“ಭಾರತಾಂಬೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ನೂರುಜನ್ಮ ಪಡೆದು ಬಲಿದಾನವಾಗಲು ಸಿದ್ದ” ಎಂದು ಘರ್ಜಿಸಿದ ಕ್ರಾಂತಿಸಿಂಹ ರಾಮ್ ಪ್ರಸಾದ್ ಬಿಸ್ಮಿಲ್ ರವರ ಜಯಂತಿಯಿಂದು. ಈ ಪ್ರಯುಕ್ತ ಖ್ಯಾತ ಲೇಖಕರು ಹಾಗು ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ರವರ ಬರಹ.
ರಾಮಪ್ರಸಾದ್ ಹುಟ್ಟಿದ್ದು 1897 ಜೂನ್ 11ರಂದು, ಸಹರಾನ್ಪುರದಲ್ಲಿ.
ತಂದೆ ಮುರಳೀಧರ್. ಬಾಲ್ಯದಲ್ಲಿ ಅಜ್ಜ-ಅಜ್ಜಿಯರ ಪ್ರೀತಿ-ವಾತ್ಸಲ್ಯಗಳಲ್ಲಿ ಬೆಳೆದ. ಸ್ವಾಮಿ
ದಯಾನಂದ ಸರಸ್ವತಿ ಅವರ ‘ಸತ್ಯಾರ್ಥಪ್ರಕಾಶ’ ಅವನ ಜೀವನದ
ಮೇಲೆ ಹೊಸಪ್ರಕಾಶ ಬೀರಿತು. ಸ್ವಾಮಿ ಸೋಮದೇವ ಎಂಬ ಗುರು ಸಿಕ್ಕಿದ ಬಳಿಕ ಹೊಸ ಅಧ್ಯಾಯವೇ
ಪ್ರಾರಂಭವಾಯಿತು. ಸಮಾಜದ ಸೇವೆಯಲ್ಲಿ ಆಸ್ಥೆ ಇಟ್ಟಿದ್ದ ಅವನಿಗೆ, ಹಿಂದೂ ಸಮಾಜದ
ಉನ್ನತಿ, ರಕ್ಷಣೆಗಳಿಗೆ
ಕೆಲಸಮಾಡುತ್ತಿದ್ದ ಆರ್ಯಸಮಾಜ ಒಂದು ಆಕರ್ಷಣೆಯಾಯಿತು. ಅದರ ಯುವಜನ ವಿಭಾಗದ ಕಿಶೋರಸಭಾದಲ್ಲಿ
ಅವನದು ಸಕ್ರಿಯಪಾತ್ರ.
ಕೆಲದಿನಗಳು ಕಳೆಯುವುದರಲ್ಲಿ ಗುರು ಸೋಮದೇವರು ಮೃತರಾದರು.
ರಾಮಪ್ರಸಾದನ ಮನಸ್ಸು ಅಧ್ಯಾತ್ಮದಿಂದ ರಾಜಕಾರಣದ ಕಡೆಗೆ ಹರಿಯಿತು. ತನ್ನ ಸ್ವಂತಮನೆ, ಹಳ್ಳಿಗಿಂತ
ಒಂದು ವಿಶಾಲವಾದ ಮನೆ ಇದೆ;
ಅದೇ ಮಾತೃಭೂಮಿ. ಅದು ಬಂಧನದಲ್ಲಿದೆ. ದೇಶವಾಸಿಗಳು ನರಳುತ್ತಿದ್ದಾರೆ. ನಾಡ ವಿಮೋಚನೆ
ಸಂಗ್ರಾಮದಲ್ಲಿ ಮುನ್ನುಗ್ಗಬೇಕು- ಈ ಭಾವನೆಗಳು ಅವನಲ್ಲಿ ಮೈದಳೆದವು. ಅದೇ ವೇಳೆಗೆ ಲಖನೌ
ಪಟ್ಟಣದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕರು ಅಲ್ಲಿಗೆ
ಬರುವವರಿದ್ದರು. ಕ್ರಾಂತಿಕಾರಿಗಳು ರೈಲು ನಿಲ್ದಾಣದಿಂದ ಅವರನ್ನು ವಿಜೃಂಭಣೆಯಿಂದ ಕರೆದೊಯ್ಯಬೇಕೆಂದರೆ, ಸೌಮ್ಯವಾದಿಗಳು
ಅದನ್ನು ವಿರೋಧಿಸಿದರು. ರಾಮಪ್ರಸಾದ್ ಮತ್ತು ಅವನ ತರುಣ ಗೆಳೆಯರಿಗೆ ಈ ವರ್ತನೆ ಸರಿಕಾಣಲಿಲ್ಲ.
