ಜೂನ್ 28, 2020

ಗಜಲ್ ಲೋಕದಲ್ಲೊಂದು ಸುತ್ತು...


ಬದುಕಿನ ಅನೂಹ್ಯ ಬಣ್ಣಗಳ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯದ ಕಡಲಿನಿಂದ ಯಾವ ವಿಷಯವೂ ಹೊರಗೆ ಉಳಿದಿಲ್ಲ, ಉಳಿಯುವುದೂ ಇಲ್ಲ. ಭಾಷೆಯ ಜೊತೆ ಜೊತೆಗೆ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟ ಭಾಷೆಯ, ಗಡಿಯ ಹಂಗಿಲ್ಲ. ಕನ್ನಡದ ಅರ್ವಾಚೀನ ಸಾಹಿತ್ಯವನ್ನೊಮ್ಮೆ ಅವಲೋಕಿಸಿದಾಗ ಸಂಸ್ಕೃತ ಭಾಷೆಯ, ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವವನ್ನು ಗುರುತಿಸಬಹುದು. ಮುಂದೆ ಹನ್ನೆರಡನೇಯ ಶತಮಾನದ ಅನನ್ಯ ಸಾಹಿತ್ಯ ಪ್ರಕಾರ 'ವಚನ' ವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸಿತು..ಕವಲೊಡೆದ ಕಾಲ ಗರ್ಭದಲ್ಲಿ ಹೊಸಗನ್ನಡಕ್ಕೆ ಪಾಶ್ಚಾತ್ಯ ಸಾಹಿತ್ಯವೇ ದಾರಿ ದೀಪವಾಯಿತು. ನೆಲೆಯಲ್ಲಿ ನೋಡಿದಾಗ ಸಾಹಿತ್ಯವು ಪಾದರಸದಂತೆ ಚಲಿಸುತ್ತಿರುತ್ತದೆ.

ಹಿನ್ನೆಲೆಯಲ್ಲಿ 'ಗಜಲ್' ಸಾಹಿತ್ಯ ರೂಪದ ಪಯಣ ಹೃದಯವನ್ನು ತಟ್ಟಿಬಿಡುತ್ತದೆ. ಇದು ಅರೇಬಿಕ್, ಪಾರ್ಸಿ, ಉರ್ದುವಿನ ಮುಖಾಂತರ ಕನ್ನಡ ಸಾರಸ್ವತ ಲೋಕಕ್ಕೆ ಹೆಜ್ಜೆ ಇಟ್ಟಿದೆ. ಗಜಲ್ ಇದೊಂದು ಸುಂದರ ಪ್ರೇಮಮಯ ಕಾವ್ಯ, ಸಂಗೀತಮಯ ಪ್ರೇಮ. ಹಾಗಂತ ಪ್ರೇಮ ಗೀತೆಗಳೆಲ್ಲವೂ ಗಜಲ್ ಆಗುವುದಿಲ್ಲ. ಗಜಲ್ ಗೆ ತನ್ನದೆಯಾದ   ಗೇಯತೆಯುಳ್ಳ ಲಕ್ಷಣಗಳನ್ನು ಹೊಂದಿದೆ. ಹಿಂದಿಯ 'ದೋಹಾ'ದಂತೆ ಕಂಡರೂ ದೋಹಾವಲ್ಲ!  ದ್ವಿಪದಿಗಳ ಮಾದರಿಯಲ್ಲಿ 'ರಗಳೆ' ಗೆ ಹೋಲಿಕೆಯಾದರೂ ರಗಳೆಯಲ್ಲ.. !!

