ಜನವರಿ 14, 2011

ನಾವು ನೀವು ಕೂಡಿ…


          ಕನ್ನಡ ಚಿತ್ರರಂಗ ಇಂದು ತನ್ನದೆ ಆದ ಭದ್ರ ಮತ್ತು ಭವ್ಯವಾದ ಸ್ಥಾನವನ್ನು ಅನಾವರಣಗೋಳಿಸಿಕೊಂಡಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯದ ಅರಿವನ್ನು ಮೂಡಿಸುತ್ತಿದೆ. ಅರಿವು ಅನ್ನೊದಿಕ್ಕೆ ಕಾರಣ ಇದೆ. ಯಾಕೆಂದ್ರೆ ಕನ್ನಡ ಚಿತ್ರರಂಗದ ಇತಿಹಾಸದೆಡೆಗೆ ಹೊರಳಿ ನೋಡಿದಾಗ ಅದೆಷ್ಟೋ ಅದ್ಭುತವಾದ ಚಿತ್ರಗಳು ಅಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಬಂದಿವೆ. ಆದ್ರೆ ಪ್ರಾರಂಭದ ಕೆಲವು ದಶಕಗಳಲ್ಲಿ ಅದನ್ನು ಗಮನಿಸುವಷ್ಟು, ಬೇರೆಯವರು ಆಕರ್ಷಿತರಾಗುವಷ್ಟು ಉದ್ಯಮ ಬೆಳೆದಿರಲಿಲ್ಲ. ಚಿತ್ರೀಕರಣದ ಸೌಲಭ್ಯ, ಸ್ಟುಡಿಯೊಗಳು, ತಾಂತ್ರೀಕ ಸಲಕರಣೆಗಳು ನಮ್ಮಲ್ಲಿನ್ನು ಬೆಳವಣಿಗೆ ಹೊಂದಿರಲಿಲ್ಲ. ಅದೆಲ್ಲದಕ್ಕಾಗಿ ಬೇರೆ ರಾಜ್ಯದ ಮೊರೆ ಹೊಗಬೇಕಾಗಿತ್ತು. ಹೆಚ್ಚಾಗಿ ಮದ್ರಾಸಿಗೆ ಹೋಗುತಿದ್ದರು. ಅದು ಅನಿವಾರ್ಯವು ಆಗಿತ್ತು. ಇಂದು ಅದಕ್ಕೇನೂ ಕೊರತೆ ಇಲ್ಲ. ಕನ್ನಡ ಚಿತ್ರೋದ್ಯಮ ಅನ್ನೋದು ಈಗ ಮುಗಿಲೆತ್ತೆರಕ್ಕೆ ಬೆಳೆದು ತನ್ನ ವೈಶಾಲ್ಯತೆಯನ್ನು, ತನ್ನ ನಿಜ ರೂಪವನ್ನು ತೋರಿಸುತ್ತಿದೆ. ಈಗ ನಮ್ಮಲ್ಲಿ ಎಲ್ಲವೂ ಇದೆ ಎಂದು ವಿಶ್ವಾಸದಿಂದ ಹೇಳಿ ಬೀಗುತ್ತಿದೆ.