ಇವರೆಲ್ಲರೂ ರೈಲು ನಿಲ್ದಾಣಕ್ಕೆ ಹೋದರು. ರೈಲು ಬಂದಿತು, ಲೋಕಮಾನ್ಯರು ಡಬ್ಬಿಯಿಂದ ಇಳಿಯುತ್ತಿದ್ದಂತೆ ಸೌಮ್ಯವಾದಿಗಳು
ಅವರನ್ನು ಮೋಟಾರ್ ಕಾರಿನಲ್ಲಿ ಕೂರಿಸಲು ಕರೆದೊಯ್ದರು. ಅಷ್ಟರಲ್ಲೇ ಜನಜಂಗುಳಿಯನ್ನು
ಸೀಳಿಕೊಂಡು ಬಂದ ರಾಮಪ್ರಸಾದ್,
ಕಾರಿನ ಮುಂದೆ ಹೋಗಿ ರಸ್ತೆಯ ಮೇಲೆ ಮಲಗಿಕೊಂಡ. ಅವನು ಭಾವೋದ್ವೇಗದಿಂದ ಮೂಕನಾಗಿದ್ದ.
ಕಣ್ಣಿನಿಂದ ಅಶ್ರು ಉದುರುತ್ತಿತ್ತು. ಸೌಮ್ಯವಾದಿಗಳಗಳನ್ನು ಉದ್ದೇಶಿಸಿ, ‘ಬೇಕಿದ್ದರೆ
ಮೋಟಾರ್ ವಾಹನವನ್ನು ನನ್ನ ಮೇಲೆ ಓಡಿಸಿ,
ನಾನು ಮಾತ್ರ ಕದಲುವುದಿಲ್ಲ’
ಎಂದ.
ಮತ್ತೊಬ್ಬ ಎಲ್ಲಿಂದಲೋ ಒಂದು ಗಾಡಿಯನ್ನು ಎಳೆತಂದ. ತರುಣರೆಲ್ಲರೂ
ಲೋಕಮಾನ್ಯರನ್ನು ಎತ್ತಿನಗಾಡಿಯಲ್ಲಿ ಕೂರಿಸಿ ಎಳೆಯುತ್ತ ಊರಲ್ಲೆಲ್ಲ ಮೆರವಣಿಗೆ ಮಾಡಿದರು.
ಸುಮಾರು ಅದೇ ಕಾಲದಲ್ಲಿ,
ತಾರುಣ್ಯದ ಕಾವಿನಲ್ಲಿದ್ದ ರಾಮಪ್ರಸಾದನ ಮನಸ್ಸಿನಲ್ಲಿ ಸಶಸ್ತ್ರಕ್ರಾಂತಿಯ ಕನಸು
ಹುಟ್ಟಿಕೊಂಡಿತು.
ರಾಮಪ್ರಸಾದನಿಗೆ ಗೆಳೆಯರ ಮೂಲಕ ಕ್ರಾಂತಿಕಾರಿ ಪಂಡಿತ ಗೇಂದಾಲಾಲ್
ದೀಕ್ಷಿತರ ಪರಿಚಯವಾಯಿತು. ಒಮ್ಮೆ ಗೇಂದಾಲಾಲರ ಟೋಳಿ ಕಾಡಿನಲ್ಲಿ ಸೇರಿದ್ದಾಗ ಒಬ್ಬ ದ್ರೋಹಿಯ
ಕಾರಣ ಪೊಲೀಸರು ಇವರನ್ನು ಮುತ್ತಿದರು. ಹೋರಾಟ ನಡೆಯಿತು. ಗೇಂದಾಲಾಲ್ ದಸ್ತಗಿರಿಯಾದರು.
ರಾಮಪ್ರಸಾದ್ ಮಾತ್ರ ಅಲ್ಲಿಂದ ತಪ್ಪಿಸಿಕೊಂಡ.
ಆದರೆ ಪೊಲೀಸರ ಗೃಧ್ರದೃಷ್ಟಿ ಇವನ ಮೇಲೆ ಎರಗಿತು. ಅಂದಿನಿಂದ ಇವನಿಗೂ
ಪೊಲೀಸರಿಗೂ ಕಣ್ಣುಮುಚ್ಚಾಲೆ ಪ್ರಾರಂಭ. ಗುಪ್ತಜೀವನ,
ಬಳಿಯಲ್ಲಿ ಹಣವಿಲ್ಲ. ಹಿಂದೆ ಅನೇಕ ಬಾರಿ ಹಣ ನೀಡಿದ ತಾಯಿಯ ಸಾಸಿವೆಡಬ್ಬಿಯೂ ಹಣಕೊಡುವ
ಸ್ಥಿತಿಯಲ್ಲಿರಲಿಲ್ಲ. ಅಷ್ಟರಲ್ಲಿ,
ಬಿರುಸಾಗಿ ಸಾಗಿದ್ದ ಅಸಹಕಾರಿ ಆಂದೋಲನವನ್ನು ಗಾಂಧೀಜಿ ನಿಲ್ಲಿಸಿದರು. ಅದು
ಯಶಸ್ವಿಯಾದೀತೆಂದು ಕಾಯುತ್ತ ಶಸ್ತ್ರಗಳನ್ನು ಕೆಳಗಿಟ್ಟಿದ್ದ ಕ್ರಾಂತಿಕಾರಿಗಳಿಗೆ
ನಿರಾಶೆಯಾಯಿತು. ಮತ್ತೆ ಶಸ್ತ್ರಗಳು ಶುಭ್ರಗೊಂಡವು,
ಕ್ರಾಂತಿ ಕಾರ್ಯಾಚಾರಣೆಗೆ ಶಂಖೋದ್ಘೋಷವಾಯಿತು.
ಶಚೀಂದ್ರನಾಥ ಸನ್ಯಾಲ್,
ರಾಜೇಂದ್ರಲಾಹಿರಿ, ಶಚೀಂದ್ರ
ಬಕ್ಷಿ, ಜೋಗೇಶಚಂದ್ರ
ಚಟರ್ಜಿ ಮುಂತಾದವರು ಸೇರಿ 1923ರಲ್ಲಿ
‘ಹಿಂದೂಸ್ಥಾನ್
ರಿಪಬ್ಲಿಕನ್ ಅಸೋಸಿಯೇಷನ್’
ಎಂಬ ಕ್ರಾಂತಿಕಾರಿ ಸಂಸ್ಥೆ ಸ್ಥಾಪಿಸಿದರು. ಹಿಂದೆ ಗೇಂದಾಲಾಲರೊಂದಿಗೆ ಅನೇಕ
ಕಾರ್ಯಾಚರಣೆಗಳಲ್ಲಿ ಸೆಣಸಿದ್ದ,
ಶಸ್ತ್ರಪ್ರಯೋಗದಲ್ಲಿ ನುರಿತಿದ್ದ ರಾಮಪ್ರಸಾದನ ಹೆಗಲ ಮೇಲೆ ಇಡೀ ಸೈನಿಕ ವಿಭಾಗದ ಭಾರ
ಬಿತ್ತು. ಸಂಸ್ಥೆ ಎಂದಮೇಲೆ ಅನೇಕ ಖರ್ಚುಗಳು. ಶಸ್ತ್ರಾಸ್ತ್ರ, ಮುದ್ರಣ, ಪ್ರವಾಸಗಳಿಗೆ, ಪೂರ್ಣಕಾಲಿಕ
ಕ್ರಾಂತಿಕಾರಿಗಳ ಹೊಟ್ಟೆಬಟ್ಟೆಗೆ ಸಾಕಷ್ಟು ಹಣದ ಆವಶ್ಯಕತೆ ಇತ್ತು. ಅದನ್ನು ಒದಗಿಸುವ
ಜವಾಬ್ದಾರಿ ಸೈನಿಕ ವಿಭಾಗದ್ದು,
ಅಂದರೆ ರಾಮಪ್ರಸಾದನದು. ಅದಕ್ಕಾಗಿ ಆತ ಒಂದು ಯೋಜನೆ ತಯಾರಿಸಿದ. 1925ರ ಆಗಸ್ಟ್ 9ರ ರಾತ್ರಿ
ಲಖನೌ ಬಳಿಯ ಕಾಕೋರಿ ಎಂಬಲ್ಲಿ ರೈಲು ನಿಲ್ಲಿಸಿ ಸರ್ಕಾರಿ ಖಜಾನೆ ಲೂಟಿಮಾಡಿದ. ತನ್ನ ಜತೆಗೆ 9 ಕ್ರಾಂತಿಕಾರಿ
ಗೆಳೆಯರನ್ನು ಸೇರಿಸಿಕೊಂಡು ವಿದೇಶಿ ಸರ್ಕಾರಕ್ಕೆ ಸವಾಲು ನೀಡಿದ. ದರೋಡೆ ಅಲ್ಲ ಅದು.
