ಜನವರಿ 30, 2011

ಮಾತಿನ(ನ)ಲ್ಲೆ

ಮಾತಿನ ಮೋಡಿಯಲ್ಲಿ ಆಕೆ ಮಾನಸ ಸರೋವರದಲ್ಲಿ ಮೀಯಿಸಿ,
ತುಟಿಯಂಚಿನಿಂದ ಪೋಣಿಸಿಟ್ಟ ಶಬ್ದಗಳು ಕುಸುಮ ಘಮ !
ಆ ಮಕರಂದ ಘಮಿಸುತ್ತ ನಾ ಸೋತು ಮೈಮರೆತೆನಲ್ಲೆ...
ಎಲ್ಲಿಂದಲೋ ತೂರಿಬಂದ ಪ್ರೀತಿ ತಂಗಾಳಿ
ಹಾರಿಸಿಕೊಂಡು ಹೋಯಿತಲ್ಲ ಸಂಗವ ತೋರಿ,
ಮಾತಿನ ಮಂಥನದಲ್ಲಿ ಒಸರಿತು ನಮ್ಮಲ್ಲಿ ಒಲವು,
ಹೌದೆಂದು ವಾದಿಸುವ ಮಾತಿಗೆ ಮಿಡಿಯಲೊಲ್ಲವು ನನ್ನ ತುಟಿ !
ನೀನಾದರು ಹೇಳಬಾರದೆ ಪಾಪ...! ಅಂತ ಕನಿಕರಿಸಿ
ನಾನಂತು ಗೆಲ್ಲಲ್ಲ, ನೀನಾದರೂ ಸೋಲಲ್ಲ
ಇನ್ನೆಷ್ಟು ದಿವಸ ಈ ಸಂಗ್ರಾಮ ?
ಸಂಧಾನಕ್ಕೆ ಯಾರಿರುವರೋ ಶ್ರೀ ಕೃಷ್ಣ ಪರಮಾತ್ಮ.
ನೀನು ನಕ್ಕಾಗಲೆ ನಾನಾಗಬೇಕಿತ್ತು ಪರವಶ
ನಾನಾದ ಪೆಚ್ಚಿಗೆ ನೀನು ಮಾಡಿಕೊಳ್ಳಬೇಕಿತ್ತು ಕೈವಶ
ಸುಖಾಸುಮ್ಮನೆ ಆಗಿಹೋಯಿತಲ್ಲೆ ಕಾಲಹರಣ !
ಹೇಗೆ ಪತ್ತೆಯಾಗಲಿ ಹೇಳು ನೀ ಮಾಡಿರುವೆ ಈಗ ಅಪಹರಣ.
ನೂರು ಮಾತನಾಡೋ ನಲ್ಲೆ ತುಂಬಿಕೊಂಡಿದ್ದರೂ
ಮಾಡಲಾಗುತಿಲ್ಲ ನಿನಗೆ ಪ್ರೀತಿಯ ನಿವೇದನೆ !
ಮಾತಿಗಾಗಿ ಮರುಕಪಡುವ ನನ್ನ ಅರ್ಥಮಾಡಿಕೋ ವೇದನೆ ?
ಇರಲಿ ಬಿಡು ನಲ್ಲೆ.... ನನಗರ್ಥವಾಯಿತು,
ಮಾತಿಗೂ ಮೀರಿದ ‘ಪ್ರೇಮ’ ನಮ್ಮದಲ್ಲವೆ !
ನಾನು ಮೌನ ನೀನು ತಾನ
ನಿರವದಲ್ಲೂ ಹೊರಡುತಿದೆ ಒಲವಿನ ನಿನಾದ
ಎಷ್ಟು ಮಧುರ, ಎಷ್ಟು ಸುಂದರ ನಮ್ಮ ಪ್ರೇಮ ಮಂದಾರ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