ಡಿಸೆಂಬರ್ 03, 2020

ಪಂಡಿತ್ ಎಂ.ವೆಂಕಟೇಶ್ ಕುಮಾರ್ ತೊರೆದು ಜೀವಿಸಬಹುದೆ

 


ಕನಕದಾಸರು ಬರೆದ ಅದ್ಭುತ ಕೀರ್ತನೆಗಳಲ್ಲಿ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ” ಕೀರ್ತನೆಯೂ ಒಂದು. ಇದನ್ನು ತಮ್ಮ ಅತ್ಯದ್ಭುತ ಗಾಯನದ ಮೂಲಕ ಜಗತ್ತಿನುದ್ದಗಲಕ್ಕೂ ಪಸರಿಸಿದ ಕೀರ್ತಿ ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರಿಗೆ ಸಲ್ಲುತ್ತದೆ. 

ವೆಂಕಟೇಶ್ ಕುಮಾರ್ ಅವರು ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರು. ಜಾನಪದ ಕಲಾವಿದರಾಗಿದ್ದ ಇವರ ತಂದೆಯೇ ಇವರ ಪ್ರಥಮ ಗುರು. ಇವರ ಗಾಯನದ ಮೇಲೆ ಇವರ ತಂದೆಯ ಶೈಲಿಯ ಛಾಪಿದೆ ಎಂದು ಹೇಳುತ್ತಾರೆ.

ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿದ ಗದಗದ ವಿರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಇವರಿಗೆ ಗ್ವಾಲಿಯರ್ ಘರಾಣೆಯ ಎಲ್ಲ ಹೊಳವುಗಳನ್ನು ತಿಳಿಸಿ, ಅರೆಸಿ ಕುಡಿಸಿದರು. ಗವಾಯಿಗಳ ಆಶೀರ್ವಾದದೊಂದಿಗೆ ಮುಂದೆ ಕನ್ನಡ ನಾಡು ಎಂದೂ ಮರೆಯದ ಗಾಯಕರಾಗಿ ರೂಪುಗೊಳ್ಳುತ್ತಾರೆ.

ಧಾರವಾಡ ನಿವಾಸಿಯಾಗಿರುವ ವೆಂಕಟೇಶ್ ಕುಮಾರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಆಕಾಶವಾಣಿಯ ಏ ಶ್ರೇಣಿಯ ಕಲಾವಿದರಾಗಿ ಸೇವೆ ಸಲ್ಲಿಸಿ ಅಲ್ಲಿಂದ ಅದೇಷ್ಟೋ ಕಿವಿಗಳಿಗೆ ಇಂಪನ್ನು ಹರಿಸಿದ್ದಾರೆ.

ವೆಂಕಟೇಶ್ ಕುಮಾರ್ ಅವರ ಗಾಯನದಲ್ಲಿ ಧಾರವಾಡದ ಮಣ್ಣಿನ ಸೊಗಡು ಮತ್ತು ಕೆಲವು ಸಾರಿ ಪಂಡಿತ್ ರಾಜಗುರುರವರ ಗಾಯನದ ಛಾಪು ಕಾಣುತ್ತವೆ. ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರ ಸಾಲಿನ ಇತ್ತೀಚಿನ ಗಾಯಕರಲ್ಲಿ ಇವರು ಮಂಚೂಣಿಯಲ್ಲಿದಾರೆಂದರೆ ಅತಿಶಯೋಕ್ತಿಯಾಗಲಾರದು. ಇವರು ದೇಶದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೨೦೧೬ರ ಎಪ್ರಿಲ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟೇಶ್ ಕುಮಾರ್ ಅವರು ಕನಕದಾಸರ ಈ ಕೀರ್ತನೆಯನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ಆ ಅಮೋಘ ಗೀತ ಗಾಯನ ಕೇಳಿ ನೀವೂ ಮೈಮರೆಯಿರಿ….


ನವೆಂಬರ್ 30, 2020

003: ಗಜಲ್

 ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನು

ನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು 


ಕಡು ಬಿಸಿಲಿನ ಬೆವರಿನಲ್ಲಿಯೇ ನನ್ನ ಪ್ರಯಾಣ ಸಾಗುತಿತ್ತು 

ಆ ನನ್ನ ದಾರಿಯಲ್ಲಿ ಒದ್ದೆ ಮೋಡವಾಗಿ ಬಂದವಳು ನೀನು


ನಾನು ಪ್ರೇಮದ ಅನುಪಮ ಅನುಭೂತಿಯನ್ನೇ ಮರೆತಿದ್ದೆ

ಕಳೆದು ಹೋದ ದಿನಗಳಿಗೆ ಹೊಸ್ತಿಲಾಗಿ ಬಂದವಳು ನೀನು


ಮನದ ಛಾವಣಿಯು ವಿರಹದ ಮಳೆಯಿಂದ ಹಸಿಯಾಗಿದೆ 

ಆ ತಂಪಾದ ರಾತ್ರಿಗಳಲ್ಲಿ ಕಂಬಳಿಯಾಗಿ ಬಂದವಳು ನೀನು


ನಾನು ಮರುಭೂಮಿಯಲ್ಲಿ ಏಕಾಂಗಿಯಾಗಿ ಅಲೆದಾಡುತ್ತಿದ್ದೆ 

ಮನ ತಣಿಸುವ ಸಿಹಿ ನೀರಿನ ಮಡಕೆಯಾಗಿ ಬಂದವಳು ನೀನು


ಸಮಸ್ಯೆಗಳ ಮಾಯಾ ಜಾಲದಲ್ಲಿ ಕಳೆದು ಹೋಗಿದ್ದೆ ನಾನು 

ನನ್ನ ಎಲ್ಲ ಗೊಂದಲಗಳಿಗೆ ಪರಿಹಾರವಾಗಿ ಬಂದವಳು ನೀನು


ಮನದರಸಿಯ ಚಿತ್ರವನ್ನು ಮನಸಾರೆ ಬಿಡಿಸುತ್ತಿದ್ದನು 'ಮಲ್ಲಿ'

ಆ ಕಲಾಕೃತಿಗೆ ನೀರೆರೆದು ಜೀವ ತುಂಬಲು ಬಂದವಳು ನೀನು 



-✍️ರತ್ನರಾಯಮಲ್ಲ

9986353288

ನವೆಂಬರ್ 15, 2020

002: ಗಜಲ್

ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ 

ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್


ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿ 

ಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ 


ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆ 

ಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ 


ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆ 

ಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ 


'ಮಲ್ಲಿ' ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದು 

ಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್..



-✍️ರತ್ನರಾಯಮಲ್ಲ

99863 53288

ನವೆಂಬರ್ 13, 2020

ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ


        ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ... ಮುಂಚೂಣಿಯಲ್ಲಿವೆ. 

        ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ... ..ಎಂತಲೂ ಕರೆಯಲಾಗುತ್ತಿದೆ. ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು 'ತಂಕಾ' ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ...!! 

        'ಚಕಾ' ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ 'ತಂಕಾ' ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ಮಸೋಕಾ ಶಿಕಿ ಅವರು ಹೇಳುತ್ತಾರೆ. ಇದು ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿದ್ದು, ಮುರಿಯದ ಒಂದೇ ಸಾಲಿನಲ್ಲಿ ಬರೆಯಲಾಗುತಿತ್ತು. ಮುಂದೆ ಇಂಗ್ಲೀಷ್ ಭಾಷಾಂತರಗಳಲ್ಲಿ ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು.. 

        ಅಕಿ-ಸುಕೆ ಯವರ ಪ್ರಸಿದ್ಧ ತಂಕಾ ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತದೆ. 

        "ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು" 

        ಕ್ರಿ.ಶ.670 ಮತ್ತು ಕ್ರಿ. ಶ.1235 ರ ಮಧ್ಯದ 565 ವರ್ಷಗಳಲ್ಲಿಯ ಅನುಪಮ ಕವನಗಳನ್ನು ಆಯ್ದು ಕ್ರಿ.ಶ. 1235 ರಲ್ಲಿ ನೂರು ಜನರ, ನೂರು ಕವನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸದೈಯೋ ರುಜಿವಾರ ರವರ ಅಮೋಘ ಸಾಧನೆಯೆಂಬುದು ತಿಳಿದು ಬರುತ್ತದೆ. ಇದನ್ನೇ ಮುಂದೆ ವಿಲಿಯಂ ಪೋರ್ಟರ್ ರವರು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ.  ಈ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತಿವೆ..! 

        ಪ್ರಣಯದ ಆರಂಭದಲ್ಲಿ ಈ ತಂಕಾಗಳು ಕೋಮಲವಾಗಿರುತ್ತವೆ. ಇಬ್ಬರು ಪ್ರೇಮಿಗಳು ಒಟ್ಟಿಗೆ ಇರಲು ರಾತ್ರಿಯಲ್ಲಿ ನುಸುಳುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಪರಸ್ಪರ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಈ ತಂಕಾಗಳನ್ನು ಬಳಸುತಿದ್ದರು. 


        ಜಪಾನಿನ ಸಂಸ್ಕೃತಿಯಲ್ಲಿ ತಂಕಾ ಪ್ರಮುಖ ಸಾಹಿತ್ಯ ರೂಪವಾಗಿದೆ. ಈ ತಂಕಾಗಳು ಭಾವನಾತ್ಮಕವಾಗಿ ಓದುಗನ ಕಲ್ಪನೆಗೆ ಗರಿ ಕಟ್ಟುವಂತೆ ಇರುತ್ತವೆ. ಪ್ರಾಸ, ಲಯ ಇಲ್ಲಿ ಇರುವುದಿಲ್ಲವಾದರೂ ಶ್ಲೇಷೆ ಇರುತ್ತದೆ. ಪದಗಳ ಪರ್ಯಾಯ ಅರ್ಥಗಳೊಂದಿಗಿನ ಆಟಗಳು ಇಲ್ಲಿ ಇರುತ್ತವೆ. ಇದರಲ್ಲಿ ಚೀನಿ ಪದಗಳ ಪ್ರಭಾವವಿಲ್ಲ, ಅಪ್ಪಟ ಜಪಾನಿನ ಭಾಷೆಯ ಬಳಕೆಯಾಗಿದೆ. ಜನಜೀವನದ ಸಣ್ಣಪುಟ್ಟ ದೃಶ್ಯಗಳು ತಂಕಾಗಳಾಗಿವೆ. ಇಲ್ಲಿ ರಕ್ತಪಾತ, ಅಂಧಕಾರ, ಅಪರಾಧ, ಭೂಗತ ಜಗತ್ತು, ಮೋಸ, ಕಪಟತನ, ಅತಿರೇಕದ ಭಾವ, ವಿಜೃಂಭಣೆ... ಯಾವುದು ಇರುವುದಿಲ್ಲ. ಹೃದಯಕ್ಕೆ ಮುದ ನೀಡುವಂತಿರುತ್ತವೆ. ಕವಿತೆಯ ಶಕ್ತಿ ಇರುವುದು ಕಾವ್ಯದ ನಿರ್ವಾತದಲ್ಲಿ. ಶೂನ್ಯದಿಂದ ಸಂಪಾದನೆಯೆಡೆಗೆ ಸಾಗುತ್ತಿರುತ್ತದೆ. ಇಬ್ಬರು ವ್ಯಕ್ತಿಗಳ ಅಥವಾ ಎರಡು ಚಿತ್ರಗಳು ಒಂದಕ್ಕೊಂದು ಭೇಟಿಯಾದಾಗ ಮೂಡುವ ಒಂದು ಕ್ಷಣದ ಭಾವವೇ 'ತಂಕಾ' ಕ್ಕೆ ಜನ್ಮ ನೀಡುತ್ತದೆ. ಮೌನದ ಘಳಿಗೆಯಲ್ಲಿ ಉದಯಿಸಿದ ಕವಿತೆಯೊಂದು ಹೀಗಿದೆ. 

