ರತ್ನರಾಯಮಲ್ಲ
ಮತ್ತು ಮಲ್ಲಿ ಎಂಬ ತಖಲ್ಲುಸ್ನಾಮಾದಲ್ಲಿ ಗಜಲ್ ರಚಿಸುವ ನಮ್ಮ ಮೆಚ್ಚಿನ ಡಾ. ಮಲ್ಲಿನಾಥ ಎಸ್ ತಳವಾರ ಅವರು ಕನ್ನಡ ಪ್ರಾಧ್ಯಾಪಕರು. ಅಕಾಡೆಮಿಕ್ ಆಗಿರುವ ವಿಷಯಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡು ಪಾಠ ಪ್ರವಚನದಲ್ಲಿ ಮುಳುಗದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ತಮ್ಮ ಸೃಜನಶೀಲತೆಯನ್ನು ಜೀವಂತವಾಗಿಟ್ಟುಕೊಂಡು, ಅಧ್ಯಯನ ಮಾಡುತ್ತ, ಹೊಸದನ್ನು ಕಲಿಯುತ್ತ, ಕಲಿತಿರುವುದನ್ನು ಸುತ್ತ ಇರುವ ನಾಲ್ಕು ಜನರಿಗೆ ಹಂಚುತ್ತ ಸಾಗಿರುವ ಸಾಹಿತ್ಯ ಲೋಕದ ಓರ್ವ “ಜಂಗಮ”ನಂತೆ ನಮಗೆ ಕಾಣುತ್ತಾರೆ. ಅವರು ಇತ್ತೀಚೆಗೆ ಗಾಲಿಬ್ ಸ್ಮೃತಿ-ಗಜಲ್ ಗುಲ್ದಸ್ಥ ಎಂಬ ಗಜಲ್ ಕೃತಿಯನ್ನು ಕನ್ನಡ ಗಜಲ್ ಲೋಕಕ್ಕೆ ಅರ್ಪಿಸಿದ್ದಾರೆ. ಈ ಕೃತಿ ಕಲೆಗಳಿಲ್ಲದ
ಚಂದ್ರನಂತೆ ನನಗೆ ಕಾಣುತ್ತದೆ. ಹೀಗೆ ಹೇಳಲು ನನಗೆ ನನ್ನದೇ ಆದ ಹಲವು ಸಕಾರಣಗಳಿವೆ.
ಹಾಗೆ ನೋಡಿದರೆ ಡಾ. ಮಲ್ಲಿನಾಥ ತಳವಾರ ಅವರು ಈಗಾಗಲೇ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವವರು. ಅವರಿಗೆ ಸಾಹಿತ್ಯ ರಚನೆ ಹೊಸದಲ್ಲ, ಸಾಹಿತ್ಯ ಲೋಕಕ್ಕೂ ಹೊಸಬರಲ್ಲ. ಅವರು ಈಗಾಗಲೇ 12 ಕೃತಿಗಳನ್ನು ಪ್ರಕಟಿಸಿದ್ದಾರೆ. ಇಂತಹ ಅನುಭವಿ, ಅನುಭಾವಿಯ ಒಂದು ಕೃತಿಯ ಕುರಿತು ನಾನು ನನ್ನ ಪ್ರತಿಕ್ರಿಯೆ ನೀಡುವುದು ನನ್ನ ಪಾಲಿಗೆ ಒದಗಿದ ಭಾಗ್ಯವೇ ಆಗಿದೆ.
ಡಾ.ಮಲ್ಲಿನಾಥ ತಳವಾರ ಅವರು ನನಗೆ ವಾಟ್ಸಪ್ ಗ್ರೂಪ್ “ಗಜಲ್ ಸಂಭ್ರಮ”ದ ಮೂಲಕ ಪರಿಚಿತರು.
ಅವರನ್ನು ನಾನಿನ್ನೂ ಖುದ್ದಾಗಿ ಭೇಟಿಯಾಗಿಲ್ಲ...!! ಕಳೆದ ಒಂದೂವರೆ ವರ್ಷದಲ್ಲಿ ಗಜಲ್ ಬಗ್ಗೆ, ಸಾಹಿತ್ಯ ರಚನೆಯ ಬಗ್ಗೆ ಅವರೊಂದಿಗೆ ಹಲವು ಬಾರಿ ಚರ್ಚಿಸಿರುವೆ. ಗಜಲ್ ರಚನೆಯ ಕುರಿತು ನನ್ನ ಅನುಮಾನಗಳನ್ನು ಪರಿಹರಿಸಿಕೊಂಡಿರುವೆ. ಅವರೊಂದಿಗೆ ಮಾತನಾಡುವಾಗ ನನ್ನ ಗಮನಕ್ಕೆ ಬಂದದ್ದೇನೆಂದರೆ ಅವರೊಬ್ಬ “ತಾಯಿ ಕರುಳಿನ” ಮನುಷ್ಯ. ಅತ್ಯಂತ ಸರಳ ಜೀವಿ ಅನಿಸಿದರು. ಇಂತಹ ವ್ಯಕ್ತಿತ್ವವುಳ್ಳ ಡಾ.ಮಲ್ಲಿನಾಥ ತಳವಾರ
ಅವರು ಬರೆದ ಗಜಲ್ ಗುಲ್ದಸ್ಥ ವಾಸ್ತವದಲ್ಲಿ ಗುಲ್ದಸ್ಥವೇ ಆಗಿದೆ.