     ಕನ್ನಡ ಚಿತ್ರರಂಗಕ್ಕೆ ಸಿನೆಮಾ ತಡವಾಗಿ ಕಾಲಿಟ್ಟರೂ, ನಿಧಾನವಾಗಿ ಬೆಳವಣಿಗೆ ಕಂಡರೂ ಸಹಿತ ಭದ್ರವಾದ ಬುನಾದಿ ಹಾಕಿ ಭವಿಷ್ಯದಲ್ಲಿ ಚಿತ್ರೋದ್ಯಮ ಆ ಎತ್ತರಕ್ಕೆ ಬೆಳೆಯಬೇಕೆನ್ನುವ ಕನಸನ್ನಿಟ್ಟುಕೊಂಡು ವಿಶ್ವಾಸದಿಂದ ಸರಿಯಾದ ಹೆಜ್ಜೆಯನ್ನೆ ಹಾಕಿತು. ತನ್ಮೂಲಕ ತಾಯ್ನಾಡಿಗಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದೆ. ಎಲ್ಲಾ ಭಾಷೆಯ ಚಿತ್ರರಂಗದ ಜೊತೆಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಂಡು ಬಂದಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ಕಲಾವಿದರು ನಮ್ಮ ಚಿತ್ರಗಳಲ್ಲಿ, ನಮ್ಮ ಕಲಾವಿದರು ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಈ ಪರಂಪರೆಯನ್ನು ಕಾಪಾಡಿಕೊಂಡು ಬರುತಿದ್ದಾರೆ. ಈ ಕೊಡು ಕೊಳ್ಳುವ ಸಂಪ್ರದಾಯ ಇದೇ ರೀತಿ ಮುಂದುವರಿಯಲಿ ಎನ್ನುವುದು ನಮ್ಮೆಲ್ಲರ ಆಶಯ. ಅದಕ್ಕೆ ಸಾಕ್ಷಿಯಾಗಿ ಅನೇಕರು ನಮ್ಮೆದುರು ವಿರಾಜಮಾನರಾಗಿದಾರೆ.
      ಭಾರತೀಯ ಚಿತ್ರರಂಗದಲ್ಲಿನೆ ಅಚ್ಚರಿ ಮೂಡಿಸಿರುವ ಅಮೋಘ ಪ್ರತಿಭೆ, ದಕ್ಷಿಣ ಭಾರತದಲ್ಲಿನೆ ಮೆಗಾ ಸ್ಟಾರ್ ಆಗಿ ಮೆರೆಯುತ್ತಿರುವ ಎಲ್ಲರ ಆರಾಧ್ಯದೈವ ಸ್ಟೈಲ್ ಕಿಂಗ್ ರಜನಿಕಾಂತ್, ಇನ್ನೊಬ್ಬ ಅಪ್ಪಟ ಪ್ರತಿಭಾವಂತ ನಟ Action King ಅರ್ಜುನ್ ಸರ್ಜಾ, ಮೊನ್ನೆಯಷ್ಟೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪುಟವಿಟ್ಟ ಚಿನ್ನಕ್ಕಿಂತಲು ದುಪ್ಪಟ್ಟಾದ ಪ್ರತಿಭೆ ಪ್ರಕಾಶ್ ರೈ- ಇವರೆಲ್ಲಾ ಅಪ್ಪಟ್ಟ ಕನ್ನಡಿಗರು. ಕನ್ನಡದ ಮಣ್ಣಲ್ಲಿ ಅರಳಿದ ಕಲಾ ಕುಸುಮಗಳು. ತಮ್ಮ ಸೌಗಂಧವನ್ನು ಇಡಿ ಭಾರತೀಯ ಚಿತ್ರರಂಗದಲ್ಲಿ ಹಬ್ಬಿಸಿದ್ದಾರೆ. ಇದನ್ನು ಪ್ರತಿಯೋಬ್ಬ ಕನ್ನಡಿಗ ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಾನೆ. ಈ ಕಲಾವಿದರು ಕೂಡ ತಮ್ಮ ತಾಯ್ನುಡಿಯ ಬಗ್ಗೆ, ಜನ್ಮ ಕೊಟ್ಟ ಮಣ್ಣಿನ ಬಗ್ಗೆ, ಆಶೀರ್ವಾದ ಮಾಡಿದ ತಾಯ್ನಾಡ ಜನರ ಬಗ್ಗೆ ಅಷ್ಟೇ ಗೌರವದಿಂದ ಮಾತಾಡುತ್ತಾರೆ.