         "ಎರಡು ಎ.ಎಂ  

ನಾನು ನನ್ನ ಮಲಗುವ ಕೋಣೆ ಬಾಗಿಲು ತೆರೆದಿದ್ದೇನೆ 

ಬಿಳಿ ಬೆಕ್ಕು ಓಡಿ ಹೋಯಿತು 

ಕ್ಲಾಂಗಿಂಗ್ ಪತನದಿಂದ ಬೆಚ್ಚಿ ಬಿದ್ದಿದೆ  

ಸತ್ಕಾರದ ಜಾರ್ನ್ ಲೋಹದ ಮುಚ್ಚಳದಲ್ಲಿ" 

         ಇದು ತುಂಬಾ ಪ್ರಮುಖವಾದ ತಂಕಾ. ಇದರಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಇಲ್ಲಿಯ ಮೂರನೆ ಸಾಲನ್ನು "ಪಿವೋಟ್" ಎನ್ನುವರು. ಅಂದರೆ ಮಹತ್ವದ ತಿರುವು ಎಂದಾಗುತ್ತದೆ. ಇದು "ತಂಕಾ" ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸುತ್ತದೆ. ಈ ತಂಕಾದಲ್ಲಿ 'ಬಿಳಿ ಬೆಕ್ಕು ಓಡಿ ಹೋಯಿತು' ಎಂಬ ಮೂರನೆಯ ಸಾಲು ತಂಕಾವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುತ್ತದೆ..! 

        ಇಷ್ಟೆಲ್ಲ ಗಮನಿಸಿದಾಗ ನಮಗೆ ಒಂದು ಅಂಶ ತುಂಬಾ ಕಾಡುತ್ತದೆ. 'ಈ  ತಂಕಾ ಎಂಬ ಜಪಾನಿನ ಕಾವ್ಯ ಪ್ರಕಾರ ನಮಗೆ ಇಷ್ಟವಾಗುತ್ತಿರುವುದು ಯಾಕೆ' ಎಂಬ ಪ್ರಶ್ನೆ. ಅದಕ್ಕೆ ನಾವು ಹಲವು ಕಾರಣಗಳನ್ನು ಹುಡುಕಬಹುದು. ನಮ್ಮ ಗೌತಮ ಬುದ್ಧ ಅವರನ್ನು ಜಪಾನಿನ ಜನರು ಸ್ವೀಕರಿಸಿದ್ದು, ಭಾರತೀಯರಂತೆ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ನಮ್ಮಂತೆಯೇ ಅವರೂ ಕೂಡ ಸಂಪ್ರದಾಯಿಕ ಮನಸ್ಥಿತಿ ಹೊಂದಿರುವುದು... ಇವೆಲ್ಲ ಕಾರಣಗಳು ಆಗಿರಬಹುದು...!! 

        ಇಲ್ಲಿಯವರೆಗೆ ನಾವು ಜಪಾನಿನ ತಂಕಾಗಳ ಬಗ್ಗೆ ಮಾಹಿತಿ ಹಂಚಿಕೊಂಡೆವು. ಇನ್ನೂ ಕನ್ನಡದ ಕೆಲವು ತಂಕಾಗಳನ್ನು ಅಧ್ಯಯನಕ್ಕಾಗಿ ಗಮನಿಸಬಹುದು. 

*******


ಸ್ಮಶಾನದಲ್ಲಿ  

ಪಿಂಡ ತಿನ್ನೋರ ನೋಡಿ  

ಗೋರಿಯಲ್ಲಿಯ  

ಶವ ವೇದನೆಯಲ್ಲಿ  

ಕಿಲ ಕಿಲ ನಗ್ತಿತ್ತು .. 


ಸಾವಿಗೆ ಎಲ್ಲಿ  

ಮಾನದಂಡ, ಜೀವಕ್ಕೆ  

ಎಲ್ಲಿದೆ ನ್ಯಾಯ;  

ಬಾಳ ತಕ್ಕಡಿಯಲ್ಲಿ 

ಎಲ್ಲವೂ ಅಯೋಮಯ..! 


ಬುದ್ಧಿವಂತರು  

ಸಾಕಷ್ಟು ಇರುವರು  

ಸಮಾಜದಲ್ಲಿ ;  

ಹೃದಯವಂತರಿಗೆ 

ಹುಡುಕುತಿದೆ ಇಂದು  


ಬಿಡುವು ಇಲ್ಲ  

ಎನ್ನುವ ವ್ಯಕ್ತಿಗಳ 

ಸ್ವತ್ತಲ್ಲ ಕಾಲ  

ಪಾದರಸದಂತದ್ದು 

ಚಲನೆಗೆ ಸ್ವಂತದ್ದು  


ನಂಬಿಕೆ ಜೀವ 

ತೆಗೆಯುವ ಸಾಧನ 

ಆಗಬಾರದು 

ಬಾಳು ಮುನ್ನಡೆಸುವ 

ದಾರಿದೀಪ ಆಗಲಿ  


ಗೌರವಿಸುವ 

ಕಲೆ ಹೃದಯದಲ್ಲಿ   

ಮೂಡಿರುತ್ತದೆ; 

ಪಡೆದವರಿಗಿಂತ  

ಕೊಟ್ಟವರು ತೃಪ್ತರು.. 


ಕತ್ತಲೆಂದಿಗೂ  

ಅಮಂಗಳವಲ್ಲಯ್ಯ  

ನಮ್ಮ ಬಾಳಿಗೆ  

ಅದುವೇ ದೀಪವಾಗಿ  

ಮುನ್ನಡೆಸುವುದಯ್ಯ  


ಮಹಾಭಾರತ  

ಓದಿ ನೋಡಿ, ಬದುಕಿನ  

ಏರಿಳಿತವು  

ಹೃದಯದಿ ಇಳಿದು  


ದಾರಿ ತೋರಿಸುತ್ತದೆ.. 


✍️ ಡಾ. ಮಲ್ಲಿನಾಥ ಶಿ. ತಳವಾರ 

ಕನ್ನಡ ಪ್ರಾಧ್ಯಾಪಕರು, 

ನೂತನ ಪದವಿ ಮಹಾವಿದ್ಯಾಲಯ, 

ಕಲಬುರಗಿ 585 103 

ಮೋಬೈಲ್ ಸಂಖ್ಯೆ-9986353288



ನವೆಂಬರ್ 06, 2020

001: ಗಜಲ್

ಸಾತ್ವಿಕತೆ ಏಕೆ ಗೆಲುವಿನ ಹೊಸ್ತಿಲಲ್ಲಿ ಎಡವುತಿದೆ 

ತಾಮಸವೇಕೆ ಸಂಭ್ರಮದ ಮಧ್ಯೆ ಹೊಳೆಯುತಿದೆ 


ಬುದ್ಧಿಯ ಫಸಲು ಕುಟೀಲತೆಯಲ್ಲಿ ಬೆಳೆಯುತಿದೆ 

ಮುಗ್ಧತೆಯು ಏಕೆ ಪದೇ ಪದೇ ಮೋಸ ಹೋಗುತಿದೆ 


ಒಳ್ಳೆಯವರ ಬಲಿ ಇಲ್ಲಿ ಪುನರಾವರ್ತನೆ ಆಗುತಿದೆ  

ಕಂಬನಿಯ ಉಪ್ಪು ಅಡುಗೇಕೆ ಬಳಕೆಯಾಗುತಿದೆ 


ಸತ್ಯ ಗೆಲ್ಲುತ್ತದೆ ಎನ್ನುತ ಸುಳ್ಳನ್ನೇ ಪ್ರೀತಿಸುತಿರುವರು 

ಜೀವನಶ್ರದ್ಧೆಯು ಏಕೆ ಮಸಣದ ಹಾದಿ ಹಿಡಿಯುತಿದೆ 


ಕಾಲವು ಕಾಲುಗಳಿಗೆ ಬೇಡಿ ಹಾಕಿ ನಿಲ್ಲಿಸುತಿದೆ 'ಮಲ್ಲಿ' 

ಜೀವನವೇಕೆ ಕನ್ನಡಿಯೊಳಗಿನ ಗಂಟಾಗಿ ಕಾಡುತಿದೆ 


-✍️ರತ್ನರಾಯಮಲ್ಲ

ನವೆಂಬರ್ 05, 2020

ಮಲ್ಲಿ: ಗಜಲ್ ಗಲ್ಲಿಯಲ್ಲಿ


ನನ್ನೆಲ್ಲ ಓದುಗ ಬಳಗಕ್ಕೆ ಒಂದು ಖುಷಿಯ ಸುದ್ದಿಯನ್ನು ನೀಡಲು ಬಯಸುತ್ತೇನೆ. ಕಲಬುರಗಿಯ ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿನಾಥ ಶಿ. ತಳವಾರ ಅವರು ಇಲ್ಲಿ ಪ್ರತಿ ವಾರ "ಮಲ್ಲಿ: ಗಜಲ್ ಗಲ್ಲಿಯಲ್ಲಿ" ಅಂಕಣದಲ್ಲಿ ವಾರಕ್ಕೊಂದು ಗಜಲ್ ಬರೆಯಲಿದ್ದಾರೆ.

ಡಾ. ಮಲ್ಲಿನಾಥ ಶಿ. ತಳವಾರ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರು. ಕವನ, ಕಥಾಸಂಕಲನ, ಸಂಶೋಧನಾ ಮಹಾಪ್ರಬಂಧ, ವ್ಯಕ್ತಿ ಹೊಸ ಪರಿಚಯ, ಹೀಗೆ ಹಲವು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಕಥೆ, ಕವನಗಳು, ಗಜಲ್ ಗಳು ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗಿವೆ. ತಾಲ್ಲೂಕು, ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗಳಲ್ಲಿ ಕವನ ವಾಚಿಸಿದ್ದಾರೆ. ಪ್ರಸ್ತುತವಾಗಿ ಚಿತ್ತಾಪುರ ತಾಲೂಕಿನ ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತಿದ್ದಾರೆ.