ಗುಲ್ದಸ್ಥ
ಎಂದರೆ ಹೂಗುಚ್ಛ. ಸಾಮಾನ್ಯವಾಗಿ ಗಜಲ್ ರಚನೆಕಾರರು ಗಜಲ್ ಸಂಕಲನ ಎಂದು ತಮ್ಮ ಕೃತಿಗೆ ಶೀರ್ಷಿಕೆ ಇಡುತ್ತಾರೆ. ಆದರೆ ಡಾ. ಮಲ್ಲಿನಾಥ ತಳವಾರ ಅವರು ಸಂಕಲನ ಎಂಬುದರ ಬದಲಿಗೆ ಗುಲ್ದಸ್ಥ ಎಂದು ಕರೆದರು. ಮತ್ತು ಈ ಕೃತಿಯನ್ನು ನಾನು
ಓದಿದಾಗ ಅವರು ತಮ್ಮ ಕೃತಿಗೆ ಹೀಗೆ ಹೆಸರಿಟ್ಟದ್ದು ಅರ್ಥಪೂರ್ಣ ಎನಿಸಿತು. ಯಾಕೆಂದರೆ ಡಾ. ಮಲ್ಲಿನಾಥ ತಳವಾರ ಅವರ ಈ ಗುಲ್ದಸ್ಥ ನಿಜವಾಗಿಯೂ
ಹೂಗುಚ್ಛವೇ ಆಗಿದೆ. ಅದೂ ಕೂಡ ಒಂದೇ ರೀತಿಯ ಗುಲ್ದಸ್ಥ ಅಲ್ಲ, ಬದಲಿಗೆ ಎಲ್ಲ ರೀತಿಯ ಹೂಗಳೂ ಇಲ್ಲಿವೆ. ಗುಲಾಬಿ, ಮಲ್ಲಿಗೆ, ನೀಲಿ ತಾವರೆ, ಕನಕಾಂಬರ ಒಂದೇ, ಎರಡೇ… ಜನಸಾಮಾನ್ಯರ ನೋವು ವಿವರಿಸುವುದನು ನೋಡಿ ಅದರ ರೂಪವನ್ನು ಮನಸಿಗಿಳಿಸಿಕೊಳ್ಳಬಹುದಾದ, ಮುಡಿಯಲಾಗದ ರುದ್ರ ರಮಣೀಯ ಹೂವುಗಳೂ ಡಾ. ಮಲ್ಲಿನಾಥ ತಳವಾರ ಅವರ ಗುಲ್ದಸ್ಥದಲ್ಲಿವೆ.
ಕೇವಲ
ಗಜಲ್ಗಳು ಮಾತ್ರವಲ್ಲ, ಈ ಗಾಲಿಬ್ ಸ್ಮೃತಿ–ಗುಲ್ದಸ್ಥ
ದಲ್ಲಿ ಗಜಲ್ ರಚನೆ ಮಾಡುವುದು ಹೇಗೆ? ಅದರೊಳಗಿನ ಪ್ರಕಾರಗಳೇನು? ಸದ್ಯ ಗಜಲ್ ಸಾಹಿತ್ಯ ರಚನೆಯಲ್ಲಿ ಛಂದೋಬದ್ಧವಾಗಿ ಬರೆಯಲು ಇರುವ ಸಾಧ್ಯತೆಗಳು, ಮಾತ್ರಾ ಗಣ, ಹಿಂದಿ - ಉರ್ದು ಗಜಲ್ ರಚನೆಗೂ ಕನ್ನಡ ಗಜಲ್ ರಚನೆಗೂ ಇರುವ ವ್ಯತ್ಯಾಸಗಳು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಗಜಲ್ಗೆ ಇರುವ ವಿವಿಧ
ಶಿಷ್ಟ ಮಾದರಿಗಳನ್ನು ಪ್ರಕಾರ ಹಾಗೂ ಉದಾಹರಣೆ ಸಹಿತ ಅವರು ವಿವರಿಸಿದ್ದಾರೆ. ಈ ಮೂಲಕ ಗಜಲ್
ರಚನೆಯಲ್ಲಿ ತೊಡಗಿರುವ ಹೊಸಬರಿಗೆ ಇದು ಒಂದು ರೀತಿಯಲ್ಲಿ ಮಾರ್ಗದರ್ಶಕ ಪುಸ್ತಕ ಎಂದರೆ ತಪ್ಪಾಗದು.
ಡಾ.
ಮಲ್ಲಿನಾಥ ತಳವಾರ ಅವರು ಕನ್ನಡ ಗಜಲ್ ರಚನೆಗೆ ಸಂಬಂಧಿಸಿ ಛಂದಸ್ಸು ನಿಯಮಗಳ ಕೃತಿ ರಚಿಸಬಹುದೆಂದು ನಾನು ಅವರೆದುರು ನನ್ನ ಇಂಗಿತ ವ್ಯಕ್ತಪಡಿಸಿದ್ದೆ. ಆದರೆ ಅವರಿಗೆ ಸಮಯ ಇರಲಿಲ್ಲವೋ? ಅಥವಾ ಮುಂದೆ ಯಾವತ್ತಾದರೂ ಆ ಕಾರ್ಯ ಕೈಗೆತ್ತಿಕೊಳ್ಳಬಹುದೋ?
