ಜೂನ್ 19, 2021

ಅಪರೂಪದ ಬಹುಭಾಷಾ ನಟ ಆಶೀಷ್ ವಿದ್ಯಾರ್ಥಿ


ಭಾರತೀಯ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸುತ್ತಿರುವ ಅದ್ಭುತ ನಟ ಆಶೀಷ್ ವಿದ್ಯಾರ್ಥಿ ಕನ್ನಡ ಚಿತ್ರಳಲ್ಲೂ ಅಭಿನಯಿಸಿದ್ದಾರೆ ಅನ್ನೊದು ಹೆಮ್ಮೆಯೆ ವಿಷಯ. ಆದ್ರೆ ನಿಮಗೆ ಗೊತ್ತೆ ಆಶೀಷ್ ವಿದ್ಯಾರ್ಥಿ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಇದೆ ಕನ್ನಡ ಚಿತ್ರದ ಮೂಲಕ ಅಂತ.

ಆಶೀಷ್ ವಿದ್ಯಾರ್ಥಿ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕಲಿತು ಅನೇಕ ನಾಟಕಗಳಲ್ಲಿ ಬಣ್ಣ ಹಚ್ಚುತ್ತಾರೆ. ನಂತರ ಅವರು ಚಿತ್ರರಗಂಕ್ಕೆ ಬಂದಿದ್ದು 1992ರಲ್ಲಿ ಬಾಲಿವುಡ ಚಲನಚಿತ್ರಗಳಾದಕಾಲ್ ಸಂಧ್ಯಾಮತ್ತು 1942 ಲವ್ ಸ್ಟೋರಿ” ಮೂಲಕ. ದೊಡ್ಡದಾಗಿ ಗುರುತಿಸಿಕೊಂಡಿದ್ದು ಮಾತ್ರ 1993ರಲ್ಲಿ ಬಂದಸರದಾರ್ಚಿತ್ರದ ಮೂಲಕ. ಇದು ಭಾರತದ ಉಕ್ಕಿನ ಮನುಷ್ಯಸರದಾರ್ ವಲ್ಲಭಭಾಯಿ ಪಟೇಲ್ಅವರ ಜೀವನ ಆಧಾರಿತ ಚಿತ್ರ. ಇದರಲ್ಲಿ ಆಶೀಷ್ ವಿದ್ಯಾರ್ಥಿ ಅವರು ವಿ.ಪಿ. ಮೆನನ್ ಅವರ ಪಾತ್ರ ನಿಭಾಯಿಸಿದ್ದರು. ಮರು ರ್ಷ ಬಂದದ್ರೋಹಕಾಲ್” ಚಿತ್ರದ ಅಮೋಘ ಅಭಿನಯಕ್ಕೆ ಪೋಷಕ ನಟ ರಾಷ್ಟ್ರಪ್ರಶಸ್ತಿ ಲಭಿಸುತ್ತದೆ.

ಇತ್ತೀಚಿನ ಎರಡು ಮೂರು ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅಭಿನಯ ಮಾಡಲು ಶುರು ಮಾಡಿದರು ಎಂದು ಎಲ್ಲರು ತಿಳಿದಿದ್ದಾರೆ. ಆದರೆ ನಿಮಗೆ ಗೊತ್ತಿರಲಿ ಆಶೀಷ್ ವಿದ್ಯಾರ್ಥಿ ಅವರು ಭಾರತದ ಒಟ್ಟು 11 ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಅದರಲ್ಲಿ ಕನ್ನಡ ಕೂಡಾ ಒಂದು. ಅಷ್ಟೆ ಅಲ್ಲ ಅವರು ಮೊಟ್ಟಮೊದಲ ಬಾರಿಗೆ ಸಿನಿಮಾಗಾಗಿ ಬಣ್ಣ ಹಚ್ಚಿದ್ದು ಕನ್ನಡ ಚಿತ್ರಕ್ಕಾಗಿ. ಅದೂ ಕನ್ನಡದ ಒಬ್ಬ ದೊಡ್ಡ ನಾಯಕನ ಪದಾರ್ಪಣೆಯ ಚಿತ್ರ ಕೂಡಾ ಹೌದು.

1986 ರಲ್ಲಿ ಚಿತ್ರ ತೆರೆಗೆ ಬರುತ್ತದೆ. ಅದು ದೊಡ್ಡ ಹಿಟ್ ಆಗುತ್ತದೆ. ಇದರಲ್ಲಿ ಆಶೀಷ್ ವಿದ್ಯಾರ್ಥಿ ಅವರು ಒಂದು ಚಿಕ್ಕ ಪಾತ್ರವನ್ನು ಮಾಡುತ್ತಾರೆ. ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ನಟ ತನ್ನ ಮುಂದಿನ ಎರಡೂ ಚಿತ್ರಗಳನ್ನು ಸೂಪರ್ ಹಿಟ್ ಮಾಡುತ್ತಾರೆ. ಇದರಿಂದ ಅವರಿಗೆಹ್ಯಾಟ್ರಿಕ್ ಹೀರೋ ಎಂಬ ಬಿರುದು ಕೂಡಾ ಬಂತು.

ಈಗ ನಿಮಗೆ ಗೊತ್ತಾಗಿರುತ್ತೆ. ನಾಯಕ ನಟ ಯಾರು ? ಅವರ ಮೊದಲ ಚಿತ್ರ ಯಾವುದು ? ಅಂತ. ಹೌದು 1986ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಲನಚಿತ್ರಆನಂದಮೂಲಕ ಆಶೀಷ್ ವಿದ್ಯಾರ್ಥಿ ಅವರು ಬೆಳ್ಳೆತೆರೆಗೆ ಪದಾರ್ಪಣೆ ಮಾಡುತ್ತಾರೆ. ಇದಾದ ಮೇಲೆ ಅವರು ಹಲವು ರ್ಷಗಳ ವಿರಾಮದ ನಂತರ ಮತ್ತೆ ಮರಳುತ್ತಾರೆ ಹಿಂದಿ ಚಿತ್ರಗಳ ಮುಖಾಂತರ.

ಆಶೀಷ್ ವಿದ್ಯಾರ್ಥಿ ಅವರು ನಂತರದಲ್ಲಿ ಕನ್ನಡ ಚಿತ್ರರಸಿಕರಿಗೆ ಹೆಚ್ಚು ಇಷ್ಟ ಆಗಿದ್ದು ಎಕೆ47 ಚಿತ್ರದಲ್ಲಿನ ದಾವೂದ್ ಪಾತ್ರದ ಮೂಲಕ. ಈಗ ಚಿತ್ರರಂಗದಿಂದ ಸ್ವಲ್ಪ ಮಟ್ಟಿನ ಅಂತರವನ್ನು ಕಾಪಾಡಿಕೊಂಡಿರುವ ಇವರು ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಆಶೀಷ್ ವಿದ್ಯಾರ್ಥಿ ಅವರು ನಮ್ಮ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಇವತ್ತು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಎಲ್ಲಾ ಚಿತ್ರ ರಸಿಕರ ಪರವಾಗಿ ಆಶೀಷ್ ವಿದ್ಯಾರ್ಥಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸೋಣ.

ಜೂನ್ 15, 2021

ಇದು ತೀರಾ ಅನ್ಯಾಯ!

ಒಂದಷ್ಟು ವರ್ಷಗಳ ಹಿಂದಿನ ಮಾತು. ಸ್ನಾನಕ್ಕೆಂದು ಟವೆಲ್ ಉಟ್ಟು ಹೊರಟಿದ್ದೆ! ಟಿವಿಯಲ್ಲಿ ಯಾವುದೋ ಚಿತ್ರ ಬರುತ್ತಿತ್ತು. ಪಾತ್ರಧಾರಿಯೊಬ್ಬ ತನ್ಮಯನಾಗಿ ನಟಿಸುತ್ತಿದ್ದ. ನನಗೆ ಅವನ ಚಲನೆ ವಿಸ್ಮಯ ಎನಿಸತೊಡಗಿತು. ಯಾರೀ ಹುಡುಗ, ಯಾವುದೀ ಚಿತ್ರ ಅಂತ ಹುಡುಕ ತೊಡಗಿದೆ. ಚಿತ್ರ 'ದಾಸವಾಳ'. 

ಆ ಹುಡುಗನ ನಂಬರ್ ಅನ್ನು ತಡಕಾಡಿ ಹುಡುಕಿ ಫೋನ್ ಮಾಡಿದೆ. 

"ನಾನು ಮಂಡ್ಯ ರಮೇಶ್" ಅಂತ ಅಂದೆ. 

ಅವನು ದಿಗ್ಭ್ರಾಂತನಾಗಿ "ಸರ್, ನೀವು, ಏನ್ಸಾರ್ ಇದು!" ಅಂದ. "ದಾಸವಾಳ ಚಿತ್ರ ನೋಡಿದೆ ಮಿತ್ರ, ಇವತ್ತಿನಿಂದ ನಾನು ನಿನ್ನ ಅಭಿಮಾನಿ. ಎಂಥಾ ಶ್ರೇಷ್ಠನಯ್ಯಾ  ನೀನು" ಅಂತ ಮನತುಂಬಿ ಹೇಳಿದೆ. ಅವನು ತೀರಾ ಸಂತೋಷಪಟ್ಟು "ಎಂಥಾ ಶುಭ ದಿನ ಕೊಟ್ಟಿರಿ ಸರ್, ಅದು ಹಳೆಯ ಚಿತ್ರ" ಅಂದ. "ಪರ್ವಾಗಿಲ್ಲ ನಿನ್ನ ಅಭಿನಯ ನಿತ್ಯನೂತನವಾಗಿದೆ.ಇವತ್ತಲ್ಲ ನಾಳೆ ನ್ಯಾಷನಲ್ ಅವಾರ್ಡ್ ಗ್ಯಾರಂಟಿ!" ಅ೦ದೆ. ನಕ್ಕು, ಫೋನಿಟ್ಟ. 

ಕೆಲವೇ ದಿನಗಳಲ್ಲಿ ಕನ್ನಡಕ್ಕೆ ಮತ್ತೊಂದು ಗರಿ ಪ್ರಕಟವಾಯಿತು. 'ವಿಜಿ ನಟಿಸಿದ "ನಾನು ಅವನಲ್ಲ

ಅವಳು" ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ದೊರಕಿತು.! ನಾನು ನನಗೇ ಪ್ರಶಸ್ತಿ ಬಂದಷ್ಟು ಸಂತೋಷದಿಂದ ಕುಣಿದಾಡಿದೆ. ಈ ಮಧ್ಯೆ ಅವನೊಂದಿಗೆ 'ಒಗ್ಗರಣೆ'ಯಲ್ಲಿ ನಟಿಸಿದೆ. ಅವನನ್ನು  ಕಂಡಾಗಲೆಲ್ಲ ತೀರಾ ಆಪ್ತನೊಬ್ಬನ್ನನ್ನು ಕಂಡಷ್ಟು ಹಿತವಾಗುವುದು ಅಭ್ಯಾಸವಾಗಿಬಿಟ್ಟಿತ್ತು!.