ಈಗ ಡಾ. ಮಲ್ಲಿನಾಥ ಶಿ. ತಳವಾರ ಅವರು ತಮ್ಮ ಈ ಅಂಕಣದಿಂದ ನಮ್ಮೆಲ್ಲರಿಗೆ ಗಜಲ್ ಸಾಹಿತ್ಯದ ರಸದೌತಣವನ್ನು ಉಣಬಡಿಸಲಿದ್ದಾರೆ. ಕನ್ನಡ ವಾಙ್ಮಯ ಪ್ರಪಂಚದಲ್ಲಿ ಒಣ ಕೆರೆಯಾಗಿದ್ದ ಗಜಲ್ ಪ್ರಕಾರವನ್ನು ಝರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಉರ್ದು ಸೊಗಡನ್ನು ಅತ್ಯಂತ ನಾಜೂಕಾಗಿ ಕನ್ನಡದ ಮಾಧುರ್ಯದಲ್ಲಿ ಬೆರೆಸುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಓದುಗರಾಗಿ ಪ್ರೋತ್ಸಾಹಿಸುತ್ತೇವೆ ಎಂದು ಭರವಸೆ ನೀಡೋಣ ಅಲ್ಲವೆ.

ಅಕ್ಟೋಬರ್ 16, 2020

ಗೋರ್ ಮಾಟಿ

 

ನಿಜಕ್ಕೂ ಖೇದವೆನಿಸುತ್ತಿದೆಹೌದು, ನನ್ನ ಮಾನಸಿಕ ಅವಸ್ಥೆಯನ್ನು ತೋಡಿಕೊಳ್ಳಲಿಕ್ಕೂ ನಮಗೆ ನಮ್ಮದೇ ಆದ ಲಿಪಿ ಇಲ್ಲ. ನಮ್ಮವರ ಬಗ್ಗೆ ಬರೆದುಕೊಳ್ಳಲೂ ನನಗೆ ಬೇರೆ ಲಿಪಿಯ ಮೊರೆ ಹೋಗಬೇಕಾಗಿರುವುದು ನಮ್ಮ ಅಸಹಾಯಕತೆಗೆ ಹಿಡಿದ ಕೈಗನ್ನಡಿ !!

ಇತ್ತೀಚೆಗೆ ಬೀದರ್ ರಂಗ ಮಂದಿರದಲ್ಲಿ ಜರುಗಿದ "ಯುವ ಬಂಜಾರ" ಸಮ್ಮೇಳನದಲ್ಲಿ ಕಳೆದ ಎರಡು ಘಂಟೆಗಳು ನನ್ನನ್ನು ಈಗಲೂ ಕಾಡುತ್ತಿವೆ. ಬಹುಶಃ ಅಷ್ಟೊಂದು ಬಂಜಾರಾ ಭಾಷಿಕರನ್ನು ಹತ್ತಿರದಿಂದ ಕಂಡದ್ದು ಇದೇ ಮೊದಲ ಬಾರಿ. ಯಾಕೆಂದರೇ ಈವತ್ತಿಗೂ ಕೂಡ ನಮ್ಮನ್ನು ಇತಿಹಾಸ ಗುರುತಿಸುವುದು "ಅಲೆಮಾರಿ", "ಕಾಡು ವಾಸಿ"ಗಳೆಂದೆ. ಅಲ್ಲಿಯ ಭಾವತೀವ್ರತೆ ನನ್ನನ್ನು ಯಾವ ಪರಿ ಕಾಡಿದೆಯೆಂದರೇ ನಾನು ಲೇಖನವನ್ನು ಟಂಕಿಸುವಷ್ಟರ ಮಟ್ಟಿಗೆ. ಆಂಗ್ಲ ರಾಜಕಾರಣಿ ಚರ್ಚಿಲ್ ಉಕ್ತಿಗಳು ಯಾಕೋ ಒಮ್ಮೆಲೆ ನೆನಪಾದವು. ಅವನು ಹೇಳಿದಂತೆ those who ignore history are destined to suffer from the mistakes of it.  ಸಾಲುಗಳು ಲಂಬಾಣಿಗರ ವಿಚಾರದಲ್ಲಿ ಇಂದಿಗೂ ಪ್ರಸ್ತುತ. ಲಂಬಾಣಿಗರ ಇತಿಹಾಸವನ್ನು ಓದದ ನಾವುಗಳು ಇತಿಹಾಸದ ಪ್ರಹಾರಕ್ಕೆ ಇಂದಿಗು ನಲುಗುತ್ತಿದ್ದೇವೆ.

ನಿಜ 'ಗೋರ್ ಮಾಟಿ'ಗಳು ತಮ್ಮ ಭವಿತವ್ಯವನ್ನು ಮರೆತು ಬಹಳ ಮುಂದೆ ಸಾಗಿ ಬಂದಿದ್ದೇವೇನೋ ಅನ್ನಿಸುತ್ತಿದೆ. ನಾವು ಮತ್ತೊಮ್ಮೆ ನಮ್ಮ ಗತ ವೈಭವ ಮೆಲುಕು ಹಾಕಲೇಬೇಕಾದ ಸವಾಲು ನಮ್ಮ ಮುಂದೆ ಇದೆ. ಯಾಕಂದ್ರೆ ನಾವು ನೀರಿನಂತೆ. ಯಾವ ಆಕಾರದ ಪಾತ್ರೆಗೆ ನಾವು ಧುಮುಕುತ್ತೇವೋ, ಅದೇ ಸ್ವರೂಪ ಪಡೆದುಕೊಂಡು ಬಂದಿದ್ದೇವೆ. ಯಾವುದೇ ಪ್ರದೇಶಕ್ಕೆ ಸಾಗಿದರೂ ಪ್ರದೇಶದ ಜನರೊಡನೇ ದೂಸರಾ ಮಾತಿಲ್ಲದೇ ಬೆರೆತು ಹೊಗಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಸೇರಿದಂತೆ ಪಾಕಿಸ್ತಾನ, ಅಫಘಾನಿಸ್ತಾನವನ್ನು ಕೂಡಿಸಿ ಭಾರತದ 16 ರಾಜ್ಯಗಳು, ಭೂಪಟದ 60 ರಾಷ್ಟ್ರಗಳಲ್ಲಿ ಹರಿದು 50 ಮಿಲಿಯನ್ ಸಂಖ್ಯೆಯಾಗಿ ಹಂಚಿ ಹೊಗಿದ್ದೇವೆ. ಆದರೂ ಇಂದಿಗೂ ಶಾಶ್ವತ ನೆಲೆ ಮರೀಚಿಕೆಯಾಗಿಯೆ ಉಳಿದಿದೆ. ಅದಕ್ಕಂತಲೇ, ನಮ್ಮಲ್ಲಿ ಬಹಳಷ್ಟು ಜನರು ತಾವು ಲಂಬಾಣಿ ಎನ್ನಲು ಮುಜುಗರ ಪಟ್ಟುಕೊಳ್ಳುತ್ತಾರೆ. ಲಂಬಾಣಿ ಎನ್ನುವ ಕೀಳರಿಮೆ ಅವರನ್ನು ಕಾಡುತ್ತದೆ.


ದೂರದ ಅಫಘಾನಿಸ್ತಾನದಲ್ಲೊಂದು ಪ್ರಾಂತ್ಯವಿದೆ. ಅದರ ಹೆಸರು 'ಗೊರ್' ಅಂತ. ಅಲ್ಲಿನ ಮೂಲನಿವಾಸಿಗಳು ಜೀವನೋಪಾಯಕ್ಕಾಗಿ ಇತರೆಡೆ ತೆರಳಲಾರಂಭಿಸಿದರು. ಸಾಗಾಣಿಕೆ, ವ್ಯಾಪಾರ ವಹಿವಾಟಿನಲ್ಲಿ ನಿಷ್ಣಾತರಾಗಿದ್ದ ಇವರುಗಳು ಬದುಕು ಕಂಡುಕೊಳ್ಳಲು ಜಾಸ್ತಿ ಸಮಯವೇನು ಹಿಡಿಯಲಿಲ್ಲ. ತಮ್ಮ ಪ್ರಾಮಾಣಿಕತೆ, ಕಾರ್ಯತತ್ಪರತೆ, ವ್ಯವಹಾರ ನೈಪುಣ್ಯತೆಗಳಿಂದಾಗಿ ಹೋದಲ್ಲೆಲ್ಲ ಇವರಿಗೆ ತುಂಬು ಹೃದಯದ ಸ್ವಾಗತ ಸಿಕ್ಕಿತು. ಅನ್ಯ ಸಂಸ್ಕೃತಿಯ ಜೊತೆಗೆ ಸುಲಭವಾಗಿ ಮಿಳಿತಗೊಳ್ಳುವ ಸ್ವಭಾವದಿಂದಾಗಿ ಎಲ್ಲರಿಗೂ ಬೇಕಾದವರಾದರು. ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೇ, ಅನ್ಯ ಸಂಸ್ಕೃತಿಯನ್ನು ಗೌರವಿಸುತ್ತಾ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನೆಲೆ ವಿಸ್ತರಿಸಿಕೊಂಡರು.  

ಭಾರತದ ಸಂಪತ್ತಿನಾಸೆಗೆ ದಂಡೆತ್ತಿ ಬಂದ ಮುಸ್ಲಿಂ ದಾಳಿಕೋರರಿಗೆ ರಜಪೂತರಿಗೂ ಮುನ್ನ ವಾಯುವ್ಯ ಭಾರತದ ಸಿಂಧ್ನಲ್ಲಿ ಹಣ್ಣುಗಾಯಿ-ನೀರುಗಾಯಿ ಮಾಡಿದ ಕೀರ್ತಿ ನಮ್ಮ ಪೂರ್ವಜರದು. ಸೆರೆಸಿಕ್ಕ ಘೋರಿ ಎಂಬ ಕಂತ್ರಿಯನ್ನು ಮಾಫ್ ಮಾಡಿದ ಪೃಥ್ವಿರಾಜ್ ಚೌಹಾಣ್ ನಮ್ಮ ಪೂರ್ವಜನೇಅಲ್ಲಿಂದ ಪ್ರಾರಂಭವಾದ ನಮ್ಮ ಪರಾಕ್ರಮ 1857 ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮುಂದುವರಿಯಿತು. ಇತರೆ ಭಾರತಿಯರಂತೆ ಲಂಬಾಣಿಗರು ಹೋರಾಟಕ್ಕೆ ಬೇಕಾದ ಮದ್ದು ಗುಂಡುಗಳನ್ನು ಸಾಗಿಸಿ ಆಂಗ್ಲರ ನಿದ್ದೆ ಕೆಡಿಸಿದ್ದು ದಿಟ.

1947 ಸ್ವಾತಂತ್ರ್ಯ ಹೋರಾಟದ ವರೆಗೂ ಅರಣ್ಯವಾಸಿಗಳಾದ ಲಂಬಾಣಿಗರು ತಾಯಿ ಭಾರತಿಗೆ ತಮ್ಮ ನಿಷ್ಟೆಯನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ.


