ಮೇ 19, 2021

ಸೂರ್ಯ ನಮಸ್ಕಾರ

        ನಮ್ಮ ಸನಾತನ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ. ಪತಂಜಲಿಯ ಯೋಗಸೂತ್ರಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು. ಅನೇಕ ಇತರ ಹಿಂದೂ ಗ್ರಂಥಗಳು ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖ, ಮಗ್ಗಲುಗಳನ್ನು ಚರ್ಚಿಸುತ್ತವೆ.

        ಯೋಗ ಸಂಸ್ಕೃತ ಪದ. ಇದು ಅನೇಕ ಅರ್ಥಗಳನ್ನು ಹೊಂದಿದೆ.  ಈ ಪದವು "ನಿಯಂತ್ರಿಸು", "ಐಕ್ಯವಾಗು" ಅಥವಾ "ಒಗ್ಗಟ್ಟಾಗು" ಎಂಬರ್ಥಗಳನ್ನು ತಿಳಿಸುವ ಸಂಸ್ಕೃತ ಮೂಲ "ಯುಜ್‌,"ನಿಂದ ವ್ಯತ್ಪನ್ನವಾಗಿದೆ. "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಮತ್ತು "ನಿಮಿತ್ತ/ಉಪಕರಣಇವು ಇದರ ರೂಪಾಂತರಗಳು. ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.

        ಇಂಥ ಯೋಗದ ಒಂದು ಅವಿಭಾಜ್ಯ ಅಂಗವೇ ಸೂರ್ಯ ನಮಸ್ಕಾರ. ಸೃಷ್ಟಿಯ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಪ್ರಮುಖ ಸ್ಥಾನವನ್ನು ಕೊಡಲಾಗಿದೆ. ಸಕಲ ಜೀವಚರಾಚರಗಳಲ್ಲಿನ ಚೇತನವೇ ಸೂರ್ಯ. ಹೀಗಾಗಿ ಅವನಿಗೆ ನಮಿಸಿ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಪ್ರಕ್ರೀಯೆಯೇ ಈ ಸೂರ್ಯ ನಮಸ್ಕಾರ.

        ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ದ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲ ಆಸನಗಳಿಗಿಂತಲೂ ಸರ್ವಶ್ರೇಷ್ಠವಾದದ್ದು. ವಿವಿಧ ಆಸನಗಳ ಬದಲಿಗೆ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ಅಧಿಕ ಲಾಭವಿದೆ ಎನ್ನುತ್ತಾರೆ ತಜ್ಞರು.

        ಸಮಯದ ಉಳಿತಾಯದೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂರ್ಯ ನಮಸ್ಕಾರ ಅತ್ಯುತ್ತಮ ಆಯ್ಕೆಸೂರ್ಯ ನಮಸ್ಕಾರದ ರೂಪದಲ್ಲಿ12 ಆಸನಗಳಿವೆ. 12 ಯೋಗಾಸನಗಳ ಸರಣಿಯು ವಿಶೇಷವಾಗಿ ಹೃದಯಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ಆಸನಗಳು ದೇಹವನ್ನು ಸಮಸ್ಥಿತಿಯಲ್ಲಿರಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಉತ್ತಮ ಮಾರ್ಗವಾಗಿವೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮಾಡುವುದು ಸೂಕ್ತ.

