಪ್ಪ ಕೋಟಿ, ಬೆಳಗಾವಿಯ ಬಾಹುಬಲಿ ಬರಮಪ್ಪ, ಮಂಡ್ಯದ ಬಿ.ಕೆ.ಸುಧೀರ್, ಬಾಗಲಕೋಟೆಯ ಅಶೋಕ ಭೀಮಪ್ಪ ಜಾದವ್, ಬೆಂಗಳೂರಿನ ಅಜಿತ್ ಭಂಡಾರ್ಕರ್, ಬಿಜಾಪುರದ ದಾವಲ್ಲಾ, ಮಡಿಕೇರಿಯ ಎಚ್.ವಿ.ವೆಂಕಟ ಸೇರಿದಂತೆ ಹದಿನಾರು ಮಂದಿ ಯೋಧರು 16 ಸಾವಿರ ಅಡಿ ಎತ್ತರದ ಶಿಖರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಉತ್ತರಕನ್ನಡ ಜಿಲ್ಲೆ ರಮಾಕಾಂತ್ ಸಾವಂತ್, ಧಾರವಾಡದ ಬಸಪ್ಪ ತಳವಾರ್, ಬೈಲಹೊಂಗಲದ ಮಲ್ಲಪ್ಪ ಮುನವಳ್ಳಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಇವರೆಲ್ಲರ ತ್ಯಾಗ ಬಲಿದಾನಗಳನ್ನು ಮತ್ತೆ ನೆನಪಿಸುವ ದಿನವೇ ಕಾರ್ಗಿಲ್ ವಿಜಯ ದಿವಸ್. 


ದವಲಸಾಬ ಪರಾಕ್ರಮ: ಕಾರ್ಗಿಲ್ ಯುದ್ಧದಲ್ಲಿ ವೈರಿ ಪಡೆಯೊಂದಿಗೆ ಹೋರಾಡಿ ಯುದ್ಧ ಮಾಡುತ್ತಲೇ ಹುತಾತ್ಮನಾದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಡ ಗ್ರಾಮದ ಯುವಕ ದಾವಲಸಾಬ ನಬಿಸಾಬ ಕಂಬಾರ(27) ಎಲ್ಲರಲ್ಲೂ ದೇಶ ಭಕ್ತಿ ಉಕ್ಕಿಸುತ್ತಾರೆ.

ದ್ವಿತೀಯ ಪಿಯುಸಿ ಪಾಸಾಗಿದ್ದ ಕಂಬಾರ ಗಡಿ ರಕ್ಷಣಾ ಪಡೆ(ಬಿಎಸ್ಎಫ್) ಸೇರಿದ್ದರು. ಸುಮಾರು 7 ವರ್ಷಗಳವರೆಗೆ ಅವರು ಕಾರ್ಗಿಲ್ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಫೈರಿಂಗ್ನಲ್ಲಿ ಚಾಣಾಕ್ಷನಾಗಿದ್ದ ದಾವಲಸಾಬನಿಗೆ ವೈರಿ ಪಡೆಗಳನ್ನು ಹೊಡೆದುರುಳಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.  141 ಬಿಎಸ್ಎಫ್ ಬಟಾಲಿಯನ್ನಲ್ಲಿ ಕಾನ್ಸ್ಟೇಬಲ್ ಆಗಿದ್ದ ಇವರಿಗೆ ಯುದ್ಧದ ಸಂದರ್ಭದಲ್ಲಿಯೇ ವೈರಿ ಪಡೆಗಳು ಹಾರಿಸಿದ್ದ ಗುಂಡು ಕಾಲಿಗೆ ತಗುಲಿತ್ತು. ಆದರೂ ಧೃತಿಗೆಡದೆ ಕಾಲಿಗೆ ಕರವಸ್ತ್ರ ಕಟ್ಟಿಕೊಂಡು ಮತ್ತೆ ವೈರಿ ಪಡೆಗಳತ್ತ ಗುಂಡಿನ ಸುರಿಮಳೆಗರೆದು ಮೂವರು ವೈರಿಗಳನ್ನು ಬಲಿತೆಗೆದುಕೊಂಡಿದ್ದರು. ನಂತರ ವೈರಿ ಪಡೆಯಿಂದ ಬಂದ ಗುಂಡು ದಾವಲಸಾಬನ ಕಣ್ಣು ಗುಡ್ಡೆಯ ಮೇಲ್ಭಾಗದ ಹಣೆ ಹಾಗೂ ಎದೆಗೆ ತಗುಲಿ 13-6-1999ರಲ್ಲಿ ವೀರ ಮರಣವನ್ನಪ್ಪಿದರು.