ಬ್ರಿಟಿಷರಿಗೆ ಭಾರತ ಹೊಡೆದ ಸೆಡ್ಡು! ಆ ಸಪ್ಪಳಕ್ಕೆ ಸರ್ಕಾರ ಬೆಚ್ಚಿತು. ಮೈಕೊಡವಿಕೊಂಡಿತು.
ಎಲ್ಲ ಕಡೆಗಳಲ್ಲೂ ಗುಪ್ತಚರ ಜಾಲವನ್ನು ಬೀಸಿತು. ಆ ಜಾಲದಲ್ಲಿ ಅನೇಕ ಕ್ರಾಂತಿಕಾರಿಗಳು
ಸಿಕ್ಕಿಬಿದ್ದರು.
ಕಾಕೋರಿ ಘಟನೆ ನಡೆದು ಕೆಲದಿನಗಳು ಕಳೆದಿದ್ದವು. ಒಂದು ರಾತ್ರಿ
ರಾಮಪ್ರಸಾದ್ ಗೆಳೆಯನೊಬ್ಬನ ಮನೆಯಿಂದ ಹಿಂದಿರುಗುತ್ತಿದ್ದ. ಹಿಂದೆ ಗುಪ್ತಚಾರರು
ಬೆನ್ನಟ್ಟಿದ್ದರು. ರಾತ್ರಿ ಏನೂ ಘಟಿಸಲಿಲ್ಲ. ರಾಮಪ್ರಸಾದ್ ಮಲಗಿ ಬೆಳಗ್ಗೆ 4 ಗಂಟೆಗೆ
ಎದ್ದು ಪ್ರಾತರ್ವಿಧಿ ಮುಗಿಸಿ ಆಚೆ ಬರುತ್ತಿದ್ದಾಗ ಬಾಗಿಲ ಬಳಿ ಬಂದೂಕಿನ ಸರಪಳಿ ಶಬ್ದವಾಯಿತು.
ಬಾಗಿಲು ತೆಗೆಯುತ್ತಿದ್ದಂತೆ ಇವನಿಗಾಗಿ ಕಾಯುತ್ತಿದ್ದ ಪೊಲೀಸರ ಬೇಡಿಗಳು! ಅವನ ನಿರಂತರ
ಚಟುವಟಿಕೆಗಳಿಗೆ ಪೂರ್ಣವಿರಾಮ! ಸರ್ಕಾರ ಅವನ ಮೇಲೆ ಮೊಕದ್ದಮೆ ಹೂಡಿತು. ಸಾಮ್ರಾಟರ ವಿರುದ್ಧ
ಯುದ್ಧಘೊಷಣೆ, ಷಡ್ಯಂತ್ರ, ಕೊಲೆ ಮತ್ತು
ದರೋಡೆ ಮುಂತಾದವು ಅವನ ಮೇಲಿನ ಆಪಾದನೆಗಳು. ಮೊಕದ್ದಮೆ 18 ತಿಂಗಳು ನಡೆಯಿತು. ತೀರ್ಪು ಎಣಿಸಿದ್ದಂತೆಯೇ. ರಾಮಪ್ರಸಾದನಿಗೆ
ನೇಣಿನ ಪುರಸ್ಕಾರ!
ರಾಮಪ್ರಸಾದ್ ನೈಷ್ಠಿಕ ಬ್ರಹ್ಮಚಾರಿ, ಕಠೋರ ಸಾಧಕ. ‘ಯತ್ರ
ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’
ಎಂಬ ಉಕ್ತಿಯಲ್ಲಿ ಅವನಿಗೆ ಅಪಾರ ನಂಬಿಕೆ. ದರೋಡೆ ವೇಳೆ ಸ್ತ್ರೀಯರ ಕೂದಲೂ
ಕೊಂಕಕೂಡದೆಂಬುದು ಅವನ ಉಗ್ರನಿಯಮವಾಗಿತ್ತು. ಅವನು ಬರಹಗಾರ, ಕವಿ. ಸ್ವಾತಂತ್ರ್ಯವೀರ ಸಾವರ್ಕರ್ರಂತೆ ‘ವ್ಯಕ್ತಿತ್ವ, ಕವಿತಾಶಕ್ತಿ, ಲೇಖನಕಲೆ’ ಎಲ್ಲವನ್ನೂ
ಮಾತೃಭೂಮಿಯ ಮಡಿಲಿಗೇ ಹಾಕಿದ್ದ. ಅವನ ಕವಿತೆಗಳಲ್ಲಿ ಒಂದೊಂದರಲ್ಲೂ ಎದ್ದುಕಾಣುವ ಗುಣ- ಪ್ರಖರ
ದೇಶಭಕ್ತಿ. ಮಾತೃಭೂಮಿಯ ಪದತಲದಲ್ಲಿ ಜೀವನದ ಸಂಪೂರ್ಣ ಸಮರ್ಪಣೆ. ‘ತಲೆಯನ್ನು
ಮಾತೃದೇವಿಯ ಅಡಿಗಳಲ್ಲಿ ಕಡಿದಿರಿಸಿ ಅರ್ಚಿಸುವ ಆಕಾಂಕ್ಷೆ ಹೃದಯದಲ್ಲಿ ಎದ್ದಿದೆ. ತೋಳ್ಬಲದ
ಪರೀಕ್ಷೆಯ ಸಮಯ ಬಳಿಸಂದಿದೆ’-
ಇದು ಕವಿತೆಯೊಂದರ ಪಲ್ಲವಿಯ ಭಾವನೆ. ಇನ್ನೊಂದರಲ್ಲಿ ‘ಅಮ್ಮಾ! ನಿನ್ನ ಸೇವೆ ಮಾಡುವಾಗ ಕೈಗಳಿಗೆ ಬೀಳುವ ಕೋಳಗಳ ಸಪ್ಪಳವೇ
ನನಗೆ ವೀಣಾನಾದ. ಕಾರಾಗೃಹದ ಬಾಗಿಲುಗಳೇ ಸ್ವರ್ಗದ್ವಾರ’ ಎಂದಿದ್ದಾನೆ. ಅವುಗಳ ಸಂಗೀತಬದ್ಧ ರೂಪ ತರುಣರಿಗೆ ಸ್ಪೂರ್ತಿಯ
ಗಂಗೋತ್ರಿ. ಅವನು ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಹಿಂದಿಯಲ್ಲಿ ‘ಬಿಸ್ಮಿಲ್’ ಎಂಬ
ಛಂದಸ್ಸನ್ನೇ ನಿರ್ವಿುಸಿದ್ದಾನೆ. ಆದ್ದರಿಂದಲೇ ಅವನ ಹೆಸರಿಗೆ ‘ಬಿಸ್ಮಿಲ್’ ಎಂಬ ಕಾವ್ಯನಾಮ
ಅಂಟಿಕೊಂಡಿತು. ರಾಮಪ್ರಸಾದನ ಆತ್ಮಕತೆ ಜೈಲುಗೋಡೆಗಳ ಮಧ್ಯದಿಂದ ಬರೆದಿರುವ ಜಗತ್ತಿನ
ಶ್ರೇಷ್ಠಕೃತಿಗಳಲ್ಲೊಂದು. ಸದಾ ಸುತ್ತುವರಿದಿರುತ್ತಿದ್ದ ಪೊಲೀಸರ ಕಣ್ಣುತಪ್ಪಿಸಿ, ಅಲ್ಲಿ-ಇಲ್ಲಿಂದ
ಸಂಪಾದಿಸಿದ ಚಿಕ್ಕಪುಟ್ಟ ಕಾಗದಗಳ ಮೇಲೆ ನೇಣುಗಂಬ ಹತ್ತುವ ಮುಂಚಿನ 3 ದಿನಗಳವರೆಗೂ
ಬರೆದು, ಗುಪ್ತವಾಗಿ
ಹೊರಸಾಗಿಸಿದ. ಇದು ಹಿಂದಿ ಸಾಹಿತ್ಯದ ಕೃತಿರತ್ನ.
ನ್ಯಾಯಾಲಯದ ತೀರ್ಪಿನಂತೆ 1926ರ ಡಿ.19ರಂದು
ನೇಣುಗಂಬ ಹತ್ತಿಸುವ ನಿಶ್ಚಯವಾಯಿತು. ಅದಕ್ಕೆ ಕೆಲವೇ ದಿನ ಮೊದಲು ಗೆಳೆಯನೊಬ್ಬನಿಗೆ ಪತ್ರ ಬರೆದ
ರಾಮಪ್ರಸಾದ್- ‘19ನೆಯ
ತಾರೀಖು ನಡೆಯಲಿರುವುದಕ್ಕೆ ಸಿದ್ಧನಾಗಿದ್ದೇನೆ. ಅದಾದರೂ ತಾನೆ ಏನು? ಕೇವಲ ಶರೀರದ
ಬದಲಾವಣೆ. ನನಗಂತೂ ಪೂರ್ಣನಂಬಿಕೆ ಇದೆ,
ನನ್ನ ಆತ್ಮ ತನ್ನ ಮಾತೃಭೂಮಿಯ ಮತ್ತು ಆಕೆಯ ದೀನಸಂತತಿಯ ಸೇವೆಗಾಗಿ ಮತ್ತಷ್ಟು ಪಟ್ಟು
ಹೆಚ್ಚು ಉತ್ಸಾಹ ಓಜಸ್ಸುಗಳಿಂದ ಕೆಲಸಮಾಡಲು ಶೀಘ್ರವೇ ಹಿಂದಿರುಗುವುದು’. ‘ನನ್ನ
ನಾಡಿಗಾಗಿ ನಾನು ಸಾವಿರಾರು ಬಾರಿ ಬಲಿದಾನ ನೀಡಬೇಕಾಗಿ ಬಂದರೂ ಅದನ್ನು ನಾನೆಂದಿಗೂ ಕಷ್ಟವೆಂದು
ಪರಿಗಣಿಸುವುದಿಲ್ಲ’. ‘ಹೇ
ದೇವ! ಈ ಭಾರತ ವರ್ಷದಲ್ಲಿ ನೂರು ಬಾರಿ ನನ್ನ ಜನನವಾಗಲಿ…’ ‘ದೇಶಕ್ಕೆ ಉಪಕಾರ ಮಾಡುವುದೇ ಅದರ ಉದ್ದೇಶವಾಗಲಿ’. ‘ಬಿಸ್ಮಿಲ್, ಅಶ್ಪಾಕ್, ರೋಶನ್, ಲಾಹಿರಿ
ಅತ್ಯಾಚಾರಕ್ಕೆ ತುತ್ತಾಗಿ ಪ್ರಾಣ ನೀಗುವುದರಿಂದ ತೊಟ್ಟಿಕ್ಕುವ ಅವರ ನೆತ್ತರ ಕಣಕಣದಿಂದ
ಕೋಟ್ಯನುಕೋಟಿ ವೀರರು ಜನಿಸುವರು…’
‘ಅವರುಗಳ ಮಹಾಪರಾಕ್ರಮದಿಂದ ದೇಶದ ಉದ್ಧಾರವಾಗುವುದು, ದೇಶದ ಶೋಕ-ದುಃಖಗಳು ನಾಶವಾಗುವುವು. ಎಲ್ಲರಿಗೂ ನನ್ನ ಪ್ರಣಾಮಗಳನ್ನು
ತಿಳಿಸಿ’.
19ರಂದು
ನಿತ್ಯನಿಯಮದಂತೆ ಸ್ನಾನ,
ಸಂಧ್ಯಾವಂದನೆ ಮುಗಿಸಿದ. ತನ್ನ ತಾಯಿಯ ಹೆಸರಿಗೆ ಒಂದು ಪತ್ರ ಬರೆದು ದೇಶವಾಸಿಗಳಿಗೆ ಅಂತಿಮ
ಸಂದೇಶ ನೀಡಿದ. ನಂತರ ಸ್ಥಿತಪ್ರಜ್ಞನಂತೆ ನೇಣಿನ ಘಳಿಗೆಯನ್ನು ಎದುರುನೋಡುತ್ತ ಕುಳಿತ. ಸ್ವಲ್ಪ
ಸಮಯ ಕಳೆಯಿತು. ಪೊಲೀಸರು ಬಂದರು. ಅವರನ್ನು ಕಂಡು ಚಟುಮ್ಮನೆ ಮೇಲೆದ್ದು ನಿಂತು ಪೂರ್ಣ
ಉಸಿರೆಳೆದು ಎದೆಯುಬ್ಬಿಸಿ ಗಟ್ಟಿಯಾಗಿ ಗರ್ಜಿಸಿದ- ‘ವಂದೇ
ಮಾತರಂ! ಭಾರತ್ ಮಾತಾ ಕೀ ಜೈ!’