     ಕಳೆದ ವರ್ಷ ನಡೆದ ಅಮೃತ ಮಹೋತ್ಸವದಲ್ಲಿ ರಜನಿಕಾಂತ್ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡಿದ್ದು ಕೇಳಿ ಕನ್ನಡಿಗರು ಬಹಳ ಖುಶಿಪಟ್ರು. ಅವರು ಕನ್ನಡ ಚಿತ್ರ ಕಲಾವಿದರನ್ನು, ತನಗೆ ಬಾಳು ನೀಡಿದ ಕನ್ನಡ ಚಿತ್ರರಂಗವನ್ನು, ಇನ್ನು ಪ್ರೀತಿಸುತ್ತಿರುವ ಕನ್ನಡಿಗರನ್ನು ನೆನಪಿಸಿಕೊಂಡ ರೀತಿ ಅನನ್ಯವಾಗಿತ್ತು. ಪ್ರಕಾಶ್ ರೈ ಕೂಡ ಅಷ್ಟೆ. ಅವರ ಮಾತಲ್ಲಿ ಎಲ್ಲಿಯೂ ಕನ್ನಡ ಚಿತ್ರರಂಗ ತನ್ನನ್ನು ನಿರ್ಲಕ್ಷ ಮಾಡಿದೆ ಅನ್ನೋ ವಿಷಾದ ಕಾಣಲಿಲ್ಲ.
     ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವ ಇವರ ಜೋತೆಗೆ ಡಾ.ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಉಪೇಂದ್ರ ಮುಂತಾದವರು ಬೇರೆ ಭಾಷೆಗೂ ಹೋಗಿಬಂದಿದಾರೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯ ಏನೆಂದರೆ ಡಾ.ರಾಜ್ ಕುಮಾರ್ ಸಹಿತ ಒಂದು ಅನ್ಯ ಭಾಷಾ ಚಿತ್ರದಲ್ಲಿ ಅಭಿನಯಿಸಿದ್ದರೆ ಅನ್ನೋದು. ೧೯೫೪ ರಲ್ಲಿ ಅವರು ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಯಶಸ್ವಿಯಾದ ನಂತರ ಅದನ್ನು ತೆಲುಗಿನಲ್ಲಿ ಮಾಡಲಾಯಿತು. ಆ ತೆಲುಗು ಅವತರಣಿಕೆ ಶ್ರೀ ಕಾಳಹಸ್ತಿ ಮಹಾತ್ಮಂ ನಲ್ಲಿ ಡಾ.ರಾಜ್ ಅವರೇ ನಾಯಕ ನಟರು.
       ಇನ್ನು ನಟಿಯರ ಬಗ್ಗೆ ಬಂದರೆ ಪಂಢರಿಬಾಯಿ, ಭಾರತಿ, ಜಯಂತಿ, ಬಿ.ಸರೋಜಾದೆವಿ, ಜಯಮಾಲಾ, ಮಾಧವಿ ಮುಂತಾದ ಕನ್ನಡತಿಯರು ತಾವೇನೂ ಕಮ್ಮಿಯಿಲ್ಲವೆಂದು ತೋರಿಸಿದ್ದಾರೆ.