ಸಾಮಾನ್ಯವಾಗಿ ಒಂದು ಗಜಲ್ ಐದರಿಂದ ಇಪ್ಪತ್ತೈದರವರೆಗೆ ದ್ವಿಪದಿಗಳನ್ನು ಹೊಂದಿರುತ್ತದೆ. ಇತ್ತೀಚಿನ ಹೆಚ್ಚಿನ ಗಜಲ್ ಕಾರರು ಬರೆದಿದ್ದು, ಬರೆಯುತ್ತಿರುವುದು ಐದು ದ್ವಿಪದಿಗಳನ್ನು ಮಾತ್ರ ! ಆರಂಭದ ದ್ವಿಪದಿಯನ್ನು ಮತ್ಲಾ ಎಂದು ಕರೆದರೆ ಗಜಲ್ ಕೊನೆಯ ದ್ವಿಪದಿಯನ್ನು ಮಕ್ತಾ ಎಂದು ಕರೆಯಲಾಗುತ್ತದೆ. ಗಜಲ್ ಪ್ರತಿಯೊಂದು ದ್ವೀಪದಿಗೆ ಷೇರ್ ಎಂದೂ,  ಅದರ ಚರಣಗಳಿಗೆ ಮಿಸ್ರಾ ಎಂದು ಕರೆಯಲಾಗುತ್ತದೆ. ಮಿಸ್ರಾಗಳು ಒಳಗೊಂಡಿರವ ಅನುಪಮ ಲಕ್ಷಣಗಳೆಂದರೆ  ರದೀಫ್ ಮತ್ತು ಕಾಫಿಯಾ. ರದೀಫ್ ಗಜಲ್ ಉದ್ದಕ್ಕೂ ಬಳಕೆಯಾಗುವ ಕೊನೆಯ ಪದ. ಇದು ಒಂದು ಪದವಾಗಿರಬಹುದು ಅಥವಾ ಸಂಪೂರ್ಣ ಅರ್ಥ ನೀಡುವ ಕೆಲವು ಪದಗಳ ಗುಚ್ಛವಾಗಿರಲೂ ಬಹುದು.  ರದೀಫ್ ಗಜಲ್ ಗೆ ಅನಿವಾರ್ಯವಲ್ಲ, ಆದರೆ ಇದ್ದರೆ ಮಾತ್ರ ಗಜಲ್ ಗೆ ಒಂದು ಮೆರಗು ಬರುತ್ತದೆ.

ಇನ್ನೂ ಕಾಫಿಯಾ..... ಗಜಲ್ ಜೀವಾಳ. ಮತ್ಲಾದ ಎರಡೂ ಮಿಸ್ರಾಗಳಲ್ಲಿ ರದೀಫ್ ಗಿಂತಲೂ ಮುಂಚೆ ಬರುತ್ತದೆ. ನಂತರದಲ್ಲಿ ಪ್ರತಿ ಷೇರ್ ಎರಡನೇಯ ಮಿಸ್ರಾದ ಕೊನೆಯಲ್ಲಿ ಮಾತ್ರ ಬರುತ್ತದೆ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸವ ಒಳಪ್ರಾಸವಾಗಿದೆ. ಇಲ್ಲಿ ಕಾಫಿಯಾ ಕೊನೆಯ ಅಕ್ಷರಕ್ಕೆ ರವಿ ಎನ್ನುತ್ತಾರೆ. ರವಿಯ ಪೂರ್ವದ ಅಕ್ಷರಕ್ಕೆ ರೌಫ್ ಎಂತಲೂ, ಅದಕ್ಕಿಂತಲೂ ಮುಂಚಿನ ಅಕ್ಷರಕ್ಕೆ ಕೈದ್ ಎಂತಲು ಕರೆಯುತ್ತಾರೆ. ರೌಫ್ ನಲ್ಲಿ ಒಂದೇ ಅಕ್ಷರ ಪುನರ್ ಬಳಕೆಯಾದರೆ ಅದನ್ನು ಏಕ ಅಲಾಮತ್ ಎಂದೂ ಅಕ್ಷರ ಬೇರೆ ಬೇರೆ ಆಗಿದ್ದಲ್ಲಿ ಬಹು ಅಲಾಮತ್ ಎಂದು ಕರೆಯಲಾಗುತ್ತದೆ. ಕಾಫಿಯಾದ ಹರವು ಅದರ ಮಹತ್ವವನ್ನು ಪ್ರತಿನಿಧಿಸುತ್ತದೆ !! 
-ಡಾ. ಮಲ್ಲಿನಾಥ ಶಿ. ತಳವಾರ
ಕನ್ನಡ ಪ್ರಾಧ್ಯಾಪಕರು,
ನೂತನ ಪದವಿ ಮಹಾವಿದ್ಯಾಲಯ,

ಕಲಬುರಗಿ 585 103

2 ಕಾಮೆಂಟ್‌ಗಳು:

  1. ಗಝಲ್ ನ ಬಗ್ಗೆ ಅಧ್ಯಾನಿಸುವವರಿಗೆ ತುಂಬಾ ಉಪಯುಕ್ತವಾದ ಮಾಹಿತಿ, ಸರಳ ಹಾಗೂ ಗೊಂದಲ ಮುಕ್ತವಾಗಿದೆ ಸರ್, ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ತಮಗೆ. ಲೇಖಕರು ಕನ್ನಡ ಗಜಲ್ ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ನಿಮ್ಮ ಹಾಗೆ ಎಲ್ಲಾ ಸಾಹಿತ್ಯಾಸಕ್ತರ ಪ್ರೋತ್ಸಾಹ ಹೆಚ್ಚು ಸಿಗಲಿ.
    ತಮ್ಮ ಹೆಸರು ಪ್ರಸ್ತಾಪಿಸಿದ್ದರೆ ಇನ್ನೂ ಖುಷಿ ಆಗುತಿತ್ತು.

    ಪ್ರತ್ಯುತ್ತರಅಳಿಸಿ