ಅವನನ್ನು 18
ತಿಂಗಳು ತನ್ನಲ್ಲಿಟ್ಟುಕೊಂಡಿದ್ದ ಆ ಜೈಲುಕೋಣೆ ಅಂತಿಮ ವಿದಾಯ ಹೇಳಿತು. ಅವನು ನೇಣುಗಂಬದ
ವೇದಿಕೆಯನ್ನು ಹತ್ತಿ ನಿಂತು ದೃಢದನಿಯಲ್ಲಿ ತಾನು ಸ್ವೀಕರಿಸಿದ್ದ ಧ್ಯೇಯವನ್ನು ಮತ್ತೊಮ್ಮೆ
ಸ್ಪಷ್ಟಪಪಡಿಸಿದ- ‘ನಾನು
ಬ್ರಿಟಿಷ್ ಸಾಮ್ರಾಜ್ಯದ ನಾಶ ಬಯಸುತ್ತೇನೆ’.
ತಲೆಯ ಮೇಲೆ ನೇಣುಕುಣಿಕೆ ತೂಗಾಡುತ್ತಿತ್ತು. ಗಂಭೀರ ಕಂಠದಿಂದ ವೇದಘೊಷ ಮಾಡಿದ- ‘ವಿಶ್ವಾನಿ ದೇವ
ಸವಿತುರ್ದುರಿತಾನಿ ಪರಾಸುವ ಯದ್ಭದ್ರಂ ತನ್ನ ಅಸುವಾ…’
ರಾಮಪ್ರಸಾದ್ ನಿಂತಿದ್ದ ಕಾಲ ಕೆಳಗಿನ ಹಲಗೆ ಸರಿಯಿತು. ದೇಹ ತೂಗಾಡಲಾರಂಭಿಸಿತು. ಆತ್ಮ
ದೇಹವನ್ನು ಬಿಟ್ಟು, ಅವನ
ಇಚ್ಛೆಯಂತೆ ಮಾತೃಭೂಮಿಯ ಸೇವೆಗಾಗಿ ಇನ್ನೊಂದು ದೇಹವನ್ನು ಹುಡುಕಿಕೊಂಡು ಹೊರಟಿತು.
ಮತ್ತೊಂದು ವಿಷಯ ಸ್ನೇಹಿತರೇ ನೇಣುಗಂಬವೇರುವ ಸ್ವಲ್ಪ ಸಮಯದ
ಮುಂದೆ ರಾಮ್ ಪ್ರದಾಸರಿಗೆ ಒಂದು ಲೋಟ ಹಾಲು
ಕುಡಿಯಲು ಕೊಟ್ಟರಂತೆ ಆಗ ರಾಮ್ ಪ್ರಸಾದರು ಜೈಲರ್ ಗೇ
ಈ ರೀತಿ ಹೇಳಿದರಂತೇ "ಓ ಹೋ ಕೆಲವೇ ಕ್ಷಣದಲ್ಲಿ ನೇಣುಗಂಬವೇರುವ ನನಗೇಕೆ ಈ ಹಾಲು?ನನ್ನ
ಮಾತೃದೇವಿಯ ಎದೆಹಾಲನ್ನೇ ಕುಡಿಯಹೊರಟಿರುವೆ ನಾ"
ಎಂದು ಗರ್ಜಿಸಿ ಮುನ್ನಡೆಯಿಟ್ಟಾಗ,
ಜೈಲರ್ ಕ್ರಾಂತಿಕಾರಿ ಮಾತಿಗೆ ತಲೆತಗ್ಗಿಸಿ
ನಿಂತ.
ಯದಿ ದೇಶಹಿತ್ ಮರ್ನಾ ಪಡೆ
ಮುಝುಕೋ ಸಹಸ್ರೋಂ ಬಾರ್ ಭೀ
ತೋ ಭೀ ನ ಮೈ ಇಸ್ ಕಷ್ಟಕೋ
ನಿಜ ಧ್ಯಾನ್ ಮೇ ಲಾವೂ ಕಭೀ
ಹೇ ಈಶ್,
ಭಾರತವರ್ಷ ಮೇ
ಶತ್ ಬಾರ್ ಮೇರಾ ಜನ್ಮ ಹೋ
ಕಾರಣ್ ಸದಾ ಹೀ ಮೃತ್ಯು ಕಾ
ದೇಶೋಪಕಾರಕ್ ಕರ್ಮ ಹೋ
ಮರ್ ತೇ ಬಿಸ್ಮಿಲ್,
ರೋಶನ್, ಲಾಹಿರಿ
ಅಶ್ಫಾಕ್ ಅತ್ಯಾಚಾರ್ ಸೇ
ಹೋಂಗೇ ಪೈದಾ ಸೈಕಡೋ
ಉನಕೇ ರುಧಿರ್ ಧಾರ್ ಸೇ
ಉನಕೇ ಪ್ರಬಲ್ ಉದ್ಯೋಗ್ ಸೇ
ಉದ್ಧಾರ್ ಹೋಗಾ ದೇಶ್ ಕಾ
ತಬ್ ನಾಶ್ ಹೋಗಾ ಸರ್ವದಾ
ದುಂಖ್ ಶೋಕ್ ಕೆ ಲವಲೇಶ್ ಕಾ.
ಎಂತಹ ಅದ್ಭುತ ಸಾಲುಗಳು ಹಿಂದೂಸ್ಥಾನದ ವೀರಪುತ್ರ ರಾಮ ಪ್ರಸಾದ್ ಬಿಸ್ಮಿಲ್ ರವರು ಸೆರೆಮನೆವಾಸದಲ್ಲಿ ಬರೆದ ಕ್ರಾಂತಿ ಕವಿತೆ. ಸಾವು
ಮುಂದಿರುವಾಗಲು ಸಿಂಹಗರ್ಜನೆ ಮಾಡಿದ ಭಾರತಾಂಬೆಯ ವೀರಪುತ್ರ ಮಹಾತ್ಮಾ ರಾಮ್ ಪ್ರಸಾದ್ ಬಿಸ್ಮಿಲ್
ರವರ ಜಯಂತಿಯಿಂದು.
ಹಿಂದೂಸ್ಥಾನ್ ಕಂಡ ಶ್ರೇಷ್ಠ ಕ್ರಾಂತಿರತ್ನರಲ್ಲಿ ಒಬ್ಬರಾದ
ಚಂದ್ರಶೇಖರ್ ಆಜಾದ್ ಇವರ ಶಿಷ್ಯರೇ! ಹಾಗೂ ಹಿಂದೂ
ಮುಸ್ಲಿಂ ಸ್ನೇಹ ಮತ್ತು ಭಾವೈಕ್ಯತೆಗೆ ಮತ್ತೊಂದು ಹೆಸರು ಮಹಾತ್ಮ ಕ್ರಾಂತಿಕಾರಿ ಬಲಿದಾನದಲ್ಲೂ
ಒಂದಾದ ಅಶ್ಫಾಕುಲ್ಲಾ ಖಾನ್ ರು ರಾಮ್ ಪ್ರಸಾದ್ ರ ಸ್ನೇಹ ಮರೆಯಲಾದಿತೇ. ಹಾಗೆ ಭಗತ್, ಸುಖದೇವ್
ಮತ್ತು ರಾಜಗುರು ರವರು ಹಾಡಿದ "ಸರ್ಫರೋಷ್
ಕೀ ತಮನ್ನಾ" ಕವಿತೆ ಬರೆದವರು ರಾಮ್ ಪ್ರಸಾದ್ ಬಿಸ್ಮಿಲ್ ರವರೇ !!!
ಮಹಾತ್ಮನಾದ ರಾಮ್ ಪ್ರಸಾದ್ ಬಿಸ್ಮಿಲ್ ರಿಗೆ ಸಕಲ ರಾಷ್ಟ್ರಭಕ್ತರ
ಪರವಾಗಿ ಜಯಂತಿಯ ಶುಭಾಶಯಗಳು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