ಕಳೆದ ವರ್ಷ ಕಲಬುರಗಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಭೇಟಿಯಾಗುವ ಸಂದರ್ಭ ಆಕಸ್ಮಿಕವಾಗಿ ಸಿಕ್ಕಿತು. ಆಕಾಶವಾಣಿಯಲ್ಲಿ ಗೋಷ್ಠಿಗಳ ನೇರ ಪ್ರಸಾರ ನಡೆದಿತ್ತು. ಆದರೆ ನನ್ನ ನೇರ ದೃಷ್ಟಿ ಕಲಬುರಗಿಯ ಬಿರು ಬಿಸಿಲಿನಲ್ಲೂ ಹೆಗಲ ಮೇಲೆ ಕಂಬಳಿ ಹೊದ್ದುಕೊಂಡು, ತಲೆಯ ಮೇಲೊಂದು ಶಲ್ಯ ಸುತ್ತಿ ಸುಮ್ಮನೆ ಕೂತಿದ್ದ ತಾತನೊಬ್ಬನ ಮೇಲೆ ಬಿತ್ತು.
ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಂತಲಕುಂಟ ಗ್ರಾಮದ ಹಿರಿಯ ಜೀವ ಹಣಮಂತರಾ ಮಕಾಶಿ. ನನ್ನ ಗಮನ ಆ ಕಡೆ ಹೋಗಿದ್ದು ಅವರ ವೇಶ ಭೂಷಣ ನೋಡಿ ಅಲ್ಲ. ಬದಲಿಗೆ ಅವರ ಕೈಯಲ್ಲಿದ್ದ ಆ ಅಪರೂಪದ ವಸ್ತು ನೋಡಿ. ಅದೇನಿರಬಹುದು ಎಂಬ ಕುತೂಹಲ ಮೂಡಿತು. ಕೇಳೋಣ ಎಂದು ಎದ್ದು ಬಂದೆ. ಹಾಗೆ ಸುಮ್ಮನೆ ಮಾತಾಡಿಸಿ ನಾನೊಬ್ಬನೆ ಸಮಾಧಾನವಾದರೆ ಹೇಗೆ ಎಲ್ಲರಿಗೂ ಈ ತಾತನ ಕಟ್ಟಿಗೆಯ ಆ ಕಲಾಕೃತಿಯನ್ನು ತೋರಿಸಬೇಕು ಎಂದು ವೀಡಿಯೋ ಚಿತ್ರೀಕರಣ ಮಾಡಿಕೊಂಡೆ. ಇವರ ಕಲಾವಂತಿಕೆಯಲ್ಲಿ ಅರಳಿರುವ ಈ ಕಲಾಕೃತಿ (Wood Art) ಚಂಗು ಒಂದೇ ಕಟ್ಟಿಗೆಯಲ್ಲಿ ಸೂಕ್ತವಾಗಿ ಕೆತ್ತಲ್ಪಟ್ಟಿರುವ ಅತ್ಯದ್ಭುತ ಕಲಾ ವಸ್ತು.
ಈ ಕಲಾತ್ಮಕ ವಸ್ತುವನ್ನು ಕೊಡಲು ಕೇಳಿದ್ದೆ ಆದರೆ ಅದು ಅಲ್ಲಿನ ಮಠಕ್ಕಾಗಿ ಮಾಡಿ ಕೊಟ್ಟದ್ದು, ಇಲ್ಲಿ ಜನರಿಗೆ ತೋರಿಸಲಷ್ಟೆ ತಂದಿದ್ದೇನೆ, ನಿಮಗರ ಬೇಕಾದರೆ ಹೇಳಿ ಮಾಡಿ ತಂದುಕೊಡುತ್ತೇನೆ ಅಂದಿದ್ದರು. ಆದರೆ ನನಗೆ ಕೆಲಸದ ಒತ್ತಡದಲ್ಲಿ ಇದನ್ನು ಮರೆತೆ ಬಿಟ್ಟಿದ್ದೆ. ಇತ್ತೀಚೆಗೆ ಏನೋ ಹುಡುಕುವಾಗ ಈ ವಿಡಿಯೋ ಸಿಕ್ಕಿ ಅದೆಲ್ಲ ನೆನಪಾಯಿತು. ಇದನ್ನ ಎಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಈ ವಿಡಿಯೋವನ್ನು ನೋಡಿ ಖಂಡಿತ ಖುಷಿ ಮಡುತ್ತೀರಾ. ನಿಮ್ಮ ಮನೆಯಲ್ಲೂ ಈ ಅಪರೂಪದ (Wood Art) ವಸ್ತು ಶೋಭಾಯಮಾನ ಆಗಬೇಕು ಅಂದರೆ ಈ ನಂಬರಿಗೆ 7090123935 ಕರೆ ಮಾಡಿ ಆರ್ಡರ್ ಕೊಡಿ. ಪಾಪ ಇಂಥ ಸಂಕಷ್ಟದ ಸಮಯದಲ್ಲಿ ಆ ಹಿರಿಯ ಜೀವಕ್ಕೊಂದು ಕೆಲಸ ಕೊಟ್ಟಂತಾಗುತ್ತದೆ. ಜೊತೆಗೆ ಒಂದು ಅಪರೂಪದ ಕಲೆಯನ್ನು ಬೆಳೆಸಿದಂತೆಯೂ ಉಳಿಸಲು ಸಹಕರಿಸಿದಂತೆಯೂ ಆಗುತ್ತದೆ.
ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