ಗೊತ್ತಿಲ್ಲ. ನಾನು ಹಾಗೆ ಹೇಳಲು ಕಾರಣ ಗಜಲ್ ರಚನೆಗೆ ಇರುವ ನಿಯಮಗಳನ್ನು ಬಿಟ್ಟು ಬಹಳಷ್ಟು ಜನ ತಮಗೆ ತೋಚಿದಂತೆ
ಬರೆಯುತ್ತಿರುವುದು. ಇದರ ಬಗ್ಗೆ ಸ್ವತಃ ಡಾ. ಮಲ್ಲಿನಾಥ ತಳವಾರ ಅವರಿಗೂ ಕೂಡ ಸಮಾಧಾನ ಇಲ್ಲ. ಯಾಕೆಂದರೆ ಸ್ವತಃ ಪ್ರಾಧ್ಯಾಪಕರಾಗಿರುವ ಅವರು ಈ ರೀತಿಯ ತಪ್ಪುಗಳನ್ನು
ಒಪ್ಪಲು ಸಾಧ್ಯವಿಲ್ಲ. ಹೀಗಾಗಿಯೇ ಅವರು ನನ್ನೊಂದಿಗೆ ಚರ್ಚಿಸುವಾಗ ಕನ್ನಡದಲ್ಲಿ ರಚಿಸಲಾಗುತ್ತಿರುವ ಗಜಲ್ಗಳು ನಿಯಮವಿಲ್ಲದೇ ಇರುವುದರ ಬಗ್ಗೆ, ಮತ್ತು ಇಂತಹ ಪರಿಪಾಠವೇ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆಗ ನಾನು “ನೀವೇ
ಯಾಕೆ ಕನ್ನಡ ಗಜಲ್ ರಚನೆಗೆ ಸಂಬಂಧಿಸಿ ಛಂದಸ್ಸು ಶಾಸ್ತ್ರ ರೂಪಿಸಬಾರದು?” ಎಂದು ಕೇಳಿದ್ದೆ. ಡಾ. ಮಲ್ಲಿನಾಥ ತಳವಾರ ಅವರು ತುಂಬಿದ ಕೊಡ. ಅವರಿಗೆ ಆ ಶಕ್ತಿ ಇದ್ದರೂ
ನಾನೊಬ್ಬನೇ ಆ ಕೆಲಸ ಮಾಡುವುದಕ್ಕಿಂತ
ಎಲ್ಲ ಹಿರಿಯರನ್ನೂ ಸೇರಿಸಿ ಮಾಡಿದರೆ ಒಳಿತು ಎಂದಿದ್ದರು. ಹೀಗಿದ್ದರೂ ಡಾ. ಮಲ್ಲಿನಾಥ ತಳವಾರ ಅವರು ತಮ್ಮ ಗಾಲಿಬ್ ಸ್ಮೃತಿ ಕೃತಿಯಲ್ಲಿ ಗಜಲ್ ಗೆ ಪೂರಕವಾಗಿ ಮಾಹಿತಿ
ನೀಡುವ ಮೂಲಕ ಕನ್ನಡ ಗಜಲ್ ಸಾಹಿತ್ಯ ರಚನೆಯಲ್ಲಿ ತೊಡಗಿದವರಿಗೆ ದೀಪವೊಂದನ್ನು ನೀಡಿದಂತಾಗಿದೆ. ಗಜಲ್ ಬರೆಯಲು ಬಯಸುವವರು, ಹೊಸದಾಗಿ ಗಜಲ್ ಬರೆಯಲು ತೊಡಗಿಕೊಂಡಿರುವವರಿಗೆ ಗಾಲಿಬ್ ಸ್ಮೃತಿ–ಗಜಲ್ ಗುಲ್ದಸ್ಥ ಅಧ್ಯಯನ ಯೋಗ್ಯ ಕೃತಿ.
ಡಾ.
ಮಲ್ಲಿನಾಥ ತಳವಾರ ಅವರ ಈ ಕೃತಿಯನ್ನು ಕಲೆಗಳಿಲ್ಲದ
ಚಂದ್ರ ಎಂದು ನಾನು ಕರೆಯಲು ಕಾರಣಗಳಿವೆ. ಅವರು ನಿಯಮಬದ್ಧವಾಗಿ ಅತ್ಯಂತ ಎಚ್ಚರಿಕೆಯಿಂದ ಗಜಲ್ಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಒಂದೊಂದು ಗಜಲ್ ಕೂಡ ಮುತ್ತಿನ ಹಾರದಂತೆ ಮುತ್ತು ಪೋಣಿಸಿ ಓದುಗರ ಕೊರಳಿಗೆ ಹಾಕಿದ್ದಾರೆ.
ಇನ್ನು
ಇವರ ಗಜಲ್ಗಳ ಪೈಕಿ ನನ್ನನ್ನು
ಕಾಡಿದ ಸಾಲುಗಳನ್ನು ಉಲ್ಲೇಖಿಸಿ ನನ್ನ ಗ್ರಹಿಕೆಗೆ ಸಿಕ್ಕ ಅದರ ಹೊಳುಹನ್ನು ಇಲ್ಲಿ ಸಾದರಪಡಿಸುವ ಪ್ರಯತ್ನವನ್ನು ಮಾಡಿದ್ದೇನೆ.
ಗಜಲ್
2
ಕೋಠೆಯಲ್ಲಿ ಕುಂತಿರುವೆ
ಬರುವವರೆಲ್ಲ
ಬಂದುಬಿಡಿ
ಹಸಿವಿನಿಂದ ಬಳಲುತಿರುವೆ
ತಿನ್ನುವವರೆಲ್ಲ
ತಿಂದುಬಿಡಿ
ಎಂದು
ಆರಂಭವಾಗುವ ಈ ಗಜಲ್ ಈ
ಸಮಾಜದ ಕಟ್ಟಕಡೆಯ ವೃತ್ತಿ ಎಂದೇ ಬಿಂಬಿಸಲಾಗಿರುವ ವೇಶ್ಯೆಯೊಬ್ಬಳ ಆಕ್ರಂದನವನ್ನು ಓದುಗರೆದುರು ಬಿಚ್ಚಿಡುತ್ತದೆ. ಸಮಾಜದ ಕುರಿತು, ಸಮಾಜದ ಎಲ್ಲ ವರ್ಗಗಳ ಕುರಿತು ಅರಿವಿರುವ, ಆ ವರ್ಗದ ನೋವು
ಕಂಡ ಒಬ್ಬ ಬರಹಗಾರ ಮಾತ್ರ ಹೀಗೆ ಮನ ಮಿಡಿಯುವಂತೆ ಬರೆಯಬಲ್ಲ.
ಗಜಲ್
6
ಬಡವರ ಓಣಿಯಲ್ಲಿ
ಹಸಿವಿದೆ
ನಿರಾಸೆಯಿಲ್ಲ
ದೋಸ್ತ
ಬಾಳ ಪುಟದಲ್ಲಿ
ಅಂಧಕಾರವಿದೆ
ಭಯವಿಲ್ಲ
ದೋಸ್ತ
ಎಂದು
ಹೇಳುವ ಗಜಲ್ಕಾರರು ಬಡವರ ಬದುಕಿನ ಜೀವನ ಪ್ರೀತಿಯನ್ನು ಸಾದರಪಡಿಸುತ್ತಲೇ ಕತ್ತಲಿದೆ, ನೋವಿದೆ ಆದರೆ ಭಯ ಇಲ್ಲ ಎಂದು
ಹೇಳುತ್ತಾರೆ. ಮುಂದುವರಿದು..
ಕಾಲ ಎಲ್ಲಿಯೂ
ಕಾಲು
ಮುರಿದುಕೊಂಡು
ಬೀಳುವುದಿಲ್ಲ
ಜೋಪಡಿಯಲ್ಲಿ ಹಂಚುವ
ಗುಣವಿದೆ
ಸ್ವಾರ್ಥವಿಲ್ಲ
ದೋಸ್ತ...
ಎಂದು
ಹೇಳುವ ಮೂಲಕ ಬಡವರ ಹೃದಯಶ್ರೀಮಂತಿಕೆಯನ್ನು ತೆರೆದಿಡುತ್ತಾರೆ.
ಗಜಲ್
12
ನಿನಗಾಗಿ ತಾಜ್ಮಹಲ್
ಕಟ್ಟಿಸಲಾರೆನು
ಗೆಳತಿ
ಸುಂದರ ಗೋರಿಯನ್ನು
ನಿರ್ಮಿಸಲಾರೆನು
ಗೆಳತಿ
ಎಂಬ
ಸಾಲುಗಳು ಪ್ರೇಮದ ಕುರಿತು ಇರುವ ವ್ಯಾಖ್ಯಾನವನ್ನೇ ಡಾ. ಮಲ್ಲಿನಾಥ ತಳವಾರ ಅವರು ಪುನರ್ವಿಮರ್ಶೆಗೆ ಹಚ್ಚುತ್ತಾರೆ.
ಇತಿಹಾಸದ ಪುಟಗಳಲ್ಲಿ
ಸೇರುವ
ಹುಚ್ಚು
ನನಗಿಲ್ಲ
ಪ್ರೇಮದ ಪರಿ
ಜಗತ್ತಿಗೆ
ತೋರಿಸಲಾರೆನು
ಗೆಳತಿ
ಎಂದು
ಬರೆಯುತ್ತಲೇ ಪ್ರೇಮವೆಂಬುದು ಖಾಸಗಿಯಾದುದು, ಮಧುರವಾದುದು, ಅದನ್ನು ಬಹಿರಂಗಕ್ಕೆ ತೆರೆದಿಟ್ಟು ಪ್ರಚಾರಕ್ಕೆ ಇಡುವಂತಹದ್ದಲ್ಲ ಎಂಬ ಮಾತು ಹೇಳುತ್ತಾರೆ.
ಗಜಲ್
16
ವಿರಹಕ್ಕೆ ತುಸು
ವಿರಾಮ
ನೀಡೋಣ
ಬಾ
ಗೆಳತಿ
ಕಾದ ದೇಹಕ್ಕೆ
ಬೆಸುಗೆಯ
ಹಾಕೋಣ
ಬಾ
ಗೆಳತಿ
ಎಂದು
ಡಾ. ಮಲ್ಲಿನಾಥ ತಳವಾರ ಅವರು ಪ್ರೇಮ ಮಾಧುರ್ಯವನ್ನು ಈ ಗಜಲ್ನಲ್ಲಿ
ಕಟ್ಟಿ ಕೊಟ್ಟಿದ್ದಾರೆ. ಆದರೆ ನನಗನಿಸಿದ್ದು, ಇಲ್ಲಿ ಅವರು ರೂಪಕಗಳನ್ನು ಬಳಸಬಹುದಿತ್ತೆಂದು...!!
ಗಜಲ್
24
ಊಸರವಳ್ಳಿಯ ಸಾಮಾಜಿಕ
ವ್ಯವಸ್ಥೆಯನ್ನು
ಧಿಕ್ಕರಿಬೇಕಾಗಿದೆ
ದೋಸ್ತ
ಸಂಬಂಧಗಳಲ್ಲಿಯ ಹುಳುಕುಗಳನ್ನು
ಕಿತ್ತೆಸೆಯಬೇಕಾಗಿದೆ
ದೋಸ್ತ
ಎಂದು
ಬರೆಯುತ್ತಲೇ ಡಾ. ಮಲ್ಲಿನಾಥ ತಳವಾರ ಅವರು ಬಂಡಾಯದ ಕೆಂಪು ಧ್ವಜವನ್ನು ಹಾರಿಸುತ್ತಾರೆ. ಡಾ. ಮಲ್ಲಿನಾಥ ತಳವಾರ ಅವರ ಈ ಕೃತಿಯನ್ನು ನಾನು
ನಿಜವಾಗಿಯೂ ಶೀರ್ಷಿಕೆಯಲ್ಲಿರುವಂತೆ ಹೂಗುಚ್ಛ ಎಂದದ್ದು ಇದೇ ಕಾರಣಕ್ಕೆ. ಇಲ್ಲಿ ನಿಮಗೆ ಬಗೆ ಬಗೆಯ ವಸ್ತು, ವಿಷಯವುಳ್ಳ ಗಜಲ್ಗಳಿವೆ. ಅಂತಹ ಗಜಲ್ಗಳಲ್ಲಿ ಇದೂ ಕೂಡ ಒಂದು. ಕೇವಲ ಪ್ರೇಮ, ಪ್ರಣಯ, ಕಾಮದ ವಿಷಯಗಳಿಗೆ ಸೀಮಿತರಾಗದೇ ಅವರು ಸಮಾಜದ ಕುರಿತು ಅವರಿಗಿರುವ ತಲ್ಲಣಗಳನ್ನು ಗಜಲ್ಗಳ ಮೂಲಕ ಓದುಗರಿಗೆ
ದಾಟಿಸಲು ಯಶಸ್ವಿಯಾಗಿದ್ದಾರೆ.
ಗಜಲ್
25
ಈ ಪವಿತ್ರ ಮಾಸದಲ್ಲಿ
ಈದ್
ಆಚರಿಸೋಣ
ಬನ್ನಿ
ಮೈ-ಮನದ
ಬೆಳಕಿನಲ್ಲಿ
ಮುಬಾರಕ್
ಹೇಳೋಣ
ಬನ್ನಿ
ಎಂದು
ಡಾ. ಮಲ್ಲಿನಾಥ ತಳವಾರ ಅವರು ರಂಜಾನ್ ಮಾಸ ಆಚರಣೆಯ ಕುರಿತು ತಮಗಿರುವ ನೋಟವನ್ನು ನಮಗೆಲ್ಲ ಹಂಚುತ್ತಾರೆ. ಮಂದಿರದಲ್ಲಿ ನೀರು ಕುಡಿದ ಎಂದು ಬಾಲಕನನ್ನು ಹತ್ಯೆ ಮಾಡುವವರೂ, ಗಡಿ ದಾಟಿ ಬಂದು ಬಾಂಬ್ ಉಡಾಯಿಸಿ ಅಲ್ಲಾಹನಿಗೆ ಪ್ರೀತಿಪಾತ್ರರಾಗಬೇಕೆಂಬ ಧರ್ಮದ ಅಫೀಮನ್ನೂ ಕುಡಿದಿರುವವರ ನಡುವೆ ಧರ್ಮಾತೀತರಾಗಿ ಮಾನವೀಯತೆಯಿಂದ ಬದುಕುವುದೇ ದುಸ್ತರ ಆಗಿರುವಾಗ ಡಾ. ಮಲ್ಲಿನಾಥ ತಳವಾರ ಅವರ ಈ ಗಜಲ್ ಕಗ್ಗತ್ತಲೆಯಲ್ಲಿ
ಮಿಂಚು ಹುಳದಂತೆ ಮಿಣುಕಿ ನಮ್ಮ ಮನಸಿಗೆ ಭರವಸೆಯನ್ನು ಮೂಡಿಸುತ್ತದೆ.
ತಿಂಗಳ ರೋಜಾದಿಂದ
ಹಸಿವಿನ
ಮಹತ್ವ
ಅರಿತಿರುವೆ
ತಹಾರಿ ಇಲ್ಲದಿದ್ದರೇನು
ಸಾದಾ
ಬಿರಿಯಾನಿ
ತಿನ್ನೋಣ
ಬನ್ನಿ
ಎಂದು
ಸರಳವಾಗಿ ರಂಜಾನ್ ಆಚರಿಸುವ ಬಡವರ ಹಬ್ಬವನ್ನು ನಮ್ಮ ಕಣ್ಣಿಗೆ ಕಟ್ಟಿ ಕೊಡುತ್ತಾರೆ. ಹಬ್ಬ, ಮದುವೆ, ಖಾಸಗಿ ಸಮಾರಂಭಗಳಿಗೆ ದುಂದು ವೆಚ್ಚ ಮಾಡುವ ಶ್ರೀಮಂತರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಆದರೆ ಓರ್ವ ಬಡವನ ರಂಜಾನ್ ಹೇಗಿರಬಹುದೆಂಬುದನ್ನು ಡಾ. ಮಲ್ಲಿನಾಥ ತಳವಾರ ಅವರು ಈ ಗಜಲ್ನಲ್ಲಿ
ಚಿತ್ರಿಸಿದ್ದಾರೆ.
ಗಜಲ್
30
ನೋವನು ಬಿಚ್ಚಬೇಡ
ಖರೀದಿಸುವವರೆ
ಯಾರು
ಇಲ್ಲ
ನಗುವನ್ನು ಮುಚ್ಚಬೇಡ
ಇಷ್ಟಪಡದವರು
ಯಾರು
ಇಲ್ಲ
ಎಂದು
ಹೇಳುವ ಡಾ. ಮಲ್ಲಿನಾಥ ತಳವಾರ 'ನೋವನ್ನು ಖಾಸಗಿಯಾಗಿಯೂ ನಗುವನ್ನು ಬಹಿರಂಗವಾಗಿಯೂ ವ್ಯಕ್ತಪಡಿಸಬೇಕು' ಎಂಬ ಲೋಕಾರೂಢಿಯ ಮಾತನ್ನು ಹೇಳುತ್ತಲೇ ಮುಂದುವರೆದು..
ಭಿಕಾರಿಗಳನ್ನು ಛೀ,
ಥೂ
ಎಂದು
ಉಗುಳುವವರೆಲ್ಲೂ
ತಮ್ಮ ಮನದಲ್ಲಿ
ಭಿಕ್ಷೆ
ಬೇಡದವರು
ಯಾರು
ಇಲ್ಲ
ಎಂದು
ಓದುಗನ ಮನಸಿಗೆ ತಿವಿಯುತ್ತಾರೆ. ಮನುಷ್ಯ ಸಮಾಜದ ಹಿಪೋಕ್ರಸಿಯನ್ನು ಎರಡೇ ಸಾಲುಗಳ ಒಂದು ಷೇರ್ದಲ್ಲಿ ಹೇಳುವ ಸಶಕ್ತತೆ ಡಾ. ಮಲ್ಲಿನಾಥ ತಳವಾರ ಅವರ ಈ ಗಜಲ್ಗಿದೆ.
ಗಜಲ್
37
ಮಧುಶಾಲೆಯನ್ನು ಸಾರಾಯಿ
ಅಂಗಡಿಯೆಂದು
ಕರೆಯುತಿರುವಿರಿ
ಮದಿರೆಯನ್ನು ಕೀಳಾಗಿ
ಕಂಡು
ದಾರುವೆಂದು
ಕುಡಿಯುತಿರುವಿರಿ
ಎಂದು
ಮಧುಶಾಲೆ, ಮಧುವಿನ ಬಗ್ಗೆ ಅದರ ಅಪಖ್ಯಾನಗಳನ್ನು ತೆರೆದಿಡುವ ಡಾ. ಮಲ್ಲಿನಾಥ ತಳವಾರ ಮದ್ಯ ಕುಡಿದು ಪಾನಮತ್ತರಾಗುವುದು ಬೇರೆಯೇ, ದಾರುವಲ್ಲದ ಮಧುವನ್ನು ಹೀರಿ ಮತ್ತರಾಗುವುದು ಬೇರೆ ಎಂಬುದನ್ನು ಅರ್ಥವತ್ತಾಗಿ ಹೇಳಿದ್ದಾರೆ. ಅಷ್ಟಕ್ಕೂ ಮಧುಬಟ್ಟಲು ಎಂದರೆ ಸಾರಾಯಿ ತುಂಬಿದ ಗ್ಲಾಸ್ ಅಲ್ಲ. ಮಧುಬಟ್ಟಲು ಎಂದರೆ ಹೃದಯ ಎಂದರ್ಥ ಎಂಬುದನ್ನು ಇಲ್ಲಿ ಡಾ. ಮಲ್ಲಿನಾಥ ತಳವಾರ ಅವರ ಗಜಲ್ಗೆ ಪೂರಕವಾಗಿ ನೆನಪಿಸಬಹುದು.
ಕಲಾ ಲೋಕದ
ಕುಸುಮಗಳಿಗೆ
ದಿಗ್ದರ್ಶನವಾಗಿ
ಬೆನ್ನೆಲುಬು
ಆಗಿತ್ತು
ಸಂಸಾರವನ್ನೇ ಬೀದಿ
ಪಾಲು
ಮಾಡುತ್ತಿದೆಯೆಂದು
ದೂಷಿಸುತ್ತಿರುವಿರಿ
ಎಂದು
ಹೇಳುತ್ತ ಮದ್ಯಪಾನ ನಮ್ಮ ಸಮಾಜದ ಕುಟುಂಬಗಳ ನಾಶಕ್ಕೆ ಕಾರಣವಾಗಿದ್ದನ್ನು ನಿರೂಪಿಸುತ್ತಲೇ ನಿಜವಾಗಿಯೂ ನಾವು ಕುಡಿಯಬೇಕಾದುದು ಏನನ್ನು? ಎಂಬ ಕಿವಿಮಾತನ್ನು ಡಾ. ಮಲ್ಲಿನಾಥ ತಳವಾರ ಅವರು ಈ ಗಜಲ್ನಲ್ಲಿ
ಹೇಳಿದ್ದಾರೆ.
ಗಜಲ್
47
ನಾನು ಹೃದಯಪೂರ್ವಕವಾಗಿ
ಪ್ರೀತಿಸುತ್ತೇನೆ
ಬೇಗಂ
ಸಾಹೇಬ
ಪ್ರತಿ ಕ್ಷಣವೂ
ನಿನ್ನ
ಬಗ್ಗೆಯೇ
ಯೋಚಿಸುತ್ತೇನೆ
ಬೇಗಂ
ಸಾಹೇಬ
ಎಂದು
ಜಗತ್ತಿನ ಎಲ್ಲಾ ಪ್ರೇಮಿಗಳೂ ತಮ್ಮ ಪ್ರೇಯಸಿಯರಿಗೆ ಹೇಳುವ ಮಾತನ್ನೇ ಹೇಳುತ್ತ ಸಾಗುವ ಡಾ. ಮಲ್ಲಿನಾಥ ತಳವಾರ ಅವರು
ಬಯಕೆಗಳ ಗೊಂಚಲು
ಇರಬಹುದು
ನಿನ್ನ
ಎದೆಗೂಡಿನಲ್ಲಿ
ಚೆಲುವೆ
ಮೆರವಣಿಗೆಯಲ್ಲಿ ನಾನು
ನೃತ್ಯ
ಮಾಡುತ್ತೇನೆ
ಬೇಗಂ
ಸಾಹೇಬ
ಎಂದು
ಅತ್ಯಂತ ಮುಗ್ಧವಾಗಿ ಓರ್ವ ಪ್ರೇಮಿಯ ಮಾತುಗಳನ್ನು ಹೂವಿನ ದಂಡೆಯಂತೆ ಕಟ್ಟಿ ಕೊಡುತ್ತಾರೆ ಡಾ. ಮಲ್ಲಿನಾಥ ತಳವಾರ. ಅವರ ಇಂತಹ ಸರಳ ಸಾಲುಗಳೇ ಈ ಗಜಲ್ನುದ್ದಕ್ಕೂ
ಗಜಲ್ಗಳನ್ನು ಓದಿಸಿಕೊಂಡು ಹೋಗುತ್ತವೆ. ಓರ್ವ ಸಾದಾ ಮನುಷ್ಯನ ಭಾವನೆಗಳನ್ನು ತಾಜಾತನದಿಂದ ಎತ್ತಿ ಓದುಗರೆದೆಗೆ ತಲುಪಿಸುವುದು ಒಂದು ಮಾಂತ್ರಿಕತೆಯೇ ಸೈ.
ಗಜಲ್
57
ಮಣ್ಣನ್ನು ಪ್ರೀತಿಸುವ
ಮನುಷ್ಯ
‘ಒಕ್ಕಲುತನ’ವನ್ನು ಪ್ರೀತಿಸಬೇಕಾಗಿದೆ
ಹೆತ್ತವರು ಮಕ್ಕಳಲ್ಲಿ
‘ಅನ್ನದಾತ’ನ ಬಗ್ಗೆ ಅಭಿಮಾನ
ಮೂಡಿಸಬೇಕಾಗಿದೆ
ಎಂದು
ನಮಗೆ ಅನ್ನ ಕೊಡುವ ರೈತ ಸಮುದಾಯವನ್ನು ನೆನೆಯಬೇಕೆಂಬ ಮಾತನ್ನು ಹೇಳುತ್ತಾರೆ. ಮತ್ತು ಇಲ್ಲಿ ಒಕ್ಕಲುತನ ಎಂದರೆ ಒಟ್ಟಾರೆ ಶ್ರಮ ಸಂಸ್ಕೃತಿ ಎಂದೇ ನಾನು ಅರ್ಥೈಸಿಕೊಂಡಿದ್ದೇನೆ, ಮತ್ತು ಅನ್ನದಾತ ಎಂದರೆ ಒಟ್ಟಾರೆಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುವವರೇ ಆಗಿದ್ದಾರೆ.
ಗಜಲ್
88
ಹೋರಾಡುತಿರುವೆನು ನಾನು
ರಣರಂಗದಲ್ಲಲ್ಲ,
ಮನದೊಳಗೆ
ಗಾಲಿಬ್
ಮಡಿಯುತಿರುವೆನು ನಾನು
ಸ್ಮಶಾಸನದಲ್ಲಲ್ಲ,
ಸಮಾಜದೊಳಗೆ
ಗಾಲಿಬ್
ಎಂದು
ತಮ್ಮನ್ನೇ ತಾವು ಆತ್ಮಾವಲೋಕನಕ್ಕೆ ತೆರೆದುಕೊಳ್ಳುವ ಗಜಲ್ಕಾರರು ಅಂತರಂಗ ಶುದ್ಧಿಯ ಮಾತುಗಳನ್ನು ಇಲ್ಲಿ ಪುನರುಚ್ಚರಿಸಿದ್ದಾರೆ.
ದುಷ್ಮನಗಳ ಹುಡುಕಲು
ಸಿಸಿ
ಕ್ಯಾಮೆರಾಗಳು
ಬಿಕರಿಗಿವೆ
ಬಾಜಾರ್ನಲ್ಲಿ
ಹುಡುಕಬೇಕಾಗಿರುವುದು ಹೊರಗಡೆಯಲ್ಲ
ನಮ್ಮ
ಮನಸ್ಸಿನೊಳಗೆ
ಗಾಲಿಬ್
ಎಂದು
ಬುದ್ಧ ಭಗವಾನರು ತೋರಿದ ಆತ್ಮಾವಲೋಕನದ ಮಾತುಗಳೇ ಗಜಲ್ ರೂಪ ತಾಳಿದ್ದಾವೇನೋ? ಎಂಬ ಅನುಮಾನ ಬರುವ ರೀತಿಯಲ್ಲಿ ಬುದ್ಧ ಭಗವಾನರ ಮಧ್ಯಮ ಮಾರ್ಗದ ದರ್ಶನ ಮಾಡಿಸುತ್ತಾರೆ ಡಾ. ಮಲ್ಲಿನಾಥ ತಳವಾರ ಅವರು.
ಗಜಲ್
91
ಗಜಲಿನ ಪ್ರತಿ
ಮಿಸ್ರಾವು
ನಿನಗಾರಿ
ಕಾಯುತಿದೆ
ಸಾಕಿ
ಮತ್ಲಾವು ನಿನ್ನ
ಕಂಗಳ
ಹೊಳಪನ್ನು
ಬಯಸುತಿದೆ
ಸಾಕಿ
ಎಂದು
ಆರಂಭಗೊಳ್ಳುವ ಈ ಗಜಲ್ ಗಜಲ್
ನಿಯಮಗಳು, ಛಂದಸ್ಸಿನ ಹೆಸರುಗಳು, ಷೇರ್ಗಳಿಗಿರುವ ಶಾಸ್ತ್ರೀಯ ಹೆಸರುಗಳನ್ನೇ ಬಳಸಿಕೊಂಡು ಗಜಲ್ ರಚಿಸಿದ್ದಾರೆ. ಈ ಒಂದು ಗಜಲ್
ಡಾ. ಮಲ್ಲಿನಾಥ ತಳವಾರ ಅವರ ಗಜಲ್ ಸಾಹಿತ್ಯದ ಬಗೆಗಿರುವ ಅರಿವಿಗೆ ಹಿಡಿದ ಕನ್ನಡಿ.
ನಾನು
ಇನ್ನೂ ಬಹಳ ಗಜಲ್ಗಳ ಸಾಲುಗಳನ್ನು ನೋಟ್
ಮಾಡಿಟ್ಟುಕೊಂಡಿದ್ದೆ. ಆದರೆ ಈ ಲೇಖನ ತುಂಬ
ಉದ್ದ ಆಗುವ ಆತಂಕ ನನ್ನನ್ನು ಕಾಡಲು ಶುರು ಮಾಡಿರುವುದರಿಂದ ಇಲ್ಲಿಗೆ ಸಮಾಪ್ತಿಗೊಳಿಸುವ ಯತ್ನ ಮಾಡುತಿದ್ದೇನೆ.
ಗಜಲ್
ಬರವಣಿಗೆ ಒಂದು ಸಿದ್ಧಿ, ಇಂದಿನ ದಿನಗಳಲ್ಲಿ ನನ್ನನ್ನೂ ಸೇರಿ ಬಹಳ ಜನ ಗಜಲ್ ರಚನೆಯಲ್ಲಿ
ತೊಡಗಿದ್ದಾರೆ. ಆದರೆ ಅವಸರ ನಿಯಮಬಾಹಿರ ರಚನೆಗಳಿಗೆ ಪ್ರಚೋದನೆ ನೀಡುತ್ತಿದೆ. ಹಾಗಾಗಬಾರದು. 'ಹತ್ತು ಬರೆಯುವ ಬದಲು ಒಂದು ಮುತ್ತು ಬರೆಯಬೇಕು' ಎಂಬ ಹಿರಿಯರ ಮಾತಿನಂತೆ ನಿಯಮಬದ್ಧವಾಗಿ ಗಜಲ್ ರಚನೆಯಲ್ಲಿ ನಾವು ತೊಡಗಿಕೊಳ್ಳಬೇಕಿದೆ. ಹಾಗೆ ನೋಡಿದರೆ ಗಜಲ್ ಹೇಗಿರಬೇಕೆಂದರೆ ಡಾ. ಮಲ್ಲಿನಾಥ ತಳವಾರ ಅವರ ಗಜಲ್ಗಳಿಗೆ ಸ್ಪರ್ಧೆ ಒಡ್ಡುವಂತಿರಬೇಕೆಂದು ಕ್ರೀಡಾ ಮನೋಭಾವ ಉದ್ದೀಪಿಸುವ ಮಾತು ಹೇಳುತ್ತ ನನ್ನ ಮಾತುಗಳನು ಮುಗಿಸುತ್ತೇನೆ. ಡಾ. ಮಲ್ಲಿನಾಥ ತಳವಾರ ಅವರು ಇನ್ನಷ್ಟು ಇಂತಹ ಗುಲ್ದಸ್ಥ, ಗುಲ್ಜಾರ್ಗಳನ್ನು ಕನ್ನಡ ಗಜಲ್ ಲೋಕಕ್ಕೆ ನೀಡಲಿ ಎಂದು ಹಾರೈಸುತ್ತ, ಸಾರಸ್ವತ ಲೋಕ ಮತ್ತು ಒಟ್ಟಾರೆ ಸಮಾಜ ಡಾ. ಮಲ್ಲಿನಾಥ ತಳವಾರ ಅಂತಹವರನ್ನು ಗುರುತಿಸುವ ಕೆಲಸ ಆಗಲಿ ಎಂದು ಹೇಳುತ್ತ… ಗಾಲಿಬ್ ಸ್ಮೃತಿ–ಗುಲ್ದಸ್ಥ ಪ್ರಕಟಿಸಿದ ಗದಗನ ಚಿರುಶ್ರೀ ಪ್ರಕಾಶನದವರಿಗೆ ಅಭಿನಂದಿಸುತ್ತ...
ನಮಸ್ಕಾರಗಳು.
ಇಮಾಮ್
ಗೋಡೆಕಾರ
ಕಾರ್ಯನಿರ್ವಾಹಕ
ಸಂಪಾದಕ
ಗಣಿನಾಡು
ಸಂಜೆ ಪತ್ರಿಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