ಡಿಸೆಂಬರ್ 13, 2020

ಗಜಲ್ ಸಾಹಿತ್ಯ ಮತ್ತು ಸವಾಲುಗಳು


      ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ 'ಮನುಷ್ಯ' ನ ವಿಕಾಸ ಪ್ರಕ್ರಿಯೆ ನಮಗೆ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದಲೆ! ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಪಡಿಸಲು 'ಭಾಷೆ' ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. "ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ" ( ರಂ. ಶ್ರೀ. ಮುಗುಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. ಶ್ರೀ. ಮುಗುಳಿಯವರ ಮಾತು ಇದನ್ನೇ ಪುಷ್ಟಿಕರಿಸುತ್ತದೆ.  ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಅತ್ಯಂತ ಪ್ರಬಲ ಪರಿಣಾಮಕಾರಿ ಮಾಧ್ಯಮವೇ ಸಾಹಿತ್ಯ. ಇದು ಆಹ್ಲಾದಕರವೂ, ಆಕರ್ಷಕವೂ, ಜೀವನ ಸೌಂದರ್ಯದಾಯಕವೂ, ಸಂಸ್ಕೃತಿ ಸಂಪನ್ನವೂ, ಬುದ್ಧಿ ಮನಸ್ಸುಗಳ ವರ್ಧಕವೂ ಆಗಿದೆ. ಈ ನೆಲೆಯಲ್ಲಿ "ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ".(ರಂ. ಶ್ರೀ. ಮುಗುಳಿಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಪಾದರಸದಂತೆ ಪರಿವರ್ತನಶೀಲವಾದ ಪ್ರಪಂಚದ ಜ್ಞಾನ, ವಿಜ್ಞಾನ, ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತ, ಮನುಕುಲದ ಜೀವನವನ್ನು ಪುಷ್ಟಿಕರಿಸುತ್ತ, ತುಷ್ಟಿಗೊಳಿಸುತ್ತ, ವಿಕಾಸಗೊಳಿಸುತ್ತ, ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಸಾಹಿತ್ಯದ ಪರಮಗುರಿ.

      ಸಾಹಿತ್ಯವೂ ಬದುಕಿನಂತೆಯೇ ಬೆಳೆಯುತ್ತದೆ. ಅದರಲ್ಲಿಯೂ ನಮ್ಮ ಬಾಳಿನಲ್ಲಿ ಇರುವಂತೆಯೇ ಏಳುಬೀಳುಗಳು, ಸಂಪ್ರದಾಯಗಳು, ಅವುಗಳ ವಿರುದ್ಧ ಕ್ರಾಂತಿ... ಇವೆಲ್ಲವೂ ಉಂಟು. ಸಾಹಿತ್ಯ ಆಗಸದಷ್ಟು ವಿಶಾಲ, ಸಾಗರದಷ್ಟು ಆಳವಾದ ಹರವು ಹೊಂದಿದೆ. ವಿಷಯವಸ್ತು, ಶೈಲಿ, ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದೆ. ಜೀವನ ಬದಲಾದಂತೆ ಸಾಹಿತ್ಯವೂ ಬದಲಾಗುತ್ತದೆ. ಹೊಸದಾದುದು ಕಾಲ ಕಳೆದಂತೆ ಹಳೆಯದೆನಿಸಿಕೊಂಡು ಸಂಪ್ರದಾಯವಾಗಿಬಿಡುತ್ತದೆ. ಅದರ ವಿರುದ್ಧ ಕ್ರಾಂತಿಯಾಗಿ, ದಂಗೆಯಾಗಿ ಹಳೆಯದರ ಸ್ಥಾನಕ್ಕೆ ಹೊಸದು ಬಂದು ನಿಲ್ಲುತ್ತದೆ. ಈ ಹೊಸದು ಕೂಡ ಮುಂದೆ ಮತ್ತೊಂದು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ- ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ.... ಮುಂತಾದ ಅನೇಕ ರೀತಿಗಳ ಮೂಲಕ ಸಾಹಿತ್ಯ ಬೆಳೆದು ಬಂದಿರುವುದು ಕಂಡು ಬರುತ್ತದೆ. "ಒಂದು ನಿರ್ದಿಷ್ಟ ಸಾಹಿತ್ಯ ಪರಂಪರೆಯು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗುವ ಹೊತ್ತಿಗೆ ಇನ್ನೊಂದು ಸಾಹಿತ್ಯ ಪರಂಪರೆಯ ಉಗಮಕ್ಕೆ ಕಾರಣವಾದ ಅಂಶಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡಿರುತ್ತದೆ" (ಶ್ರೀಧರ್ ಹೆಗಡೆ ಭದ್ರನ್ (ಸಂ) ; ಸಾಹಿತ್ಯ ಚಳುವಳಿಗಳು; ಪು- ೪೩) ಎಂಬ ಪುರುಷೋತ್ತಮ ಬಿಳಿಮಲೆಯವರ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ, ಎಲ್ಲ ಘಟ್ಘಗಳಿಗೂ ಅನ್ವಯಿಸುತ್ತದೆ. ಈ ಸಾಹಿತ್ಯಕ್ಕೆ ಭಾಷೆಯ, ಗಡಿಯ ಹಂಗು ಇಲ್ಲ. ಇದೊಂದು 'ಸರ್ವಾಂತರ್ಯಾಮಿ'. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ 'ಗಜಲ್'. ಈ ಗಜಲ್ ನಷ್ಟು ವಿಶ್ವವ್ಯಾಪಿಯಾದ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ಜಗತ್ತಿನ ಮತ್ಯಾವುದೇ ಸಾಹಿತ್ಯದಲ್ಲಿಯೂ‌ ಕಾಣಲಾಗದು..! ಇದು ಅರೆಬಿಕ್, ಫಾರಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.

     'ಗಜಲ್' ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಇದನ್ನು ಉರ್ದು ಕಾವ್ಯದ ರಾಣಿ ಎಂದು ಕರೆಯುತ್ತಾರೆ. "ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು" ಎಂದಿದ್ದಾರೆ ಶಾಂತರಸರು. (ಶಾಂತರಸ : ಗಜಲ್ ಮತ್ತು ಬಿಡಿ ದ್ವಿಪದಿ : ಪು- ೪೩) ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ.

     ಫಾರಸಿ ಮೂಲದಿಂದ ಹರಿದು ಬಂದ ಈ ಗಜಲ್ ಗಂಗೋತ್ರಿ ಭಾರತೀಯ ಭಾಷೆಗಳಲ್ಲಿ ಉರ್ದು, ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದೆ. ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ. ಇದರ ಕುರಿತು ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ.... ಮುಂತಾದ ಗಜಲ್ ಗಾರುಡಿಗರು ಅನುಷಂಗಿಕವಾಗಿ ಚರ್ಚಿಸಿದ್ದರಾದರೂ 'ಸಮಗ್ರ ಆಕರ ಗ್ರಂಥ' ದ ಕೊರತೆ ನವ ಉತ್ಸಾಹಿ 'ಗಜಲ್ ಗೋ' ರವರನ್ನು ಕಾಡುತ್ತಿದೆ. ಅಂತೆಯೇ ಇಂದು 'ಗಜಲ್ ಗೋಯಿ' ತುಂಬಾ ಸವಾಲಿನಿಂದ ಕೂಡಿದೆ. "ಗಜಲ್ ಸಹಜವಾಗಿ ಒಲಿಯುವುದಿಲ್ಲ. ಮನಬಂದಂತೆ ಬರೆಯಲು ಇದು ಮುಕ್ತ ಛಂದವೂ ಅಲ್ಲ. ಇಲ್ಲಿ ನಿಯೋಜಿತವಾದ ಛಂದಸ್ಸು ಇದೆ. ಹಲವಾರು ಪ್ರಕಾರದ ವೃತ್ತಗಳು ಇವೆ. ಅವು ಯಾವುದನ್ನು ನಾವು ಕನ್ನಡದವರು ಗಮನಿಸುತ್ತಿಲ್ಲ" ( ಶ್ರೀಮತಿ ಪ್ರಭಾವತಿ ಎಸ್. ದೇಸಾಯಿ : ಭಾವಗಂಧಿ: ಪು- ೧೨) ಎಂದು ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಇರುವುದು ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್ ಅವರ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು. 

"ಕಹನೆ ಕೊ ಯೆ ಗಜಲ್ ಹೈ, ಕ್ಯಾ ಗಜಲ್ ಹೈ ಜಿಸೆ

ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ"

ಇದರಲ್ಲಿ ಅವರು ಗಜಲ್ ಹೆಸರಿನಲ್ಲಿ ಬರುತ್ತಿರುವ ಗಜಲ್ ಅಲ್ಲದ ಕಾವ್ಯದ ಬಗ್ಗೆ ಬರೆಯುತ್ತ ಇಂತಹ ರಚನಾ ವಿಧಾನವನ್ನು ಖಂಡಿಸಿದ್ದಾರೆ.

        'ಗಜಲ್' ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ "ಗಜಲ್ ಎಂದರೆ ಪ್ರೇಮಗೀತೆ ಮಾತ್ರ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು" (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯ. ಪ್ರೇಮ ಎನ್ನುವುದು ಒಂದು ಭಾಷೆ, ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ "ಜಗದಲ್ಲಿರುವುದು ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ" ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.

     ಮಿರ್ಜಾ ಗಾಲಿಬ್ ಉರ್ದು ಗಜಲ್ ಪರಂಪರೆಯ ಹೆಮ್ಮೆಯ ವಾರಸುದಾರರು. ಗಾಲಿಬ್ ರವರ ಉರ್ದು 'ದಿವಾನ್' ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಾಗಿ...

"ಸಮಸ್ತ ವಿಶ್ವದ ವಸ್ತುಕೋಟಿಯಲಿ ನೀನಿಲ್ಲದೆ ಇಲ್ಲಾ

ಅದರೂ ಒಂದು ವಸ್ತುವು ನಿನಗೆ ಸಮ-ಸಾಟಿಯೆ ಅಲ್ಲಾ"


"ನನ್ನ ದೃಷ್ಟಿಯಲ್ಲಿ ಜಗವೆಂಬುದು ಮಕ್ಕಳ ಚೆಲ್ಲಾಟ

ನನ್ನ ಎದುರಿನಲಿ ಹಗಲೂ ಇರುಳೂ ನಡೆಯುವ ನಗೆಯಾಟ"

 

"ಕಾಯಿಲೆ ಬಿದ್ದರೆ ನೋಡಿಕೊಳ್ಳಲಿಕ್ಕೆ ಯಾರೂ ಬೇಡ ನನ್ನ ಬಳಿ

ಕೊನೆಯುಸಿರೆಳೆದರೆ ಅತ್ತು ಕರೆಯಲಿಕೆ ಯಾರೂ ಇರದಿರಲಿ" 

 

"ಬದುಕಿನ ತಳಹದಿಯಲ್ಲಿಯೆ ಅವಿತಿವೆ ನಾಶದ ಬೀಜಗಳು

ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು"

     ಗಜಲ್ ಮಾನವ ಪ್ರೇರಿತ, ನಿಸರ್ಗದ ಆಧಾರಿತ ಎಲ್ಲ ವಿಷಯಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ಕಾವು ಕೊಡುತಿದೆ. ಯಾವ ವಿಷಯವೇಯಾದರೂ ಹೇಳುವ ರೀತಿ ಮಾತ್ರ ಕೋಮಲ ಹಾಗೂ ಹೃದಯ ತಟ್ಟುವಂತೆ ಇರಬೇಕು.‌ ಆದರೆ ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮ... ಕುರಿತು ಬರೆಯಬೇಕು ಎನ್ನುತ್ತಾರೆ.

     'ರದೀಫ್' ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು... ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ 'ಏಕತಾನತೆ'ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್... ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ 'ಘನ ಶಾಯರಿ' ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. "ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ". ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ 'ಇಲ್ಮ್ ಕಾಫಿಯಾ' ಪುಸ್ತಕದಲ್ಲಿ ಹೇಳಿದ್ದಾರೆ. ಇದು 'ಕವಾಫಿ' ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇಂದೂ ಸಹ ಈ ತರಹದ ಅಸಂಖ್ಯಾತ ಗಜಲ್ ಗಳು ಮೂಡಿಬರುತ್ತಿವೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.

      ಕಾಫಿಯಾ.. ಗಜಲ್ ನ ಜೀವಾಳ. ಇದು ಕನ್ನಡ ಕಾವ್ಯಗಳಲ್ಲಿ ಬರುವಂತಹ 'ಪ್ರಾಸ' ಅಲ್ಲ! ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. "ರದೀಫ್ ಇಲ್ಲದೆಯೂ ಗಜಲ್ ರಚನೆ ಸಾಧ್ಯವಿದೆ. ಆದರೆ ಕಾಫಿಯಾ ಇಲ್ಲದೆ ಗಜಲ್ ರಚನೆ ಸಾಧ್ಯವಿಲ್ಲ" (ಗಿರೀಶ್ ಜಕಾಪುರೆ ; ಸಾವಿರ ಕಣ್ಣಿನ ನವಿಲು; ಪು- ೧೮) ಎಂದು ಗಿರೀಶ್ ಜಕಾಪುರೆಯವರು ಹೇಳಿರುವುದು ಗಜಲ್ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹಾಗಂತ 'ಕಾಫಿಯಾ' ಅನಾವಶ್ಯಕವಾಗಿ, ಪ್ರಾಸದ ನೆಪದಲ್ಲಿ ಬಳಕೆಯಾಗಬಾರದು. ಅದೊಂದು ಸುಂದರ ಸ್ವತಂತ್ರ ಪದ, ಶಬ್ಬವಾಗಿರಬೇಕು. ಕಾಫಿಯಾದ ಕೊನೆಯ ಅಕ್ಷರ 'ರವಿ' ಮಾತ್ರ ಇಲ್ಲಿ ಮುಖ್ಯವಾಗುವುದಿಲ್ಲ, ಅದರೊಂದಿಗೆ ಕಾಫಿಯಾದ  ಹಲವು ಪ್ರಕಾರಗಳೂ ಮುಖ್ಯವಾಗುತ್ತವೆ. ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್.... ಮುಂತಾದವುಗಳ ಪರಿಚಯ ಅಗತ್ಯವೆನಿಸುತ್ತದೆ. ಇದುವೆ, ಅದುವೆ... ಇವುಗಳು ಕಾಫಿಯಾ ಆಗುವುದಿಲ್ಲ. ಸೂರ್ಯನೆ, ಅವನೆ, ನೀನೆ, ಏನೆ... ಇವುಗಳೂ ಕವಾಫಿ ಅಲ್ಲ. ಕೇವಲ 'ರವಿ/ರವೀಶ್' ನ ಅನುಕರಣೆಯಿಂದ ಕಾಫಿಯಾ ಪರಿಫೂರ್ಣವಾಗುವುದಿಲ್ಲ. ಪ್ರತಿ 'ಕವಾಫಿ' ಯಲ್ಲಿ ಅರ್ಥ ಹೊಂದಾಣಿಕೆಯ ಜೊತೆಗೆ ವಚನ, ಕಾಲ, ಲಿಂಗ, ಪ್ರತ್ಯಯಗಳಲ್ಲಿಯೂ ಹೊಂದಾಣಿಕೆ ಇರಬೇಕು, ಇರಲೆಬೇಕು. ಆದರೆ ಹೆಚ್ಚಿನ ಗಜಲ್ ಗಳು 'ಕವಾಫಿ'ಗೆ ಅವಮಾನ ಮಾಡುತ್ತಿರುವಂತೆ ಭಾಸವಾಗುತ್ತದೆ. ನಾವು 'ಕವಾಫಿ' ಗಾಗಿ ತಡಕಾಡುತ್ತಿರುವಂತೆ ಕಾಣಿಸುತ್ತಿದೆ. ಇದರಿಂದಾಗಿಯೇ ಗಜಲ್ ಗಳು ಹೃದ್ಯವೆನಿಸದೆ ಕೇವಲ ಸಂಖ್ಯೆಯ ಸೌಧಗಳಾಗುತ್ತಿವೆ...!!

       ಗಜಲ್ ನ ಪ್ರತಿಯೊಂದು 'ಷೇರ್' ಗಜಲ್ ನ ಪ್ರತ್ಯೇಕ ಒಂದು ಅಂಗವಿದ್ದಂತೆ. ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಘಟಕ. ಈ ಅರ್ಥದಲ್ಲಿ ಪ್ರತಿ ಗಜಲ್ ತನ್ನ 'ಅಶ್ಅರ್' ನಷ್ಟು ಸ್ವತಂತ್ರ ಕಾವ್ಯಗಳಾಗಿರುತ್ತವೆ. ಇದೊಂದು ಬೇರೆ ಬೇರೆ ಹೂಗಳ ಸುಂದರ ಗುಲ್ದಸ್ತ. ಗಜಲ್ ನ ಪ್ರತಿ ಷೇರ್ ನ 'ಮಿಸರೈನ್' ಸ್ವತಂತ್ರವಾಗಿರಬೇಕು, ಒಂದಕ್ಕೊಂದು ಬೆಸೆದುಕೊಂಡಿರಬಾರದು. ಅವು ಪೂರಕವಾಗಿ ಇಲ್ಲವೆ ವಿರುದ್ಧವಾಗಿಯಾದರೂ ಇರಬಹುದು. ಎರಡು ಮಿಸರೈನ್ ಪರಸ್ಪರ ಬೆಸೆದುಕೊಂಡರೆ ಅದು ಒಂದು 'ಮಿಸ್ರಾ' ಆಗುತ್ತದೆಯೆ ಹೊರತು ಷೇರ್ ಆಗುವುದಿಲ್ಲ. ಒಂದು ಮಿಸ್ರಾ ಯಾವತ್ತೂ ಷೇರ್ ಅನಿಸಿಕೊಳ್ಳದು. ಗಜಲ್ ನ ಅಶ್ಅರ್ ಮೇಲುನೋಟಕ್ಕೆ ಚೆಲ್ಲಾಪಿಲ್ಲಿಯಾಗಿ ಕಾಣುತ್ತದೆ. ಒಂದು ಷೇರ್ ಇಲ್ಲಿ ಒಂದು ಘಟಕವಾಗುತ್ತದೆ. ಒಂದು ಘಟಕಕ್ಕೂ ಮತ್ತೊಂದು ಘಟಕಕ್ಕೂ ನೇರ,  ನಿರಂತರತೆ ಇರುವುದಿಲ್ಲ. ಆದರೆ ಅಲ್ಲಿರುವುದು ಮೂಲತಃ ಭಾವನಾತ್ಮಕ ಐಕ್ಯತೆ, ವಾತಾವರಣದ ಐಕ್ಯತೆ. ವಸ್ತುವೊಂದು ತನ್ನ ಬೌದ್ಧಿಕ ತರ್ಕದಲ್ಲಿ ಬೆಳೆಯುತ್ತ ಹೋಗುವುದಿಲ್ಲ. ಬದಲಾಗಿ ಭಾವನಾ ವಾತಾವರಣದಲ್ಲಿ ಸಾಮ್ಯವಿರುವ, ಪರಸ್ಪರ ಅಖಂಡವಾಗಿ ಬೆರೆಯಬಲ್ಲ ಭಾವಗಳು ಬೆರೆತು, ಒಂದು ವಿಶಿಷ್ಟ ಅನುಭವ ಸೃಷ್ಟಿಯಾಗುತ್ತದೆ. "ತುಂಬ ಚೆದುರಿದಂತೆ ಕಾಣುವ ಘಟಕಗಳನ್ನು ದಾಟಿ ಅದರ ಭಾವ ಸ್ಥಿತಿಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದಾಗ ಗಜಲ್ ಗಳ ತೀವ್ರಾನುಭವ ಸಾಧ್ಯವಾಗುತ್ತದೆ". (ಡಿ. ಆರ್. ನಾಗರಾಜ್ (ಸಂ); ಉರ್ದು ಸಾಹಿತ್ಯ ; ಪು - XXVI ) ಎಂಬ ಡಿ. ಆರ್. ನಾಗರಾಜ್ ಅವರ ಮಾತು ಸತ್ಯವಾಗಿದೆ. ಗಜಲ್ ನ ಸಮಗ್ರ ಅನುಭವ ಒಂದು ಇಡೀ ಸಂಸ್ಕೃತಿಯ ಮುಖ್ಯ ವಿವರಗಳ ತಿಳುವಳಿಕೆಯನ್ನು ನೀಡುತ್ತದೆ. 

       ಭಾಷೆಯ ದೃಷ್ಟಿಯಿಂದ ನೋಡುವುದಾದರೆ, ಉದ್ದಕ್ಕೂ ದ್ವಿಭಾಷಾ ಅಂದರೆ ಕನ್ನಡ-ಉರ್ದು ಸಂದರ್ಭದಲ್ಲಿ ನಿಂತು ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬೇಕಾಗಿ ಬಂದ ಕನ್ನಡ ಗಜಲ್ ಕಾರರು ತಮ್ಮ ಗಜಲ್ ನಲ್ಲಿ ಉರ್ದುವನ್ನು ಎಷ್ಟರಮಟ್ಟಿಗೆ ತಮ್ಮ ಗಜಲ್ ಭಾಷೆಯೊಳಗೆ ಅಳವಡಿಸಿಕೊಳ್ಳಬೇಕು ಎನ್ನುವ ಸಂಘರ್ಷ ಮತ್ತು ವಿವೇಚನೆ ತುಂಬಾ ಪ್ರಮುಖವೆನಿಸುತ್ತದೆ. ಸ್ವಂತಿಕೆ ಮತ್ತು ಅನ್ಯದ ನಡುವಣ ಸಂಘರ್ಷವು ಇಲ್ಲಿದೆ. ಕನ್ನಡ ಗಜಲ್ ಗಳಲ್ಲಿ ಉರ್ದು ಭಾಷೆಯ ಪದಗಳನ್ನು ಬಳಸುವ ಕುರಿತು ದೀರ್ಘ ಚರ್ಚೆ ಸಾಗುತ್ತಿದೆ. ಗೋರಿ, ಬಿಸ್ತರ್, ಫಕೀರ್, ಕಫನ್', ದಫನ್, ದರ್ದ್, ಜನ್ಹಾಜ, ಡೋಲಿ, ನಸೀಬ್, ಗರೀಬ್, ಜನ್ನತ್.... ಮುಂತಾದ ಶಬ್ದಗಳ ಬಳಕೆಯನ್ನು ಯಥೇಚ್ಛವಾಗಿ ಕಾಣುತ್ತೇವೆ. ಭಾಷೆ ನಿಂತ ನೀರಲ್ಲವಾದರೂ ಅನಗತ್ಯವಾಗಿ ಬಳಸಬಾರದು. ಇದನ್ನು ನಯಸೇನ, ಮುದ್ದಣ್ಣನಂತಹ ಕವಿಗಳು ಸಾಂದರ್ಭಿಕವಾಗಿ ಎಚ್ಚರಿಸುತ್ತಲೆ ಬಂದಿದ್ದಾರೆ. ಯಾವುದೇ ಸಾಹಿತ್ಯ ರೂಪದಲ್ಲಿಯೂ ಅನ್ಯಭಾಷೆಯ ಪದಗಳನ್ನು ಅನಗತ್ಯವಾಗಿ ಬಳಸುವುದು ತಪ್ಪು...! ಯಾವ ಪದಗಳಿಗೆ ಸಂವಾದಿಯಾಗಿ ಬೇರೆ ಪದಗಳು ಇಲ್ಲವೊ, ಯಾವ ವಿಷಯ ವಸ್ತು ಅನ್ಯ ಭಾಷೆಯ ಪದಗಳನ್ನು ಬಯಸುತ್ತದೆಯೊ ಅಲ್ಲಿ ಮಾತ್ರ ಬಳಸಬಹುದು. ಆದರೆ ಅದುವೇ ಅತಿಯಾಗಬಾರದು.

      'ಮತ್ಲಾ' ಎಂದರೆ ಆರಂಭ, ಉದಯ. ಗಜಲ್ ನ ಮೊದಲ ಷೇರ್ ಗೆ 'ಮತ್ಲಾ' ಎನ್ನುವರು. ಅದರ ಎರಡೂ ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬರಲೆಬೇಕು. ಆದರೆ ದುರಂತವೆಂದರೆ ಕೆಲವು ಗಜಲ್ ಕಾರರು ಪ್ರಯೋಗ, ಸಂಶೋಧನೆ, ಪ್ರಯತ್ನದ ಹೆಸರಿನಲ್ಲಿ ಗಜಲ್ ನ ಆರಂಭದ ಷೇರ್ ನ ಎರಡು ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬಳಸದೇ, ಅದರ ಸಾನಿ ಮಿಸ್ರಾದಲ್ಲಿ ಮಾತ್ರ ಬಳಸುತಿದ್ದಾರೆ. ಇದರಿಂದ ಗಜಲ್ ನ ಮೂಲ ಲಕ್ಷಣ 'ಮತ್ಲಾ' ವನ್ನೇ ಕಡೆಡಣಿಸುತ್ತಿರುವುದು ವಿಷಾದನೀಯ. ಗಜಲ್ ಅನ್ನು ಮುರಿದು ಕಟ್ಟುವ ಭರದಲ್ಲಿ ಗಜಲ್ ಗೆ ಅಪಚಾರವೆಸಗುತಿದ್ದಾರೆ..!! ಮೀಟರ್... ಗಜಲ್ ನ ಚಂದದ ನಡಿಗೆ. ಪ್ರತಿ ಷೇರ್ ನ ಮಿಸರೈನ್ ಸಮವಾಗಿರಬೇಕು. ಇದು ಸಂಗೀತಕ್ಕೆ ತುಂಬಾ ಅವಶ್ಯಕ. ಕಾರಣ, ಗಜಲ್ ಮೂಲತಃ ಹಾಡುಗಬ್ಬ. ಒಂದು ಮಿಸ್ರಾ ಉದ್ದವಿದ್ದರೆ, ಮತ್ತೊಂದು ಮಿಸ್ರಾ ಚಿಕ್ಕದಿರುವುದು ಗಜಲ್ ನ ಲಕ್ಷಣವಲ್ಲ. ಇದರ ನಿರ್ಲಕ್ಷ ಸಲ್ಲದು. ಇದರ ಕಡೆಗೆ ನಾವು ಗಮನ ಕೊಡಬೇಕಾಗಿದೆ. ದುರಂತವೆಂದರೆ ಕೆಲವು ತಪ್ಪುಗಳೆ ಇಂದು ಗಜಲ್ ಪ್ರಕಾರಗಳಾಗಿವೆ..!! ಇನ್ನೂ ಗಜಲ್ ನಲ್ಲಿ ಮಾತ್ರೆಗಳ ಬಳಕೆ ನಮ್ಮಿಂದ ದೂರವೇ ಉಳಿದಿದೆ!! ಈ ಹಿನ್ನೆಲೆಯಲ್ಲಿ ನಾವು ಮೊದಲು ಗಜಲ್ ಕಾವ್ಯ ಕನ್ನಿಕೆಯನ್ನು ಪ್ರೀತಿಸಬೇಕಾಗಿದೆ, ಗಜಲ್ ಪರಂಪರೆಯನ್ನು ತಿಳಿದುಕೊಳ್ಳಬೇಕಾಗಿದೆ. ಗಜಲ್ ರಚನೆಗಿಂತಲೂ ಮುಂಚೆ ಅದರ ಆಳವಾದ ಮತ್ತು ಗಂಭೀರವಾದ ಅಧ್ಯಯನ ಮಾಡಬೇಕಾಗಿದೆ.‌

          'ಮಕ್ತಾ'  ಎಂದರೆ ಅಂತ್ಯ, ಮುಕ್ತಾಯ ಎಂದರ್ಥ. ಗಜಲ್ ನ ಕೊನೆಯ ಷೇರ್ ಗೆ ಮಕ್ತಾ ಎಂದು ಕರೆಯುವರು. ಈ ಮಕ್ತಾದ ಯಾವ ಮಿಸ್ರಾದಲ್ಲಾದರೂ 'ಗಜಲ್ ಗೊ' ತಮ್ಮ 'ತಖಲ್ಲಕಸನಾಮ' ಬಳಸಬಹುದಾಗಿದೆ. ಈ ತಖಲ್ಲುಸನಾಮ ಅನಿವಾರ್ಯವಲ್ಲವಾದರೂ ಅದು ಇದ್ದರೆ ಮಾತ್ರ ಆ ಷೇರ್ 'ಮಕ್ತಾ'  ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದೊಂದು ಕೇವಲ ಷೇರ್ ಅನಿಸಿಕೊಳ್ಳುವುದು. ಹಾಗಂತ ಈ ತಖಲ್ಲುಸನಾಮದ ಬಳಕೆ ಒತ್ತಾಯ, ಅನಗತ್ಯವೆನಿಸದೆ ಭಾವನೆಗಳಿಗೆ ವೇದಿಕೆಯನ್ನು ಒದಗಿಸಿಕೊಡುವಂತಿರಬೇಕು.

        'ತರಹೀ ಗಜಲ್' ಗಜಲ್ ನ ಪ್ರಕಾರಗಳಲ್ಲಿ ತುಂಬಾ ಪ್ರಮುಖವೆನಿಸುತ್ತದೆ. "ಹಿಂದಿ, ಉರ್ದುವಿನ 'ತರಹ', 'ಇಸ್ ತರಹ', ಎಂಬ ಶಬ್ಧಗಳಿಂದ 'ತರಹೀ' ಎಂಬ ಪದ ಹುಟ್ಟಿದೆ. ಕನ್ನಡದಲ್ಲಿ ಇವುಗಳಿಗೆ ಸಂವಾದಿಯಾಗಿ 'ಇಂತಹ', 'ಇದರಂತಹ', ಎಂಬ ಶಬ್ಧಗಳನ್ನು ಬಳಸಲಾಗುತ್ತದೆ. ಅಂದರೆ ಮಾದರಿಯಾಗಿ ನೀಡಲಾಗಿರುವ ಮಿಸ್ರಾದಂತಹ ಜಮೀನನ್ನು ಬಳಸಿ ಬರೆಯುವ ಗಜಲ್ ಗಳಿಗೆ 'ತರಹೀ ಗಜಲ್' ಎನ್ನುತ್ತಾರೆ. (ಗಿರೀಶ್ ಜಕಾಪುರೆ: ನಿನ್ನ ಮರೆಯುವ ಮಾತು: ಪು-xiii ) ತರಹೀ ಗಜಲ್ ಬರೆಯುವ ಗಜಲ್ ಕಾರರು ತಾವು ಪರರ ಯಾವ ಮಿಸ್ರಾ ಪಡೆಯಬೇಕು, ಪಡೆದಂತಹ ಮಿಸ್ರಾವನ್ನು ತಮ್ಮ ಗಜಲ್ ನಲ್ಲಿ ಎಲ್ಲಿ ಬಳಸಬೇಕು ಎಂಬುದು ಬಹು ಚರ್ಚೆಯ ವಿಚಾರ. "ಮತ್ಲಾದ ಊಲಾ ಮಿಸ್ರಾ ಮತ್ತು ಸಾನಿ ಮಿಸ್ರಾಗಳಲ್ಲಿ ಹೆಚ್ಚಾಗಿ ಸಾನಿ ಮಿಸ್ರಾ ಆಯ್ದುಕೊಂಡಿರುವ ಉದಾಹರಣೆಗಳು ಹೆಚ್ಚಾಗಿವೆ" ಎನ್ನುತ್ತಾರೆ ಗಿರೀಶ್ ಜಕಾಪುರೆ. (ಗಿರೀಶ್ ಜಕಾಪುರೆ : ನಿನ್ನ ಮರೆಯುವ ಮಾತು : ಪು-xv ) ತೆಗೆದುಕೊಂಡ 'ಸಾನಿ ಮಿಸ್ರಾ' ವನ್ನು ತರಹೀ ಗಜಲ್ ಬರೆಯುವ 'ಗಜಲ್ ಗೋ' ತಮ್ಮ ಗಜಲ್ ನಲ್ಲಿಯೂ 'ಸಾನಿ ಮಿಸ್ರಾ' ವನ್ನಾಗಿಯೇ ಬಳಸಬೇಕು ಎನ್ನಲಾಗುತ್ತಿದೆ. ಇನ್ನೂ ಷೇರ್ ನಿಂದ ತರಹೀ ಮಿಸ್ರಾ ಆಯ್ದುಕೊಳ್ಳಬೇಕಾದರೆ 'ಸಾನಿ ಮಿಸ್ರಾ' ವನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ಸಂದೇಹಗಳು ಮನದಲ್ಲಿ ಉಳಿಯುತ್ತವೆ. ಇವುಗಳಿಗೆ ಪರಿಹಾರ ದೊರೆಯಬೇಕಾದರೆ ನಮ್ಮಲ್ಲಿ 'ಮುಶಾಯಿರಾ' ಸಂಸ್ಕೃತಿಯು ಬೆಳೆಯಬೇಕು ಹಾಗೂ ಗಜಲ್ ಕುರಿತು ಶಾಸ್ತ್ರೀಯ ಅಧ್ಯಯನ ನಡೆಯಬೇಕು.

     ಸಾಮಾನ್ಯವಾಗಿ ಯಾವುದೇ ಕಾವ್ಯ ಪ್ರಕಾರವು ಪದಗಳ ಪುನರಾವರ್ತನೆಯನ್ನು ಬಯಸುವುದಿಲ್ಲ. ಒಂದು ವೇಳೆ ಒಂದೇ ಶಬ್ಧಕ್ಕೆ ಬೇರೆ ಬೇರೆ ಅರ್ಥಗಳಿದ್ದರೆ ಬಳಸಬಹುದು. ಇದೇನು ಲಿಖಿತ ನಿಯಮವಲ್ಲ, ಇದೊಂದು ಅಧ್ಯಹಾರ! ಇದಕ್ಕೆ ಶಬ್ದಸಂಪತ್ತು, ಅಧ್ಯಯನ, ಅಧ್ಯಾಪನದ ಅವಶ್ಯಕತೆ ಇದೆ.

       ಈ ರೀತಿಯಲ್ಲಿ ಗಜಲ್ ಮಧುಶಾಲೆಯಲ್ಲಿ ಹಲವಾರು ಸಂದೇಹ, ಸವಾಲುಗಳು ಇವೆ. ಇವುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಗಜಲ್ ಪರಂಪರೆಯ ಪರಿಚಯ ಅಗತ್ಯವೆನಿಸುತ್ತದೆ. ಗಜಲ್ ಬರೆಯುವುದಕ್ಕಿಂತ ಮುಂಚೆ ನಾವು ಗಜಲ್ ಛಂದಸ್ಸು, ಆಶಯಗಳನ್ನು ಕುರಿತು ಅರಿಯಬೇಕಿದೆ. ಗಜಲ್ ಬರಹ ಮನೋರಂಜನೆಯ ಸರಕಲ್ಲ, ಸಮಯ ಕೊಲ್ಲುವ ಅಸ್ತ್ರವಂತೂ ಅಲ್ಲವೇ ಅಲ್ಲ. ಅದೊಂದು ಧ್ಯಾನ ಬಯಸುವ ಅನುಪಮ ಸಾಹಿತ್ಯ ರೂಪ. ಇದಕ್ಕೆ ಬದ್ಧತೆ ಹಾಗೂ ಪ್ಯಾಷನ್ ಬೇಕು. ಈ ಹಿನ್ನೆಲೆಯಲ್ಲಿ 'ಋಷಿಯಾಗದವನು ಕವಿಯಾಗಲಾರ' ಎಂಬುದು ಸಾರ್ವತ್ರಿಕವೆನಿಸುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಕವಿ ರಕೀಬ್ ಮುಕ್ತಾರ್ ಅವರು ಈ ರೀತಿಯಲ್ಲಿ ಹೇಳಿದ್ದಾರೆ.

"ಗಜಲ್ ಗಜಲ್ ಮೆ ಬಡಾ ಫರ್ಕ್ ಹೈ ಮೇರೆ ಭಾಯಿ

ಕಹೀ ಉತಾರೀ ಗಯೀ ಹೈ ಕಹೀ ಬನಾಯೀ ಗಯೀ ಹೈ"

 

ಪರಾಮರ್ಶನ ಗ್ರಂಥಗಳು

 

೦೧. ಬಿ. ಎ. ಸನಾದಿ (ಅನು) : ಮಿರ್ಜಾ ಗಾಲಿಬ್ : ೧೯೯೩

೦೨. ಶಾಂತರಸ : ಗಜಲ್ ಮತ್ತು ಬಿಡಿ ದ್ವಿಪದಿ : ೨೦೦೪

೦೩. ಡಿ. ಆರ್. ನಾಗರಾಜ್ : ಉರ್ದು ಸಾಹಿತ್ಯ : ೨೦೧೫

೦೪. ರಂ. ಶ್ರೀ. ಮುಗುಳಿ : ಕನ್ನಡ ಸಾಹಿತ್ಯ ಚರಿತ್ರೆ : ೨೦೧೫

೦೫. ಶ್ರೀಧರ್ ಹೆಗಡೆ ಭದ್ರನ್ (ಸಂ) : ಸಾಹಿತ್ಯ ಚಳುವಳಿಗಳು : ೨೦೧೮

೦೬. ಗಿರೀಶ್ ಜಕಾಪುರೆ : ಸಾವಿರ ಕಣ್ಣಿನ ನವಿಲು : ೨೦೧೮

೦೭. ಗಿರೀಶ್ ಜಕಾಪುರೆ : ನಿನ್ನ ಮರೆಯುವ ಮಾತು : ೨೦೧೯

೦೮. ಶ್ರೀ ಪ್ರಭಾವತಿ ಎಸ್. ದೇಸಾಯಿ : ಭಾವಗಂಧಿ : ೨೦೨೦

೦೯. ಅಂತರ್ಜಾಲ...

 

ಡಾ. ಮಲ್ಲಿನಾಥ ಎಸ್.ತಳವಾರ, ರಾವೂರ

ಕನ್ನಡ ಪ್ರಾಧ್ಯಾಪಕರು,

ನೂತನ ಪದವಿ ಮಹಾವಿದ್ಯಾಲಯ,

ಕಲಬುರಗಿ ೫೮೫ ೧೦೩

📱೯೯೮೬೩ ೫೩೨೮೮

ಡಿಸೆಂಬರ್ 03, 2020

ಪಂಡಿತ್ ಎಂ.ವೆಂಕಟೇಶ್ ಕುಮಾರ್ ತೊರೆದು ಜೀವಿಸಬಹುದೆ

 


ಕನಕದಾಸರು ಬರೆದ ಅದ್ಭುತ ಕೀರ್ತನೆಗಳಲ್ಲಿ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ” ಕೀರ್ತನೆಯೂ ಒಂದು. ಇದನ್ನು ತಮ್ಮ ಅತ್ಯದ್ಭುತ ಗಾಯನದ ಮೂಲಕ ಜಗತ್ತಿನುದ್ದಗಲಕ್ಕೂ ಪಸರಿಸಿದ ಕೀರ್ತಿ ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರಿಗೆ ಸಲ್ಲುತ್ತದೆ. 

ವೆಂಕಟೇಶ್ ಕುಮಾರ್ ಅವರು ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರು. ಜಾನಪದ ಕಲಾವಿದರಾಗಿದ್ದ ಇವರ ತಂದೆಯೇ ಇವರ ಪ್ರಥಮ ಗುರು. ಇವರ ಗಾಯನದ ಮೇಲೆ ಇವರ ತಂದೆಯ ಶೈಲಿಯ ಛಾಪಿದೆ ಎಂದು ಹೇಳುತ್ತಾರೆ.

ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿದ ಗದಗದ ವಿರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಇವರಿಗೆ ಗ್ವಾಲಿಯರ್ ಘರಾಣೆಯ ಎಲ್ಲ ಹೊಳವುಗಳನ್ನು ತಿಳಿಸಿ, ಅರೆಸಿ ಕುಡಿಸಿದರು. ಗವಾಯಿಗಳ ಆಶೀರ್ವಾದದೊಂದಿಗೆ ಮುಂದೆ ಕನ್ನಡ ನಾಡು ಎಂದೂ ಮರೆಯದ ಗಾಯಕರಾಗಿ ರೂಪುಗೊಳ್ಳುತ್ತಾರೆ.

ಧಾರವಾಡ ನಿವಾಸಿಯಾಗಿರುವ ವೆಂಕಟೇಶ್ ಕುಮಾರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಆಕಾಶವಾಣಿಯ ಏ ಶ್ರೇಣಿಯ ಕಲಾವಿದರಾಗಿ ಸೇವೆ ಸಲ್ಲಿಸಿ ಅಲ್ಲಿಂದ ಅದೇಷ್ಟೋ ಕಿವಿಗಳಿಗೆ ಇಂಪನ್ನು ಹರಿಸಿದ್ದಾರೆ.

ವೆಂಕಟೇಶ್ ಕುಮಾರ್ ಅವರ ಗಾಯನದಲ್ಲಿ ಧಾರವಾಡದ ಮಣ್ಣಿನ ಸೊಗಡು ಮತ್ತು ಕೆಲವು ಸಾರಿ ಪಂಡಿತ್ ರಾಜಗುರುರವರ ಗಾಯನದ ಛಾಪು ಕಾಣುತ್ತವೆ. ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರ ಸಾಲಿನ ಇತ್ತೀಚಿನ ಗಾಯಕರಲ್ಲಿ ಇವರು ಮಂಚೂಣಿಯಲ್ಲಿದಾರೆಂದರೆ ಅತಿಶಯೋಕ್ತಿಯಾಗಲಾರದು. ಇವರು ದೇಶದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೨೦೧೬ರ ಎಪ್ರಿಲ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟೇಶ್ ಕುಮಾರ್ ಅವರು ಕನಕದಾಸರ ಈ ಕೀರ್ತನೆಯನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ಆ ಅಮೋಘ ಗೀತ ಗಾಯನ ಕೇಳಿ ನೀವೂ ಮೈಮರೆಯಿರಿ….


ನವೆಂಬರ್ 30, 2020

003: ಗಜಲ್

 ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನು

ನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು 


ಕಡು ಬಿಸಿಲಿನ ಬೆವರಿನಲ್ಲಿಯೇ ನನ್ನ ಪ್ರಯಾಣ ಸಾಗುತಿತ್ತು 

ಆ ನನ್ನ ದಾರಿಯಲ್ಲಿ ಒದ್ದೆ ಮೋಡವಾಗಿ ಬಂದವಳು ನೀನು


ನಾನು ಪ್ರೇಮದ ಅನುಪಮ ಅನುಭೂತಿಯನ್ನೇ ಮರೆತಿದ್ದೆ

ಕಳೆದು ಹೋದ ದಿನಗಳಿಗೆ ಹೊಸ್ತಿಲಾಗಿ ಬಂದವಳು ನೀನು


ಮನದ ಛಾವಣಿಯು ವಿರಹದ ಮಳೆಯಿಂದ ಹಸಿಯಾಗಿದೆ 

ಆ ತಂಪಾದ ರಾತ್ರಿಗಳಲ್ಲಿ ಕಂಬಳಿಯಾಗಿ ಬಂದವಳು ನೀನು


ನಾನು ಮರುಭೂಮಿಯಲ್ಲಿ ಏಕಾಂಗಿಯಾಗಿ ಅಲೆದಾಡುತ್ತಿದ್ದೆ 

ಮನ ತಣಿಸುವ ಸಿಹಿ ನೀರಿನ ಮಡಕೆಯಾಗಿ ಬಂದವಳು ನೀನು


ಸಮಸ್ಯೆಗಳ ಮಾಯಾ ಜಾಲದಲ್ಲಿ ಕಳೆದು ಹೋಗಿದ್ದೆ ನಾನು 

ನನ್ನ ಎಲ್ಲ ಗೊಂದಲಗಳಿಗೆ ಪರಿಹಾರವಾಗಿ ಬಂದವಳು ನೀನು


ಮನದರಸಿಯ ಚಿತ್ರವನ್ನು ಮನಸಾರೆ ಬಿಡಿಸುತ್ತಿದ್ದನು 'ಮಲ್ಲಿ'

ಆ ಕಲಾಕೃತಿಗೆ ನೀರೆರೆದು ಜೀವ ತುಂಬಲು ಬಂದವಳು ನೀನು 



-✍️ರತ್ನರಾಯಮಲ್ಲ

9986353288

ನವೆಂಬರ್ 15, 2020

002: ಗಜಲ್

ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ 

ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್


ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿ 

ಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ 


ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆ 

ಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ 


ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆ 

ಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ 


'ಮಲ್ಲಿ' ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದು 

ಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್..



-✍️ರತ್ನರಾಯಮಲ್ಲ

99863 53288

ನವೆಂಬರ್ 13, 2020

ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ


        ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ... ಮುಂಚೂಣಿಯಲ್ಲಿವೆ. 

        ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ... ..ಎಂತಲೂ ಕರೆಯಲಾಗುತ್ತಿದೆ. ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು 'ತಂಕಾ' ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ...!! 

        'ಚಕಾ' ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ 'ತಂಕಾ' ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ಮಸೋಕಾ ಶಿಕಿ ಅವರು ಹೇಳುತ್ತಾರೆ. ಇದು ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿದ್ದು, ಮುರಿಯದ ಒಂದೇ ಸಾಲಿನಲ್ಲಿ ಬರೆಯಲಾಗುತಿತ್ತು. ಮುಂದೆ ಇಂಗ್ಲೀಷ್ ಭಾಷಾಂತರಗಳಲ್ಲಿ ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು.. 

        ಅಕಿ-ಸುಕೆ ಯವರ ಪ್ರಸಿದ್ಧ ತಂಕಾ ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತದೆ. 

        "ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು" 

        ಕ್ರಿ.ಶ.670 ಮತ್ತು ಕ್ರಿ. ಶ.1235 ರ ಮಧ್ಯದ 565 ವರ್ಷಗಳಲ್ಲಿಯ ಅನುಪಮ ಕವನಗಳನ್ನು ಆಯ್ದು ಕ್ರಿ.ಶ. 1235 ರಲ್ಲಿ ನೂರು ಜನರ, ನೂರು ಕವನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸದೈಯೋ ರುಜಿವಾರ ರವರ ಅಮೋಘ ಸಾಧನೆಯೆಂಬುದು ತಿಳಿದು ಬರುತ್ತದೆ. ಇದನ್ನೇ ಮುಂದೆ ವಿಲಿಯಂ ಪೋರ್ಟರ್ ರವರು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ.  ಈ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತಿವೆ..! 

        ಪ್ರಣಯದ ಆರಂಭದಲ್ಲಿ ಈ ತಂಕಾಗಳು ಕೋಮಲವಾಗಿರುತ್ತವೆ. ಇಬ್ಬರು ಪ್ರೇಮಿಗಳು ಒಟ್ಟಿಗೆ ಇರಲು ರಾತ್ರಿಯಲ್ಲಿ ನುಸುಳುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಪರಸ್ಪರ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಈ ತಂಕಾಗಳನ್ನು ಬಳಸುತಿದ್ದರು. 


        ಜಪಾನಿನ ಸಂಸ್ಕೃತಿಯಲ್ಲಿ ತಂಕಾ ಪ್ರಮುಖ ಸಾಹಿತ್ಯ ರೂಪವಾಗಿದೆ. ಈ ತಂಕಾಗಳು ಭಾವನಾತ್ಮಕವಾಗಿ ಓದುಗನ ಕಲ್ಪನೆಗೆ ಗರಿ ಕಟ್ಟುವಂತೆ ಇರುತ್ತವೆ. ಪ್ರಾಸ, ಲಯ ಇಲ್ಲಿ ಇರುವುದಿಲ್ಲವಾದರೂ ಶ್ಲೇಷೆ ಇರುತ್ತದೆ. ಪದಗಳ ಪರ್ಯಾಯ ಅರ್ಥಗಳೊಂದಿಗಿನ ಆಟಗಳು ಇಲ್ಲಿ ಇರುತ್ತವೆ. ಇದರಲ್ಲಿ ಚೀನಿ ಪದಗಳ ಪ್ರಭಾವವಿಲ್ಲ, ಅಪ್ಪಟ ಜಪಾನಿನ ಭಾಷೆಯ ಬಳಕೆಯಾಗಿದೆ. ಜನಜೀವನದ ಸಣ್ಣಪುಟ್ಟ ದೃಶ್ಯಗಳು ತಂಕಾಗಳಾಗಿವೆ. ಇಲ್ಲಿ ರಕ್ತಪಾತ, ಅಂಧಕಾರ, ಅಪರಾಧ, ಭೂಗತ ಜಗತ್ತು, ಮೋಸ, ಕಪಟತನ, ಅತಿರೇಕದ ಭಾವ, ವಿಜೃಂಭಣೆ... ಯಾವುದು ಇರುವುದಿಲ್ಲ. ಹೃದಯಕ್ಕೆ ಮುದ ನೀಡುವಂತಿರುತ್ತವೆ. ಕವಿತೆಯ ಶಕ್ತಿ ಇರುವುದು ಕಾವ್ಯದ ನಿರ್ವಾತದಲ್ಲಿ. ಶೂನ್ಯದಿಂದ ಸಂಪಾದನೆಯೆಡೆಗೆ ಸಾಗುತ್ತಿರುತ್ತದೆ. ಇಬ್ಬರು ವ್ಯಕ್ತಿಗಳ ಅಥವಾ ಎರಡು ಚಿತ್ರಗಳು ಒಂದಕ್ಕೊಂದು ಭೇಟಿಯಾದಾಗ ಮೂಡುವ ಒಂದು ಕ್ಷಣದ ಭಾವವೇ 'ತಂಕಾ' ಕ್ಕೆ ಜನ್ಮ ನೀಡುತ್ತದೆ. ಮೌನದ ಘಳಿಗೆಯಲ್ಲಿ ಉದಯಿಸಿದ ಕವಿತೆಯೊಂದು ಹೀಗಿದೆ. 

         "ಎರಡು ಎ.ಎಂ  

ನಾನು ನನ್ನ ಮಲಗುವ ಕೋಣೆ ಬಾಗಿಲು ತೆರೆದಿದ್ದೇನೆ 

ಬಿಳಿ ಬೆಕ್ಕು ಓಡಿ ಹೋಯಿತು 

ಕ್ಲಾಂಗಿಂಗ್ ಪತನದಿಂದ ಬೆಚ್ಚಿ ಬಿದ್ದಿದೆ  

ಸತ್ಕಾರದ ಜಾರ್ನ್ ಲೋಹದ ಮುಚ್ಚಳದಲ್ಲಿ" 

         ಇದು ತುಂಬಾ ಪ್ರಮುಖವಾದ ತಂಕಾ. ಇದರಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಇಲ್ಲಿಯ ಮೂರನೆ ಸಾಲನ್ನು "ಪಿವೋಟ್" ಎನ್ನುವರು. ಅಂದರೆ ಮಹತ್ವದ ತಿರುವು ಎಂದಾಗುತ್ತದೆ. ಇದು "ತಂಕಾ" ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸುತ್ತದೆ. ಈ ತಂಕಾದಲ್ಲಿ 'ಬಿಳಿ ಬೆಕ್ಕು ಓಡಿ ಹೋಯಿತು' ಎಂಬ ಮೂರನೆಯ ಸಾಲು ತಂಕಾವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುತ್ತದೆ..! 

        ಇಷ್ಟೆಲ್ಲ ಗಮನಿಸಿದಾಗ ನಮಗೆ ಒಂದು ಅಂಶ ತುಂಬಾ ಕಾಡುತ್ತದೆ. 'ಈ  ತಂಕಾ ಎಂಬ ಜಪಾನಿನ ಕಾವ್ಯ ಪ್ರಕಾರ ನಮಗೆ ಇಷ್ಟವಾಗುತ್ತಿರುವುದು ಯಾಕೆ' ಎಂಬ ಪ್ರಶ್ನೆ. ಅದಕ್ಕೆ ನಾವು ಹಲವು ಕಾರಣಗಳನ್ನು ಹುಡುಕಬಹುದು. ನಮ್ಮ ಗೌತಮ ಬುದ್ಧ ಅವರನ್ನು ಜಪಾನಿನ ಜನರು ಸ್ವೀಕರಿಸಿದ್ದು, ಭಾರತೀಯರಂತೆ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ನಮ್ಮಂತೆಯೇ ಅವರೂ ಕೂಡ ಸಂಪ್ರದಾಯಿಕ ಮನಸ್ಥಿತಿ ಹೊಂದಿರುವುದು... ಇವೆಲ್ಲ ಕಾರಣಗಳು ಆಗಿರಬಹುದು...!! 

        ಇಲ್ಲಿಯವರೆಗೆ ನಾವು ಜಪಾನಿನ ತಂಕಾಗಳ ಬಗ್ಗೆ ಮಾಹಿತಿ ಹಂಚಿಕೊಂಡೆವು. ಇನ್ನೂ ಕನ್ನಡದ ಕೆಲವು ತಂಕಾಗಳನ್ನು ಅಧ್ಯಯನಕ್ಕಾಗಿ ಗಮನಿಸಬಹುದು. 

*******


ಸ್ಮಶಾನದಲ್ಲಿ  

ಪಿಂಡ ತಿನ್ನೋರ ನೋಡಿ  

ಗೋರಿಯಲ್ಲಿಯ  

ಶವ ವೇದನೆಯಲ್ಲಿ  

ಕಿಲ ಕಿಲ ನಗ್ತಿತ್ತು .. 


ಸಾವಿಗೆ ಎಲ್ಲಿ  

ಮಾನದಂಡ, ಜೀವಕ್ಕೆ  

ಎಲ್ಲಿದೆ ನ್ಯಾಯ;  

ಬಾಳ ತಕ್ಕಡಿಯಲ್ಲಿ 

ಎಲ್ಲವೂ ಅಯೋಮಯ..! 


ಬುದ್ಧಿವಂತರು  

ಸಾಕಷ್ಟು ಇರುವರು  

ಸಮಾಜದಲ್ಲಿ ;  

ಹೃದಯವಂತರಿಗೆ 

ಹುಡುಕುತಿದೆ ಇಂದು  


ಬಿಡುವು ಇಲ್ಲ  

ಎನ್ನುವ ವ್ಯಕ್ತಿಗಳ 

ಸ್ವತ್ತಲ್ಲ ಕಾಲ  

ಪಾದರಸದಂತದ್ದು 

ಚಲನೆಗೆ ಸ್ವಂತದ್ದು  


ನಂಬಿಕೆ ಜೀವ 

ತೆಗೆಯುವ ಸಾಧನ 

ಆಗಬಾರದು 

ಬಾಳು ಮುನ್ನಡೆಸುವ 

ದಾರಿದೀಪ ಆಗಲಿ  


ಗೌರವಿಸುವ 

ಕಲೆ ಹೃದಯದಲ್ಲಿ   

ಮೂಡಿರುತ್ತದೆ; 

ಪಡೆದವರಿಗಿಂತ  

ಕೊಟ್ಟವರು ತೃಪ್ತರು.. 


ಕತ್ತಲೆಂದಿಗೂ  

ಅಮಂಗಳವಲ್ಲಯ್ಯ  

ನಮ್ಮ ಬಾಳಿಗೆ  

ಅದುವೇ ದೀಪವಾಗಿ  

ಮುನ್ನಡೆಸುವುದಯ್ಯ  


ಮಹಾಭಾರತ  

ಓದಿ ನೋಡಿ, ಬದುಕಿನ  

ಏರಿಳಿತವು  

ಹೃದಯದಿ ಇಳಿದು  


ದಾರಿ ತೋರಿಸುತ್ತದೆ.. 


✍️ ಡಾ. ಮಲ್ಲಿನಾಥ ಶಿ. ತಳವಾರ 

ಕನ್ನಡ ಪ್ರಾಧ್ಯಾಪಕರು, 

ನೂತನ ಪದವಿ ಮಹಾವಿದ್ಯಾಲಯ, 

ಕಲಬುರಗಿ 585 103 

ಮೋಬೈಲ್ ಸಂಖ್ಯೆ-9986353288



ನವೆಂಬರ್ 06, 2020

001: ಗಜಲ್

ಸಾತ್ವಿಕತೆ ಏಕೆ ಗೆಲುವಿನ ಹೊಸ್ತಿಲಲ್ಲಿ ಎಡವುತಿದೆ 

ತಾಮಸವೇಕೆ ಸಂಭ್ರಮದ ಮಧ್ಯೆ ಹೊಳೆಯುತಿದೆ 


ಬುದ್ಧಿಯ ಫಸಲು ಕುಟೀಲತೆಯಲ್ಲಿ ಬೆಳೆಯುತಿದೆ 

ಮುಗ್ಧತೆಯು ಏಕೆ ಪದೇ ಪದೇ ಮೋಸ ಹೋಗುತಿದೆ 


ಒಳ್ಳೆಯವರ ಬಲಿ ಇಲ್ಲಿ ಪುನರಾವರ್ತನೆ ಆಗುತಿದೆ  

ಕಂಬನಿಯ ಉಪ್ಪು ಅಡುಗೇಕೆ ಬಳಕೆಯಾಗುತಿದೆ 


ಸತ್ಯ ಗೆಲ್ಲುತ್ತದೆ ಎನ್ನುತ ಸುಳ್ಳನ್ನೇ ಪ್ರೀತಿಸುತಿರುವರು 

ಜೀವನಶ್ರದ್ಧೆಯು ಏಕೆ ಮಸಣದ ಹಾದಿ ಹಿಡಿಯುತಿದೆ 


ಕಾಲವು ಕಾಲುಗಳಿಗೆ ಬೇಡಿ ಹಾಕಿ ನಿಲ್ಲಿಸುತಿದೆ 'ಮಲ್ಲಿ' 

ಜೀವನವೇಕೆ ಕನ್ನಡಿಯೊಳಗಿನ ಗಂಟಾಗಿ ಕಾಡುತಿದೆ 


-✍️ರತ್ನರಾಯಮಲ್ಲ

ನವೆಂಬರ್ 05, 2020

ಮಲ್ಲಿ: ಗಜಲ್ ಗಲ್ಲಿಯಲ್ಲಿ


ನನ್ನೆಲ್ಲ ಓದುಗ ಬಳಗಕ್ಕೆ ಒಂದು ಖುಷಿಯ ಸುದ್ದಿಯನ್ನು ನೀಡಲು ಬಯಸುತ್ತೇನೆ. ಕಲಬುರಗಿಯ ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿನಾಥ ಶಿ. ತಳವಾರ ಅವರು ಇಲ್ಲಿ ಪ್ರತಿ ವಾರ "ಮಲ್ಲಿ: ಗಜಲ್ ಗಲ್ಲಿಯಲ್ಲಿ" ಅಂಕಣದಲ್ಲಿ ವಾರಕ್ಕೊಂದು ಗಜಲ್ ಬರೆಯಲಿದ್ದಾರೆ.

ಡಾ. ಮಲ್ಲಿನಾಥ ಶಿ. ತಳವಾರ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರು. ಕವನ, ಕಥಾಸಂಕಲನ, ಸಂಶೋಧನಾ ಮಹಾಪ್ರಬಂಧ, ವ್ಯಕ್ತಿ ಹೊಸ ಪರಿಚಯ, ಹೀಗೆ ಹಲವು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಕಥೆ, ಕವನಗಳು, ಗಜಲ್ ಗಳು ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗಿವೆ. ತಾಲ್ಲೂಕು, ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗಳಲ್ಲಿ ಕವನ ವಾಚಿಸಿದ್ದಾರೆ. ಪ್ರಸ್ತುತವಾಗಿ ಚಿತ್ತಾಪುರ ತಾಲೂಕಿನ ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತಿದ್ದಾರೆ.

ಈಗ ಡಾ. ಮಲ್ಲಿನಾಥ ಶಿ. ತಳವಾರ ಅವರು ತಮ್ಮ ಈ ಅಂಕಣದಿಂದ ನಮ್ಮೆಲ್ಲರಿಗೆ ಗಜಲ್ ಸಾಹಿತ್ಯದ ರಸದೌತಣವನ್ನು ಉಣಬಡಿಸಲಿದ್ದಾರೆ. ಕನ್ನಡ ವಾಙ್ಮಯ ಪ್ರಪಂಚದಲ್ಲಿ ಒಣ ಕೆರೆಯಾಗಿದ್ದ ಗಜಲ್ ಪ್ರಕಾರವನ್ನು ಝರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಉರ್ದು ಸೊಗಡನ್ನು ಅತ್ಯಂತ ನಾಜೂಕಾಗಿ ಕನ್ನಡದ ಮಾಧುರ್ಯದಲ್ಲಿ ಬೆರೆಸುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಓದುಗರಾಗಿ ಪ್ರೋತ್ಸಾಹಿಸುತ್ತೇವೆ ಎಂದು ಭರವಸೆ ನೀಡೋಣ ಅಲ್ಲವೆ.

ಅಕ್ಟೋಬರ್ 16, 2020

ಗೋರ್ ಮಾಟಿ

 

ನಿಜಕ್ಕೂ ಖೇದವೆನಿಸುತ್ತಿದೆಹೌದು, ನನ್ನ ಮಾನಸಿಕ ಅವಸ್ಥೆಯನ್ನು ತೋಡಿಕೊಳ್ಳಲಿಕ್ಕೂ ನಮಗೆ ನಮ್ಮದೇ ಆದ ಲಿಪಿ ಇಲ್ಲ. ನಮ್ಮವರ ಬಗ್ಗೆ ಬರೆದುಕೊಳ್ಳಲೂ ನನಗೆ ಬೇರೆ ಲಿಪಿಯ ಮೊರೆ ಹೋಗಬೇಕಾಗಿರುವುದು ನಮ್ಮ ಅಸಹಾಯಕತೆಗೆ ಹಿಡಿದ ಕೈಗನ್ನಡಿ !!

ಇತ್ತೀಚೆಗೆ ಬೀದರ್ ರಂಗ ಮಂದಿರದಲ್ಲಿ ಜರುಗಿದ "ಯುವ ಬಂಜಾರ" ಸಮ್ಮೇಳನದಲ್ಲಿ ಕಳೆದ ಎರಡು ಘಂಟೆಗಳು ನನ್ನನ್ನು ಈಗಲೂ ಕಾಡುತ್ತಿವೆ. ಬಹುಶಃ ಅಷ್ಟೊಂದು ಬಂಜಾರಾ ಭಾಷಿಕರನ್ನು ಹತ್ತಿರದಿಂದ ಕಂಡದ್ದು ಇದೇ ಮೊದಲ ಬಾರಿ. ಯಾಕೆಂದರೇ ಈವತ್ತಿಗೂ ಕೂಡ ನಮ್ಮನ್ನು ಇತಿಹಾಸ ಗುರುತಿಸುವುದು "ಅಲೆಮಾರಿ", "ಕಾಡು ವಾಸಿ"ಗಳೆಂದೆ. ಅಲ್ಲಿಯ ಭಾವತೀವ್ರತೆ ನನ್ನನ್ನು ಯಾವ ಪರಿ ಕಾಡಿದೆಯೆಂದರೇ ನಾನು ಲೇಖನವನ್ನು ಟಂಕಿಸುವಷ್ಟರ ಮಟ್ಟಿಗೆ. ಆಂಗ್ಲ ರಾಜಕಾರಣಿ ಚರ್ಚಿಲ್ ಉಕ್ತಿಗಳು ಯಾಕೋ ಒಮ್ಮೆಲೆ ನೆನಪಾದವು. ಅವನು ಹೇಳಿದಂತೆ those who ignore history are destined to suffer from the mistakes of it.  ಸಾಲುಗಳು ಲಂಬಾಣಿಗರ ವಿಚಾರದಲ್ಲಿ ಇಂದಿಗೂ ಪ್ರಸ್ತುತ. ಲಂಬಾಣಿಗರ ಇತಿಹಾಸವನ್ನು ಓದದ ನಾವುಗಳು ಇತಿಹಾಸದ ಪ್ರಹಾರಕ್ಕೆ ಇಂದಿಗು ನಲುಗುತ್ತಿದ್ದೇವೆ.

ನಿಜ 'ಗೋರ್ ಮಾಟಿ'ಗಳು ತಮ್ಮ ಭವಿತವ್ಯವನ್ನು ಮರೆತು ಬಹಳ ಮುಂದೆ ಸಾಗಿ ಬಂದಿದ್ದೇವೇನೋ ಅನ್ನಿಸುತ್ತಿದೆ. ನಾವು ಮತ್ತೊಮ್ಮೆ ನಮ್ಮ ಗತ ವೈಭವ ಮೆಲುಕು ಹಾಕಲೇಬೇಕಾದ ಸವಾಲು ನಮ್ಮ ಮುಂದೆ ಇದೆ. ಯಾಕಂದ್ರೆ ನಾವು ನೀರಿನಂತೆ. ಯಾವ ಆಕಾರದ ಪಾತ್ರೆಗೆ ನಾವು ಧುಮುಕುತ್ತೇವೋ, ಅದೇ ಸ್ವರೂಪ ಪಡೆದುಕೊಂಡು ಬಂದಿದ್ದೇವೆ. ಯಾವುದೇ ಪ್ರದೇಶಕ್ಕೆ ಸಾಗಿದರೂ ಪ್ರದೇಶದ ಜನರೊಡನೇ ದೂಸರಾ ಮಾತಿಲ್ಲದೇ ಬೆರೆತು ಹೊಗಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಸೇರಿದಂತೆ ಪಾಕಿಸ್ತಾನ, ಅಫಘಾನಿಸ್ತಾನವನ್ನು ಕೂಡಿಸಿ ಭಾರತದ 16 ರಾಜ್ಯಗಳು, ಭೂಪಟದ 60 ರಾಷ್ಟ್ರಗಳಲ್ಲಿ ಹರಿದು 50 ಮಿಲಿಯನ್ ಸಂಖ್ಯೆಯಾಗಿ ಹಂಚಿ ಹೊಗಿದ್ದೇವೆ. ಆದರೂ ಇಂದಿಗೂ ಶಾಶ್ವತ ನೆಲೆ ಮರೀಚಿಕೆಯಾಗಿಯೆ ಉಳಿದಿದೆ. ಅದಕ್ಕಂತಲೇ, ನಮ್ಮಲ್ಲಿ ಬಹಳಷ್ಟು ಜನರು ತಾವು ಲಂಬಾಣಿ ಎನ್ನಲು ಮುಜುಗರ ಪಟ್ಟುಕೊಳ್ಳುತ್ತಾರೆ. ಲಂಬಾಣಿ ಎನ್ನುವ ಕೀಳರಿಮೆ ಅವರನ್ನು ಕಾಡುತ್ತದೆ.


ದೂರದ ಅಫಘಾನಿಸ್ತಾನದಲ್ಲೊಂದು ಪ್ರಾಂತ್ಯವಿದೆ. ಅದರ ಹೆಸರು 'ಗೊರ್' ಅಂತ. ಅಲ್ಲಿನ ಮೂಲನಿವಾಸಿಗಳು ಜೀವನೋಪಾಯಕ್ಕಾಗಿ ಇತರೆಡೆ ತೆರಳಲಾರಂಭಿಸಿದರು. ಸಾಗಾಣಿಕೆ, ವ್ಯಾಪಾರ ವಹಿವಾಟಿನಲ್ಲಿ ನಿಷ್ಣಾತರಾಗಿದ್ದ ಇವರುಗಳು ಬದುಕು ಕಂಡುಕೊಳ್ಳಲು ಜಾಸ್ತಿ ಸಮಯವೇನು ಹಿಡಿಯಲಿಲ್ಲ. ತಮ್ಮ ಪ್ರಾಮಾಣಿಕತೆ, ಕಾರ್ಯತತ್ಪರತೆ, ವ್ಯವಹಾರ ನೈಪುಣ್ಯತೆಗಳಿಂದಾಗಿ ಹೋದಲ್ಲೆಲ್ಲ ಇವರಿಗೆ ತುಂಬು ಹೃದಯದ ಸ್ವಾಗತ ಸಿಕ್ಕಿತು. ಅನ್ಯ ಸಂಸ್ಕೃತಿಯ ಜೊತೆಗೆ ಸುಲಭವಾಗಿ ಮಿಳಿತಗೊಳ್ಳುವ ಸ್ವಭಾವದಿಂದಾಗಿ ಎಲ್ಲರಿಗೂ ಬೇಕಾದವರಾದರು. ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೇ, ಅನ್ಯ ಸಂಸ್ಕೃತಿಯನ್ನು ಗೌರವಿಸುತ್ತಾ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನೆಲೆ ವಿಸ್ತರಿಸಿಕೊಂಡರು.  

ಭಾರತದ ಸಂಪತ್ತಿನಾಸೆಗೆ ದಂಡೆತ್ತಿ ಬಂದ ಮುಸ್ಲಿಂ ದಾಳಿಕೋರರಿಗೆ ರಜಪೂತರಿಗೂ ಮುನ್ನ ವಾಯುವ್ಯ ಭಾರತದ ಸಿಂಧ್ನಲ್ಲಿ ಹಣ್ಣುಗಾಯಿ-ನೀರುಗಾಯಿ ಮಾಡಿದ ಕೀರ್ತಿ ನಮ್ಮ ಪೂರ್ವಜರದು. ಸೆರೆಸಿಕ್ಕ ಘೋರಿ ಎಂಬ ಕಂತ್ರಿಯನ್ನು ಮಾಫ್ ಮಾಡಿದ ಪೃಥ್ವಿರಾಜ್ ಚೌಹಾಣ್ ನಮ್ಮ ಪೂರ್ವಜನೇಅಲ್ಲಿಂದ ಪ್ರಾರಂಭವಾದ ನಮ್ಮ ಪರಾಕ್ರಮ 1857 ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮುಂದುವರಿಯಿತು. ಇತರೆ ಭಾರತಿಯರಂತೆ ಲಂಬಾಣಿಗರು ಹೋರಾಟಕ್ಕೆ ಬೇಕಾದ ಮದ್ದು ಗುಂಡುಗಳನ್ನು ಸಾಗಿಸಿ ಆಂಗ್ಲರ ನಿದ್ದೆ ಕೆಡಿಸಿದ್ದು ದಿಟ.

1947 ಸ್ವಾತಂತ್ರ್ಯ ಹೋರಾಟದ ವರೆಗೂ ಅರಣ್ಯವಾಸಿಗಳಾದ ಲಂಬಾಣಿಗರು ತಾಯಿ ಭಾರತಿಗೆ ತಮ್ಮ ನಿಷ್ಟೆಯನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ.


ದಿ.ನೆಹರೂ ಅವರು ತಮ್ಮLOST CHILDREN OF INDIA ಎಂಬ ಪುಸ್ತಕದಲ್ಲಿ ಲಂಬಾಣಿಗರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಇಂದಿರಾ ಅವರಂತೂ "ಭಾರತ ಅನ್ನುವುದು ಒಂದು ಸೀರೆ ಆದರೇ ಲಂಬಾಣಿಗರು ಸೀರೆಯ ಬಂಗಾರದ ಅಂಚು" ಎಂದು ಹೊಗಳಿದ್ದರು. ಇಷ್ಟಾದರು ಇತಿಹಾಸ ನಮ್ಮನ್ನು 'ಜಿಪ್ಸಿ' 'ಅಲೆಮಾರಿ' ಎನ್ನುವ Tag ದಯಪಾಲಿಸಿದೆ. ಉತ್ತರ ಕರ್ನಾಟಕದ ಹಲವೆಡೆ ಇಂದಿಗೂ ನಮ್ಮನ್ನು 'ಅಡಿ ಲಮಾಣಿ' ಎಂದೆ ಕರೆಯುವುದು. ನಮ್ಮ ಪ್ರಾಮಾಣಿಕತೆ, ಶ್ರಮಿಕತನಕ್ಕೆ ನಮಗೆ ಸಿಕ್ಕ ಉಡುಗೊರೆ ಇದು.

ಸಾಂಬಾ ಬ್ರಾಝಿಲ್ನಲ್ಲಿ ಇಂದಿಗು ಲಂಬಾಣಿಗರದೇ ಪೌರಾಡಳಿತವಿದೆ. ಅಫಘಾನಿಸ್ತಾನದ ಜಿಲ್ಲೆಯೊಂದರ ಹೆಸರು ಇಂದಿಗೂ ತಾಂಡಾ ಅಂತಲೇ ಇದೆ. ಇರಾಕ್ ಯುದ್ದ ಸಂಧಾನಕ್ಕಾಗಿ ಹೋದ ವಿಶ್ವಸಂಸ್ಥೆ ರಾಯಭಾರಿ 'ಮುಖ್ತಾರ್ ಲಮಾಣಿ' ನಮ್ಮವರೆ. ಅದೆಷ್ಟೊ ಶಿಕ್ಷಕರು, ಎಂಜಿನೀಯರುಗಳು, ಶಾಸಕರು, ಮಂತ್ರಿಗಳು, ವೈದ್ಯರು, ಉನ್ನತ ಅಧಿಕಾರಿಗಳು ಇದ್ದರೂ ನಾವಿಂದಿಗೂ ಮುಖ್ಯ ವಾಹಿನಿಗೆ ಬಂದಿಲ್ಲ.  ನಮ್ಮ ಒಳಿತಿಗಾಗಿ ಇರುವ ಮೀಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರ !

ತಾಂಡಾಗಳಲ್ಲಿನ್ನು ರಸ್ತೆ ಸೌಕರ್ಯವಿಲ್ಲ. ಕುಡಿಯುವ ಹನಿ ನೀರಿಗು ತಾತ್ವಾರ. ವಿದ್ಯುತ ಸಂಪರ್ಕಕ್ಕೆ ಕಾದು ಕುಳಿತಿರುವ ಆಸೆ ತುಂಬಿದ ಕಣ್ಣುಗಳು. ಪ್ರಾಥಮಿಕ ವಿಧ್ಯಾಭ್ಯಾಸ ದೂರದ ಮಾತೆ! 5ನೇ ತರಗತಿ ಓದಲೂ ದೂರದ ಊರಿಗೆ ನಡೆದೇ ಹೋಗಬೇಕು. ಉದ್ಯೋಗಕ್ಕಗಿ ಊರೂರು ಅಲೆದಾಡಬೇಕಾದ ಅನಿವಾರ್ಯತೆ.  ಕೊಡುವ ಕೂಲಿಯಲ್ಲೂ ಕಡಿತ. ಬೇಸಿಗೆ ಬಂತೆಂದರೆ ಸಾಮೂಹಿಕವಾಗಿ ಪಟ್ಟಣಕ್ಕೆ ಗುಳೆ ಹೋಗುವುದು ಸಾಮಾನ್ಯ ಸಂಗತಿ. ಮಳೆಗಾಲದಲ್ಲೂ ಮಳೆಯನ್ನೆ ನೆಚ್ಚಿ ಕೃಷಿ ಕಾಯಕ ಮಾಡಬೇಕು.   ನಿರುದ್ಯೋಗ, ಅನಕ್ಷರತೆ, ಸಂಘಟನೆಯ ಕೊರತೆ ನಮ್ಮನ್ನು ಇನ್ನು ಗಟ್ಟಿಯಾಗಿ ಅಪ್ಪಿಕೊಂಡಿವೆ. ಇದು ಇನ್ನೊಂದು ಚಿತ್ರ!!

ಗಾಂಧಿಜಿ ಹೇಳಿದಂತೆ "ಭಾರತದ ಹೃದಯ ಹಳ್ಳಿಯಲ್ಲಿ ನೆಲೆಸಿದೆ". ನನ್ನ ಅಭಿಪ್ರಾಯದಂತೆ ಎಷ್ಟೆ ಉನ್ನತ ಹುದ್ದೆಯಲ್ಲಿದ್ದರೂ ಲಂಬಾಣಿಗನ ಹೃದಯ ತಾಂಡಾಗಳಲ್ಲಿ ನೆಲೆಸಿದೆ. ಸಬಲ, ಶಿಕ್ಷಿತ, ಪ್ರಬಲ ಬೆರಳೆಣಿಕೆಯ ಲಂಬಾಣಿಗರು ತಾಂಡಾಗಳತ್ತ ಮುಖ ಮಾಡಲೇಬೇಕಾಗಿದೆ. ನಮ್ಮಲ್ಲೆ ಕಚ್ಚಾಡುವುದನ್ನು ಬಿಟ್ಟು ನಮ್ಮ ಇತರ ಬಂಧುಗಳ ಬಗ್ಗೆ ಚಿಂತಿಸಬೇಕಾಗಿದೆ. ಕೆಲವೇ ಯಹೂದಿಗಳು ತಮ್ಮ ಅಸ್ತಿತ್ವ ಕಂಡುಕೊಂಡಂತೆ ನಾವುಗಳು ದಿಸೆಯಲ್ಲಿ ಪ್ರಯತ್ನ ಮಾಡಬೇಕಾಗಿದೆ. ತಾಂಡಾದ 'ಸೋಮ್ಲಾ ನಾಯಕ್ಹಾಗೂ ನಗರದ ಸೊಮನಾಥನಿಗೂ ಯಾವುದೇ ಭಿನ್ನತೆ ಇಲ್ಲಒಬ್ಬ ಧೋತಿ ಉಟ್ಟರೆ ಇನ್ನೊಬ್ಬ ಪ್ಯಾಂಟ್ ಉಡುತ್ತಾನೆ. ತಾಂಡಾದ ಸೋನಾ ಬಾಯಿ ಹಾಗು ನಗರದ ಸೋನಿಯಾಗೂ ಯಾವುದೆ ಭಿನ್ನತೆ ಇಲ್ಲ. ಒಬ್ಬಾಕೆ ಜೀನ್ಸ್ ತೊಟ್ಟರೆ, ಇನ್ನೊಬ್ಬಾಕೆ ಫೇಟಿಯಾ ಉಡುತ್ತಾಳೆ.

ನಾವು ಎಲ್ಲಿಯವರೆಗೂ ಆರ್ಥಿಕ ಹಾಗು ಪ್ರಮುಖವಾಗಿ ರಾಜಕೀಯವಾಗಿ ಪ್ರಬಲರಾಗುವುದಿಲ್ಲವೋ ಅಲ್ಲಿಯವರೇಗೂ ಇಂತಹ ಸಾವಿರ ಲೇಖನಗಳನ್ನು ಬರೆದರೂ 'ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ'...

 

                                                                                                       -ಗೋವಿಂದರಾವ್ ಎನ್. ರಾಠೋರ್