        ಸೂರ್ಯ ನಮಸ್ಕಾರದ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

        ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯ ಮಾತ್ರವಲ್ಲದೇ, ಭೂಮಿಯನ್ನು ತನ್ನ ಶಕ್ತಿಯಿಂದ ಜೀವಂತವಾಗಿರಿಸಿರುವ ಸೂರ್ಯದೇವನಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಕೂಡ ಒಂದು ಸದವಕಾಶ ನಮಗೆ ಸಿಕ್ಕಂತಾಗುತ್ತದೆ. ಮುಂದಿನ ೧೦ ದಿನಗಳವರೆಗೆ  ಸೂರ್ಯನ ಚೈತನ್ಯದೆಡೆಗೆ  ಕೃತಜ್ಞತಾಭಾವವನ್ನು ಮೂಡಿಸಿಕೊಳ್ಳುವುದರೊಂದಿಗೆ ನಿಮ್ಮ ದಿನಚರಿಯನ್ನು ಆರಂಭಿಸಿ. ೧೨ ಸುತ್ತುಗಳ ಸೂರ್ಯ ನಮಸ್ಕಾರದ ನಂತರ  ಇನ್ನಿತರ ಯೋಗಾಸನಗಳನ್ನು ಮಾಡಿ, ನಂತರ ದೀರ್ಘವಾದ ಯೋಗನಿದ್ರೆಯಲ್ಲಿ ವಿಶ್ರಮಿಸಿ. ಆರೋಗ್ಯ, ಆನಂದ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಲು ಇದು ಅತ್ಯಂತ ಸಹಾಯಕಾರಿಯಾಗಬಹುದು.


1.ಪ್ರಣಾಮಾಸನ

ಚಾಪೆಯ ತುದಿಯಲ್ಲಿ ನಿಂತುಕೊಂಡು, ನಿಮ್ಮ ಪಾದಗಳನ್ನು ಜೋಡಿಸಿ ತೂಕವನ್ನು ಸಮನಾಗಿ ಎರಡೂ ಕಾಲುಗಳ ಮೇಲೆ  ಹಾಕಿ. ಎದೆಯನ್ನು ಹಿಗ್ಗಿಸಿ ಭುಜಗಳನ್ನು ಸಡಿಲಿಸಿ. ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಮೇಲೆತ್ತಿಉಸಿರನ್ನು ಹೊರಹಾಕುತ್ತಾ ಅಂಗೈಗಳನ್ನು ಜೋಡಿಸಿ ಎದೆಯ ಮುಂದೆ ತಂದು ನಮಸ್ಕಾರ  ಮುದ್ರೆಯಲ್ಲಿರಿಸಿ.


2.ಹಸ್ತಉತ್ಥಾನಾಸನ

ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ತೋಳುಗಳನ್ನು ಮೇಲೆತ್ತಿ ಹಿಂದಕ್ಕೆ ಬಗ್ಗಿ, ಮೊಣಕೈಗಳನ್ನು ಕಿವಿಗಳ ಹತ್ತಿರ ತನ್ನಿ. ಭಂಗಿಯಲ್ಲಿ ಪೂರ್ಣ ಶರೀರವನ್ನು ಹಿಮ್ಮಡಿಯಿಂದ ಬೆರಳಿನ ತುದಿಯವರೆಗೂ ಸಾಧ್ಯವಾದಷ್ಟು ಹಿಗ್ಗಿಸಲು ಪ್ರಯತ್ನಿಸಿ. ಹಿಂದಕ್ಕೆ ಬಗ್ಗುವುದಕ್ಕಿಂತ ಜಠರವನ್ನು ಸ್ವಲ್ಪ ಮುಂದಕ್ಕೆ ತಳ್ಳಿ ಬೆರಳುಗಳನ್ನು ಇನ್ನಷ್ಟು ಚಾಚಿ.


3.ಹಸ್ತಪಾದಾಸನ

ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಉಸಿರನ್ನು ಹೊರಗೆ ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಗ್ಗಿಪೂರ್ಣವಾಗಿ ಉಸಿರನ್ನು ಹೊರಹಾಕಿದ ನಂತರ ಕೈಗಳನ್ನು ಪಾದದ ಪಕ್ಕಕ್ಕೆ  ನೆಲದ ಮೇಲಿರಿಸಿ. ಅಗತ್ಯವಿದ್ದಲ್ಲಿ ನಿಮ್ಮ ಮಂಡಿಯನ್ನು ಬಗ್ಗಿಸಿ ಅಂಗೈಗಳನ್ನು ನೆಲದ ಮೇಲಿರಿಸಿ. ಈಗ ಮಂಡಿಯನ್ನು ನೇರವಾಗಿಸಲು ಮಿತವಾದ ಪ್ರಯತ್ನವನ್ನು ಮಾಡಿ.