      ಇತ್ತೀಚೆಗೆ ಬಂದಾಗ ಇಲ್ಲಿ ವಿಶೇಷವಾಗಿ ಕಿಚ್ಚ ಸುದೀಪ್ ಅವರ ಹೆಸರನ್ನು ತೋಗೋಬೇಕು. ಇವರ ಅದ್ಭುತ ಪ್ರತಿಭೆಗೆ ಬಾಲಿವುಡ್ ಬಿಚ್ಚುಮನಸ್ಸಿನ ಸ್ವಾಗತ ನೀಡಿದೆ. ಈಗಾಗಲೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿ ಬಂದಿದ್ದು, ಮೂರು ಬಿಡುಗಡೆ ಕಂಡಿವೆ. ಇದರ ಜೋತೆಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಮೋದಲ ಕನ್ನಡ ಚಿತ್ರ ಮೈ ಆಟೊಗ್ರಾಫ್ ಹಿಂದಿಯಲ್ಲಿ ತರುವವರಿದ್ದಾರೆ. ಅದು ಅಲ್ಲದೆ ರಾಂಗೋಪಾಲ್ ವರ್ಮಾ ಅನ್ನೊ ದಿಗ್ದರ್ಶಕರ ಅಭಯ ಹಸ್ತ ಇವರ ಮೇಲಿದೆ. ಜೋತೆಗೆ ಬಿಗ್ಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಅಭಿನಯಿಸಿ ಅವರಿಂದ ಶಹಬ್ಬಾಷ್ ಗಿರಿ ಪಡೆದಿದ್ದಾರೆ. ಈ ನಟನ ನಟನಾ ವೈಖರಿ ನೋಡಿ ಬಾಲಿವುಡ್ ಚಿತ್ರ ಪ್ರೇಮಿಗಳು ಅಷ್ಟೆ ಅಲ್ಲ ಬಾಲಿವುಡ್ ಬಾದಷಹ ಶಾಹರುಖ್ ಖಾನ್ ಸಹಿತ ಬೆರಗಾಗಿದ್ದಾರೆ. ಇದೇನು ಸಣ್ಣ ವಿಷಯ ಅಲ್ಲ. ಆದಷ್ಟು ಬೇಗ ಸುದೀಪ್ ಬಾಲಿವುಡ್ ಬಾನಂಗಳದಲ್ಲಿ ಪ್ರಕಾಶಮಾನವಾಗಿ ಬೆಳಗಲಿ. ಆದರೆ ಕನ್ನಡ ಚಿತ್ರರಂಗ ರಜನಿಕಾಂತ್, ಅರ್ಜುನ್ ಸರ್ಜಾ, ಪ್ರಕಾಶ್ ರೈ ಇಂಥವರಿಗೆ ತೋರಿಸಿದ ಉದಾರ ನಿರ್ಲಕ್ಷ ಸುದೀಪ್ ಅವರಿಗೆ ತೋರಿಸದಿರಲಿ.
      ಇದು ನಮ್ಮವರ ಮಾತಾದರೆ ಬೇರೆ ಭಾಷೆಯ ಕಲಾವಿದರು ನಮ್ಮ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಅನೇಕ ಉದಾಹರಣೆಗಳಿವೆ. ಇದಕ್ಕೆ ಬಹಳ ವರ್ಷಗಳ ಇತಿಹಾಸನೆ ಉಂಟು. ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೆಶಕ ಪುಟ್ಟಣ್ಣ ಕಣಗಲ್ ೧೯೭೩ ರಲ್ಲಿ “ಸಾಕ್ಷಾತ್ಕಾರ” ಚಿತ್ರಕ್ಕಾಗಿ ಬಾಲಿವುಡ್ ನ ‘ದೊಡ್ಡ ನಟ’ ಪೃಥ್ವೀರಾಜ್ ಕಪೂರ್ ಅವರನ್ನು ಕರೆತಂದು ಪಾತ್ರ ಮಾಡಿಸಿದರು. ಅಷ್ಟೆ ಅಲ್ಲ ಅವರಿಂದಲೆ ಡಬ್ಬಿಂಗ್ ಕೂಡಾ ಮಾಡಿಸಿದರು. ಅದಕ್ಕಾಗಿ ಪೃಥ್ವೀರಾಜ್ ಕಪೂರ್ ಒಂದು ತಿಂಗಳಲ್ಲಿ ಕನ್ನಡ ಕಲಿತರಂತೆ. ಇದು ಆ ನಟನ ಮಹಾನತೆ ಮತ್ತು ಭಾಷೆಯ ಬಗೆಗಿನ ಗೌರವ ಎಂಥದ್ದು ಅನ್ನೊದನ್ನು ತೊರಿಸಿಕೊಡುತ್ತದೆ. ಕಪೂರ್ ಮನೆತನದ ಇನ್ನೊಂದು ಕುಡಿ ಅನೀಲ್ ಕಪೂರ್ ಚಿತ್ರರಂಗಕ್ಕೆ ನಾಯಕ ನಟರಾಗಿ ಪ್ರವೇಶ ಮಾಡಿದ್ದೆ ಕನ್ನಡ ಚಿತ್ರದ ಮೂಲಕ. ಕೆ.ಬಾಲಚಂದರ್ ನಿರ್ದೇಶನದ ಚೊಚ್ಚಲ ಮತ್ತು ಕನ್ನಡದ ಏಕೈಕ ಚಿತ್ರ “ಪಲ್ಲವಿ ಅನುಪಲ್ಲವಿ” ಯಲ್ಲಿ ಅಭಿನಯಿಸಿ ಜನಪ್ರೀಯರಾದರು. ಜೊತೆಗೆ ಶ್ರೇಷ್ಠ ನಟರುಗಳಾದ ನಸಿರುದ್ದಿನ್ ಷಾ, ಅಮರೀಶ್ ಪುರಿ, ಒಂ ಪುರಿ, ಜಾಕಿ ಶ್ರಾಫ್. ಇವರೆಲ್ಲರ ಜೊತೆಗೆ ಬಿಗ್ಗ್ ಬಿ ಅಮಿತಾಬ್ ಬಚ್ಚನ್ ಕೂಡ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟಿಯರಲ್ಲಿ ಹೇಳುವುದಾದರೆ ಬಾಲಿವುಡ್ನಲ್ಲಿ ತಮ್ಮದೆ ಛಾಪು ಮೂಡಿಸಿರುವಂಥ ಚಿರಯುವತಿ ರೇಖಾ, ಹವಾ ಹವಾಯಿ ಬೆಡಗಿ ಶ್ರೀದೇವಿ ಮತ್ತು ಜೂಹಿ ಚಾವ್ಲಾ ಇವರೆಲ್ಲಾ ಕನ್ನಡದ ಮೂಲಕ ಬೆಳಕಿಗೆ ಬಂದವರು. ನಂತರದಲ್ಲಿ ಹಿಂದಿಚಿತ್ರಗಳಲ್ಲಿ ಜನಪ್ರೀಯರಾದರು. ರೇಖಾ ಡಾ.ರಾಜ್ಕುಮಾರ್ ಅಭಿನಯದ ಗೋವಾದಲ್ಲಿ ಸಿ.ಐ.ಡಿ.೯೯೯ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಶ್ರೀದೇವಿ ಕೂಡ ಡಾ.ರಾಜ್ಕುಮಾರ್ ಅಭಿನಯದ ಭಕ್ತ ಕುಂಬಾರ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಜೂಹಿ ಚಾವ್ಲಾ ಅಂತು ರವಿಚಂದ್ರನ್ ಅವರ ಚಿತ್ರಗಳ ಮೂಲಕ ಯಶಸ್ವಿ ನಾಯಕಿ ನಟಿಯಾಗಿ ಗುರುತಿಸಿಕೊಂಡು ನಂತರ ಬಾಲಿವುಡ್ನಲ್ಲಿ ಮಿಂಚಿದರು. ಇವರೆಲ್ಲಾ ಮತ್ತೋಮ್ಮೆ ಕನ್ನಡದ ಕಡೆಗೆ ಮುಖ ಮಾಡಲಿಲ್ಲ. ಆದರೆ ಲಕ್ಷ್ಮೀ, ಜಯಪ್ರದಾ, ಸುಹಾಸಿನಿ, ಗೀತಾ ಬೇರೆ ಭಾಷೆಯವರಾದರೂ ಕೂಡಾ ಕನ್ನಡ ಚಿತ್ರಗಳಲ್ಲಿ ತಾವು ಮಾಡಿದ ಮೋಡಿಯಿಂದ ಕನ್ನಡದವರೇನೋ ಅನ್ನುವಷ್ಟರಮಟ್ಟಿಗೆ ನಮ್ಮವರಾಗಿ ಬಿಟ್ಟಿದ್ದಾರೆ. ಇದು ಈ ಮಣ್ಣಿನ ಗುಣ, ಇಲ್ಲಿನ ಚಿತ್ರರಸಿಕರ ಪ್ರೇಮ, ಅವರ ಹೃದಯ ವೈಶಾಲ್ಯತೆ ಅನ್ನಬಹುದು.
