ಕನ್ನಡ ಚಿತ್ರರಂಗದಲ್ಲಿ ತಮ್ಮ ಬಿಗ್ ಬಜೆಟ್ ಸಿನಿಮಾಗಳಿಂದ ಖ್ಯಾತರಾಗಿದ್ದ ನಿರ್ಮಾಪಕರೊಬ್ಬರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಅವರೇ ರಾಮು. ಖ್ಯಾತ ನಟಿ ಮಾಲಾಶ್ರೀ ಅವರ ಪತಿ. ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆಯೇ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 52 ವರ್ಷದ ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಕೋಟಿ ರಾಮು ಎಂದೇ ಖ್ಯಾತರಾಗಿದ್ದ ನಿರ್ಮಾಪಕ ರಾಮು ಅವರು ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲಿ ಒಬ್ಬರು. ಕುಣಿಗಲ್ ಮೂಲದ ರಾಮು, ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ “ಚೈತ್ರದ ಪ್ರೇಮಾಂಜಲಿ” ಚಿತ್ರದ ಹಂಚಿಕೆಯಿಂದ ಪ್ರವರ್ಧಮಾನಕ್ಕೆ ಬಂದ ರಾಮು, “ಅಧಿಪತಿ” ಚಿತ್ರದಿಂದ ನಿರ್ಮಾಪಕರಾಗುತ್ತಾರೆ. ಅವರಿಗೆ ನಿರ್ಮಾಪಕನಾಗಿ ಒಂದು ಒಳ್ಳೆಯ ಬುನಾದಿ ಸಿಕ್ಕದ್ದು ಲಾಕಪ್ ಡೆತ್ ಚಿತ್ರದಿಂದ. ಇಡೀ ದಕ್ಷಿಣ ಭಾರತವೇ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದು ತಪ್ಪಲ್ಲ. ಇದರಲ್ಲಿ ನಿರ್ದೇಶಕ ಓಂಪ್ರಕಾಶರಾವ್ ಹಾಗೂ ರಾಮು ಅವರಿಗೆ ಸಮಾನ ಗೌರವ ನೀಡಬೇಕು. ಥ್ರಿಲ್ಲರ್ ಮಂಜು ಎಂಬ ಪ್ರತಿಭಾವಂತ ಸಾಹಸ ನಿರ್ದೇಶಕನ ಎಲ್ಲ ಕನಸುಗಳನ್ನು ಸಾಕಾರಗೊಳಿಸುವಲ್ಲಿಯೂ ಈ ಚಿತ್ರ ಪ್ರಮುಖವಾಯಿತು. ದೊಡ್ಡ ಯಶಸ್ಸಿನ ಈ ಚಿತ್ರ ರಾಮು ಅವರಿಗೆ ಹುರುಪು ನೀಡಿತು.
ನಂತರ ಬಂದ ಸಿಂಹದಮರಿ, ಭಾವ ಭಾಮೈದ, ಮಲ್ಲ, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ ಬೇಡಿ, ಲಾ ಅಂಡ್ ಆರ್ಡರ್, ಏ.ಕೆ.47, ರಾಕ್ಷಸ, ಶಿವಾಜಿನಗರ, ಮುತ್ತಿನಂಥ ಹೆಂಡತಿ ಹಲೋ ಸಿಸ್ಟರ್, ಗೂಳಿ, ಹಾಲಿವುಡ್ ಮುಂತಾದ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅದ್ದೂರಿತನಕ್ಕೆ ಭದ್ರ ಬುನಾದಿ ಹಾಕುವಲ್ಲಿ ರಾಮು ಪ್ರಮುಖ ಪಾತ್ರವಹಿಸು ಮೂಲಕ “ಕೋಟಿ” ರಾಮು ಅಗಿ ಹೆಸರಾದವರು. ಕೋಟಿ ಕನ್ನಡಿಗರ ಮನಸಲ್ಲಿ ಆ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರಿಗೆ ಎಲ್ಲಾ ಚಿತ್ರಸಿಕರ ಪರವಾಗಿ ಭಾವಪೂರ್ಣ ಶೃದ್ಧಾಂಜಲಿಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