"ಪ್ರೀತಿಯ ಅಪ್ಪ, ಅಮ್ಮ ಹಾಗೂ ಅಜ್ಜಿ,

ಈ ಪತ್ರ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ನಿಮ್ಮನ್ನು ಸ್ವರ್ಗದಿಂದಲೇ ನೋಡುತ್ತಿರುತ್ತೇನೆ. ಏನೇನೂ ಖೇದವಿಲ್ಲ. ಮತ್ತೆ ಮನುಷ್ಯನಾಗಿ ಹುಟ್ಟಿದರೆ ಭಾರತೀಯ ಸೇನೆಯನ್ನು ಸೇರಿ ದೇಶಕ್ಕೋಸ್ಕರ ಹೋರಾಡುತ್ತೇನೆ. ಸಾಧ್ಯವಾದರೆ ಒಂದು ಸಲ ಬಂದು ನಿಮ್ಮ ನಾಳೆಗಳಿಗೋಸ್ಕರ ನಾವು ಹೋರಾಡಿದ ಜಾಗವೆಂಥದು ಎಂಬುದನ್ನು ನೋಡಿ. ನನ್ನ ದೇಹದ ಯಾವ್ಯಾವ ಅಂಗಗಳನ್ನು ದಾನ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿಬಿಡಿ. ಅನಾಥಾಶ್ರಮಕ್ಕೆ ದುಡ್ಡು ಕೊಡುವುದನ್ನು ಹಾಗೂ ರುಕ್ಸಾನಾಳಿಗೆ ತಿಂಗಳಿಗೆ ಐವತ್ತು ರುಪಾಯಿ ಕಳಿಸುವುದನ್ನು ಮಾತ್ರ ಮರೆಯಬೇಡಿ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಕ್ಷಮಿಸಿ. ನಾನಿಲ್ಲವೆಂದು ದುಃಖಿಸುವ ಬದಲು ಹೆಮ್ಮೆ ಪಡಿ. ಸರಿ, ನಾನೀಗ ಹೊರಟೆ, ಎಲ್ಲರಿಗೂ ಒಳ್ಳೆಯದಾಗಲಿ. ಭರಪೂರ ಅನುಭವಿಸಿ ನೀವೆಲ್ಲರೂ ಈ ಬದುಕನ್ನು.

ನಿಮ್ಮ ರಾಬಿನ್"