ರಾಷ್ಟ್ರಪ್ರಶಸ್ತಿ ರೋಮಾಂಚನದಲ್ಲೇ ನಟನದ 'ರಜಾಮಜಾ' ಶಿಬಿರದಲ್ಲಿ ಅವನನ್ನು ಅವನ ಗುರು ಎನ್. ಮಂಗಳಾ ಸಮ್ಮುಖದಲ್ಲಿ ಅದ್ಧೂರಿಯಾಗಿ ಅಭಿನಂದಿಸಲಾಯಿತು.ಸಂಕೋಚದಿಂದ ಮುದುರಿ ಹೋಗಿದ್ದ!

ಹೆಗ್ಗೋಡಿನ ನೀನಾಸಂನಲ್ಲಿ "ಒಗ್ಗರಣೆ 'ವಿಶೇಷ ಪ್ರದರ್ಶನ ಮುಗಿಸಿ ರಾತ್ರಿ ಕಾರಿನಲ್ಲಿ ನಾನು, ಅವನು, ಅರವಿಂದ್ ಕುಪ್ಲಿಕರ್ ಮಾತಾಡಿದ್ದೇ ಮಾತಾಡಿದ್ದು.ತೀರಾ ಸಂತೋಷದ ಘಳಿಗೆಗಳು ಅವು! ಅಲ್ಲಿಂದಾಚೆ ಅವನು ಮೈಸೂರಿಗೆ ಬಂದಾಗಲೆಲ್ಲಾ ಶೂಟಿಂಗ್ ನಂತರ ಭೇಟಿಯಾಗಿ ನಮ್ಮ ಹುಡುಗರಿಗೆ ಕ್ಲಾಸ್ ಮಾಡಿ, ಒಳ್ಳೆ ಊಟ ಮಾಡಿ, ಸಿಕ್ಕಾಪಟ್ಟೆ ಮಾತನಾಡಿ ಹೋಗದಿದ್ದರೆ ಅವನಿಗೆ ಸಮಾಧಾನವೇ ಇರುತ್ತಿರಲಿಲ್ಲ.

ಮೊನ್ನೆ ಮೊನ್ನೆ ಮಕ್ಕಳ ಮಿನ್ಕಾಣ್ಕೆ ಶಿಬಿರ ಉದ್ಘಾಟಿಸಿ ಮಕ್ಕಳೊಂದಿಗೆ ಮಾತನಾಡಿ ರಂಗಭೂಮಿಯ ಮಹತ್ವವನ್ನು ತಿಳಿ ಹೇಳಿದ.

ಓದಿನ ಹವ್ಯಾಸ ಚೆನ್ನಾಗಿತ್ತು! ಒಳ್ಳೊಳ್ಳೇ ಬಟ್ಟೆ ಹಾಕಿ ಸುಂದರವಾಗಿ ಕಾಣುವ ಗುಣಗಳಿತ್ತು!  ಜೊತೆಗೆ  ಪಾತ್ರ ಆಯ್ಕೆಯಲ್ಲಿ ತೀರಾ ಚ್ಯೂಸಿಯಾಗಿದ್ದ. ಪಾತ್ರ ಮಾಡುವಾಗ ಆ ಪಾತ್ರದಲ್ಲಿ ಪೂರ್ಣ ಕರಗಿಹೋಗುವುದಕ್ಕೆಬೇಕಾದ ಎಲ್ಲ ಪೂರ್ವಸಿದ್ಧತೆಯನ್ನ ಶಿಸ್ತಿನಿಂದ ಮಾಡಿಕೊಳ್ಳುತ್ತಿದ್ದ. ಅದನ್ನೂ ಚಾಚೂ ತಪ್ಪದೆ ಅನುಸರಿಸುತ್ತಿದ್ದ.

ಅದಕ್ಕೆ ದೊಡ್ಡ ಸಾಕ್ಷಿ:

ಈಚೆಗೆ ಆತನೊಂದಿಗೆ ಅಭಿನಯಿಸಿದ 'ತಲೆದಂಡ' ಅತ್ಯಂತ  ಮಹತ್ವಾಕಾಂಕ್ಷಿ ಚಿತ್ರ! ಚಿತ್ರದಲ್ಲಿ ಆತ ತೋರಿದ ಶ್ರದ್ಧೆ ,ಇಡೀ ಚಿತ್ರದಲ್ಲಿ ಆತ ನಟಿಸಿರುವ ಅಭಿನಯದ ಉತ್ಕೃಷ್ಟತೆಯ ಪರಾಕಾಷ್ಠೆ ಕಂಡು ನಾನು  ಬೆರಗಾಗಿಬಿಟ್ಟಿದ್ದೇನೇ.

ಅವನ ಜೀವನದ ಮತ್ತೊಂದು ಮಹಾ ಮೈಲುಗಲ್ಲು 'ತಲೆದಂಡ' ಚಿತ್ರದ ಅಭಿನಯ!

ಜಾಗತಿಕ ಸಿನಿಮಾ, ವೆಬ್ ಸಿರೀಸ್ ಗಳ ಮುಕ್ತ ಚರ್ಚೆ ಅವನೊಂದಿಗೆ ಸಾಧ್ಯವಿತ್ತು! ಅಭಿನಯ ಪದ್ಧತಿಗಳ, ಹೊಸ ಅವಿಷ್ಕಾರಗಳ ಕುರಿತು ಸದಾ ಚಿಂತಿಸುತ್ತಿದ್ದ.ಹೇರಳವಾದ ಬದುಕಿನ ಅನುಭವ. ಅವಮಾನ, ಹೋರಾಟ, ಗೆಲುವು, ಮತ್ತೆ ಹುಡುಕಾಟ. ಈ ಹಾದಿಯಲ್ಲಿ ಇವನಷ್ಟು 'ಸಜ್ಜನಿಕೆ'ಯ ಹುಡುಗನನ್ನು ಈಚಿನ ದಿನಗಳಲ್ಲಿ ನಾನು ಕಂಡದ್ದಿಲ್ಲ! ಅಪಾರ ಜೀವನ್ಮುಖಿ. ಕೋವಿಡ್  ಕಷ್ಟಕಾಲದಲ್ಲಿ ಆತ ಸಾಮಾನ್ಯರಿಗೆ 'ಉಸಿರು' ನೀಡಲು ಉಸಿರುಗಟ್ಟಿ ಶ್ರಮಿಸುತ್ತಿದ್ದ.

"ಸಿಕ್ಕಾಪಟ್ಟೆ ಸುತ್ತಾಡ್ತಿದ್ದೀ ಮಗಾ,  ಹುಷಾರು ಕಣೋ... ಬೇಗ ಮದುವೆಯಾಗಲೇ,  ನಿನಗೊಂದು ಲಗಾಮು ಬೇಕು!" ಅ೦ತ ಛೇಡಿಸಿದ್ದಿದೆ. ಅಷ್ಟು ಆಪ್ತವಾಗಿದ್ದ.

ಅವನೊಂದಿಗಿನ ಅಪರೂಪದ ರಾತ್ರಿಯೂಟಗಳಲ್ಲಿ ಸಾಹಿತ್ಯ, ಸಂಗೀತ, ಅಭಿನಯ, ಸಿನಿಮಾಗಳ ಚರ್ಚೆ, ತಮಾಷೆಗಳ ಜೊತೆಗೆ ಗಂಭೀರ ಆಶಯದ ಅನೇಕ ಕನಸುಗಳನ್ನು ಕ೦ಡಿದ್ದ ಆಶಾವಾದಿ! ಸುಮಧುರ ಹಾಡುಗಾರ, ಸಹೃದಯಿ, ಅವನ ನಗುವಿನಲ್ಲಿ ಮಗುತನವಿತ್ತು. ಮುಂದಿದ್ದವರನ್ನು ಮೆಲುದನಿಯ ಮುಗುಳ್ನಗುವಿನಲ್ಲಿ ಮಾತನಾಡಿಸುತ್ತಲೇ ಮೋಹಿತರನ್ನಾಗಿ ಮಾಡುತ್ತಿದ್ದ ಮಧುರವಾದ ಯುವಕ ಆತ.

ಅವನ ಸ್ನೇಹದಲ್ಲಿ ಕೋಪ, ಅಸಹನೆ, ತಿರಸ್ಕಾರ, ವ್ಯಂಗ್ಯ ಕುಹಕ ನುಡಿ ಇಲ್ಲವೇ ಇಲ್ಲ...ತಮಾಷೆಯಿತ್ತು, ಗೇಲಿ ಇರಲಿಲ್ಲ!

ಗೆಳೆಯರನ್ನು, ಹಿರಿಯರನ್ನು ಗೌರವಿಸುವುದು ಅವನಿಗೆ ಸಹಜವಾಗೇ ಸಿದ್ಧಿಸಿತ್ತು!

ಛೇ, ಇಂಥಾ ಮೃದುಜೀವಿಗೆ ಈ ಶಿಕ್ಷೆ ನಿಜಕ್ಕೂ ಕ್ರೂರ. ನೆನೆದೊಡನೆ ಕಣ್ತುಂಬುವ ಈ ಘಳಿಗೆಗಳು ಮರುಕಳಿಸದಿರಲಿ. ದುಗುಡವಿಕ್ಕುವ ಈ ರಾತ್ರಿಗಳು ಯಾವ ಮಿತ್ರರ ಬದುಕಲ್ಲೂ ಬಾರದಿರಲಿ.

ಅಭಿನಯ- ವ್ಯಕ್ತಿತ್ವ ಎರಡರಲ್ಲೂ ಘನತೆ ತೋರಿದ ಕನ್ನಡ ಮಣ್ಣಿನ ಅಪರೂಪದ ತಮ್ಮನೊಬ್ಬ ಕಳೆದುಹೋದ ಕರಾಳ ದಿನ ಇದು!

ಕರುಳು ಕತ್ತರಿಸುವ ಈ ಕಳವಳಗಳು ಕರಗಿ ಹೋಗಲಪ್ಪ... ದೇವರೇ ಆ ಮನೆಯವರಿಗೆ ಸಂತೈಸುವ ಶಕ್ತಿಯೂ ನಮಗಿಲ್ಲದೇ ಹೋಯಿತೆ... ಛೇ!

ಎದುರಿಸುವ ಪರಿಯೇ ತೋರುತ್ತಿಲ್ಲ.

ಕ್ಷಮಿಸಿ ಬಿಡು, ಗೆಳೆಯ.

ತುಂಬ ದಿನ ಕಾಡುತ್ತಿ ನೀನು.

