ಮೇ 18, 2021

ಮನೆಯಲ್ಲಿದ್ದೆ ಕೊರೋನ ಗೆದ್ದ 94ರ ವೃದ್ಧೆ

        ಜೀವನದ ಬಗೆಗಿನ ಉತ್ಸಾಹ, ನಂಬಿಕೆ, ಭರವಸೆ ಮತ್ತು ಎಲ್ಲವನ್ನು ಎದುರಿಸುವೆ ಎನ್ನುವ ಅದಮ್ಯ ಧೈರ್ಯ ಜೊತೆಗಿದ್ದರೆ ಎಂಥದ್ದೇ ಗಂಡಾಂತರ ಬಂದರೂ ಸರಾಗವಾಗಿ ಎದುರಿಸಬಹುದು. ದನ್ನು ಅಕ್ಷರಶಃ ಸಾಬೀತು ಪಡಿಸಿ ತೋರಿಸಿದ್ದಾರೆ ಕಲಬುರಗಿ ನಗರದ ನಿವಾಸಿ ಕಲ್ಯಾಣಮ್ಮ ದುತ್ತರಗಾಂವ.

        ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ ಇಷ್ಟು ಕೊರೋನಾ ಸೊಂಕಿತರಾದರು ಇಷ್ಟು ಜನ ಮರಣ ಹೊಂದಿದರು ಎಂಬ ಸುದ್ದಿ ಕೇಳಿಯೇ ಎದೆ ಒಡೆದುಕೊಳ್ಳುವವರ ನಡುವೆ ಕಲ್ಯಾಣಮ್ಮ ಮಾದರಿಯಾಗಿ ಸ್ಫೂರ್ತಿಯಾಗಿ ನಿಂತಿದ್ದಾರೆ. ಅವರನ್ನು ನೋಡಿದ ಮೇಲೆ ಎಷ್ಟೋ ಕೊರೋನಾ ಸೊಂಕಿತರ ಮುಖದಲ್ಲಿ ಭರವಸೆಯ ಮಂದಹಾಸ ಖಂಡಿತ ಮೂಡುತ್ತದೆ.

        ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯ ನಿವಾಸಿಯಾಗಿರುವ 94 ವರ್ಷದ ವೃದ್ದೆ ಕಲ್ಯಾಣಮ್ಮ ದುತ್ತರಗಾಂವ ಅವರು ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋದಾಗ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ನಂತರ ಕುಟುಂಬ ವೈದ್ಯರ ಮಾರ್ಗದರ್ಶನದಂತೆ ಮನೆಯಲ್ಲೇ ಇದ್ದು ಸೂಕ್ತ ಚಿಕಿತ್ಸೆ ಪಡೆದುಕೊಂಡರು.  ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಕರಾರುವಕ್ಕಾಗಿ ಪಾಲಿಸಿದರು. ಜೊತೆಗೆ ಅವರಲ್ಲಿದ್ದ ಅದಮ್ಯ ಧೈರ್ಯ ಮತ್ತು ಆತ್ಮವಿಶ್ವಾಸ ಮಾಹಾಮಾರಿ ಕೊರೋನಾ ರೋಗದ ಸೋಂಕಿನಿಂದ ಪೂರ್ತಿಯಾಗಿ ಗುಣಮುಖರಾಗಲು ಸಾಧ್ಯವಾಯಿತು.

        ಕೊರೋನಾ ಸೋಂಕಿನಿಂದ ಗುಣಮುಖರಾಗಲು ದೈರ್ಯ, ಸಕಾರಾತ್ಮಕ ವಿಚಾರಗಳು ಮತ್ತು ಸಕಾಲದಲ್ಲಿ ಸೂಕ್ತವಾದ ಚಿಕಿತ್ಸೆ ಪಡೆದರೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಅಜ್ಜಿಯನ್ನು ಹೋಂ ಐಸ್ಕೂಲೇಶನ್ನಲ್ಲಿ ನೋಡಿಕೊಂಡ ಇವರ ಮೊಮ್ಮಗ ದೀಪಕ ಹೊಸಳ್ಳಿ ಮತ್ತು ಮೊಮ್ಮಗಳಾದ ನಿರ್ಮಲಾ. ಕಲ್ಯಾಣಮ್ಮ ಅವರು ಕೊರೋನಾ ಸೋಂಕನ್ನು ಸ್ವೀಕರಿಸಿದ ರೀತಿ ಸೊಂಕು ಧೃಡ ಪಟ್ಟಿದೆ ಎಂದು ಗೊತ್ತಾದಾಗ ಅದನ್ನು ಧೈರ್ಯದಿಂದ ಎದುರಿಸಿದ ರೀತಿ ಎಲ್ಲರಿಗು ಮಾದರಿ.

        ನಾವು ಇವರಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ. ಅಜಾಗರೂಕತೆಯಿಂದ ಮಹಾಮಾರಿಗೆ ಆಹ್ವಾನ ನೀಡುವುದು ಬೇಡ. ಎಚ್ಚರಿಕೆಯಿಂದ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸೋಣ. ಪ್ರತಿಯೊಬ್ಬರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳೋಣ. ಒಂದು ವೇಳೆ ಆಕಸ್ಮತ್ತಾಗಿ ಸೋಂಕು ತಗುಲಿದರೂ ಸಹ ಭಯಪಡದೇ ಧೈರ್ಯವಾಗಿ ಎದುರಿಸೋಣ. ಕೊರೋನಾ ಗೆದ್ದು ಬರೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