ಕಾರ್ಗಿಲ್ ಯುದ್ಧದಲ್ಲಿ ತನ್ನ ತುಕಡಿಯನ್ನು ಮುನ್ನಡೆಸುತ್ತಿದ್ದ 22ರ ಹರೆಯದ ಕ್ಯಾಪ್ಟನ್ ವಿಜಯಂತ್ ಥಾಪರ್ ಯುದ್ಧಕ್ಕೆ ಹೊರಡುವ ಕೊನೆ ಘಳಿಗೆಯಲ್ಲಿ ತನ್ನ ಡೇರೆಯಿಂದ ಬರೆದ ಸಾಲುಗಳಿವು. ತಾನು ಹಿಂತಿರುಗದಿದ್ದರೆ ಮನೆಯವರಿಗೆ ಇದನ್ನು ತಲುಪಿಸಿ ಎಂದು ಇಟ್ಟು ಹೋದದ್ದು. ಮನೆಯವರ ಪಾಲಿಗೆ ಪ್ರೀತಿಯ 'ರಾಬಿನ್' ಆಗಿದ್ದ ವಿಜಯಂತ್ ಹಿಂತಿರುಗಿ ಬರಲಿಲ್ಲ. 1998ರ ಡಿಸೆಂಬರ್ನಲ್ಲಿ ಡೆಹರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ವಿಜಯಂತ್ ಮೊದಲು ಕಳುಹಿಸಲ್ಪಟ್ಟಿದ್ದೇ ಉಗ್ರರ ಬೀಡಾಗಿದ್ದ, ಕಾಶ್ಮೀರದ ಕುಪ್ವಾರ ಎಂಬ ಜಾಗಕ್ಕೆ. ಜೀವವನ್ನೂ ಲೆಕ್ಕಿಸದೆ ಕಾದಾಡಿ ಉಗ್ರರನ್ನು ಹತ್ತಿಕ್ಕಿದ ವಿಜಯಂತ್ಗೆ ಅಲ್ಲಿ ಸಿಕ್ಕಿದವಳು ಆರು ವರ್ಷದ ಪುಟಾಣಿ ರುಕ್ಸಾನಾ. ಕಾದಾಟವೊಂದರಲ್ಲಿ ಕಣ್ಣೆದುರೇ ತನ್ನ ಅಪ್ಪ ಹತನಾಗಿದ್ದನ್ನು ನೋಡಿ ಘಾಸಿಗೊಂಡಿದ್ದ ಆ ಮಗುವನ್ನು ಅಕ್ಕರೆಯಿಂದ ಜೋಪಾನ ಮಾಡಿದ ವಿಜಯಂತ್, ತಾನು ಅಲ್ಲಿಂದ ಹಿಂದಿರುಗಿದ ಮೇಲೂ ಆ ಮಗುವಿಗೆ ಪ್ರತಿ ತಿಂಗಳೂ 50 ರುಪಾಯಿ ಕಳಿಸುತ್ತಿದ್ದ. ಸಾಯುವ ಮುನ್ನ ಬರೆದ ಪತ್ರದಲ್ಲಿ ತನ್ನ ತಂದೆ-ತಾಯಿಗೂ ಅದನ್ನೇ ನೆನಪಿಸಿದ್ದ!

1999ರ ಜೂನ್ ತಿಂಗಳ ಮೊದಲನೇ ವಾರ. ಜಮ್ಮು-ಕಾಶ್ಮೀರದಲ್ಲಿರುವ ಶ್ರೀನಗರದಿಂದ 205 ಕಿಮೀ ದೂರವಿರುವ ಕಾರ್ಗಿಲ್ ಎಂಬ ಪಟ್ಟಣದ ನೆತ್ತಿಯ ಬೆಟ್ಟಗಳನ್ನೆಲ್ಲ, ಹೇನು-ಸೀರುಗಳಂತೆ ಕಚ್ಚಿ ಹಿಡಿದಿದ್ದರು ಪಾಕಿಸ್ತಾನದ ಸೈನಿಕರು. ಅವರನ್ನು ಹೆಕ್ಕಿ ತೆಗೆದು, ಆ ಪ್ರದೇಶಗಳನ್ನು ಮತ್ತೆ ಕೈವಶಮಾಡಿಕೊಳ್ಳಲು ಕಟಿಬದ್ಧವಾಗಿ ನಿಂತಿತ್ತು ಭಾರತೀಯ ಸೇನೆ. ಅಂಥ ಅತಿ ದುರ್ಗಮವಾದ ಬೆಟ್ಟಗಳಲ್ಲೊಂದು, ಟೊಲೋಲಿಂಗ್. ಅದನ್ನು ವಶಪಡಿಸಿಕೊಳ್ಳಲು ಅಲ್ಲಿಯವರೆಗೆ ನಡೆಸಿದ್ದ ಎಲ್ಲ ಯತ್ನಗಳೂ ವಿಫಲವಾಗಿದ್ದವು. ತನ್ನ ಕಮಾಂಡರ್ ಮೇಜರ್ ಪದ್ಮಪಾಣಿ ಆಚಾರ್ಯರೊಂದಿಗೆ ಅಲ್ಲಿಗೆ ಧಾವಿಸಿದ ವಿಜಯಂತ್, ತನ್ನ ತುಕಡಿಯೊಂದಿಗೆ ಸೇರಿ, ಪಾಕ್ ಸೈನಿಕರನ್ನು ಹೊಸಕಿಹಾಕಿದ. ಕಾರ್ಗಿಲ್ ಯುದ್ಧಕ್ಕೆ ಒಂದು ಮುಖ್ಯ ತಿರುವು ದೊರೆತದ್ದೇ ವಿಜಯಂತ್ ದೊರಕಿಸಿಕೊಟ್ಟ ಟೊಲೋಲಿಂಗ್ ಗೆಲುವಿನಿಂದ. ಈ ಯಶಸ್ಸಿನ ಗುಂಗಿನಲ್ಲಿದ್ದ ವಿಜಯಂತ್ನ ತಂಡಕ್ಕೆ ಸವಾಲಾಗಿದ್ದದ್ದು ನೋಲ್ ಎಂಬ ಮತ್ತೊಂದು ಬೆಟ್ಟ. ಟೊಲೋಲಿಂಗ್ ಮತ್ತು ಟೈಗರ್ ಹಿಲ್ಗಳ ಮಧ್ಯೆ ಇರುವ ಇದರ ಎತ್ತರ 15000 ಅಡಿ. ಇಲ್ಲಿಯ ಉಷ್ಣಾಂಶ -15 ಡಿಗ್ರಿ! ದುರದೃಷ್ಟವೆಂದರೆ ಕೆಳಗಿನಿಂದ ಹತ್ತುವವರಿಗೆ ರಕ್ಷಣೆಯಾಗಬಲ್ಲ ಯಾವ ನೈಸರ್ಗಿಕ ತಡೆಗೋಡೆಯೂ ಈ ಬೆಟ್ಟದಲ್ಲಿಲ್ಲ. ಆದ್ದರಿಂದಲೇ, ಇದನ್ನು ಹತ್ತಿ ಹೋಗಿ, ಸೂಕ್ತ ತಯಾರಿಯೊಂದಿಗೆ ಆಯಕಟ್ಟಿನ ಜಾಗಗಳಲ್ಲಿ ಅಡಗಿ ಕುಳಿತಿದ್ದ ಪಾಕ್ ಸೈನಿಕರನ್ನು ಸದೆಬಡಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು. ಹಾಗೆಂದು ಶತ್ರುವನ್ನು ಸಹಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳುವ ಹಾಗೂ ಇರಲಿಲ್ಲ.