ನಡುವಿನ ಈ ಧಿಡೀರ್ ನಿರ್ಗಮನ ಮನಕಲಕಿದೆ ಮಿತ್ರ!



- ಮಂಡ್ಯ ರಮೇಶ್ 

ನಟ ಮತ್ತು ಸಂಸ್ಥಾಪಕ ಕಾರ್ಯದರ್ಶಿ,

ನಟನ ರಂಗಶಾಲೆ, ಮೈಸೂರು

ಜೂನ್ 14, 2021

ಸಂಚಾರಿ ವಿಜಯ್ ಮತ್ತೇ ಹುಟ್ಟಿ ಬರಲೆಂದು ಪ್ರಾರ್ಥಿಸೋಣ



ಇಂದು ಅಪರಾಹ್ನದಿಂದ ಹರಿದಾಡುತ್ತಿರುವ ಸುದ್ದಿಗಳನ್ನು ಕೇಳಿ ಮನಸು ಬಹಳ ಮರುಗುತ್ತಿದೆ. ಒಮ್ಮೆಲೆ ಸಾವಿನ ಸುದ್ದಿ ಕೇಳಿ ಕುಸಿದಿದ್ದ ಆದೆಷ್ಟೋ ಮನಸುಗಳು ಮತ್ತೆ ತಮಗೇ ಜೀವ ಬಂದಂತೆ ಆಶಾಭಾವವನ್ನು ತಾಳುವಂತಾಗಿತ್ತು. ಸಂಚಾರಿ ವಿಜಯ್ ಇನ್ನು ಉಸಿರಾಡುತ್ತಿದ್ದಾರೆ. ಅವರಿನ್ನು ನಮ್ಮಿಂದ ಅಗಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು. ಸಂಜೆ ನಡೆಸುವ ಮುಖ್ಯ ಪರೀಕ್ಷೆ ನಡಿಸಿದ ಮೇಲೆ ಅಂತಿಮ ವರದಿ ಹೇಳಲಾಗುವುದು ಎಂದಿದ್ದರು.
ಅವಾಗಿನಿಂದ ಸಂಜೆ ಏಳುವರೆ ವರೆಗೆ ಅದೆಷ್ಟೋ ಜೀವಗಳು ಸಂಚಾರಿ ವಿಜಯ್ ಅವರ ಜೀವಕ್ಕಾಗಿ ಪ್ರಾರ್ಥನೆ ಸಲ್ಲಿಸಿದವರು ಮೆದುಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಬರಲಿ ಎಂದು. ಆದರೆ...

ಸಂಜೆ ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ.ಅರುಣ ನಾಯ್ಕ್ ಮೆದುಳು ಪರೀಕ್ಷೆಯ ವರದಿ ಹೇಳಿದರು. ಅದರಂತೆ ಸಂಚಾರಿ ವಿಜಯ್ ಅವರ ಮೆದುಳು ಸಂಪೂರ್ಣ ಡೆಡ್ ಆಗಿದೆ ಎಂದು.
ಆದರೆ ಅವರ ಹೃದಯ, ಕಿಡ್ನಿ, ಲೀವರ್, ಕಣ್ಣು ಸೇರಿದಂತೆ ಉಳಿದೆಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಅವರ ಕಿಡ್ನಿ, ಲೀವರ್, ಕಣ್ಣು ಅಂಗಗಳನ್ನು ಅವರ ಕುಟುಂಬದವರು ದಾನ ಮಾಡಲು ಒಪ್ಪಿರುವುದರಿಂದ ಅಂಗಾಂಗ ಕಸಿ ಮಾಡಲು ವೈದ್ಯರು ಇಂದು ರಾತ್ರಿ ತಯ್ಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿಯಲು ಮುಂಜಾನೆ ಐದು ಗಂಟೆ ಆಗಬಹುದು.

ಇದರ ಪ್ರಕಾರ ಸಂಚಾರಿ ವಿಜಯ್ ಮುಂಜಾನೆ ಐದು ಗಂಟೆಯ ವರೆಗೆ ಮಾತ್ರ ಜೀವಂತ. ಅಲ್ಲಿಯ ವರೆಗೆ ಸಂಚಾರಿ ವಿಜಯ್ ದೇಹ ಉಸಿರಾಡುತ್ತದೆ. ಮೆದುಳು ಒಂದು ಬಿಟ್ಟು. 

ಎಂಥಾ ಕಠೋರ ಗಳಿಗೆಗಳಿವು ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ಎಂದು ವಿಚಾರ ಮಾಡಿದರೆ ಕರುಳು ಕಿವುಚಿ ಬರುತ್ತದೆ. ಅವರ ಕೊನೆ ಉಸಿರೆಳೆಯುವುದನ್ನು ಕಾಯಬೇಕಲ್ಲ. ಇಷ್ಟೊಂದು ಸಮಯವಿದ್ದರೂ ಅವರನ್ನು ಉಳಿಸಿಕೊಳ್ಳಲು ಆಗದ ಅನಿವಾರ್ಯ ಪರಿಸ್ಥಿತಿ.
ಸಂಚಾರಿ ವಿಜಯ್ ಮೊನ್ನೆ ರಾತ್ರಿಯಷ್ಟೆ ರಸ್ತೆ ಅಪಘಾತದಿಂದ ತಲೆಗೆ ತೀವ್ರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳು ನಿಷ್ಕ್ರೀಯಗೊಂಡಿದೆ ಅಂದು ವೈದ್ಯರು ಹೇಳಿದ್ದರು. ಅಪಾರ ಅಭಿಮಾನಿಗಳು ಅವರು ಹೇಗಾದರು ಸರಿ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು.

೨೦೧೫ ರಲ್ಲಿ “ನಾನು ಅವನಲ್ಲ ಅವಳು” ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು ಅದ್ಭುತ ನಟ ಸಂಚಾರಿ ವಿಜಯ್. ಎಂಥಾ ದುರ್ದೈವ ಎಂದರೆ ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಓಡಾಡುತ್ತಿರುವಾಗಲೇ ರಸ್ತೆ ಅಪಘಾತಕ್ಕಿಡಾಗಿದ್ದಾರೆ.

ಈ ಕೋವಿಡ್ ಸಂಕಷ್ಟದಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ಫುಡ್ ಕಿಟ್, ಹಣ ಸಹಾಯ ಇತ್ಯಾದಿಗಳನ್ನು ಮಾಡುತ್ತಿದ್ದರು. ಮೊದಲಿನಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಸಂಚಾರಿ ವಿಜಯ್ ಅವರ ತಂಡ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿತ್ತು.

ಮೊನ್ನೆ ತಮ್ಮ ಸ್ನೇಹಿತ ನವೀನ್ ಎಂಬುವವರ ಮನೆಗೆ ಹೋಗಿ ಫುಡ್ ಕಿಟ್ ವಿತರಿಸುವ ಬಗ್ಗೆ ಮಾತುಕತೆ ನಡೆಸಿ ತಡರಾತ್ರಿ ಹೊರಟಿದ್ದರಂತೆ. ಸ್ನೇಹಿತ ನವೀನ್ ತನ್ನ ಬೈಕ್ ನಲ್ಲಿ ವಿಜಯ್ ಅವರನ್ನು ಡ್ರಾಪ್ ಮಾಡಲು ಬಂದಿದ್ದರು, ಸಂಚಾರಿ ವಿಜಯ್ ಬೈಕ್ ನಲ್ಲಿ ಹಿಂದೆ ಕುಳಿತಿದ್ದರಂತೆ. ಸ್ವಲ್ಪ ದೂರ ಹೋದ ಮೇಲೆ ಬೈಕ್ ಸ್ಕಿಡ್ ಆಗಿ ಎಡಬದಿಯಲ್ಲಿ ಕರೆಂಟ್ ಪೋಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಹಿಂದೆ ಕುಳಿತಿದ್ದ ಸಂಚಾರಿ ವಿಜಯ್ ಅವರ ತಲೆ ಮತ್ತು ತೊಡೆಗೆ ತೀವ್ರ ಪೆಟ್ಟಾಗಿದೆ. ನವೀನ್ ಅವರೇ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಂತೆ. ಸ್ಥಳಕ್ಕೆ ಬಂದ ಸ್ನೇಹಿತರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಂಚಾರಿ ವಿಜಯ್ ಅವರ ಸೋದರ ಸಿದ್ಧೇಶ್ ಕುಮಾರ್, ವಿಜಯ್​ ನಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು. ಅವರು ಸುಮ್ಮನೆ ಕೂರುವ ವ್ಯಕ್ತಿ ಅಲ್ಲವೇ ಅಲ್ಲ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಶನಿವಾರವೂ (ಜೂನ್​ 12) ಅಂತಹುದೇ ಕೆಲಸ ಮುಗಿಸಿ ಬರುವಾಗ ಅವಘಡವಾಗಿದೆ. ವೈದ್ಯರು 48 ಗಂಟೆ ಅಬ್ಸರ್ವರ್ವೇಷನ್ ನಲ್ಲಿ ಇರಿಸಿದ್ದಾರೆ. ನಾಳೆಗೆ 48 ಗಂಟೆ ಕಂಪ್ಲೀಟ್ ಆಗಲಿದೆ. ಈ ಅಪಾಯದಿಂದ ಹೊರಬರಲಿ ಎಂದು ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿಎಂದು ಕೇಳಿಕೊಂಡಿದ್ದರು. ಆದರೆ ಅವರ ಮತ್ತು ಎಲ್ಲರ ಕೋರಿಕೆ ದೇವರಿಗೆ ಮುಟ್ಟಲಿಲ್ಲ.

'ನಾನು ಅವನಲ್ಲ ಅವಳು ಚಿತ್ರದ ನಟನೆಗೆ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಒಗ್ಗರಣೆ, ದಾಸವಾಳ, ಸಿಪಾಯಿ, ಜಂಟಲ್ ಮನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವಸ್ಥಾಂತರ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದವು.

ಜೂನ್ 11, 2021

ಕೊರೋನಾ ಎದುರು ಸೋತ "ದಲಿತ ಕವಿ"

 

ಕನ್ನಡದ ಖ್ಯಾತ ಸಾಹಿತಿ 'ದಲಿತ ಕವಿ' ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು ಇಂದು ಸಂಜೆ (ಶುಕ್ರವಾರ ದಿನಾಂಕ ೧೧ ಜೂನ್ ೨೦೨೧ ರಂದು) ನಿಧನರಾಗಿದ್ದಾರೆ. ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ರಚಿಸಿದ ಸಿದ್ದಲಿಂಗಯ್ಯ ಅವರು ಕಾವ್ಯನಾಟಕ, ಪ್ರಬಂಧ, ವಿಮರ್ಶೆಸಂಶೋಧನೆಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.

