ಆಗಸ್ಟ್ 06, 2021

ಹುತಾತ್ಮ ಯೋಧ ರಾಜಕುಮಾರ ಮಾವಿನರಿಗೆ ಅಂತಿಮ ವಿದಾಯ

 

ತ್ರಿಪುರ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೀರ ಮರಣವನ್ನಪ್ಪಿದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ವೀರ ಯೋಧ ರಾಜಕುಮಾರ ಮಾವಿನ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನಸಾಗರ ಅಶ್ರು ತರ್ಪಣವನ್ನು ಸಲ್ಲಿಸಿತು. “ರಾಜಕುಮಾರ ಮಾವಿನ ಅಮರ್ ರಹೆ” ಎಂಬ ಘೋಷಣೆಯೊಂದಿಗೆ ಮೆರವಣಿಗೆಯ ಮೂಲಕ ಸಾಗಿ ಸಕಲ ಸರಕಾರಿ ಗೌರವ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು.

ಮಂಗಳವಾರ ಬೆಳಿಗ್ಗೆ ತ್ರಿಪುರಾದ ದಲೈ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಗಡಿ ಭದ್ರತಾ ಪಡೆಯ ಕಾನಸ್ಟೇಬಲ್ ರಾಜ್‍ಕುಮಾರ್ ಎಂ. ಮಾವಿನ್ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ಮಧ್ಯಾಹ್ನ ಆಳಂದ ತಾಲೂಕಿನ ಚಿಂಚನಸೂರ್‍ನಲ್ಲಿ ನೆರವೇರಿಸಲಾಯಿತು.

ಬಿಎಸ್‍ಎಫ್ ಕಾನ್‍ಸ್ಟೇಬಲ್ ರಾಜ್‍ಕುಮಾರ್ ಮಾವಿನ್ ಮೃತದೇಹವನ್ನು ಬುಧವಾರ ಮಧ್ಯರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣದಿಂದ ಚಿಂಚನಸೂರ್‍ಗೆ ತರಲಾಯಿತು. ಅಗಲಿದ ಆತ್ಮಕ್ಕೆ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಲು ಅನುಕೂಲವಾಗುವಂತೆ ಗುರುವಾರ ಮಧ್ಯಾಹ್ನದ ವರೆಗೆ ದರ್ಶನಕ್ಕಾಗಿ ಇರಿಸಲಾಗಿತ್ತು.

ಕಲಬುರಗಿ-ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡು ಚಿಂಚನಸೂರ್‍ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು ಮತ್ತು ರಾಜಕುಮಾರ್ ಪ್ರತಿಮೆಯನ್ನು ಸ್ಥಾಪಿಸಲು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹುತಾತ್ಮ ಯೋಧ ರಾಜ್‍ಕುಮಾರ್ ಮಾವಿನ್ ಅವರ ಗೌರವಾರ್ಥವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು.

ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ ಉಗ್ರಗಾಮಿ ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆಸಿದ ನಂತರ ಆರ್‍ಸಿ ನಾಥ್ ಗಡಿ ಠಾಣೆ ಬಳಿ ಗಸ್ತು ತಿರುಗುತ್ತಿದ್ದಾಗ ಬಿಎಸ್‍ಎಫ್ ಸಬ್ ಇನ್ಸ್‍ಪೆಕ್ಟರ್ ಭೂರು ಸಿಂಗ್ ಮತ್ತು ರಾಜಕುಮಾರ್ ಮಾವಿನ್ ಹುತಾತ್ಮರಾಗಿದ್ದಾರೆ. ಅವರಿಗೆ ಇಡೀ ದೇಶದ ಜನತೆಯ ವತಿಯಿಂದ ಭಾವಪೂರ್ಣ ನಮನಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