ಅಂದು 1999ರ ಜೂನ್ ತಿಂಗಳ 28ನೇ ತಾರೀಖು. ಅಂದಿಗೆ ವಿಜಯಂತ್ ಸೇನೆಯನ್ನು ಸೇರಿ ಆರು ತಿಂಗಳಾಗಿತ್ತಷ್ಟೆ. ಅಂದು ರಾತ್ರಿ  ಬೆಟ್ಟವನ್ನು ಹತ್ತಿಯೇ ತೀರುವುದೆಂದು ನಿರ್ಧಾರವಾಯಿತು. ಒಮ್ಮೆ ಹತ್ತತೊಡಗಿದರೆ ಹಿಂತಿರುಗುವುದು ಸುಲಭವಲ್ಲವೆಂಬುದು ಎಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ಹೊರಡುವ ಮುನ್ನ ಪತ್ರ ಬರೆದಿಟ್ಟ ವಿಜಯಂತ್. ಬೆಟ್ಟ ಹತ್ತುತ್ತಿದ್ದಂತೆ ಶುರುವಾಯಿತು ನೋಡಿ ಗುಂಡಿನ ದಾಳಿ. ಇಡೀ ತುಕಡಿ ಚೆಲ್ಲಾಪಿಲ್ಲಿಯಾಯಿತು. ಹಂಚಿ ಹೋದ ಸೈನಿಕರು ಹೋರಾಡುತ್ತಲೇ, ಇಂಚಿಂಚೇ ಮೇಲೆ ಸಾಗಿದರು. ಕಡೆಗೊಂದು ಸಲ ಎಲ್ಲರೂ ಒಟ್ಟುಗೂಡಿದಾಗ ಆಘಾತ ಕಾದಿತ್ತು. ಮೇಜರ್ ಆಚಾರ್ಯ ಹೆಣವಾಗಿದ್ದರು! ಕುದ್ದು ಹೋದ ವಿಜಯಂತ್ ಶತ್ರುವನ್ನು ಕೊಂದೇ ತೀರುವ ಹಟಕ್ಕೆ ಬಿದ್ದ. ತೀರಾ ಸನಿಹಕ್ಕೆ ಹೋಗಿ ಕೆಚ್ಚಿನಿಂದ ಕಾದಾಟಕ್ಕೆ ನಿಂತ. ಮಾಡು ಇಲ್ಲವೇ ಮಡಿ ಎಂಬುದು ಅಕ್ಷರಶಃ ಅನಿವಾರ್ಯವಾಗಿತ್ತು. ಒಂದೂವರೆ ಗಂಟೆಗಳ ಘೋರ ಕದನದ ಕೊನೆಯಲ್ಲಿ ವಿಜಯಂತ್ನ ತಲೆಗೆ ಬಡಿದ ಗುಂಡುಗಳು ಅವನ ಜೀವ ತೆಗೆದರೆ, ನೋಲ್ ನಮ್ಮದಾಗಿತ್ತು. ಶವವಾಗಿ ಬಂದ ವಿಜಯಂತ್ನನ್ನು ಕಳುಹಿಸಿಕೊಡಲು ಅವನ ಊರು ನೋಯ್ಡಾದಲ್ಲಿ ನೆರೆದಿದ್ದವರು ಒಂದು ಲಕ್ಷ ಜನ. 22ರ ಹರೆಯದ ಮೊಮ್ಮಗನ ಶೌರ್ಯಕ್ಕೆ ಪ್ರತಿಫಲವಾಗಿ ಸಿಕ್ಕ ವೀರ ಚಕ್ರವನ್ನು ಸ್ವೀಕರಿಸಿದ್ದು 82ರ ಹರೆಯದ ಅವನ ಪ್ರೀತಿಯ ಅಜ್ಜಿ. ಅವನೇನೋ ಗಟ್ಟಿಗ ಸರಿ, ಆ ಮುದುಕಿಯ ಗುಂಡಿಗೆ ಇನ್ನೆಂಥದ್ದಿರಬೇಕು?!