ದಿ.ನೆಹರೂ ಅವರು ತಮ್ಮLOST CHILDREN OF INDIA ಎಂಬ ಪುಸ್ತಕದಲ್ಲಿ ಲಂಬಾಣಿಗರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಇಂದಿರಾ ಅವರಂತೂ "ಭಾರತ ಅನ್ನುವುದು ಒಂದು ಸೀರೆ ಆದರೇ ಲಂಬಾಣಿಗರು ಸೀರೆಯ ಬಂಗಾರದ ಅಂಚು" ಎಂದು ಹೊಗಳಿದ್ದರು. ಇಷ್ಟಾದರು ಇತಿಹಾಸ ನಮ್ಮನ್ನು 'ಜಿಪ್ಸಿ' 'ಅಲೆಮಾರಿ' ಎನ್ನುವ Tag ದಯಪಾಲಿಸಿದೆ. ಉತ್ತರ ಕರ್ನಾಟಕದ ಹಲವೆಡೆ ಇಂದಿಗೂ ನಮ್ಮನ್ನು 'ಅಡಿ ಲಮಾಣಿ' ಎಂದೆ ಕರೆಯುವುದು. ನಮ್ಮ ಪ್ರಾಮಾಣಿಕತೆ, ಶ್ರಮಿಕತನಕ್ಕೆ ನಮಗೆ ಸಿಕ್ಕ ಉಡುಗೊರೆ ಇದು.

ಸಾಂಬಾ ಬ್ರಾಝಿಲ್ನಲ್ಲಿ ಇಂದಿಗು ಲಂಬಾಣಿಗರದೇ ಪೌರಾಡಳಿತವಿದೆ. ಅಫಘಾನಿಸ್ತಾನದ ಜಿಲ್ಲೆಯೊಂದರ ಹೆಸರು ಇಂದಿಗೂ ತಾಂಡಾ ಅಂತಲೇ ಇದೆ. ಇರಾಕ್ ಯುದ್ದ ಸಂಧಾನಕ್ಕಾಗಿ ಹೋದ ವಿಶ್ವಸಂಸ್ಥೆ ರಾಯಭಾರಿ 'ಮುಖ್ತಾರ್ ಲಮಾಣಿ' ನಮ್ಮವರೆ. ಅದೆಷ್ಟೊ ಶಿಕ್ಷಕರು, ಎಂಜಿನೀಯರುಗಳು, ಶಾಸಕರು, ಮಂತ್ರಿಗಳು, ವೈದ್ಯರು, ಉನ್ನತ ಅಧಿಕಾರಿಗಳು ಇದ್ದರೂ ನಾವಿಂದಿಗೂ ಮುಖ್ಯ ವಾಹಿನಿಗೆ ಬಂದಿಲ್ಲ.  ನಮ್ಮ ಒಳಿತಿಗಾಗಿ ಇರುವ ಮೀಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರ !

ತಾಂಡಾಗಳಲ್ಲಿನ್ನು ರಸ್ತೆ ಸೌಕರ್ಯವಿಲ್ಲ. ಕುಡಿಯುವ ಹನಿ ನೀರಿಗು ತಾತ್ವಾರ. ವಿದ್ಯುತ ಸಂಪರ್ಕಕ್ಕೆ ಕಾದು ಕುಳಿತಿರುವ ಆಸೆ ತುಂಬಿದ ಕಣ್ಣುಗಳು. ಪ್ರಾಥಮಿಕ ವಿಧ್ಯಾಭ್ಯಾಸ ದೂರದ ಮಾತೆ! 5ನೇ ತರಗತಿ ಓದಲೂ ದೂರದ ಊರಿಗೆ ನಡೆದೇ ಹೋಗಬೇಕು. ಉದ್ಯೋಗಕ್ಕಗಿ ಊರೂರು ಅಲೆದಾಡಬೇಕಾದ ಅನಿವಾರ್ಯತೆ.  ಕೊಡುವ ಕೂಲಿಯಲ್ಲೂ ಕಡಿತ. ಬೇಸಿಗೆ ಬಂತೆಂದರೆ ಸಾಮೂಹಿಕವಾಗಿ ಪಟ್ಟಣಕ್ಕೆ ಗುಳೆ ಹೋಗುವುದು ಸಾಮಾನ್ಯ ಸಂಗತಿ. ಮಳೆಗಾಲದಲ್ಲೂ ಮಳೆಯನ್ನೆ ನೆಚ್ಚಿ ಕೃಷಿ ಕಾಯಕ ಮಾಡಬೇಕು.   ನಿರುದ್ಯೋಗ, ಅನಕ್ಷರತೆ, ಸಂಘಟನೆಯ ಕೊರತೆ ನಮ್ಮನ್ನು ಇನ್ನು ಗಟ್ಟಿಯಾಗಿ ಅಪ್ಪಿಕೊಂಡಿವೆ. ಇದು ಇನ್ನೊಂದು ಚಿತ್ರ!!

ಗಾಂಧಿಜಿ ಹೇಳಿದಂತೆ "ಭಾರತದ ಹೃದಯ ಹಳ್ಳಿಯಲ್ಲಿ ನೆಲೆಸಿದೆ". ನನ್ನ ಅಭಿಪ್ರಾಯದಂತೆ ಎಷ್ಟೆ ಉನ್ನತ ಹುದ್ದೆಯಲ್ಲಿದ್ದರೂ ಲಂಬಾಣಿಗನ ಹೃದಯ ತಾಂಡಾಗಳಲ್ಲಿ ನೆಲೆಸಿದೆ. ಸಬಲ, ಶಿಕ್ಷಿತ, ಪ್ರಬಲ ಬೆರಳೆಣಿಕೆಯ ಲಂಬಾಣಿಗರು ತಾಂಡಾಗಳತ್ತ ಮುಖ ಮಾಡಲೇಬೇಕಾಗಿದೆ. ನಮ್ಮಲ್ಲೆ ಕಚ್ಚಾಡುವುದನ್ನು ಬಿಟ್ಟು ನಮ್ಮ ಇತರ ಬಂಧುಗಳ ಬಗ್ಗೆ ಚಿಂತಿಸಬೇಕಾಗಿದೆ. ಕೆಲವೇ ಯಹೂದಿಗಳು ತಮ್ಮ ಅಸ್ತಿತ್ವ ಕಂಡುಕೊಂಡಂತೆ ನಾವುಗಳು ದಿಸೆಯಲ್ಲಿ ಪ್ರಯತ್ನ ಮಾಡಬೇಕಾಗಿದೆ. ತಾಂಡಾದ 'ಸೋಮ್ಲಾ ನಾಯಕ್ಹಾಗೂ ನಗರದ ಸೊಮನಾಥನಿಗೂ ಯಾವುದೇ ಭಿನ್ನತೆ ಇಲ್ಲಒಬ್ಬ ಧೋತಿ ಉಟ್ಟರೆ ಇನ್ನೊಬ್ಬ ಪ್ಯಾಂಟ್ ಉಡುತ್ತಾನೆ. ತಾಂಡಾದ ಸೋನಾ ಬಾಯಿ ಹಾಗು ನಗರದ ಸೋನಿಯಾಗೂ ಯಾವುದೆ ಭಿನ್ನತೆ ಇಲ್ಲ. ಒಬ್ಬಾಕೆ ಜೀನ್ಸ್ ತೊಟ್ಟರೆ, ಇನ್ನೊಬ್ಬಾಕೆ ಫೇಟಿಯಾ ಉಡುತ್ತಾಳೆ.

ನಾವು ಎಲ್ಲಿಯವರೆಗೂ ಆರ್ಥಿಕ ಹಾಗು ಪ್ರಮುಖವಾಗಿ ರಾಜಕೀಯವಾಗಿ ಪ್ರಬಲರಾಗುವುದಿಲ್ಲವೋ ಅಲ್ಲಿಯವರೇಗೂ ಇಂತಹ ಸಾವಿರ ಲೇಖನಗಳನ್ನು ಬರೆದರೂ 'ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ'...

 

                                                                                                       -ಗೋವಿಂದರಾವ್ ಎನ್. ರಾಠೋರ್


ಅಕ್ಟೋಬರ್ 09, 2020

ಪ್ರತಿಭೆಯ ಅಜಾನುಬಾಹು ಆರ್ಜೆ ಮಂಜು

 

ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ-ಕಿರುತೆರೆ ಬಹುದೊಡ್ಡ ಉದ್ಯಮವಾಗಿ ಪ್ರತಿಭೆಗಳ ಅನಾವರಣಕ್ಕೆ ಬೃಹತ್ ವೇದಿಕೆಗಳಾಗಿವೆ. ಅದರಲ್ಲೂ ಕಿರುತೆರೆ ಯಶಸ್ಸು-ಜನಪ್ರೀಯತೆಗೆ ಅತಿ ದೊಡ್ಡ ತಾಣವಾಗಿದೆ. ಹಾಗಂತ ಇಲ್ಲಿ ಗುರುತಿಸಿಕೊಂಡು ಯಶಸ್ವಿಯಾಗುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲದೇ ಗಾಡ್ ಫಾದರ್ಗಳಿಲ್ಲದೇ ಇಲ್ಲಿ ಕಾಲಿಟ್ಟು ಹೆಚ್ಚು ಹೊತ್ತು ನಿಲ್ಲಲು ಕಷ್ಟ ಸಾಧ್ಯವೆ. ಇತ್ತಿಚಿನ ಬೆಳವಣಿಗೆಗಳನ್ನು ನೋಡಿದರೆ ದೂರದ ಬೆಟ್ಟ ಎನ್ನಬಹುದೇನೋ. ಇಂಥ ಪರಿಸ್ಥಿಯಲ್ಲಿ ತಮ್ಮ ಪ್ರತಿಭೆಯ ಅಗಾಧತೆ ಮತ್ತು ವಿಸ್ತಾರತೆಯ ಮೂಲಕ ಎರಡು ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತುಂಗಕ್ಕೇರುವ ತವಕದಲ್ಲಿದ್ದಾರೆ ಇವರು.

ನಟ, ನಿರೂಪಕ, ಕಂಠದಾನ ಕಲಾವಿದ, ಸ್ಕ್ರಿಪ್ಟ್ ರೈಟರ್, ವಿಡಿಯೋ ಎಡಿಟರ್, ರಿಪೋರ್ಟರ, ಶತಕ ಕಾರ್ಯಕ್ರಮಗಳ ನಿರೂಪಕ, ಸತತ 10 ಗಂಟೆಗಳ ಕಾಲ ನಿರಂತರ ಕಾರ್ಯಕ್ರಮ ನಿರೂಪಿಸಿ ದಾಖಲೆ ಮಾಡಿರುವ, ಕುಶಾಗ್ರಮತಿ ಹಾಗೂ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು ಆಗಿರುವ ಪ್ರತಿಭಾ ಸಂಪನ್ನರ ಬಗ್ಗೆ ಇಲ್ಲಿ ಬರೆಯಲು ಕಾರಣ ಸಾಕಷ್ಟಿವೆ.

ಪೀಠಿಕೆ ನೋಡಿ ಇವರು ಎಷ್ಟು ಜನರಿರಬಹುದು ಎಂದು ಭಾವಿಸಿದರೆ ಅದು ನಿಮ್ಮ ತಪ್ಪಲ್ಲ. ಆಶ್ಚರ್ಯ ಕೇಳಿ ಇಷ್ಟೆಲ್ಲ ವಿವರಣೆ ಒನ್ ಆಂಡ್ ಓನ್ಲಿ ಒಬ್ಬ ವ್ಯಕ್ತಿ ಬಗ್ಗೆನೆ. ಆದರೆ ಇವರು ದೂರದ ಬೆಂಗಳೂರು, ಮೈಸೂರು ಭಾಗದವರಿರಬೇಕು ಎಂದರೆ ಅದು ಖಂಡಿತ ತಪ್ಪು. ಪ್ರತಿಭೆಗೆ ಗಡಿ ಸೀಮೆಗಳ ಎಲ್ಲೆ ಇಲ್ಲ. ಹಿಂದುಳಿದ ಮುಂದುವರೆದ ಹಣೆಪಟ್ಟಿಗಳ ಗೊಡವೆ ಇಲ್ಲ. ಆದರೆ ಬೆಸರ ಮತ್ತು ಖುಷಿ ಏಕಕಾಲಕ್ಕೆ ತರಿಸುವ ವಿಚಿತ್ರವೆಂದರೆ ಇವರ ಕಾರ್ಯಕ್ಷಮತೆ ನೋಡಿನೀವು ಬೆಂಗಳೂರಿನವರಿರಬೇಕುಅಂದಾಗ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇವರನ್ನು ಪರಿಚಯ ಮಾಡಿಕೊಡಲು ಹೆಚ್ಚಿನ ವಿವರಣೆಯ ಅಗತ್ಯವಿಲ್ಲ, ಆರ್.ಜೆ.ಮಂಜು ಹಿರೋಳಿ ಹೆಸರೊಂದೆ ಸಾಕು.

ಇವರು ವಾರ್ತಾ ವಾಚಕನಾಗಿ, ಆಕಾಶವಾಣಿ ಉಧ್ಘೋಷಕನಾಗಿ, ನಿರೂಪಕನಾಗಿ, ಕಂಠದಾನ ಕಲಾವಿದನಾಗಿ, ಎಫ್ ಎಮ್ ರೇಡಿಯೋ ಜಾಕೀಯಾಗಿ ಮತ್ತು ಟಿವಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಅರಳು ಹುರಿದಂತೆ ಮಾತಾಡಬಲ್ಲ ಮಲ್ಲ. ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆಯನ್ನು ಯಶಸ್ವಿಯಾಗಿ ಮಾಡಿಶತಕ ವೀರ ನಿರೂಪಕಆಗಿದ್ದಾರೆ. ಇವರ ಇದುವರೆಗಿನ ಸಾಧನೆಗೆ ಸಾಕಷ್ಟು ಸನ್ಮಾನಗಳು ಮತ್ತು ಪ್ರಶಸ್ತಿಗಳು ಲಭಿಸಿವೆ.

ಆರ್ ಜೆ ಮಂಜು ಹಿರೋಳಿ ಅಕ್ಟೋಬರ್ 10ರಂದು ವೀರಶೈವ ಹಿಂದೂ ಲಿಂಗಾಯತ ಪಂಚಮಸಾಲಿ ಕುಟುಂಬದ ದಂಪತಿಗಳಾದ ಶ್ರೀಮತಿ ಅಲಕ್ನಂದಾ ಹಾಗೂ ಶ್ರೀ ಜಗನ್ನಾಥರಾವ್ ಹಿರೋಳಿಯವರ ಎರಡನೆ ಮಗನಾಗಿ ಜನಿಸುತ್ತಾರೆ. ತಂದೆ ಜಗನ್ನಾಥರಾವ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ಸರಸಂಬಾ ಗ್ರಾಮದವರಾಗಿದ್ದು ಇವರು ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಇವರ ಕುಟುಂಬ ಸಧ್ಯ ಕಲಬುರಗಿ ಮಹಾನಗರದಲ್ಲಿ ವಾಸವಾಗಿದೆ. ಇವರ ಮೂಲ ಹೆಸರು ಶ್ರೀನಾಥ. ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ಹೋದಾಗ ಶ್ರೀ ಮಂಜುನಾಥರ ಹೆಸರನ್ನು ಇಡಲಾಯಿತಂತೆ.

ಮಂಜು ಅವರನ್ನು ಡಾಕ್ಟರ್ ಮಾಡಬೇಕೆನ್ನುವುದು ತಂದೆ ತಾಯ ಆಸೆ. ಆದರೆ ಆ್ಯಕ್ಟರ್ ಆಗುವ ಕನಸು ಕಾಣುತಿದ್ದ ಮಂಜು ಅವರಿಗೆ ನಟನಾ ವೃತ್ತಿ ಬೇಡ ಎನ್ನುವ ಒತ್ತಡಡ ಹೆಚ್ಚಾಗಿ ಒಂದು ಸಮಯದಲ್ಲಿ ಆತ್ಮಹತ್ಯೆಯ ಬಗ್ಗೆ ಕೂಡ ಯೋಚಿಸಿದ್ದರಂತೆ. ಆದರೆ ಅಣ್ಣನ  ಸಾಂತ್ವನದಿಂದ ನಿರ್ಧಾರ ಕೈಬಿಟ್ಟರಂತೆ. ಅಣ್ಣ ಸಂತೋಷ ಕುಮಾರ ಶಿಕ್ಷಕರಾಗಿದ್ದು ಮಂಜು ಅವರ ಪಾಲಿನ ನಿಜವಾದ ಸ್ನೇಹಿತ, ಬೆನ್ನೆಲುಬು ಕೂಡಾ.

ಮಂಜು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಕಲಬುರಗಿಯ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ ಮುಗಿಸುತ್ತಾರೆ. ಚಿಕ್ಕಂದಿನಿಂದಲೇ ಇವರು ಶಾಲೆಯ ತರಗತಿಗಳಲ್ಲಿ ನೃತ್ಯ ಮಾಡುವ ಮೂಲಕ ಸಹಪಾಠಿಗಳನ್ನು ರಂಜಿಸುತ್ತಿದ್ದರು. ಅಲ್ಲದೆ ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಇವರ ಕಾಲೇಜು ದಿನಗಳ ಸಹಪಾಠಿಗಳಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಕೂಡಾ ಒಬ್ಬರು.

ಬಾಲ್ಯದಲ್ಲೆ ಕಕ್ಕುಲಾತಿಯಿಂದ ಇಟ್ಟುಕೊಂಡಿದ್ದ ನಟನಾಗುವ ಕನಸನ್ನು ನನಸಾಗಿಸಲು ಇವರು ಕಾಲೇಜು ಮುಗಿದ ನಂತರ ಬೆಂಗಳೂರಿಗೆ ತೆರಳಿ, ಅಲ್ಲಿನ ಹೇಸರಟಘಟ್ಟದಲ್ಲಿರುವ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಅಭಿನಯ ತರಬೇತಿ ಸಂಸ್ಥೆಯಾಗಿರುವ ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ನಲ್ಲಿ ನಟನೆಯ ಡಿಪ್ಲೋಮಾ ಪದವಿಯನ್ನು ಪಡೆಯುತ್ತಾರೆ. ಇವರ ಅಭಿನಯ ತರಬೇತಿಯ ಸಹಪಾಠಿಗಳಲ್ಲಿಚಾರ್ ಮಿನಾರ್ಚಿತ್ರದ ನಾಯಕಿ ಮೇಘನಾ ಗಾಂವಕರ್, ರಾಜ್ ಮ್ಯೂಜಿಕ್ ಚಾನೇಲ್ ನಿರೂಪಕ ಅಶೋಕ ಶರ್ಮಾ, ಜಾತ್ರೆ ಸಿನಿಮಾ ನಿರ್ದೇಶಕ ರವಿತೇಜಾ ಮತ್ತು ಕಿರುತೆರೆ ನಟ ಮತ್ತು ನಿರ್ದೇಶಕ ನವೀನ ಸೋಮನಹಳ್ಳಿ ಸೇರಿದ್ದಾರೆ.

ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ನಲ್ಲಿ ನಟನೆಯ ತರಬೇತಿ ಮುಗಿದ ನಂತರ ಕೆಲವು ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿರುವಾಗ ಇವರ ಮುಖಕ್ಕೆ ಆದ ಮೇಕಪ್ ರಿಯಾಕ್ಷನ್ನಿಂದ ಚಿಕಿತ್ಸೆ ಪಡೆಯಲು ಪುಣೆಗೆ ತೆರಳುವುದಕ್ಕಾಗಿ ಮರಳಿ ಕಲಬುರಗಿಗೆ ವಾಪಸಾದರು. ಬಿಡುವಿನಲ್ಲಿ ಇವರು ರಾಜಸ್ಥಾನ ರಾಜ್ಯದ ಪಿಲನಿಯ ಶ್ರೀಧರ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣವನ್ನು ಮುಗಿಸಿಕೊಳ್ಳುತ್ತಾರೆ.

ಮಂಜು ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟ ಘಟನೆ ನಡೆದದ್ದು ತೀರಾ ಆಕಸ್ಮಿಕ. ತಮ್ಮ ಮುಖಕ್ಕೆ ಆದ ಮೇಕಪ್ ರಿಯಾಕ್ಷನ್ಗೆ ಮಹಾರಾಷ್ಟ್ರದ ಪುಣೆ, ಸೋಲಾಪೂರ ಮತ್ತು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಇವರಿಗೆ ಪರಿಚಿತರು ಟಿವಿ ಧಾರಾವಾಹಿ ನಿರ್ದೇಶಕರಾದ ಬಸವರಾಜ್ ನಂದಿಧ್ವಜ್ ಅವರು ಅಂದು ಉದಯ ಟಿವಿಯಲ್ಲಿ ಅತ್ತ್ಯಂತ ಜನಪ್ರಿಯ ಕಾದಂಬರಿ ಧಾರಾವಾಹಿ ನಟಿ ಶ್ವೇತಾ ಚಂಗಪ್ಪ ಅವರನ್ನು ಕರೆತಂದು ಕಲಬುರಗಿಯಲ್ಲಿಹೂವೊಂದು-ಮುಳ್ಳೆರಡುಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದರು. ಸಂಧರ್ಭದಲ್ಲಿ ನಿರ್ದೇಶಕರು ಮಂಜು ಅವರಿಗೆ ಒಂದು ಪಾತ್ರಕ್ಕಾಗಿ ಆಹ್ವಾನಿಸುತ್ತಾರೆ. ಆದರೆ ವೈದ್ಯರು ಒಂದು ವರ್ಷದವರೆಗೂ ಮುಖಕ್ಕೆ ಮೇಕಪ್ ಹಚ್ಚಬಾರದೆಂದು ಸಲಹೆ ನೀಡಿದ್ದರು. ಹೀಗಾಗಿ ಕ್ಯಾಮರಾ ಹಿಂದೆ ಕೆಲಸ ಮಾಡಲು ನಿರ್ಧರಿಸುತ್ತಾರೆ. ಆದರೆ ಪಾತ್ರ ಮಾಡಲೇ ಬೇಕೆನ್ನುವುದು ದೈವ ನಿರ್ಧಾರವಾಗಿತ್ತು ಎಂಬಂತೆ ಪಾತ್ರಧಾರಿಯೊಬ್ಬ ಕೈಕೊಟ್ಟ ಕಾರಣ ಪಾತ್ರ ಅನಿವಾರ್ಯವಾಗಿ ಮಂಜು ಅವರೇ ಮಾಡಬೇಕಾಗಿ ಬಂತು. ವೈದ್ಯರ ಕಟ್ಟಪ್ಪಣೆಯ ಮಧ್ಯೆಯೂ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಕೊಂಡರು.