4.ಅಶ್ವ ಸಂಚಲನಾಸನ

ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ನಿಮ್ಮ ಬಲಗಾಲನ್ನು ಸಾಧ್ಯವಾದಷ್ಟು  ಹಿಂದಕ್ಕೆ ತಳ್ಳಿ. ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಮೇಲೆ ನೋಡಿ. ಎಡಪಾದವು ಸರಿಯಾಗಿ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.



5.ದಂಡಾಸನ

ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ, ಎಡ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಪೂರ್ಣ ಶರೀರವನ್ನು ನೇರವಾದ ರೇಖೆಯಲ್ಲಿರಿಸಿ. ತೋಳುಗಳನ್ನು ನೆಲಕ್ಕೆ ಲಂಬವಾಗಿರಿಸಿ.



6.ಅಷ್ಟಾಂಗ ನಮಸ್ಕಾರ

ನಿಧಾನವಾಗಿ ಮಂಡಿಗಳನ್ನು ನೆಲಕ್ಕೆ ತಂದು ಉಸಿರನ್ನು ಹೊರಹಾಕಿ. ಪೃಷ್ಠವನ್ನು ಸ್ವಲ್ಪ ಹಿಂದೆ ತೆಗೆದುಕೊಂಡು, ಮುಂದೆ ಜಾರಿ ಎದೆ ಮತ್ತು ಗಲ್ಲವನ್ನು ನೆಲಕ್ಕೆ ತಾಗಿಸಿ. ಹಿಂಭಾಗವನ್ನು ಸ್ವಲ್ಪ ಮೇಲೆತ್ತಿ. ಎರಡೂ ಕೈಗಳು, ಎರಡೂ ಪಾದಗಳು, ಎರಡೂ ಮಂಡಿಗಳು, ಎದೆ ಮತ್ತು ಗಲ್ಲ - ಎಂಟು ಶರೀರದ ಭಾಗಗಳು ನೆಲಕ್ಕೆ ತಾಗಿರುತ್ತವೆ.

7.ಭುಜಂಗಾಸನ

ಮುಂದಕ್ಕೆ ಜಾರಿ ಎದೆಯನ್ನು ಎತ್ತಿ ನಾಗರಹಾವಿನ ಭಂಗಿಯಲ್ಲಿ  ದೇಹವನ್ನಿರಿಸಿ. ಮೊಣ ಕೈಯನ್ನು ಬಗ್ಗಿಸಬಹುದು. ತಲೆ ಮೇಲೆತ್ತಿ ಮೇಲೆ  ನೋಡಿ. ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ನಯವಾದ  ಪ್ರಯತ್ನದಿಂದ ಎದೆಯನ್ನು ಮುಂದೆ ತಂದು ಉಸಿರನ್ನು ಹೊರಹಾಕುತ್ತಾ ಹೊಟ್ಟೆಯ ಭಾಗ ಕೆಳಗೆ ತನ್ನಿಕಾಲ್ಬೆರಳು  ನೆಲದ ಮೇಲೆ ಚಪ್ಪಟೆಯಾಗಿರಿಸಿ. ನಿಮಗೆ ಸಾಧ್ಯವಾದಷ್ಟು ಮಾತ್ರ ಪ್ರಯತ್ನಿಸಿ, ದೇಹವನ್ನು ಹೆಚ್ಚು ಒತ್ತಾಯಿಸಬೇಡಿ.


8.ಪರ್ವತಾಸನ

ಉಸಿರನ್ನು ಹೊರಹಾಕುತ್ತಾ ಪೃಷ್ಠವನ್ನು ಹಾಗೂ ಹಿಂಭಾಗದ ಮೂಳೆಯನ್ನು ಮೇಲೆತ್ತಿ, ಎದೆಯನ್ನು ಕೆಳಗಿಳಿಸಿ. ಸಾಧ್ಯವಾದಲ್ಲಿ ಹಿಮ್ಮಡಿಯನ್ನು ಭೂಮಿಯ ಮೇಲಿರಿಸಿ ಹಿಂಭಾಗದ ಮೂಳೆಯನ್ನು ಮೇಲೆತ್ತುತ್ತಾ ಭಂಗಿಯನ್ನು ಗಾಢವಾಗಿಸಲು ಪ್ರಯತ್ನಿಸಿ.