      ನಟ ನಟಿಯರು ಮಾತ್ರ ಅಲ್ಲ ಉಳಿದ ಕಲಾವಿದರು ಚಿತ್ರರಂಗದ ಅನೇಕ ವಿಭಾಗದಲ್ಲಿ ಕೆಲಸ ಮಾಡುವವರು ಕೂಡ ದೇಶದ ಎಲ್ಲ ಕಡೆ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದಾರೆ. ಬೇರೆ ಭಾಷೆಯಲ್ಲಿ ಹೆಸರು ಮಾಡಿದವರು ನಮ್ಮ ಭಾಷೆಯಲ್ಲಿ ಬಂದು ಕನ್ನಡ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ನಿರ್ದೆಶಕ ಪುಟ್ಟಣ್ಣ ಕಣಗಲ್ ನಾಗರಹಾವು ಚಿತ್ರ ನೀಡಿದಾಗ ಕನ್ನಡ ಚಿತ್ರರಂಗ ಅಷ್ಟೆ ಅಲ್ಲ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡಿತು. ಅದೇ ಚಿತ್ರವನ್ನು ಹಿಂದಿಯಲ್ಲಿ ನಿರ್ದೆಶನ ಮಾಡಿಕೊಡಲು ದುಂಬಾಲು ಬಿದ್ದರು. “ಜೆಹರೀಲಾ ಇನ್ಸಾನ್” ಹೆಸರಿನ ಮೂಲಕ ಪುಟ್ಟಣ್ಣ ಹಿಂದಿ ಚಿತ್ರ ನಿರ್ದೆಶನ ಮಾಡಿಕೊಟ್ಟರು. ಮುಂದೆ ಇವರದೆ ಪಡುವಾರಳ್ಳಿ ಪಾಂಡವರು ಹಿಂದಿಗೆ “ಹಮ್ ಪಾಂಚ್” ಹೆಸರಿನಲ್ಲಿ ತುರ್ಜುಮೆಗೊಂಡಿತು. ಇವರಲ್ಲದೆ ಅನೇಕ ನಿರ್ದೆಶಕರು ಹಿಂದಿ ಅಲ್ಲದೆ ಬಹಳಷ್ಟು ಭಾಷೆಯ ಚಿತ್ರಗಳನ್ನು ನಿರ್ದೆಶನ ಮಾಡಿದ್ದಾರೆ. ಬೇರೆ ಭಾಷೆಯಿಂದ ಅನೇಕ ಪ್ರತಿಭಾವಂತ ನಿರ್ದೆಶಕರು ಕನ್ನಡಕ್ಕೆ ಅದೇಷ್ಟೊ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದಾರೆ.
          ಈ ಆತ್ಮೀಯ ಬಾಂಧವ್ಯ ಚಿತ್ರರಂಗದಲ್ಲಂತೂ ಮೊದಲಿನಿಂದ ಬೆಳೆದುಕೊಂಡು ಬಂದಿದೆ. ಹೀಗೆ ಮುಂದುವರೆಯುತ್ತದೆ ಅನ್ನುವುದರಲ್ಲೇನು ಅಚ್ಚರಿಯಿಲ್ಲ. ಆದ್ರೆ ಈ ರೀತಿಯ ಮಧುರ ಬಾಂಧವ್ಯ ಬೇರೆ ಕ್ಷೇತ್ರಗಳಲ್ಲೂ ಆದ್ರೆ ಅದೊಂದು ಅದ್ಭುತ ಬದಲಾವಣೆ ಬೆಳವಣಿಗೆಯ ದೃಷ್ಟಿಯಿಂದ. ನೀವೇನಂತೀರಾ ?

2 ಕಾಮೆಂಟ್‌ಗಳು: