ಜನವರಿ 30, 2011

ಅಯ್ಯೋ ನಗ್ರೀ.....

ಅಯ್ಯೋ ನಗ್ರೀ.....
“ನಗಬೇಕು ನಗಿಸಬೇಕು ಅದು ನಮ್ಮ ಧರ್ಮ,
     ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ !”
    
       ನಗ್ರೀ ಅಂಥ್ಹೇಳಿ ಕೈ ಕಟ್ಟಿಕೊಂಡು ಕೂತ್ರ ಆ ನಗು ಬಾ ಅಂದ್ರ ಹ್ಯಾಂಗ್ ಬರಬೇಕು ಪಾಪ ! ಖರೆ ಐತಲ್ಲ ಮಾತು. ಯಾವುದೇ ನೋಡ್ರಿ, ’ಮಾತೇನು ಎಲುಬಿಲ್ಲದ ನಾಲಿಗೆ’ ಅಂಥ್ಹೇಳಿ ಏನೇನೋ ಹೇಳಿ ಬಿಡಬಹುದು. ಆದ್ರ ಆ ಮಾತು ಆಗುವಂಥದ್ದಾ ? ನಮ್ಮ ಕೈಯಿಂದ ಮಾಡುವಂಥದ್ದಾ ? ಅಂತ ವಿಚಾರ ಮಾಡಿ ಆಡಬೇಕು. ಆದ್ರ ಯಾರೂ ಆ ವಿಚಾರ ಮಾಡೋ ಪ್ರಯತ್ನ ಸಹಿತ ಮಾಡಲ್ಲ. ಆ ರೀತಿ ವಿಚಾರ ಮಾಡದೆ ಮಾತಾಡೋರ ತಲ್ಯಾಗ ಏನಿರ್ತದೊ ಗೊತ್ತಿಲ್ಲ. ಹಿಂಗ್ ದೊಡ್ಡ ದೊಡ್ಡ ಮಾತಾಡಿದ್ರ ನಾವೂ ದೊಡ್ಡವ್ರು ಅನಿಸಿಕೊಳ್ತಿವಂತ ತಿಳ್ಕೊಂಡಿರ್ತಾರೇನೋ ! ಹಿಂದ ಮುಂದ ನೋಡಲಾರ್ದೆ ಅಂದೆ ಬಿಡ್ತಾರ. ಈ ರೀತಿ ಒಬ್ರಾದ್ರ, ಇನ್ನ ಕೆಲವ್ರು ಇದ್ದಿರ್ತಾರ... ಎಂಥವ್ರು ಅಂದ್ರ ಅವ್ರು ಹೇಳೊದು ಒಂದು ನಡೆಯೋದೆ ಒಂದು. ಅವ್ರು ನಡೆಯೋ ದಾರಿಗೂ ಆಡೋ ಮಾತಿಗೂ ಅದೇನೋ ಅಂತಾರಲ್ಲ ’ಅಜಗಜಾಂತರ ವ್ಯತ್ಯಾಸ’ ಹಾಂಗ್ ಇರ್ತದ. ಆದ್ರೂ ಮತ್ತ ಮ್ಯಾಲ ತಾವು ಆಡಿದ ಮಾತಿಗಿ ಸಪೊರ್ಟ್ ಹ್ಯಾಂಗ್ ಮಾಡ್ತಾರಂದ್ರ ’ಕೊಟ್ಟ ಮಾತಿಗೆ ತಪ್ಪಿ ನಡೆದೊಡೆ ಮೆಚ್ಚನಾ ಪರಮಾತ್ಮನು’ ಅನ್ನೊ ಹಾಗೆ. ಅಂಥವರ ಜೋಡಿ ಮಾತಾಡೊದೆ ಬೇಕಾರ್ ಅನ್ನಿಸಿ ಬಿಡ್ತದ.
     ಪ್ರತಿಯೊಬ್ಬ ಮನುಷ್ಯನ ಸ್ವಭಾವ ಭಿನ್ನ ಭಿನ್ನ ರೀತಿಯಾಗೆ ಇದ್ದಿರ್ತದ. ಹ್ಯಾಂಗಂತ ಕೇಳ್ತಿರೇನು ? ಈಗ ನೋಡ್ರಿ ನಾವು ಅಂತಿರ್ತೀವಲ್ಲ ’ಅಂವಾ ಹ್ಯಾಂಗ್ ಇದಾನ್ ನೋಡು. ಹ್ಯಾಂಗ್ ಮಾಡ್ತಾನ, ಎಷ್ಟು ವಿಚಿತ್ರ ಇದಾನ ಅಂತ’. ನಾವು ಹಾಗ್ ಅನ್ಲಿಕ್ಕಿ ಕಾರಣ ಅವರನ್ನ ನಮ್ಮ ಸ್ವಭಾವಕ್ಕ ಹೋಲಿಸಿಕೊಂಡು ನೋಡಿರ್ತೀವಿ. ಅವನು ನಮ್ಮಂಗೆ ಯಾಕಿರಲ್ಲ, ನಮ್ಮ ತರಾನೆ ಯಾಕ್ ವಿಚಾರ ಮಾಡಲ್ಲ, ನಾವು ಆಡಿದಂಗೆ ಯಾಕ್ ಮಾತಾಡಲ್ಲ ಅಂತ. ಯಾಕಂದ್ರ ಅವನು ನಮ್ಮಂಗೆ ಇರ್ಲಿ ಅಂತ ಬಯಸ್ತೀವಿ. ಆದ್ರ ಯಾರೂ ಆ ರೀತಿ ಇರಲ್ಲ. ಅಲ್ಲದೆ ಯಾರೂ ತಮ್ಮ ಸ್ವಂತಿಕೆ ಬಿಟ್ಟುಕೊಡಲು ಬಯಸಲ್ಲ. ಬಯಸಬಾರದು ಕೂಡಾ.
    ಮನುಷ್ಯ ತನ್ನಲ್ಲಿ ಎನೆಲ್ಲಾ ಇದ್ರೂ, ಎಷ್ಟೇ ಇದ್ರೂ ಈ ಚಿಂತಿ ಮಾಡೋದು ತಲೆ ಕೆಡಿಸಿಕೊಳ್ಳೊದು ಬಿಡು ಅಂದ್ರೂ ಬಿಡಲ್ಲ. ಹಿಂಗ್ಯಾಕ ಅಂತ ನೀವು ತಲೆಯಲ್ಲಿ  ಎಷ್ಟೇ ಹುಳ ಬಿಟ್ಟುಕೊಂಡ್ರೂ ಗೊತ್ತಗಲ್ಲ. ಅದು ಮನುಷ್ಯ ಸಹಜ ಗುಣ ಅಂತ ಸಮರ್ಥನೆ ಮಾತು ಹೇಳಿ ಬಿಟ್ಟುಬಿಡ್ತೀವಿ. ಅದಕ್ಕೆ ನೋಡ್ರೀ ನಮ್ಮ ಹಿರಿಯರು ಎಷ್ಟು ಛಂದ್ ಹೇಳ್ಯಾರ. ಮನುಷ್ಯನಿಗೆ ಎನೆಲ್ಲಾ ಇದ್ರೂ ಅವನು ಪರಿಪೂರ್ಣನಲ್ಲ ಅಂತ. ಆದ್ರ ಯಾರೂ ಇದನ್ನ ಅರ್ಥ ಮಾಡಿಕೊಳ್ಳಲು ಹೋಗೊದೇ ಇಲ್ಲ. ಈಗ ಯಾರಾದ್ರೂ ’ನನಗೇನು ಕಮ್ಮದ ! ಎಲ್ಲಾನೂ ಅದ ನನ್ಗ !’ ಅಂತ ಹೇಳಿದ್ರೂ ಅವ್ರೀಗೆ ಗೊತ್ತಿಲ್ಲಧಂಗ ಅದೆಷ್ಟೋ ಕೊರತೆಗಳು ಅವರಲ್ಲಿ ಅಡಗಿರ್ತವ.
      ಇನ್ನ ಕೆಲವ್ರು ಇದ್ದಿರ್ತಾರ. ಮಾತ್ ಮಾತಿಗೂ ನೆಗೆಟೀವ್ ವಿಚಾರನೇ. ಯಾರಿಗೋ ಇಷ್ಟು ಟೈಮಿಗೆ ಬಾ ಅಂದಿರ್ತಾರ. ಅವರ ಜೊತೆ ಬಹಳ ಇಂಪಾರ್ಟೆಂಟ್ ಕೆಲಸ ಇದ್ದಿರ್ತದ. ಅವನು ಇಷ್ಟು ಟೈಮಿಗಿ ಬರ್ತಿನಿ ಅಂತ ಹೇಳಿರ್ತಾನ. ಆದ್ರೂ ಇವರು ವಿಚಾರ ಹ್ಯಾಂಗ್ ಮಾಡ್ತಾರ್ತನಂದ್ರ ’ಒಂದು ವೇಳೆ ಅವನು ಆ ಟೈಮಿಗೆ ಬರ್ಲಿಕಾಗಲಿಲ್ಲ ಅಂದ್ರ ಹ್ಯಾಂಗ್ ಮಾಡೋದು’. ಅವನೀಗೀಗ ಆಲ್ರೆಡಿ ಒಂದು ಒಳ್ಳೆ ಕೆಲಸ, ಕೈತುಂಬಾ ಸಂಬಳ, ಸುಂದರವಾದ ಹೆಂಡತಿ, ಎರಡು ಮುದ್ದು ಮಕ್ಕಳು. ನೋಡಿದವ್ರು ಹೊಟ್ಟೆಕಿಚ್ಚು ಪಡುವಂಥ ಸುಖಿ ಸಂಸಾರ. ಇಷ್ಟೆಲ್ಲ ಇದ್ದ ಮೇಲೂ ಸಹ ಅವನು ಒಬ್ಬನೆ ಕೂತಾಗ ಏನ್ ವಿಚಾರ ಮಾಡ್ತಿರ್ತಾನಂದ್ರ “ಅಲ್ಲ ! ನನಗ ಈ ಕೆಲಸ ಇರ್ತಿದಿಲ್ಲ ಅಂದ್ರ ಹ್ಯಾಂಗಿರ್ತಿತ್ತೋ ಶಿವನೇ ! ನನಗ ಇಂಥ ಹೆಂಡ್ತಿ ಸಿಗ್ತಿದಿಲ್ಲ ಅಂದ್ರ ಎಂಥಕಿ ಸಿಗ್ತಿದ್ಳೋ ಭಗವಾನಾ !”  ಇಂಥಪರಿ ವಿಚಾರ ಮಾಡವ್ರು ಇರ್ತಾರಾ ದೇವ್ರೇ....
      ಕೆಲವೊಬ್ರ ಇಷ್ಟ ಹ್ಯಾಂಗಿರ್ತದ ನೋಡ್ರಿ. ಅದು ಎಲ್ರಿಗೂ ಕಷ್ಟ ಅನ್ನಿಸಿಬಿಡ್ತದ. ಹಾಂಗಂತ ಹೀಳಿ ಅವ್ರೀಗಿ ಕೆಟ್ಟವರು ಅನ್ಲಿಕ್ಕೂ ಬರಲ್ಲ. ಯಾಕಂದ್ರ ಒಳ್ಳೆ ವಿಚಾರದ ಬುದ್ಧಿವಂತನೂ ಅವರಲ್ಲಿ ಇದ್ದಿರ್ತಾನ. ಆದ್ರೂ ಅವ್ರು ಎಲ್ರಿಗೂ ಇಷ್ಟ ಆಗಲ್ಲ. ಅವರದ್ದೇನು ಪಾಲಿಸಿ ಅಂದ್ರ ನನ್ನ ಮಾತಿಗೆ ಎಲ್ರೂ ಹೌದು ಅನ್ನಬೇಕು. ಅದು ತಪ್ಪಿರ್ಲಿ ಸರಿ ಇರ್ಲಿ. ಅವರ ಮಾತಿಗೆ ಪರ್ಯಾಯ ಅರ್ಥ ಕೊಡಲು ನಮ್ಮ ಹತ್ರ ಉತ್ರ ಇದ್ರೂ ಅವರ ಮಾತಿಗೆ ತಲೆ ತೂಗಲೆ ಬೇಕು. ಅಂಥವರಿಗಿ ಮಾತ್ರ ಇವ್ರು ಜೊಗುಳ ಹಾಡೊರು. ಅಂದ್ರೆ ಅವ್ರನ್ನೆ ತಮ್ಮ ಫ್ರೆಂಡ್ಸಂತ ಸೆಲೆಕ್ಟ್ ಮಾಡ್ಕೊಂಡಿರ್ತಾರ. ಅವ್ರಿಗಿ ಏನು ಬೇಕು ಎಲ್ಲ ಕೊಟ್ಟು ಸಹಾಯ ಮಾಡ್ತಾರ. ಅದೇ ಒಂದು ವೇಳೆ ಇವನ ಮಾತಿಗೆ, ಇವನ ವಿಚಾರಕ್ಕ ಪ್ರತಿರೋಧ ವ್ಯಕ್ತಪಡಿಸಿದ್ರ ಇವರಿಬ್ರೂ ಕಟ್ಟಾ ವಿರೋಧಿಗಳಾಗ್ತಾರ. ಇಂಥವರ ನಡುವೆ ನಮ್ಮಂಥವರು ಹ್ಯಾಂಗಿರ್ಬೇಕು ಅನ್ನೋದು ವಿಚಾರ ಮಾಡುವಂಥದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