ಮೇ ರಂದು ಕೊರೊನಾ ಸೋಂಕಿತರಾಗಿದ್ದ ಕವಿ ಸಿದ್ದಲಿಂಗಯ್ಯ ಅವರು ಅಸ್ಪತ್ರೆಗೆ ದಾಖಲಾಗಿದ್ದರು. ಮೇ ರಂದು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಟ್ಟಿದ್ದಾರೆ. ಓರ್ವ ಪುತ್ರಿ, ಪುತ್ರ ಹಾಗು ಪತ್ನಿಯನ್ನು ಅಗಲಿದ್ದಾರೆ. ಇದ್ದಾರೆ. ಅವರ ಪತ್ನಿಗೂ ಕೂಡ ಕೊರೋನಾ ಸೋಂಕು ತಗುಲಿತ್ತು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

೧೯೫೪ ರ ಫೆಬ್ರವರಿ ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆದಿದ್ದರು. ೧೯೭೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ವರ್ಣಪದಕದೊಂದಿಗೆ ಎಂ.ಎ. ಪದವಿ, ಪ್ರೊ.ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ಪ್ರೌಢ ಪ್ರಬಂಧದ ಮೇಲೆ ೧೯೮೯ ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಲಾಗಿಯೂ ಕಾರ್ಯನಿರ್ವಹಿಸಿದ್ದರು. ೧೯೭೫ ರಲ್ಲಿ ಅವರ 'ಹೊಲೆಮಾದಿಗರ ಹಾಡು' ಕವ ಸಂಕಲನ ಪ್ರಕಟಗೊಂಡಿತು. ಬಳಿಕ 'ಸಾವಿರಾರು ನದಿಗಳು' , 'ಕಪ್ಪು ಕಾಡಿನ ಹಾಡು', 'ಮೆರವಣಿಗೆ', 'ನನ್ನ ಜನಗಳು ಮತ್ತು ಇತರ ಕವಿತೆಗಳು', 'ಆಯ್ದ ಕವನಗಳು' ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ. 'ಪಂಚಮ' , 'ನೆಲಸಮ' , 'ಏಕಲವ್ಯ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. 'ಅವತಾರಗಳು' ಪ್ರಬಂಧ ಕೃತಿಯು ೧೯೯೧ ರಲ್ಲಿ ಪ್ರಕಟಗೊಂಡಿದೆ. 'ರಸಗಳಿಗೆಗಳು' , 'ಎಡಬಲ, 'ಹಕ್ಕಿನೋಟ', 'ಜನಸಂಸ್ಕೃತಿ' ಮುಂತಾದ ಲೇಖನ ಸಂಗ್ರಹಗಳು, 'ಸದನದಲ್ಲಿ ಸಿದ್ದಲಿಂಗಯ್ಯ ಭಾಗ ಮತ್ತು ಸೇರಿದಂತೆ ವಿವಿಧ ಕೃತಿಗಳು ಪ್ರಕಟಗೊಂಡಿವೆ.

'ಊರು ಕೇರಿ' ಇದು ಸಿದ್ದಲಿಂಗಯ್ಯ ಅವರ ಆತ್ಮಕಥೆ. ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ಅವರು 'ಸಮಕಾಲೀನ ಕನ್ನಡ ಕವಿತೆಗಳು' ಭಾಗ-ಮತ್ತು ಭಾಗ-ನ್ನು ಸಂಪಾದಿಸಿಕೊಟ್ಟಿದ್ದಾರೆ. ಅವರ 'ಊರು ಕೇರಿ' ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು, ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಅವಳ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.

ಸಿದ್ದಲಿಂಗಯ್ಯ ಅವರು ಚಲನಚಿತ್ರಗಳಿಗೂ ಗೀತೆಗಳನ್ನು ಬರೆದಿದ್ದಾರೆ. ಅದರಲ್ಲಿ ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ 'ಧರಣಿಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಬರೆದ “ಗೆಳತಿ ಓ ಗೆಳತಿ” ಗೀತೆಗೆ ರಾಜ್ಯಪ್ರಶಸ್ತಿ ಲಭಿಸಿತ್ತು.

ಕನ್ನಡ ಸಾಹಿತ್ಯಲೋಕದಲ್ಲಿ ಬಂಡಾಯದ ಅಲೆ ಎಬ್ಬಿಸಿ ಹಲವರ ದನಿಯಾಗಿ ತಮ್ಮ ಲೇಖನಿಯನ್ನು ಬಳಸಿಕೊಂಡಿದ್ದವರು ಸಿದ್ದಲಿಂಗಯ್ಯ. ಇವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವೇ ಸರಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

ಕ್ರಾಂತಿಸಿಂಹ ರಾಮ್ ಪ್ರಸಾದ್ ಬಿಸ್ಮಿಲ್

        “ಭಾರತಾಂಬೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ನೂರುಜನ್ಮ ಪಡೆದು ಬಲಿದಾನವಾಗಲು ಸಿದ್ದ” ಎಂದು ಘರ್ಜಿಸಿದ ಕ್ರಾಂತಿಸಿಂಹ ರಾಮ್ ಪ್ರಸಾದ್ ಬಿಸ್ಮಿಲ್ ರವರ ಜಯಂತಿಯಿಂದು. ಈ ಪ್ರಯುಕ್ತ ಖ್ಯಾತ ಲೇಖಕರು ಹಾಗು ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ರವರ ಬರಹ.

        ರಾಮಪ್ರಸಾದ್ ಹುಟ್ಟಿದ್ದು 1897 ಜೂನ್ 11ರಂದು, ಸಹರಾನ್ಪುರದಲ್ಲಿ. ತಂದೆ ಮುರಳೀಧರ್. ಬಾಲ್ಯದಲ್ಲಿ ಅಜ್ಜ-ಅಜ್ಜಿಯರ ಪ್ರೀತಿ-ವಾತ್ಸಲ್ಯಗಳಲ್ಲಿ ಬೆಳೆದ. ಸ್ವಾಮಿ ದಯಾನಂದ ಸರಸ್ವತಿ ಅವರ ಸತ್ಯಾರ್ಥಪ್ರಕಾಶಅವನ ಜೀವನದ ಮೇಲೆ ಹೊಸಪ್ರಕಾಶ ಬೀರಿತು. ಸ್ವಾಮಿ ಸೋಮದೇವ ಎಂಬ ಗುರು ಸಿಕ್ಕಿದ ಬಳಿಕ ಹೊಸ ಅಧ್ಯಾಯವೇ ಪ್ರಾರಂಭವಾಯಿತು. ಸಮಾಜದ ಸೇವೆಯಲ್ಲಿ ಆಸ್ಥೆ ಇಟ್ಟಿದ್ದ ಅವನಿಗೆ, ಹಿಂದೂ ಸಮಾಜದ ಉನ್ನತಿ, ರಕ್ಷಣೆಗಳಿಗೆ ಕೆಲಸಮಾಡುತ್ತಿದ್ದ ಆರ್ಯಸಮಾಜ ಒಂದು ಆಕರ್ಷಣೆಯಾಯಿತು. ಅದರ ಯುವಜನ ವಿಭಾಗದ ಕಿಶೋರಸಭಾದಲ್ಲಿ ಅವನದು ಸಕ್ರಿಯಪಾತ್ರ.

        ಕೆಲದಿನಗಳು ಕಳೆಯುವುದರಲ್ಲಿ ಗುರು ಸೋಮದೇವರು ಮೃತರಾದರು. ರಾಮಪ್ರಸಾದನ ಮನಸ್ಸು ಅಧ್ಯಾತ್ಮದಿಂದ ರಾಜಕಾರಣದ ಕಡೆಗೆ ಹರಿಯಿತು. ತನ್ನ ಸ್ವಂತಮನೆ, ಹಳ್ಳಿಗಿಂತ ಒಂದು ವಿಶಾಲವಾದ ಮನೆ ಇದೆ; ಅದೇ ಮಾತೃಭೂಮಿ. ಅದು ಬಂಧನದಲ್ಲಿದೆ. ದೇಶವಾಸಿಗಳು ನರಳುತ್ತಿದ್ದಾರೆ. ನಾಡ ವಿಮೋಚನೆ ಸಂಗ್ರಾಮದಲ್ಲಿ ಮುನ್ನುಗ್ಗಬೇಕು- ಈ ಭಾವನೆಗಳು ಅವನಲ್ಲಿ ಮೈದಳೆದವು. ಅದೇ ವೇಳೆಗೆ ಲಖನೌ ಪಟ್ಟಣದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕರು ಅಲ್ಲಿಗೆ ಬರುವವರಿದ್ದರು. ಕ್ರಾಂತಿಕಾರಿಗಳು ರೈಲು ನಿಲ್ದಾಣದಿಂದ ಅವರನ್ನು ವಿಜೃಂಭಣೆಯಿಂದ ಕರೆದೊಯ್ಯಬೇಕೆಂದರೆ, ಸೌಮ್ಯವಾದಿಗಳು ಅದನ್ನು ವಿರೋಧಿಸಿದರು. ರಾಮಪ್ರಸಾದ್ ಮತ್ತು ಅವನ ತರುಣ ಗೆಳೆಯರಿಗೆ ಈ ವರ್ತನೆ ಸರಿಕಾಣಲಿಲ್ಲ. ಇವರೆಲ್ಲರೂ ರೈಲು ನಿಲ್ದಾಣಕ್ಕೆ ಹೋದರು. ರೈಲು ಬಂದಿತು, ಲೋಕಮಾನ್ಯರು ಡಬ್ಬಿಯಿಂದ ಇಳಿಯುತ್ತಿದ್ದಂತೆ ಸೌಮ್ಯವಾದಿಗಳು ಅವರನ್ನು ಮೋಟಾರ್ ಕಾರಿನಲ್ಲಿ ಕೂರಿಸಲು ಕರೆದೊಯ್ದರು. ಅಷ್ಟರಲ್ಲೇ ಜನಜಂಗುಳಿಯನ್ನು ಸೀಳಿಕೊಂಡು ಬಂದ ರಾಮಪ್ರಸಾದ್, ಕಾರಿನ ಮುಂದೆ ಹೋಗಿ ರಸ್ತೆಯ ಮೇಲೆ ಮಲಗಿಕೊಂಡ. ಅವನು ಭಾವೋದ್ವೇಗದಿಂದ ಮೂಕನಾಗಿದ್ದ. ಕಣ್ಣಿನಿಂದ ಅಶ್ರು ಉದುರುತ್ತಿತ್ತು. ಸೌಮ್ಯವಾದಿಗಳಗಳನ್ನು ಉದ್ದೇಶಿಸಿ, ‘ಬೇಕಿದ್ದರೆ ಮೋಟಾರ್ ವಾಹನವನ್ನು ನನ್ನ ಮೇಲೆ ಓಡಿಸಿ, ನಾನು ಮಾತ್ರ ಕದಲುವುದಿಲ್ಲಎಂದ.

        ಮತ್ತೊಬ್ಬ ಎಲ್ಲಿಂದಲೋ ಒಂದು ಗಾಡಿಯನ್ನು ಎಳೆತಂದ. ತರುಣರೆಲ್ಲರೂ ಲೋಕಮಾನ್ಯರನ್ನು ಎತ್ತಿನಗಾಡಿಯಲ್ಲಿ ಕೂರಿಸಿ ಎಳೆಯುತ್ತ ಊರಲ್ಲೆಲ್ಲ ಮೆರವಣಿಗೆ ಮಾಡಿದರು. ಸುಮಾರು ಅದೇ ಕಾಲದಲ್ಲಿ, ತಾರುಣ್ಯದ ಕಾವಿನಲ್ಲಿದ್ದ ರಾಮಪ್ರಸಾದನ ಮನಸ್ಸಿನಲ್ಲಿ ಸಶಸ್ತ್ರಕ್ರಾಂತಿಯ ಕನಸು ಹುಟ್ಟಿಕೊಂಡಿತು.

        ರಾಮಪ್ರಸಾದನಿಗೆ ಗೆಳೆಯರ ಮೂಲಕ ಕ್ರಾಂತಿಕಾರಿ ಪಂಡಿತ ಗೇಂದಾಲಾಲ್ ದೀಕ್ಷಿತರ ಪರಿಚಯವಾಯಿತು. ಒಮ್ಮೆ ಗೇಂದಾಲಾಲರ ಟೋಳಿ ಕಾಡಿನಲ್ಲಿ ಸೇರಿದ್ದಾಗ ಒಬ್ಬ ದ್ರೋಹಿಯ ಕಾರಣ ಪೊಲೀಸರು ಇವರನ್ನು ಮುತ್ತಿದರು. ಹೋರಾಟ ನಡೆಯಿತು. ಗೇಂದಾಲಾಲ್ ದಸ್ತಗಿರಿಯಾದರು. ರಾಮಪ್ರಸಾದ್ ಮಾತ್ರ ಅಲ್ಲಿಂದ ತಪ್ಪಿಸಿಕೊಂಡ.

        ಆದರೆ ಪೊಲೀಸರ ಗೃಧ್ರದೃಷ್ಟಿ ಇವನ ಮೇಲೆ ಎರಗಿತು. ಅಂದಿನಿಂದ ಇವನಿಗೂ ಪೊಲೀಸರಿಗೂ ಕಣ್ಣುಮುಚ್ಚಾಲೆ ಪ್ರಾರಂಭ. ಗುಪ್ತಜೀವನ, ಬಳಿಯಲ್ಲಿ ಹಣವಿಲ್ಲ. ಹಿಂದೆ ಅನೇಕ ಬಾರಿ ಹಣ ನೀಡಿದ ತಾಯಿಯ ಸಾಸಿವೆಡಬ್ಬಿಯೂ ಹಣಕೊಡುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರಲ್ಲಿ, ಬಿರುಸಾಗಿ ಸಾಗಿದ್ದ ಅಸಹಕಾರಿ ಆಂದೋಲನವನ್ನು ಗಾಂಧೀಜಿ ನಿಲ್ಲಿಸಿದರು. ಅದು ಯಶಸ್ವಿಯಾದೀತೆಂದು ಕಾಯುತ್ತ ಶಸ್ತ್ರಗಳನ್ನು ಕೆಳಗಿಟ್ಟಿದ್ದ ಕ್ರಾಂತಿಕಾರಿಗಳಿಗೆ ನಿರಾಶೆಯಾಯಿತು. ಮತ್ತೆ ಶಸ್ತ್ರಗಳು ಶುಭ್ರಗೊಂಡವು, ಕ್ರಾಂತಿ ಕಾರ್ಯಾಚಾರಣೆಗೆ ಶಂಖೋದ್ಘೋಷವಾಯಿತು.

        ಶಚೀಂದ್ರನಾಥ ಸನ್ಯಾಲ್, ರಾಜೇಂದ್ರಲಾಹಿರಿ, ಶಚೀಂದ್ರ ಬಕ್ಷಿ, ಜೋಗೇಶಚಂದ್ರ ಚಟರ್ಜಿ ಮುಂತಾದವರು ಸೇರಿ 1923ರಲ್ಲಿ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ಎಂಬ ಕ್ರಾಂತಿಕಾರಿ ಸಂಸ್ಥೆ ಸ್ಥಾಪಿಸಿದರು. ಹಿಂದೆ ಗೇಂದಾಲಾಲರೊಂದಿಗೆ ಅನೇಕ ಕಾರ್ಯಾಚರಣೆಗಳಲ್ಲಿ ಸೆಣಸಿದ್ದ, ಶಸ್ತ್ರಪ್ರಯೋಗದಲ್ಲಿ ನುರಿತಿದ್ದ ರಾಮಪ್ರಸಾದನ ಹೆಗಲ ಮೇಲೆ ಇಡೀ ಸೈನಿಕ ವಿಭಾಗದ ಭಾರ ಬಿತ್ತು. ಸಂಸ್ಥೆ ಎಂದಮೇಲೆ ಅನೇಕ ಖರ್ಚುಗಳು. ಶಸ್ತ್ರಾಸ್ತ್ರ, ಮುದ್ರಣ, ಪ್ರವಾಸಗಳಿಗೆ, ಪೂರ್ಣಕಾಲಿಕ ಕ್ರಾಂತಿಕಾರಿಗಳ ಹೊಟ್ಟೆಬಟ್ಟೆಗೆ ಸಾಕಷ್ಟು ಹಣದ ಆವಶ್ಯಕತೆ ಇತ್ತು. ಅದನ್ನು ಒದಗಿಸುವ ಜವಾಬ್ದಾರಿ ಸೈನಿಕ ವಿಭಾಗದ್ದು, ಅಂದರೆ ರಾಮಪ್ರಸಾದನದು. ಅದಕ್ಕಾಗಿ ಆತ ಒಂದು ಯೋಜನೆ ತಯಾರಿಸಿದ. 1925ರ ಆಗಸ್ಟ್ 9ರ ರಾತ್ರಿ ಲಖನೌ ಬಳಿಯ ಕಾಕೋರಿ ಎಂಬಲ್ಲಿ ರೈಲು ನಿಲ್ಲಿಸಿ ಸರ್ಕಾರಿ ಖಜಾನೆ ಲೂಟಿಮಾಡಿದ. ತನ್ನ ಜತೆಗೆ 9 ಕ್ರಾಂತಿಕಾರಿ ಗೆಳೆಯರನ್ನು ಸೇರಿಸಿಕೊಂಡು ವಿದೇಶಿ ಸರ್ಕಾರಕ್ಕೆ ಸವಾಲು ನೀಡಿದ. ದರೋಡೆ ಅಲ್ಲ ಅದು. ಬ್ರಿಟಿಷರಿಗೆ ಭಾರತ ಹೊಡೆದ ಸೆಡ್ಡು! ಆ ಸಪ್ಪಳಕ್ಕೆ ಸರ್ಕಾರ ಬೆಚ್ಚಿತು. ಮೈಕೊಡವಿಕೊಂಡಿತು. ಎಲ್ಲ ಕಡೆಗಳಲ್ಲೂ ಗುಪ್ತಚರ ಜಾಲವನ್ನು ಬೀಸಿತು. ಆ ಜಾಲದಲ್ಲಿ ಅನೇಕ ಕ್ರಾಂತಿಕಾರಿಗಳು ಸಿಕ್ಕಿಬಿದ್ದರು.

        ಕಾಕೋರಿ ಘಟನೆ ನಡೆದು ಕೆಲದಿನಗಳು ಕಳೆದಿದ್ದವು. ಒಂದು ರಾತ್ರಿ ರಾಮಪ್ರಸಾದ್ ಗೆಳೆಯನೊಬ್ಬನ ಮನೆಯಿಂದ ಹಿಂದಿರುಗುತ್ತಿದ್ದ. ಹಿಂದೆ ಗುಪ್ತಚಾರರು ಬೆನ್ನಟ್ಟಿದ್ದರು. ರಾತ್ರಿ ಏನೂ ಘಟಿಸಲಿಲ್ಲ. ರಾಮಪ್ರಸಾದ್ ಮಲಗಿ ಬೆಳಗ್ಗೆ 4 ಗಂಟೆಗೆ ಎದ್ದು ಪ್ರಾತರ್ವಿಧಿ ಮುಗಿಸಿ ಆಚೆ ಬರುತ್ತಿದ್ದಾಗ ಬಾಗಿಲ ಬಳಿ ಬಂದೂಕಿನ ಸರಪಳಿ ಶಬ್ದವಾಯಿತು. ಬಾಗಿಲು ತೆಗೆಯುತ್ತಿದ್ದಂತೆ ಇವನಿಗಾಗಿ ಕಾಯುತ್ತಿದ್ದ ಪೊಲೀಸರ ಬೇಡಿಗಳು! ಅವನ ನಿರಂತರ ಚಟುವಟಿಕೆಗಳಿಗೆ ಪೂರ್ಣವಿರಾಮ! ಸರ್ಕಾರ ಅವನ ಮೇಲೆ ಮೊಕದ್ದಮೆ ಹೂಡಿತು. ಸಾಮ್ರಾಟರ ವಿರುದ್ಧ ಯುದ್ಧಘೊಷಣೆ, ಷಡ್ಯಂತ್ರ, ಕೊಲೆ ಮತ್ತು ದರೋಡೆ ಮುಂತಾದವು ಅವನ ಮೇಲಿನ ಆಪಾದನೆಗಳು. ಮೊಕದ್ದಮೆ 18 ತಿಂಗಳು ನಡೆಯಿತು. ತೀರ್ಪು ಎಣಿಸಿದ್ದಂತೆಯೇ. ರಾಮಪ್ರಸಾದನಿಗೆ ನೇಣಿನ ಪುರಸ್ಕಾರ!

        ರಾಮಪ್ರಸಾದ್ ನೈಷ್ಠಿಕ ಬ್ರಹ್ಮಚಾರಿ, ಕಠೋರ ಸಾಧಕ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃಎಂಬ ಉಕ್ತಿಯಲ್ಲಿ ಅವನಿಗೆ ಅಪಾರ ನಂಬಿಕೆ. ದರೋಡೆ ವೇಳೆ ಸ್ತ್ರೀಯರ ಕೂದಲೂ ಕೊಂಕಕೂಡದೆಂಬುದು ಅವನ ಉಗ್ರನಿಯಮವಾಗಿತ್ತು. ಅವನು ಬರಹಗಾರ, ಕವಿ. ಸ್ವಾತಂತ್ರ್ಯವೀರ ಸಾವರ್ಕರ್ರಂತೆ ವ್ಯಕ್ತಿತ್ವ, ಕವಿತಾಶಕ್ತಿ, ಲೇಖನಕಲೆಎಲ್ಲವನ್ನೂ ಮಾತೃಭೂಮಿಯ ಮಡಿಲಿಗೇ ಹಾಕಿದ್ದ. ಅವನ ಕವಿತೆಗಳಲ್ಲಿ ಒಂದೊಂದರಲ್ಲೂ ಎದ್ದುಕಾಣುವ ಗುಣ- ಪ್ರಖರ ದೇಶಭಕ್ತಿ. ಮಾತೃಭೂಮಿಯ ಪದತಲದಲ್ಲಿ ಜೀವನದ ಸಂಪೂರ್ಣ ಸಮರ್ಪಣೆ. ತಲೆಯನ್ನು ಮಾತೃದೇವಿಯ ಅಡಿಗಳಲ್ಲಿ ಕಡಿದಿರಿಸಿ ಅರ್ಚಿಸುವ ಆಕಾಂಕ್ಷೆ ಹೃದಯದಲ್ಲಿ ಎದ್ದಿದೆ. ತೋಳ್ಬಲದ ಪರೀಕ್ಷೆಯ ಸಮಯ ಬಳಿಸಂದಿದೆ’- ಇದು ಕವಿತೆಯೊಂದರ ಪಲ್ಲವಿಯ ಭಾವನೆ. ಇನ್ನೊಂದರಲ್ಲಿ ಅಮ್ಮಾ! ನಿನ್ನ ಸೇವೆ ಮಾಡುವಾಗ ಕೈಗಳಿಗೆ ಬೀಳುವ ಕೋಳಗಳ ಸಪ್ಪಳವೇ ನನಗೆ ವೀಣಾನಾದ. ಕಾರಾಗೃಹದ ಬಾಗಿಲುಗಳೇ ಸ್ವರ್ಗದ್ವಾರಎಂದಿದ್ದಾನೆ. ಅವುಗಳ ಸಂಗೀತಬದ್ಧ ರೂಪ ತರುಣರಿಗೆ ಸ್ಪೂರ್ತಿಯ ಗಂಗೋತ್ರಿ. ಅವನು ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಹಿಂದಿಯಲ್ಲಿ ಬಿಸ್ಮಿಲ್ಎಂಬ ಛಂದಸ್ಸನ್ನೇ ನಿರ್ವಿುಸಿದ್ದಾನೆ. ಆದ್ದರಿಂದಲೇ ಅವನ ಹೆಸರಿಗೆ ಬಿಸ್ಮಿಲ್ಎಂಬ ಕಾವ್ಯನಾಮ ಅಂಟಿಕೊಂಡಿತು. ರಾಮಪ್ರಸಾದನ ಆತ್ಮಕತೆ ಜೈಲುಗೋಡೆಗಳ ಮಧ್ಯದಿಂದ ಬರೆದಿರುವ ಜಗತ್ತಿನ ಶ್ರೇಷ್ಠಕೃತಿಗಳಲ್ಲೊಂದು. ಸದಾ ಸುತ್ತುವರಿದಿರುತ್ತಿದ್ದ ಪೊಲೀಸರ ಕಣ್ಣುತಪ್ಪಿಸಿ, ಅಲ್ಲಿ-ಇಲ್ಲಿಂದ ಸಂಪಾದಿಸಿದ ಚಿಕ್ಕಪುಟ್ಟ ಕಾಗದಗಳ ಮೇಲೆ ನೇಣುಗಂಬ ಹತ್ತುವ ಮುಂಚಿನ 3 ದಿನಗಳವರೆಗೂ ಬರೆದು, ಗುಪ್ತವಾಗಿ ಹೊರಸಾಗಿಸಿದ. ಇದು ಹಿಂದಿ ಸಾಹಿತ್ಯದ ಕೃತಿರತ್ನ.

        ನ್ಯಾಯಾಲಯದ ತೀರ್ಪಿನಂತೆ 1926ರ ಡಿ.19ರಂದು ನೇಣುಗಂಬ ಹತ್ತಿಸುವ ನಿಶ್ಚಯವಾಯಿತು. ಅದಕ್ಕೆ ಕೆಲವೇ ದಿನ ಮೊದಲು ಗೆಳೆಯನೊಬ್ಬನಿಗೆ ಪತ್ರ ಬರೆದ ರಾಮಪ್ರಸಾದ್- ‘19ನೆಯ ತಾರೀಖು ನಡೆಯಲಿರುವುದಕ್ಕೆ ಸಿದ್ಧನಾಗಿದ್ದೇನೆ. ಅದಾದರೂ ತಾನೆ ಏನು? ಕೇವಲ ಶರೀರದ ಬದಲಾವಣೆ. ನನಗಂತೂ ಪೂರ್ಣನಂಬಿಕೆ ಇದೆ, ನನ್ನ ಆತ್ಮ ತನ್ನ ಮಾತೃಭೂಮಿಯ ಮತ್ತು ಆಕೆಯ ದೀನಸಂತತಿಯ ಸೇವೆಗಾಗಿ ಮತ್ತಷ್ಟು ಪಟ್ಟು ಹೆಚ್ಚು ಉತ್ಸಾಹ ಓಜಸ್ಸುಗಳಿಂದ ಕೆಲಸಮಾಡಲು ಶೀಘ್ರವೇ ಹಿಂದಿರುಗುವುದು’. ‘ನನ್ನ ನಾಡಿಗಾಗಿ ನಾನು ಸಾವಿರಾರು ಬಾರಿ ಬಲಿದಾನ ನೀಡಬೇಕಾಗಿ ಬಂದರೂ ಅದನ್ನು ನಾನೆಂದಿಗೂ ಕಷ್ಟವೆಂದು ಪರಿಗಣಿಸುವುದಿಲ್ಲ’. ‘ಹೇ ದೇವ! ಈ ಭಾರತ ವರ್ಷದಲ್ಲಿ ನೂರು ಬಾರಿ ನನ್ನ ಜನನವಾಗಲಿ…’ ‘ದೇಶಕ್ಕೆ ಉಪಕಾರ ಮಾಡುವುದೇ ಅದರ ಉದ್ದೇಶವಾಗಲಿ’. ‘ಬಿಸ್ಮಿಲ್, ಅಶ್ಪಾಕ್, ರೋಶನ್, ಲಾಹಿರಿ ಅತ್ಯಾಚಾರಕ್ಕೆ ತುತ್ತಾಗಿ ಪ್ರಾಣ ನೀಗುವುದರಿಂದ ತೊಟ್ಟಿಕ್ಕುವ ಅವರ ನೆತ್ತರ ಕಣಕಣದಿಂದ ಕೋಟ್ಯನುಕೋಟಿ ವೀರರು ಜನಿಸುವರು…’ ‘ಅವರುಗಳ ಮಹಾಪರಾಕ್ರಮದಿಂದ ದೇಶದ ಉದ್ಧಾರವಾಗುವುದು, ದೇಶದ ಶೋಕ-ದುಃಖಗಳು ನಾಶವಾಗುವುವು. ಎಲ್ಲರಿಗೂ ನನ್ನ ಪ್ರಣಾಮಗಳನ್ನು ತಿಳಿಸಿ’.

        19ರಂದು ನಿತ್ಯನಿಯಮದಂತೆ ಸ್ನಾನ, ಸಂಧ್ಯಾವಂದನೆ ಮುಗಿಸಿದ. ತನ್ನ ತಾಯಿಯ ಹೆಸರಿಗೆ ಒಂದು ಪತ್ರ ಬರೆದು ದೇಶವಾಸಿಗಳಿಗೆ ಅಂತಿಮ ಸಂದೇಶ ನೀಡಿದ. ನಂತರ ಸ್ಥಿತಪ್ರಜ್ಞನಂತೆ ನೇಣಿನ ಘಳಿಗೆಯನ್ನು ಎದುರುನೋಡುತ್ತ ಕುಳಿತ. ಸ್ವಲ್ಪ ಸಮಯ ಕಳೆಯಿತು. ಪೊಲೀಸರು ಬಂದರು. ಅವರನ್ನು ಕಂಡು ಚಟುಮ್ಮನೆ ಮೇಲೆದ್ದು ನಿಂತು ಪೂರ್ಣ ಉಸಿರೆಳೆದು ಎದೆಯುಬ್ಬಿಸಿ ಗಟ್ಟಿಯಾಗಿ ಗರ್ಜಿಸಿದ- ವಂದೇ ಮಾತರಂ! ಭಾರತ್ ಮಾತಾ ಕೀ ಜೈ!ಅವನನ್ನು 18 ತಿಂಗಳು ತನ್ನಲ್ಲಿಟ್ಟುಕೊಂಡಿದ್ದ ಆ ಜೈಲುಕೋಣೆ ಅಂತಿಮ ವಿದಾಯ ಹೇಳಿತು. ಅವನು ನೇಣುಗಂಬದ ವೇದಿಕೆಯನ್ನು ಹತ್ತಿ ನಿಂತು ದೃಢದನಿಯಲ್ಲಿ ತಾನು ಸ್ವೀಕರಿಸಿದ್ದ ಧ್ಯೇಯವನ್ನು ಮತ್ತೊಮ್ಮೆ ಸ್ಪಷ್ಟಪಪಡಿಸಿದ- ನಾನು ಬ್ರಿಟಿಷ್ ಸಾಮ್ರಾಜ್ಯದ ನಾಶ ಬಯಸುತ್ತೇನೆ’. ತಲೆಯ ಮೇಲೆ ನೇಣುಕುಣಿಕೆ ತೂಗಾಡುತ್ತಿತ್ತು. ಗಂಭೀರ ಕಂಠದಿಂದ ವೇದಘೊಷ ಮಾಡಿದ- ವಿಶ್ವಾನಿ ದೇವ ಸವಿತುರ್ದುರಿತಾನಿ ಪರಾಸುವ ಯದ್ಭದ್ರಂ ತನ್ನ ಅಸುವಾ…’ ರಾಮಪ್ರಸಾದ್ ನಿಂತಿದ್ದ ಕಾಲ ಕೆಳಗಿನ ಹಲಗೆ ಸರಿಯಿತು. ದೇಹ ತೂಗಾಡಲಾರಂಭಿಸಿತು. ಆತ್ಮ ದೇಹವನ್ನು ಬಿಟ್ಟು, ಅವನ ಇಚ್ಛೆಯಂತೆ ಮಾತೃಭೂಮಿಯ ಸೇವೆಗಾಗಿ ಇನ್ನೊಂದು ದೇಹವನ್ನು ಹುಡುಕಿಕೊಂಡು ಹೊರಟಿತು.

        ಮತ್ತೊಂದು ವಿಷಯ ಸ್ನೇಹಿತರೇ ನೇಣುಗಂಬವೇರುವ ಸ್ವಲ್ಪ ಸಮಯದ ಮುಂದೆ  ರಾಮ್ ಪ್ರದಾಸರಿಗೆ ಒಂದು ಲೋಟ ಹಾಲು ಕುಡಿಯಲು ಕೊಟ್ಟರಂತೆ ಆಗ ರಾಮ್ ಪ್ರಸಾದರು ಜೈಲರ್ ಗೇ  ಈ ರೀತಿ ಹೇಳಿದರಂತೇ "ಓ ಹೋ ಕೆಲವೇ ಕ್ಷಣದಲ್ಲಿ ನೇಣುಗಂಬವೇರುವ ನನಗೇಕೆ ಈ ಹಾಲು?ನನ್ನ ಮಾತೃದೇವಿಯ ಎದೆಹಾಲನ್ನೇ ಕುಡಿಯಹೊರಟಿರುವೆ ನಾ"  ಎಂದು ಗರ್ಜಿಸಿ ಮುನ್ನಡೆಯಿಟ್ಟಾಗ, ಜೈಲರ್ ಕ್ರಾಂತಿಕಾರಿ ಮಾತಿಗೆ  ತಲೆತಗ್ಗಿಸಿ ನಿಂತ.

ಯದಿ ದೇಶಹಿತ್ ಮರ್ನಾ ಪಡೆ

ಮುಝುಕೋ ಸಹಸ್ರೋಂ ಬಾರ್ ಭೀ

ತೋ ಭೀ ನ ಮೈ ಇಸ್ ಕಷ್ಟಕೋ

ನಿಜ ಧ್ಯಾನ್ ಮೇ ಲಾವೂ ಕಭೀ

ಹೇ ಈಶ್, ಭಾರತವರ್ಷ ಮೇ

ಶತ್ ಬಾರ್ ಮೇರಾ ಜನ್ಮ ಹೋ

ಕಾರಣ್ ಸದಾ ಹೀ ಮೃತ್ಯು ಕಾ

ದೇಶೋಪಕಾರಕ್ ಕರ್ಮ ಹೋ

ಮರ್ ತೇ ಬಿಸ್ಮಿಲ್, ರೋಶನ್, ಲಾಹಿರಿ

ಅಶ್ಫಾಕ್ ಅತ್ಯಾಚಾರ್ ಸೇ

ಹೋಂಗೇ ಪೈದಾ ಸೈಕಡೋ

ಉನಕೇ ರುಧಿರ್ ಧಾರ್ ಸೇ

ಉನಕೇ ಪ್ರಬಲ್ ಉದ್ಯೋಗ್ ಸೇ

ಉದ್ಧಾರ್ ಹೋಗಾ ದೇಶ್ ಕಾ

ತಬ್ ನಾಶ್ ಹೋಗಾ ಸರ್ವದಾ

ದುಂಖ್ ಶೋಕ್ ಕೆ ಲವಲೇಶ್ ಕಾ.

ಎಂತಹ ಅದ್ಭುತ ಸಾಲುಗಳು ಹಿಂದೂಸ್ಥಾನದ ವೀರಪುತ್ರ ರಾಮ ಪ್ರಸಾದ್ ಬಿಸ್ಮಿಲ್ ರವರು ಸೆರೆಮನೆವಾಸದಲ್ಲಿ ಬರೆದ ಕ್ರಾಂತಿ ಕವಿತೆ. ಸಾವು ಮುಂದಿರುವಾಗಲು ಸಿಂಹಗರ್ಜನೆ ಮಾಡಿದ ಭಾರತಾಂಬೆಯ ವೀರಪುತ್ರ ಮಹಾತ್ಮಾ ರಾಮ್ ಪ್ರಸಾದ್ ಬಿಸ್ಮಿಲ್ ರವರ ಜಯಂತಿಯಿಂದು.

        ಹಿಂದೂಸ್ಥಾನ್ ಕಂಡ ಶ್ರೇಷ್ಠ ಕ್ರಾಂತಿರತ್ನರಲ್ಲಿ ಒಬ್ಬರಾದ ಚಂದ್ರಶೇಖರ್ ಆಜಾದ್ ಇವರ ಶಿಷ್ಯರೇ!  ಹಾಗೂ ಹಿಂದೂ ಮುಸ್ಲಿಂ ಸ್ನೇಹ ಮತ್ತು ಭಾವೈಕ್ಯತೆಗೆ ಮತ್ತೊಂದು ಹೆಸರು ಮಹಾತ್ಮ ಕ್ರಾಂತಿಕಾರಿ ಬಲಿದಾನದಲ್ಲೂ ಒಂದಾದ ಅಶ್ಫಾಕುಲ್ಲಾ ಖಾನ್ ರು ರಾಮ್ ಪ್ರಸಾದ್ ರ ಸ್ನೇಹ ಮರೆಯಲಾದಿತೇ. ಹಾಗೆ ಭಗತ್, ಸುಖದೇವ್ ಮತ್ತು ರಾಜಗುರು ರವರು  ಹಾಡಿದ "ಸರ್ಫರೋಷ್ ಕೀ ತಮನ್ನಾ" ಕವಿತೆ ಬರೆದವರು ರಾಮ್ ಪ್ರಸಾದ್ ಬಿಸ್ಮಿಲ್ ರವರೇ !!!

        ಮಹಾತ್ಮನಾದ ರಾಮ್ ಪ್ರಸಾದ್ ಬಿಸ್ಮಿಲ್ ರಿಗೆ ಸಕಲ ರಾಷ್ಟ್ರಭಕ್ತರ ಪರವಾಗಿ ಜಯಂತಿಯ ಶುಭಾಶಯಗಳು .

ಜೂನ್ 04, 2021

ಅಗಲಿದ “ಹಾರೈಕೆ ಕವಿಗೆ” ನುಡಿ ನಮನ

 

ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯಲೋಕದ ಅಚ್ಚಳಿಯದ ನಕ್ಷತ್ರವೊಂದು ಕಳಚಿ ಬಿದ್ದಿದೆ . ಈ ಭಾಗದ ಸಾಹಿತ್ಯ ವಲಯದ ಎಲ್ಲಾ ಮಗ್ಗುಲುಗಳಲ್ಲಿ ಗುರುತಿಸಿಕೊಂಡು ಹಲವು ಯುವ ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿ ಇದ್ದ ಹಿರಿಯ ಜೀವವೊಂದು ಕಣ್ಮರೆಯಾಗಿದೆ.

ಅಕ್ಷರಶಃ ಈ ಭಾಗ ಇವರಿಲ್ಲದೇ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದೆ. ಪ್ರೋ. ವಸಂತ ಕುಷ್ಟಗಿ ಅವರು ಇಂದು (ಶುಕ್ರವಾರ) ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗಷ್ಟೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ “ಹಾರೈಕೆ ಕವಿ” ಅಸ್ತಂಗತರಾಗಿದ್ದಾರೆ.

ಎಂಥ ವಿಪರ್ಯಾಸವೆಂದರೆ ಇಂದು ಆಕಾಶವಾಣಿಯಲ್ಲಿ ಕಾರ್ಯಕ್ರಮ ವಿವರಣೆಯ ಸಂದರ್ಭದಲ್ಲಿ ನಾನು ಅವರದ್ದೆ ಕಾರ್ಯಕ್ರಮದ ಉದ್ಯೋಷಣೆ ಮಾಡಿದ್ದೆ “ಇಂದು ಬೆಳಿಗ್ಗೆ 9 ಗಂಟೆ 30 ನಿಮಿಷಕ್ಕೆ ಗಾಂಧಿಸ್ಕೃತಿ ಪ್ರಸಾರವಾಗಲಿದೆ, ಪ್ರೋ. ವಸಂತ ಕುಷ್ಟಗಿ ಅವರಿಂದ” ಎಂದು. ಅವರ ಕಾರ್ಯಕ್ರಮವೇನೋ ಸರಿಯಾದ ಸಮಯಕ್ಕೆ ಬಿತ್ತರ ಮಾಡಿದೆ. ಆದರೆ ಅದಾಗಲೇ ಅವರು ಈ ಲೋಕದಿಂದ ನಿರ್ಗಮನ ಮಾಡಿದ್ದರು. ಸಹುದ್ಯೋಗಿ ಮಿತ್ರ ದತ್ತಾತ್ರೇಯ ಪಾಟೀಲ್ ಕರೆ ಮಾಡಿ “ರಾಘು, ಪ್ರೋ. ವಸಂತ ಕುಷ್ಟಗಿ ಸರ್ ಅವರ ಗಾಂಧಿಸ್ಕೃತಿ ಕಾರ್ಯಕ್ರಮ ಇದೆ ಅಂತೇನೋ ಹೇಳಿದ್ರಿ ಆದ್ರೆ ಅವರು ಆಗಲೇ ಹೋಗಿಬಿಟ್ರಂತೆ” ಎಂದು ಹೇಳಿದಾಗ ಆಘಾತವಾಯಿತು.

ಪ್ರತಿ ಶುಕ್ರವಾರ ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಮೂಡಿಬರುವ ಗಾಂಧಿಸ್ಕೃತಿ ಕಾರ್ಯಕ್ರಮದಲ್ಲಿ ತಮ್ಮ ದೃಷ್ಟಿಕೋನದಲ್ಲಿ ಗಾಂಧಿಜಿಯವರ ಜೀವನ ವೃತ್ತಾಂತಗಳನ್ನು ಅತ್ಯಂತ ಮಾರ್ಮಿಕವಾಗಿ ಹೇಳುತಿದ್ದವರು ಪ್ರೊ. ವಸಂತ ಕುಷ್ಟಗಿ. ಅದರಂತೆಯೇ ಗಾಂಧಿಜಿಯವರ ತತ್ವ ಆದರ್ಶಗಳನ್ನು ಜೀವನ ಪರ್ಯಂತ ಅಳವಡಿಸಿಕೊಂಡು ಬಂದವರು. ತಮ್ಮ ಇಡೀ ಜೀವನದುದ್ದಕ್ಕೂ ಗಾಂಧಿಜಿಯವರು ಹೇಳಿದಂತೆ ಖಾದಿ ವಸ್ತ್ರಗಳನ್ನೇ ತೊಟ್ಟವರು. ನಡೆಯಲು ಎಷ್ಟೇ ಕಷ್ಟವಾದರೂ ಸಹ ತಾವೇ ಸ್ವತಃ ಆಕಾಶವಾಣಿ ಸ್ಟುಡಿಯೋಗೆ ಆಗಮಿಸಿ ಕಳೆದ ಕೊರೋನಾ ಮಹಾಮಾರಿ ಆಗಮನಕ್ಕೂ ಮುಂಚಿನ ವರೆಗೆ ಗಾಂಧಿಸ್ಕೃತಿ ಕಾರ್ಯಕ್ರಮಕ್ಕಾಗಿ ಧ್ವನಿಮುದ್ರಣ ಮಾಡಿ ಹೋಗುತ್ತಿದ್ದರು. ಆದರೆ ಇನ್ನು ಮುಂದೆ ಆಕಾಶವಾಣಿ ಕೇಂದ್ರಕ್ಕೆ ಅವರ ಆಗಮನ ಇಲ್ಲ ಎಂದಾಗ ಬಹಳಷ್ಟು ನೋವಾಗುತ್ತದೆ. ಆದರೆ ಅವರ ಧ್ವನಿ ಮಾತ್ರ ನಮ್ಮ ಆಕಾಶವಾಣಿಯಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ನಮ್ಮ ಧ್ವನಿ ಮುದ್ರಣ ಭಂಡಾರದಲ್ಲಿ ಅವರದ್ದೆಷ್ಟೋ ಕಾರ್ಯಕ್ರಮಗಳು ಆಕಾಶವಾಣಿ ಇರುವ ವರೆಗೂ ಕೇಳುಗರಿಗೆ ನೆನಪಾಗುತ್ತಲೇ ಇರುತ್ತಾರೆ. ಆಕಾಶವಾಣಿಯ ಕೇಳುಗರ ಪರವಾಗಿ ಸಾಹಿತ್ಯಲೋಕದ ಎಲ್ಲರ ಪರವಾಗಿ ಪ್ರೋ. ವಸಂತ ಕುಷ್ಟಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