ಇಂಥ ನೂರಾರು ವಿಜಯಂತ್ರನ್ನು ಕಳೆದುಕೊಂಡು ಗೆದ್ದೆವು ಕಾರ್ಗಿಲ್ ಕದನವನ್ನು. ನಮ್ಮ ಗೆಲವಿಗೆ ಈಗ ಸರಿಯಾಗಿ 22 ವರ್ಷಗಳಾಗುತ್ತವೆ. ಬಹಳಷ್ಟಿರಬೇಕು ನಮ್ಮಲ್ಲಿ ಅಭಿಮಾನ ಮತ್ತು ಹರ್ಷ. 

ಹಿಮಾಲಯದ ತಪ್ಪಲಿನಲ್ಲಿ ಸುಮಾರು 15ಡಿಗ್ರಿಯಷ್ಟು ತಾಪಮಾನದಲ್ಲಿ ಮೇ 4 1999 ರಿಂದ ಜುಲೈ 26 1999 ರವರೆಗೆ ನಡೆದ ಕಾರ್ಗಿಲ್ ಕದನದಲ್ಲಿ ”ಆಪರೇಷನ್ ವಿಜಯ್” ಹೆಸರಿನಭಾರತೀಯ ಸೈನಿಕರ ದಿಟ್ಟ ಕಾರ್ಯಾಚರಣೆ ಯಶಸ್ವಿಯಾಗಿತ್ತು. 

ನಮ್ಮ-ನಿಮ್ಮೆಲ್ಲರ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಆ ಪುಣ್ಯಜೀವಿಗಳನ್ನು ಕಾರ್ಗಿಲ್ ವಿಜಯ ದಿನವಾದ ಇಂದು ನಾವೆಲ್ಲಾಹೃಅದಯತುಂಬಿ ಸ್ಮರಿಸಿಕೊಳ್ಳೋಣ್ವಲ್ಲವೆ? ಓ ಭಾರತದ ನವ ಜವಾನರೇ ನಿಮಗಿದೋ ನಮ್ಮ ಸೆಲ್ಯೂಟ್!

ಜೈ ಹಿಂದ್!

ಜೈ ಭಾರತಾಂಬೆ!

(ಸಂಗ್ರಹದಿಂದ)