9.ಅಶ್ವ ಸಂಚಲನಾಸನ

ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ, ಬಲ ಪಾದವನ್ನು ಎರಡೂ ಕೈಗಳ ಮಧ್ಯೆ ತಂದು, ಎಡ ಮಂಡಿಯನ್ನು ನೆಲಕ್ಕೆ ತಳ್ಳಿ  ಪೃಷ್ಠವನ್ನು ಕೆಳಗೆ ತನ್ನಿ. ತಲೆಯನ್ನು ಮೇಲೆತ್ತಿ  ಮೇಲೆ ನೋಡಿ. ಎರಡೂ ಕೈಗಳ ಮಧ್ಯೆ ಸರಿಯಾಗಿ ಬಲ ಪಾದವನ್ನಿರಿಸಿ ಬಲ ಕಣಕಾಲಿನ ಹಿಂಭಾಗವನ್ನು ನೆಲಕ್ಕೆ ಲಂಬವಾಗಿರಿಸಿ ಭಂಗಿಯಲ್ಲಿ  ಪೃಷ್ಠವನ್ನು ನೆಲದ ಕಡೆಗೆ ತಳ್ಳಿ ಅನುಭವವನ್ನು ಗಾಢವಾಗಿಸಿ.


10.ಹಸ್ತ ಪಾದಾಸನ

ಉಸಿರನ್ನು ಹೊರಹಾಕುತ್ತಾ ಎಡ ಪಾದವನ್ನು ಮುಂದಕ್ಕೆ ತನ್ನಿ. ಅಂಗೈಗಳನ್ನು ನೆಲದ ಮೇಲಿರಿಸಿ. ಬೇಕಾದರೆ ಮಂಡಿಯನ್ನು ಬಗ್ಗಿಸಬಹುದು. ನಯವಾಗಿ ಮಂಡಿಗಳನ್ನು ನೇರವಾಗಿಸಿ ಸಾಧ್ಯವಾದರೆ ಮೂಗನ್ನು ಮಂಡಿಗೆ ತಾಗಿಸುವ ಪ್ರಯತ್ನವನ್ನು ಮಾಡಿ. ಉಸಿರಾಟವನ್ನು  ಮುಂದುವರೆಸಿ.


11.ಹಸ್ತ ಉತ್ಥಾನಾಸನ

ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ, ಬೆನ್ನೆಲುಬನ್ನು ಮತ್ತು ಕೈಗಳನ್ನು ಮೇಲೆತ್ತಿ ಹಿಂಭಾಗಕ್ಕೆ ಸ್ವಲ್ಪ ಬಗ್ಗಿ, ಪೃಷ್ಠವನ್ನು ಸ್ವಲ್ಪ ಹೊರಗೆ ತಳ್ಳಿನಿಮ್ಮ ಮೊಣಕೈಗಳು ನಿಮ್ಮ ಕಿವಿಗಳ ಪಕ್ಕದಲ್ಲಿರುವಂತೆ ನೋಡಿಕೊಳ್ಳಿ.



12. ಪ್ರಣಾಮಾಸನ

ಉಸಿರನ್ನು ಹೊರಹಾಕುತ್ತಾ ಮೊದಲು ಶರೀರವನ್ನು ನೇರವಾಗಿಸಿ ನಂತರ ತೋಳುಗಳನ್ನು ಕೆಳಗೆ ತನ್ನಿ. ಮೊದಲಿನ ಪ್ರಣಾಮಾಸನ ಭಂಗಿಯಲ್ಲಿ ವಿಶ್ರಮಿಸಿ. ನಿಮ್ಮ ಶರೀರದಲ್ಲಾಗುವ ಸಂವೇದನೆಗಳನ್ನು ಗಮನಿಸಿ.

ಹೀಗೆ ಸೂರ್ಯ ನಮಸ್ಕಾರದ ಈ ೧೨ ಆಸನಗಳನ್ನು ಪುನರಾವರ್ತಿಸಿ. ಪ್ರತಿದಿನ ಅಭ್ಯಾಸ ಮಾಡುವುದುರಿಂದ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