"ಹಾರೈಕೆ ಕವನ ವಸಂತ ಕುಷ್ಟಗಿ ವಾಚನ" ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೋ. ವಸಂತ ಕುಷ್ಟಗಿ ಅವರ ಪರಿಚಯ:

ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ ಕಲಬುರ್ಗಿಯ ಸಾಹಿತ್ಯ ಪ್ರಿಯರಿಗೆ ಸಾಹಿತ್ಯಿಕ, ಶೈಕ್ಷಣಿಕ ವಿಷಯಗಳನ್ನು ತಮ್ಮ ಚಟುವಟಿಕೆಗಳ ಮುಖಾಂತರ ಪರಿಚಯಿಸುತ್ತಿರುವ ವಸಂತ ಕುಷ್ಟಗಿಯವರು ಹುಟ್ಟಿದ್ದು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ (ಬಾಗಲಕೋಟೆ ಜಿಲ್ಲೆ) ೧೯೩೬ ರ ಅಕ್ಟೋಬರ್ ೧೦ ರಂದು. ತಂದೆ ರಾಘವೇಂದ್ರ ಕುಷ್ಟಗಿಯವರು ನಿಜಾಂ ಆಡಳಿತದ ಜಿರಾಯತ್‌ (ವ್ಯವಸಾಯ) ಖಾತೆಯಲ್ಲಿ ಮದದ್‌ಗಾರರಾಗಿ (ಸಹಾಯಕರಾಗಿ) ಕೆಲಸ ಮಾಡಿದವರು, ತಾಯಿ ಸುಂದರಾಬಾಯಿ.

ಯಾದಗಿರಿಯಲ್ಲಿ ಪ್ರಾರಂಭಿಕ ಶಿಕ್ಷಣ. ಉಪಾಧ್ಯಾಯರಾಗಿ ದೊರೆತ ಶಂಕರರಾವ್‌ ಕುಲಕರ್ಣಿಯವರ ಮೇಲ್ವಿಚಾರಣೆಯಲ್ಲಿ ಕಲಿತ ಉರ್ದುಭಾಷೆ. ‘ಮಕ್ಕಳ ಸ್ಕೂಲು ಮನೇಲಲ್ವೆ’ ಎನ್ನುವಂತೆ ತಾಯಿ ಸುಂದರಾಬಾಯಿಯವರಿಂದ ಕಲಿತ ಕನ್ನಡಭಾಷೆ. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಧ್ಯಮಿಕ ಶಾಲಾಭ್ಯಾಸ ಶಹಾಪೂರದಲ್ಲಿ. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಕಲಿತದ್ದು ಪ್ರೌಢಶಾಲೆಯವರೆಗೆ. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿದ ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎ. ಪದವಿ. ಉಪನ್ಯಾಸಕರಾಗಿ ಸೇರಿದ್ದು ಬೀದರಿನ ಎಚ್‌.ಕೆ.ಇ. ಸೊಸೈಟಿಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ. ನಂತರ ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಕಲಬುರ್ಗಿಯ ಎಂ.ಎಸ್‌.ಐ. ಕಾಲೇಜು, ಮತ್ತು ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೆ ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ. ಸ್ಥಾಪನೆಯಾದಾಗ (೧೯೮೦ – ೮೨) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾಯಿ ಸುಂದರಾಬಾಯಿಯವರು ಅಕ್ಷರಾಭ್ಯಾಸ ಮಾಡಿಸಿದರೆ ತಂದೆ ರಾಘವೇಂದ್ರ ಕುಷ್ಟಗಿಯವರು ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ತಂದೆಯು ವರ್ಗವಾಗಿ ಹೋದೆಡೆಯಲ್ಲೆಲ್ಲಾ ಸಾಹಿತಿಗಳ ಸ್ನೇಹ ಸಂಪಾದಿಸಿ ನಡೆಸುತ್ತಿದ್ದ ಸಾಹಿತ್ಯಕೂಟದಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಗೋಕಾಕ್‌, ಸಿಂಪಿಲಿಂಗಣ್ಣ, ಮುಗಳಿ ಮುಂತಾದವರೆಲ್ಲರೂ ಹಾಜರಿರುತ್ತಿದ್ದರು.

ವಸಂತ ಕುಷ್ಟಗಿ ಅವರು ಹಲವಾರು ನಾಟಕಗಳನ್ನು ಬರೆದುದಲ್ಲದೆ ರಂಗನಟರಾಗಿಯೂ ಪಾಲ್ಗೊಳ್ಳುತ್ತಿದ್ದರು. ಹೀಗೆ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿದ್ದಾಗ ಕಾಲೇಜಿನ ಪತ್ರಿಕೆಗೂ ಬರೆಯ ತೊಡಗಿದ್ದರು. ಗಳಗನಾಥರಂತಹವರು ತಮ್ಮ ಪುಸ್ತಕಗಳನ್ನು ಗೋಣಿ ಚೀಲದಲ್ಲಿ ಹೊತ್ತು, ಮಾರಾಟಮಾಡಲು ಬರುತ್ತಿದ್ದುದನ್ನು ಕಂಡ ಕುಷ್ಟಗಿಯವರು ಈ ರೀತಿ ನನ್ನ ಪುಸ್ತಕವೂ ಮಾರಾಟವಾಗುವುದು ಯಾವಾಗ ಎಂದು ಯೋಚಿಸುತ್ತಿದ್ದವರು.

ವಸಂತ ಕುಷ್ಟಗಿ ಅವರ ಮೊದಲ ಕವನ ಸಂಕಲನ ‘ಭಾವದೀಪ್ತಿ’ ಪ್ರಕಟವಾದದ್ದು ೧೯೭೦ರಲ್ಲಿ. ನಂತರ ಬಂದ ಕವನ ಸಂಕಲನಗಳು ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ ೯ ಕವನ ಸಂಕಲನಗಳು. ನಂತರ ಗದ್ಯಸಾಹಿತ್ಯದಲ್ಲಿಯೂ ಹಲವಾರು ಕೃತಿ ರಚಿಸಿರುವ ವಸಂತ ಕುಷ್ಟಗಿಯವರು ಬರೆದ ಮೊದಲ ಕೃತಿ ಭಕ್ತಿಗೋಪುರ. ಮುಂಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದ ವ್ಯಕ್ತಿ ಚಿತ್ರ ಕೃತಿಗಳು; ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾ ನಂತರದ ಹರಿದಾಸ ಸಾಹಿತ್ಯ ಮುಂತಾದ ದಾಸ ಸಾಹಿತ್ಯದ ಕೃತಿಗಳು; ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಸುಮಾರು ೨೦ ಕ್ಕೂ ಹೆಚ್ಚೂ ಕೃತಿಗಳನ್ನು ರಚಿಸಿದ್ದಾರೆ. ಕೃತಿ ಸಂಪಾದನೆಯ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಕುಷ್ಟಗಿಯವರು ಕಾವ್ಯಶ್ರೀ, ತೊದಲು, ಅಜ್ಜಿಹೇಳಿದ್ದು ಮೊಮ್ಮಕ್ಕಳು ಬರೆದದ್ದು ಶ್ರೀರಾಘವೇಂದ್ರ ಮಹಿಮೆ, ಕಂದಗಲ್‌ ಕೃತ ಶ್ರೀ ಚಂದ್ರಲಾ ಪರಮೇಶ್ವರಿ ನಾಟಕ ಮುಂತಾದ ವಿವಿಧ ಪ್ರಕಾರಗಳ ಸುಮಾರು ೧೫ ಕೃತಿಗಳ ಜೊತೆಗೆ ಇತರರೊಡನೆ ಸೇರಿ ಸುಮಾರು ೨೦ ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.

ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೆ, ಇತರ ಸಾಹಿತಿಗಳ ಕೃತಿಗಳೂ ಸೇರಿ ಸುಮಾರು ೨೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ, ಇತಿಹಾಸ ಅಕಾಡಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್‌, ಗುಲಬರ್ಗಾ ವಿ.ವಿ.ದ ಸೆನೆಟ್‌, ಕೋಲ್ಕತ್ತಾದ ಏಷಿಯಾಟಿಕ್‌ ಸೊಸೈಟಿ ಆಫ್‌ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ದುಡಿಯುತ್ತಿರುವ ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೆ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ ೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು ದೊರೆತಿವೆ.

ವಸಂತ ಕುಷ್ಟಗಿ ಅವರ ಸಾಹಿತ್ಯ ಮತ್ತು ವ್ಯಕ್ತಿ ಪರಿಚಯದ ‘ಹಾರಯಿಕೆಯ ಕವಿ ಪ್ರೊ. ವಸಂತ ಕುಷ್ಟಗಿ’ ಕೃತಿಯು ೨೦೧೦ರಲ್ಲಿ ಪ್ರಕಟಗೊಂಡಿದೆ. ಪ್ರೊ. ವಸಂತ ಕುಷ್ಟಗಿಯವರ ಜೀವನ ಮತ್ತು ಕಾವ್ಯ: ಒಂದು ಅಧ್ಯಯನ ಸಂಪ್ರಬಂಧಕ್ಕೆ ಶ್ರೀಮತಿ ರೂತಾ ಎಸ್‌. ಪ್ರಭುಶಂಕರ ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್‌. ಪದವಿ ದೊರೆತಿದೆ.