ನಮ್ಮ ಬಿಸಿಲು ನಗರಿ, ಸನ್ ಸಿಟಿ ಕಲಬುರಗಿಯಲ್ಲಿ ಕಸಕ್ಕಿಲ್ಲ ಕಿಂಚಿತ್ತು ಕಿಮ್ಮತ್ತು. ಇನ್ನು ಕಸಕ್ಕಾಗಿಯೇ ಇರುವ ಕಸ ಹೋರುವುದೇ ಕಾಯಕ ಮಾಡಿಕೊಂಡಿರುವ ಕಸದ ತೋಟ್ಟಿಗಂತೂ ಕೇಳುವವರೇ ದಿಕ್ಕಿಲ್ಲ.
ಹೌದು ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲೆಂದು ಇಟ್ಟಿರುವ ಕಸದ ತೊಟ್ಟಿಗಳು ಕೇವಲ ನಾಮ್ ಕೆ ವಾಸ್ತೆ ಇಟ್ಟಂತಾಗಿದೆ. ಯಾಕಂದ್ರೆ ಆ ಕಸದ ತೊಟ್ಟಿಗಳಲ್ಲಿ ಕೆಲವು ತೊಟ್ಟಿಗಳು ಅನಾಥವಾಗಿ ಉಳಿದಿವೆ. ಕಸವೇ ಇಲ್ಲದೇ ಬಿಕೋ ಎನ್ನುತ್ತಿವೆ. ಕಸದ ಆಗಮನವಿಲ್ಲದೇ ಕಸದ ತೊಟ್ಟಿಗಳು ಅಕ್ಷರಶಃ ಖಾಲಿ ಖಾಲಿ ನಿಂತಿವೆ. ಇನ್ನು ಕೆಲವು ಕಡೆ ಎಂಥಾ ವಿಪರ್ಯಾಸ ಎಂದರೆ ಕಸದ ತೊಟ್ಟಿಗಾಗಿರುವ ಫ್ರೇಮಿನಲ್ಲಿ ತೊಟ್ಟಿಗಳೇ ಮಾಯವಾಗಿವೆ.
ಇನ್ನು ಕೆಲವು ಕಡೆ ಒಣ ಕಸದ ತೊಟ್ಟಿ ಕಸವಿಲ್ಲದೇ ಭಣ ಭಣ ಎನ್ನುತ್ತಿವೆ. ಹಸಿ ಕಸದ ತೊಟ್ಟಿ ಹಸಿ ಕಸವಿಲ್ಲದೆ ಕಸಿವಿಸಿ ಪಡುತ್ತಿದೆ. ಹಾಗಂತ ಕಸವೇ ಇಲ್ಲ ಅಂತ ತಿಳಿಬಿಡಿ. ಕಸದ ತೊಟ್ಟಿ ಬಿಟ್ಟು ಬೆರೆ ಕಡೆಯೆಲ್ಲ ಕಸ ಸಾಕಷ್ಟಿದೆ.
ಮತ್ತೊಂದೆಡೆ ಒಣ ಕಸದ ಡೆಬ್ಬಿ ಬಾಗಿ ಬಾಗಿ ಹೇಳುತ್ತಿದೆ “ನೋಡಿ ನನ್ನೊಳಗೆ ಹಾಕಿರುವ ಒಣ ಕಸ ಒಣಗಿ ಒಣಗಿ ಎಷ್ಟು ದಿನಗಳಾಗಿವೆ” ಎಂದು. ಹಾಗಂತ ಹಸಿ ಕಸದ ತೊಟ್ಟಿ ಸುಮ್ಮನಿದೆ ಅಂದ್ರೆ ಅದರಿಂದ ಕಸ ಸರಬರಾಜು ಮಾಡಿದ್ದಾರೆ ಎಂದು ಭಾವಿಸಿ ಮೋಸ ಹೋಗಬೇಡಿ. ಅದರಲ್ಲಿನ ಹಸಿ ಕಸ ಎಂದೋ ಒಣಗಿ ತಗಡಾಗಿದೆ. ಇದರ ಆಧಾರದ ಮೇಲೆ ಕಸದ ಹುಟ್ಟು ಅದು ಇದ್ದ ಕಾಲ, ಬಾಳಿ ಬದುಕಿದ್ದ ರೀತಿ, ಸುತ್ತಮುತ್ತಲಿನ ಪರಿಸರದ ಮೇಲೆ ಬೀರಿದ ಪ್ರಭಾವ... ಹೀಗೆ ಎಲ್ಲವನ್ನು ಊಹೆ ಮಾಡಬಹುದು.
ಇನ್ನೊಂದೆಡೆ ಎರಡೂ ಬಗೆಯ ಕಸದ ತೊಟ್ಟಿಗಳು ಯಾವ ರೀತಿ ಕಸವನ್ನು ಹೊತ್ತು ನಿಂತಿವೆ ಎಂದರೆ ಗತ ಕಾಲದ ಕಸದ ಸಂಪೂರ್ಣ ಇತಿಹಾಸವನ್ನೆ ಬಿಚ್ಚಿ ಹೇಳುವ ತೆರದಿ.
ಈ ಕಸದ ತೊಟ್ಟಿಗಳ ಸ್ಥಿತಿ ಎಂಥಾ ಹೀನಾಯ ಮತ್ತು ಶೋಚನೀಯವಾಗಿದೆ ಎಂದರೆ ಅದನ್ನು ನೋಡಲಾಗದೇ ಮಾರ್ಗ ತೋರಿಸುವ ಬೋರ್ಡ್ ತಿರಾ ಮನಸ್ಸಿಗೆ ಘಾಸಿ ಮಾಡಿಕೊಂಡು ಬೆಂದು ಬೆಂಡಾಗಿ ಪಾರ್ಶ್ವವಾಯು ಹೊಡೆದುಕೊಂಡು ನೆಲಕ್ಕುರುಳಿ ಬಿದ್ದುಕೊಂಡಿದೆ.
ಎಂಥಾ ದುರ್ದೈವದ ಸಂಗತಿ ಎಂದರೇ ಆ ಬೋರ್ಡಿನ ಕರುಣಾಜನಕ ಸ್ಥಿತಿ ನೋಡುವವರು ಯಾರು ಇಲ್ಲ. ಇದು ಎಂಥಾ ವಿಪರ್ಯಾಸ ನೋಡಿ. ಕಸದ ತೊಟ್ಟಿಗಳನ್ನು ಈ ಸ್ಥಳಗಳಲ್ಲಿ ಸ್ಥಾಪಿಸಿದ್ದೇವೆ ಎಂಬ ನೆನಪು ಬಹುಶಃ ಪಾಲಿಕೆ ಎಂದೋ ಮರೆತು ಬಹಳ ಕಾಲವೇ ಗತಿಸಿದೆ. ಆ ನೆನಪು ತರಿಸುವ ಅಗತ್ಯವಿದೆ.ಕಲಬುರಗಿ ಮಹಾನಗರ ಪಾಲಿಕೆ ತಾನಾಗೇ ಯಾವಾಗ ಇತ್ತ ಕಡೆ ಗಮನ ಹರಿಸುತ್ತೋ ಕಾದು ನೋಡಬೇಕಷ್ಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