ಹೂವೊಂದು-ಮುಳ್ಳೆರಡು ಧಾರಾವಾಹಿಯ ನಿರ್ಮಾಪಕರಾಗಿದ್ದ ಭವಾನಿ ಸಿಂಗ್ ಠಾಕೂರ್ ಅವರು ಮಂಜು ಅವರ ನಟನಾ ಕೌಶಲ್ಯವನ್ನು ಮತ್ತು ಅವರು ನಟನಾ ತರಬೇತಿ ಪಡೆದಿರುವುದನ್ನು ಅರಿತು ತಮ್ಮ ಸ್ಥಳೀಯ ಸುದ್ದಿವಾಹಿನಿ ಜಿ-ಸಿಟಿ ಕೇಬಲ್ನಲ್ಲಿ ವಾರ್ತಾ ವಾಚನಕ್ಕಾಗಿ ಆಹ್ವಾನ ನೀಡುತ್ತಾರೆ. ಇದು ಅವರ ವೃತ್ತಿ ಜೀವನದ ಬಹುಮುಖ್ಯ ತಿರುವು. ಆಗ ಮಂಜು ಅವರಿಗೆ ದೊರೆತ ಮೊದಲ ಸಂಭಾವನೆ ಕೇವಲ 500 ರೂಪಾಯಿ.

ಕೇವಲ ಉದಯ ಟಿವಿ ಮತ್ತು -ಟಿವಿ ಚಾನೆಲ್ಗಳಿದ್ದ ಸಂಧರ್ಭದಲ್ಲಿ ಸ್ಥಳೀಯ ಸುದ್ದಿ ವಾಹಿನಿಯಲ್ಲಿ -ಟಿವಿ ಶೈಲಿಯಲ್ಲಿ ಸುದ್ದಿ ವಾಚನ ಮಾಡಿ ಜನರ ಮೆಚ್ಚುಗೆ ಪಡೆದ ಕೀರ್ತಿ ಮಂಜು ಅವರಿಗೆ ಸಲ್ಲುತ್ತದೆ. ಕಲಬುರಗಿ ನಗರದ ಪ್ರತಿ ಮನೆ-ಮನಗಳಲ್ಲು ಮಕ್ಕಳಿಂದ ಹಿಡಿದು ವೃಧ್ಧರವರೆಗೂ ಎಲ್ಲರು ಗುರುತಿಸುವ ಹೆಸರಾಯಿತು ಮಂಜುನಾಥ ಹಿರೋಳಿ. -ಟಿವಿ ಇಂದ ಟಿವಿ9 ಚಾನೆಲ್ಗೆ ಸೇರುವ ಮುನ್ನ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಕನ್ನಡದ ಖ್ಯಾತ ವಾರ್ತಾ ವಾಚಕರಾದ ರಂಗನಾಥ ಭಾರದ್ವಾಜ್ ಮತ್ತು ರಾಧಿಕಾ ರಾಣಿ ಅವರು ಮಂಜು ಅವರ ವಾರ್ತಾ ವಾಚನವನ್ನು ನೇರವಾಗಿ ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇಲ್ಲಿಂದ ಶುರುವಾದ ಇವರ ಪಯಣ ನಿರಂತರವಾಗಿ ಮುಂದುವರೆಯುತ್ತಲೆ ಹೋಯಿತು. ಜಿ-ಸಿಟಿಯಿಂದ ಆಕಾಶವಾಣಿ, ಆಕಾಶವಾಣಿಯಿಂದ ಸೂಪರ್ ಹಿಟ್ಸ್ 93.5 ರೆಡ್ ಎಫ್ ಎಮ್, ರೆಡ್ ಎಫ್ ಎಮ್ನಿಂದ ಸುದ್ದಿ ಸಮಯ. ಪಯಣ ಏಳಿಗೆಯ ಒಂದೊಂದು ಏಣಿಯಾದವು.

2007ರಲ್ಲಿ ಪ್ರಸಾರ ಭಾರತಿ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ವತಿಯಿಂದ ನಡೆಸಲಾಗುವ ಪರೀಕ್ಷೇಯಲ್ಲಿ ಉತ್ತೀರ್ಣರಾದ ಇವರು ಕಲಬುರಗಿ ಆಕಾಶವಾಣಿ ಕೇಂದ್ರಕ್ಕೆ ಉಧ್ಘೋಷಕರಾಗಿ ಸೇರಿ ನವದೆಹಲಿಯಿಂದ ಪ್ರತಿಷ್ಠಿತವಾಣಿಪ್ರಮಾಣಪತ್ರವನ್ನು ಪಡೆದರು.

2008ರಲ್ಲಿ ಭಾರತದ ಅತಿ ದೊಡ್ಡ ರೇಡಿಯೋ ನೆಟ್ವರ್ಕ ಹೊಂದಿರುವ ಸೂಪರ್ ಹಿಟ್ಸ್ 93.5 ರೆಡ್ ಎಫ್ ಎಮ್ ಕಲಬುರಗಿ ಕೇಂದ್ರಕ್ಕೆ ರೇಡಿಯೋ ಜಾಕಿಯಾಗಿ ಆಯ್ಕೆಯಾದರು. ಅಲ್ಲಿಂದ ಮಂಜುನಾಥ ಹಿರೋಳಿ ಆರ್ಜೆ ಮಂಜು ಆದರು. ಇವರು ಬೆಳಿಗ್ಗೆ 10 ಗಂಟೆಗೆ ಆರ್ ಜೆ ಭಾರತಿ ಜೊತೆ ನಡೆಸಿಕೊಡುತ್ತಿದ್ದಕಂಡೀರಾ-ಕಲ್ಬುರ್ಗಿಶೋ ಮೂಲಕ ಕಲಬುರಗಿ ಜನರ ಮನೆ ಹುಡುಗ ಆರ್ ಜೆ ಮಂಜು ಆಗಿಬಿಟ್ಟರು. ಮಧ್ಯಾಹ್ನ 2 ಗಂಟೆಗೆಸೂಪರ್ ಸಿಂಗರ್ಶೋ ಮೂಲಕ ಮಂಜು ತಾವು ಒಬ್ಬ ಉತ್ತಮ ಗಾಯಕ ಎಂಬುವುದನ್ನು ಸಾಬೀತು ಪಡಿಸಿದರು. ಸಂಜೆ 5 ಗಂಟೆಗೆ ಆರ್ ಜೆ ಮಧು ಜೊತೆ ಸಿನಿಮಾ ಸುದ್ದಿಗಳಿರುವಪಾಪ್ಕಾರ್ನಶೋ ಇವರಿಗೆಮುಸ್ಸಂಜೆ-ಮಂಜುಎಂಬ ಹೆಸರು ತಂದುಕೊಟ್ಟಿತು. ಇವರಈವನಿಂಗ್ ಮಂತ್ರಾ ಮತ್ತು ಬಿಂದಾಸ್ ಬಜಾಯಿಸಿಶೋಗಳು ಪಡ್ಡೆ ಹುಡುಗರ ನೆಚ್ಚಿನ ಶೋಗಳಾದವು. ಒಂದು ವಾರ ಗಟ್ಟಲೆ ಜನ ಫೋನ್ ಕಾಲ್ಗಳಿಗಾಗಿ ಪ್ರಯತ್ನಿಸಿ ಇವರ ಶೋನಲ್ಲಿ ಮಾತಾಡಲು ಕಾಯುತ್ತಿದ್ದರು. ಮಧ್ಯ ರಾತ್ರಿಯಲವಾಲೋಜಿಶೋ ನಡೆಸಿಕೊಡುವ ಮೂಲಕ ಮಂಜು ಎಷ್ಟೋ ಪ್ರೇಮಿಗಳನ್ನು ಒಂದು ಮಾಡಿದರಲ್ಲದೆ, ಪ್ರೀತಿಯ ಅಮಲಿನಲ್ಲಿ ದಾರಿ ತಪ್ಪುತ್ತಿದ್ದ ಯುವ ಪೀಳೀಗೆಯನ್ನು ಸರಿಯಾದ ದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಎಫ್ ಎಮ್ ರೇಡಿಯೋ ಮೂಲಕ ಆರ್ ಜೆ ಮಂಜು ಅವರ ಕೀರ್ತೀ ಕೇವಲ ಕಲಬುರಗಿ ಅಷ್ಟೆ ಅಲ್ಲದೆ ನೆರೆಯ ಜಿಲ್ಲೆಗಳಾದ ವಿಜಯಪೂರ ಮತ್ತು ನೆರೆಯ ರಾಜ್ಯವಾದ ಮಹಾರಾಷ್ಟ್ರದ ಗಡಿ ಜಿಲ್ಲೆ ಸೋಲಾಪುರದ ಅಕ್ಕಲಕೋಟ ತಾಲೂಕಿನ ಜನಮನದವರೆಗೂ ಬೆಳೆಯಿತು.

2010ರಲ್ಲಿ ಮಂಜು ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ಸುವರ್ಣ ನ್ಯೂಸ್ ಚಾನೆಲ್ ಹಿರಿಯ ವರದಿಗಾರರಾದ ಅಜೀತ್ ಹನುಮಕ್ಕನವರ್ ಅವರೊಂದಿಗೆಆರ್.ಜೆ ಆಗಲು ಬೇಕಾಗುವ ಅರ್ಹತೆಗಳು ಮತ್ತು ಒಬ್ಬ ನಿರೂಪಕನಿಗಿರುವ ಸವಾಲುಗಳುಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡಿದರು.

ಇದೇ ವೇಳೆ 2010 ಮಧ್ಯದಲ್ಲಿ ಎಪ್ ಎಮ್ ಬಿಟ್ಟು ಮಂಜು ನೂತನವಾಗಿ ಪ್ರಾರಂಭವಾಗಿತ್ತಿದ್ದ ಸಮಯ ನ್ಯೂಸ್ ಕನ್ನಡದ 24 ಗಂಟೆಗಳ ಸುದ್ದಿ ವಾಹಿನಿಗಾಗಿ ಧಾರವಾಡದಲ್ಲಿ ನಡೆದ ಸಂದರ್ಶನದಲ್ಲಿ ಆಯ್ಕೆಯಾಗಿ ವಾರ್ತಾ ವಾಚನಕ್ಕಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಒಂದು ತಿಂಗಳ ಇಂಟ್ರನ್ಶಿಪ್ ತರಬೇತಿಯನ್ನು ಪಡೆಯುತ್ತಾರೆ.

2011 ಕೊನೆಯಲ್ಲಿ ಮಂಜು ವಿಶ್ವದ 72ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರವಾಗುವ ಭಾರತದ ಮೊಟ್ಟ ಮೊದಲ 24 ಗಂಟೆಗಳ ಆಧ್ಯಾತಿಮಕ ಚಾನೇಲ್ಶ್ರೀ ಶಂಕರಚಾನೆಲ್ನಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗುವದೇವತಾ-ದರ್ಶನಕಾರ್ಯಕ್ರಮದ ನಿರೂಪಕರಾಗಿ ಉತ್ತರ ಕರ್ನಾಟಕದ 30 ಪ್ರೇಕ್ಷಣೀಯ ಆಧ್ಯಾತ್ಮಿಕ ಸ್ಥಳಗಳ ಮಾಹಿತಿಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ.

2012ರಲ್ಲಿ ಕಲಬುರಗಿಯ ಸ್ಥಳಿಯ ಜನಪ್ರಿಯ ವಾಹಿನಿಇನ್-ಗುಲಬರ್ಗಾಚಾನೇಲ್ನಲ್ಲಿಹೆಲೋ-ಗುಲಬರ್ಗಾಎಂಬ ಬ್ರೇಕ್ಫಾಸ್ಟ್ ಶೋ ನಡೆಸಿಕೊಟ್ಟರು. ಕಾರ್ಯಕ್ರಮದ ಜನಪ್ರೀಯತೆ ಎಷ್ಟಿತ್ತೆಂದರೆ ಪ್ರೇಕ್ಷಕರಷ್ಟೆ ಅಲ್ಲ ಪತ್ರಿಕೆ ಮತ್ತು ಟಿವಿ ಮಾಧ್ಯಮದವರು ಹೊಗಳಿ ಬರೆಯುವಂತಾಯಿತು.

2013ರಲ್ಲಿ ಕಲಬುರಗಿ ಜಿಲ್ಲೆ, ಕಲಬುರಗಿ ತಾಲೂಕಿನ ಸುಕ್ಷೇತ್ರ ಮುತ್ತ್ಯಾನ ಬಬಲಾದಿನ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಲಿಂಗೈಕ್ಯ ಶ್ರೀ ಗುರು ಚನ್ನವೀರ ಮಹಾಶಿವಯೋಗಿಗಳ ಮತ್ತು ಪರಮ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳ ಜೀವನಾಧಾರಿತ ಕಿರುಚಿತ್ರದಿವ್ಯ-ಜ್ಯೋತಿ ಸಹ-ನಿರ್ದೇಶಕರಾಗಿ ಕೆಲಸಮಾಡಿ ಅದರಲ್ಲಿನ ಜನಪ್ರಿಯಬಬಲಾದಿಯ ಭಗವಂತಹಾಡಿನಲ್ಲಿ ನಟನೆ ಮಾಡುವ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡರು.

2013ರಲ್ಲೇ ಪುನ: ರೆಡ್ ಎಫ್ ಎಮ್ ಸೇರಿ ಬೆಳಿಗ್ಗೆ 7ರಿಂದನಮಸ್ಕಾರ ಗುಲಬರ್ಗಾಶೋ ನಡೆಸಿಕೊಡುವ ಮೂಲಕ ಕಲಬುರಗಿ ನಗರವನ್ನು ಎಬ್ಬಿಸುವ ಕೋಗಿಲೆ ಕಂಠವಾದರು. ಚಿಕ್ಕವರಿಂದ ಹಿಡಿದು ವೃದ್ಧರವರೆಗೂ, ಶಾಲಾ ಮಕ್ಕಳಿಂದ ಹಿಡಿದು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಗೃಹಿಣಿಯರು, ಡಾಕ್ಟರ್ಸ್, ಇಂಜಿನಿಯರ್ಸ್ ಮತ್ತು ಪ್ರಾಧ್ಯಾಪಕರುಗಳು ಕೂಡ ಆರ್ ಜೆ ಮಂಜು ಶೋ ತಪ್ಪದೆ ಕೇಳುವಂತಾಯಿತು. ಸಂಧರ್ಭದಲ್ಲಿ ಮಂಜು ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಏರಿತು ಅಂದ್ರೆ, ಎಷ್ಟೋ ಗೃಹಿಣಿಯರು ಮಂಜು ಶೋ ಮಡುತ್ತಿರುವ ಸಂಧರ್ಭದಲ್ಲಿ ಟಿಫಿನ್ ಹಿಡಿದು ಎಫ್ ಎಮ್ ಆಫೀಸ್ಗೆ ತೆರಳಿ ಮಂಜುಗಾಗಿ ಕಾಯ್ತಾ ಕೂಡುತ್ತಿದ್ದರಲ್ಲದೆ, ಮಂಜು ಸ್ಟುಡಿಯೋದಿಂದ ಹೊರಗೆ ಬಂದು ತಿನ್ನುವವರೆಗೂ ಬಿಡುತ್ತಿರಲಿಲ್ಲ. ಇನ್ನು ಇವರ ಹುಟ್ಟುಹಬ್ಬ ಬಂತೆಂದರೆ ಸಾಕು ಇಡಿ ಆಫೀಸ್ ಹೂಗುಚ್ಛಗಳಿಂದ ತುಂಬುತ್ತಿತ್ತು.

ಮಂಜು ಒಮ್ಮೆ ಮೂತ್ರಪಿಂಡದಲ್ಲಿ ಹರಳಿನ ಸಮಸ್ಯೆಯಾಗಿ ವಾರಗಟ್ಟಲೆ ಆಸ್ಪತ್ರೆ ಸೇರಿ ಮರಳಿ ಶೋಗೆ ವಾಪಸಾದಾಗ ಎಷ್ಟೋ ಜನ ಕೇಳುಗರು ಕಣ್ಣೀರಿಟ್ಟಿದ್ದರಲ್ಲದೆ ಆಸ್ಪತ್ರೆ ಮತ್ತು ಆಫೀಸ್ ತುಂಬ ಹಣ್ಣು ಮತ್ತು ತಂಪು ಪಾನಿಯಗಳ ರಾಶಿಯನ್ನೆ ತಂದಿಟ್ಟಿದ್ದರು. ಎಷ್ಟೋ ಹುಡುಗಿಯರು ಮಂಜು ಅವರು ಶೋ ನಡೆಸಿಕೊಡುತ್ತಿದ್ದ ಸಮಯದಲ್ಲೇ ಲೈವ್ ಲವ್ ಪ್ರಪೋಸ್ ಮಾಡುವ ಮೂಲಕ ಮಂಜು ಅವರು ಎಲ್ಲರೆದುರು ಮುಜುಗರಕ್ಕೆ ಒಳಗಾಗುವಂತೆ ಮಾಡಿದ ಸಂಧರ್ಭಗಳು ನಡೆದಿದ್ದುಂಟು.

2014ರಲ್ಲಿ ಇವರು ಮೇಲಾಧಿಕಾರಿಗಳ ಕಿರುಕುಳದಿಂದ ಮತ್ತೆ ಎಫ್ ಎಮ್ಗೆ ವಿದಾಯ ಹೇಳಿದಾಗ ಕಿಚ್ಚ ಸುದೀಪ್ ಅವರಮುಸ್ಸಂಜೆ ಮಾತುಚಿತ್ರದಲ್ಲಿನ ಸನ್ನಿವೇಶದಂತೆ ಮಂಜು ಅವರ ಅಭಿಮಾನಿಗಳು ರೆಡ್ ಎಫ್ ಎಮ್ ಕಛೇರಿಗೆ ತೆರಳಿ ಮೇಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಇವರನ್ನು ಮತ್ತೆ ವಾಪಸ್ ಕರೆಸಿಕೊಳ್ಳುವಂತೆ ಪಟ್ಟು ಹಿಡಿದು, ನಡು ರಸ್ತೆಯಲ್ಲೆ ಕಣ್ಣೀರಿಟ್ಟಿದ್ದ ಭಾವುಕ ಸನ್ನಿವೇಷ ಮಂಜು ಅವರು ಜನರ ಮನದಲ್ಲಿ ಅದೆಂಥ ವಿಶಿಷ್ಠ ಸ್ಥಾನವನ್ನು ಪಡೆದಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಮಕ್ಕಳು ಅವರ ನೆಚ್ಚಿನ ಮಂಜು ಅಣ್ಣ ಎಫ್ ಎಮ್ ಬಿಟ್ಟಿರುವ ವಿಷಯ ಕೇಳಿ ಹಾಸಿಗೆ ಹಿಡಿದು ಚಡಪಡಿಸಿದ ಸನ್ನಿವೇಶಗಳು ಮನ ಕಲುಕುತ್ತವೆ. ಇಂದಿಗೂ ಮಂಜು ಅವರು ಎಫ್ ಎಮ್ಗೆ ವಾಪಸ್ಸಾಗಲಿ ಅಂತ ಪೂಜೆ-ಪುನಸ್ಕಾರ, ವೃತ-ಉಪವಾಸಗಳನ್ನು ಮಾಡುತ್ತಿರುವ ಅವರ ಅಭಿಮಾನಿಗಳೇನು ಕಡಿಮೆ ಇಲ್ಲ.

2015ರಲ್ಲಿ ಮಂಜು ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಮೈಲಾಪೂರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆಲ್ಬಂನ ಎರಡು ಹಾಡುಗಳಲ್ಲಿ ಅಭಿನಯಿಸಿದರು. ಇವರು ನಟಿಸಿರುವ ಆಲ್ಬಂನ ಸಿಡಿಗಳು ಮೈಲಾರಲಿಂಗೇಶ್ವರನ ಪ್ರತಿಯೊಬ್ಬ ಭಕ್ತರ ಮನೆಗಳಲ್ಲೂ ಕಾಣಸಿಗುತ್ತವೆ. ಅಲ್ಲದೆ ಇವರು ಭಾವುಕರಾಗಿ ನಟಿಸಿರುವ ಹಾಡಿನ ದೃಶ್ಯಗಳನ್ನು ಮೈಲಾಪುರದ ಅಂಗಡಿಗಳಲ್ಲಿ ಈಗಲೂ ನೋಡಬಹುದಾಗಿದೆ.

2015ರಲ್ಲೇ ಇವರು ಶ್ರೀ ಸುಮಂಗಲಿ ಡಿಜಿಟಲ್ ಚಾನೆಲ್ ಅಂದರೆ ಎಸ್.ಎಸ್.ಡಿಜಿಟಲ್ ಸ್ಥಳಿಯ ವಾಹಿನಿಗೆ ಸೇರಿಸುದ್ದಿ ಸಮಯ ಮೂಲಕ ಕಲಬುರಗಿಯ ಸುದ್ದಿ ವಾಚನದ ಶೈಲಿಯನ್ನು ಸ್ಯಾಟಲೈಟ್ ಚಾನೇಲ್ಗಳ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆ ಮಾಡಿ, ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವುದು ಅವರ ಇನ್ನೊಂದು ಸಾಧನೆ.

2006ರಿಂದ ಇಲ್ಲಿಯವರೆಗೂ ಸಾವಿರಾರು ಜಾಹಿರಾತುಗಳಿಗೆ ಧ್ವನಿ ನೀಡುತ್ತಿರುವ ಅವರ ಕಂಠ ಸಿರಿಯನ್ನು ಕರ್ನಾಟಕದ ಮೂಲೆ ಮೂಲೆಯಲ್ಲೂ ಕೇಳಬಹುದಾಗಿದೆ.

ಮಂಜು ಅವರಿಗೆ ಆದ್ಯಾತ್ಮಿಕತೆಯ ಕಡೆಗೆ ಒಲವು ಅಧಿಕವಾಗಿರುವುದರಿಂದ ಹಲವಾರು ಪೂಜ್ಯ ಮಠಾಧೀಶರ ಸಂಪರ್ಕದಲ್ಲಿದ್ದಾರೆ. ಮಂಜು ಅವರು ಶಿರಡಿ ಹಾಗೂ ಪುಟ್ಟಪರ್ತಿಯ ಸಾಯಿ ಬಾಬಾರಲ್ಲಿ ಅಪಾರವಾದ ಶ್ರಧ್ಧೆಯನ್ನು ಹೊಂದಿದ್ದಾರೆ. ಅಲ್ಲದೆ ಪ್ರತಿದಿನ ಬೆಳಿಗ್ಗೆ 2 ಗಂಟೆಗಳ ಸಮಯವನ್ನು ಯೋಗ, ಧ್ಯಾನ ಮತ್ತು ಜಪಗಳಿಗಾಗಿ ಮೀಸಲಿಡುತ್ತಾರೆ.

ಆರ್.ಜೆ.ಮಂಜು ಅವರು ಇದುವರೆಗೂ ನೂರಕ್ಕು ಅಧಿಕ ಕಾರ್ಯಕ್ರಮಗಳ ನಿರೂಪಣೆ ಮಾಡುವ ಮೂಲಕ ಶತಕ ಕಾರ್ಯಕ್ರಮಗಳ ನಿರೂಪಕ ಎಂದು ಹೆಸರು ಪಡೆದಿದ್ದಾರೆ. ಕಲಬುರಗಿಯ ಡಾ.ಎಸ್.ಎಮ್.ಪಂಡಿತ್ ರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ವೇದಿಕೆಯ ಮೇಲೆ ನಿಂತು ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಆರ್ ಜೆ ಮಂಜು ಅಭಿನಯಿಸಿರುವ ಧಾರಾವಾಹಿಗಳು

 ಸೈಯದ್ ಅಶ್ರಫ್ ನಿರ್ಧೇಶನದಕಣ್ಣಾ ಮುಚ್ಚಾಲೆ, ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಔಟ್ ಹೌಸ್", ಎಸ್.ಕೆ.ಭಗವಾನ್ ನಿರ್ದೇಶನದಮುಂಜಾನೆ, ಬಸವರಾಜ ನಂದಿಧ್ವಜ ನಿರ್ದೇಶನದಹೂವೊಂದು ಮುಳ್ಳೆರಡುಪ್ರಮುಖವಾದವುಗಳು.

ಆರ್ಜೆ ಮಂಜು ಅವರಿಗೆ ಲಭಿಸಿರುವ ಸನ್ಮಾನ ಮತ್ತು ಪ್ರಶಸ್ತಿಗಳು: 2007- ಜಿ-ಸಿಟಿ ಚಾನೆಲ್ ವರ್ಷದ ಅತ್ತ್ಯುತ್ತಮ ವಾರ್ತಾ ವಾಚಕ ಪ್ರಶಸ್ತಿ, 2015- ಚೆಟ್ಟಿನಾಡ ಸಿಮೆಂಟ್ಸ್, ಕಲಬುರಗಿ ಸಿಮೆಂಟ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಶ್ರೀಶೈಲ ಜಗದ್ಗುರುಗಳಿಂದ ಸನ್ಮಾನ, 2016- ಏಸಿಸಿ ಸಿಮೆಂಟ್ಸ್, ಬ್ರುಂದಾವನ ಸೇವಾ ಸಂಘದಿಂದಬೆಸ್ಟ್ ಸರ್ವಿಸ್ ಟುವಡ್ರ್ಸ ಸೊಸೈಟಿಪ್ರಶಸ್ತಿ ಮತ್ತು ಸನ್ಮಾನ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ವತಿಯಿಂದ ಟಿವಿ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕಾಗಿಕುಶಾಗ್ರಮತಿ ಖರ್ಗೆಪ್ರಶಸ್ತಿ, 2020- ಸೇವಾ ರತ್ನ ಪ್ರಶಸ್ತಿಗಳು ಸೇರಿದಂತೆ ಇತರೆ ಹಲವು ಗೌರವಗಳನ್ನು ಪಡೆದಿದ್ದಾರೆ.

ಆರ್ ಜೆ ಮಂಜು ನಿರೂಪಿಸಿರುವ ಶತಕಕ್ಕೂ ಹೆಚ್ಚು ಕಾರ್ಯಕ್ರಮಗಳ ಪೈಕಿ ಕೆಲವು ಪ್ರಮುಖ ಕಾರ್ಯಕ್ರಮಗಳು: 

2007- ಡಾನ್ಸ-ಡಾನ್ಸ್ ಫಿನಾಲೆ

2011-“ಭೂಮಾತಾ ರಸಗೊಬ್ಬರಹೊಸ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮ

2012-ಇಂಜಿನಿಯರ್ಸ್ ಡೇ, 2013-ಮತದಾನ ಜಾಗೃತಿ ಕಾರ್ಯಕ್ರಮ

2015-ನುಪುರ ನೃತ್ಯೋತ್ಸವ, ರಾಷ್ಟ್ರೀಯ ಸುರಕ್ಷತಾ ದಿನಾಚರಣೆ, ಪ್ರಜಾವಾಣಿ ನಗೆ-ಹಬ್ಬ, ಡೆಕ್ಕನ್-ಹೆರಾಲ್ಡ್ ಸಿಈಟಿ ಕಾರ್ಯಕ್ರಮ, ಯಾದಗಿರಿ ರಾಜಪೂತ ಸಮಾವೇಶ, ಮೈನ್ಸ್ ಸೇಫ್ಟಿ ಅಸೋಸಿಯೇಶನ್ ಕಾರ್ಯಕ್ರಮ, ಗಣಿ ಪರಿಸರ ಕಾರ್ಯಕ್ರಮ

2016-ನ್ಯಾಷನಲ್ ಸೇಫ್ಟಿ ಡೇ, ಝೀ ಕನ್ನಡ ಸಾ.ರೆ... ಸೀಸನ್-11 ವಿಜೇತರ ಬ್ಲೈಂಡ್ ಫೆಸ್ಟ್-2016, ಕಾಮಿಡಿ ನೈಟ್ ಶೋ ವಿಥ್ ಹಾಸ್ಯ ಕಲಾವಿದ ಪ್ರಶಾಂತ್ ಚೌಧರಿ. ಜಬರ್ದಸ್ತ್ ದಾಂಡಿಯಾ ನೈಟ್ ಸೀಸನ್-01, 

2017-“ಕೆ ಮಾರ್ಟಬಿಗ್ ಬಜಾರ್ ಗ್ರ್ಯಾಂಡ್ ಓಪನಿಂಗ್, ಪೋಲಿಸ್ ಬೀಟ್ ಸಿಸ್ಟಮ್ ಉಧ್ಘಾಟನಾ ಸಮಾರಂಭ, ಸಿಂಗಾಪೂರ್ ಟ್ರಿಪ್ ಲಕಿ ಡ್ರಾ (ಸಮಾಜ ಕಲ್ಯಾಣ ಇಲಾಖೆ), ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ, ನೀರು ಶುಧ್ಧೀಕರಣ ಘಟಕದ ಉಧ್ಘಾಟನಾ ಸಮಾರಂಭ, “ಹಾಯ್ ಪಾಯಿಂಟ್ ಕರ್ನಾಟಕಕನ್ನಡ ಮಾಸ ಪತ್ರಿಕೆಯ ಉಧ್ಘಟನಾ ಸಮಾರಂಭ,

2018-ರಾಜಲಕ್ಷ್ಮೀ ಚಿತ್ರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ತುಮಕೂರು ಶ್ರೀ ಸಿಧ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಜೀಯವರ ಜನ್ಮದಿನದ ಕಾರ್ಯಕ್ರಮ, ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇಯ ಜಯಂತ್ಯೋತ್ಸವ ಕಾರ್ಯಕ್ರಮ,

2019-ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ರೈತ ಹಬ್ಬ, ಝೀ ಕನ್ನಡ ವಾಹಿನಿಯ ಕಮಲಿ ಧಾರಾವಾಹಿ ನಟಿ ಅಮೂಲ್ಯ ಅವರ ಜನಪದ ಜಾತ್ರೆ ಕಾರ್ಯಕ್ರಮ, ಕರ್ನಾಟಕ ಸರಕಾರದ ನಗರಾಭಿವೃಧ್ಧಿ ಪ್ರಾಧಿಕಾರದ ಸಚಿವರ ಜನ ಸ್ಪಂದನ ಕಾರ್ಯಕ್ರಮ, “ಗೌಡರ ಗದ್ದಲನಾಟಕ ಪ್ರದರ್ಶನ, ಝೀ ಕನ್ನಡ ವಾಹಿನಿಯ ಪಾರು ಧಾರಾವಾಹಿ ನಟಿ ಮೋಕ್ಷಿತಾ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್.ಧರಮಸಿಂಗ್ ಪಿಯು ಕಾಲೇಜ್ ಉಧ್ಘಟನಾ ಸಮಾರಂಭ, ಮಜಾ ಭಾರತ ತಂಡದ ನಗೆ ಹಬ್ಬ ಕಾರ್ಯಕ್ರಮ, ಕ್ರಿಸ್ಟ್ಲ್ ಪಾಮ್ ಹೈವೇ ರೆಸಾರ್ಟ ನ್ಯೂ ಇಯರ್ ಪಾರ್ಟಿ,

2020-ಯಶೋರಥ ಸಿನಿಮಾ ಆಡಿಷನ್ ಮತ್ತು ಟೈಟಲ್ ಲಾಂಚ್ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಸಂಕಿರಣ ಕಾರ್ಯಕ್ರಮ, ಟಾಟಾ ಮೋಟಾರ್ಸ್ ಹೊಸ ಶೋರೂಮ್ ಉಧ್ಘಾಟನಾ ಸಮಾರಂಭ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

ಮಾಧ್ಯಮ ಮತ್ತು ಕಿರುತೆರೆ ಎಂಬ ಸಾಗರದಲ್ಲಿ ಭಾಗಶಃ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯ ಅಗಾಧತೆಯನ್ನು ಅನಾವರಣಗೊಳಿಸಿರುವ ಆರ್ಜೆ ಮಂಜು ಹಿರೋಳಿ ಅವರಿಗೆ ಇಂದು (ಅಕ್ಟೋಬರ್ 10) ಹುಟ್ಟುಹಬ್ಬದ ಸಂಭ್ರಮ. ಇವರ ಕೈಂಕರ್ಯ ಇದೇ ರೀತಿಯಲ್ಲಿ ಸಾಗಲಿ. ಯಶಸ್ಸು ಇವರ ಜೊತೆಯಲ್ಲಿಯೇ ಇರಲಿ. ಬರುವ ದಿನಗಳಲ್ಲಿ ಕಿರುತೆರೆಯಲ್ಲಿ ಭವ್ಯವಾಗಿ ವಿಜೃಂಭಿಸಲಿ. ಕಲ್ಯಾಣ ಕರ್ನಾಟಕದ ಕೀರ್ತಿ ಪತಾಕೆಯನ್ನು ಸಂಪೂರ್ಣ ಕರ್ನಾಟಕದ ತುಂಬೆಲ್ಲ ಹಾರಾಡಿಸಲಿ ಎಂದು ತುಂಬು ಹೃದಯದಿಂದ ಶುಭಕೋರುವ.