ಕಾಲಾಂತರದಲ್ಲಿ ಮಣ್ಣಲ್ಲಿ ಹೂತು ಹೋಗಿದ್ದಈ ಗುಹೆ ಮತ್ತು ಶಿವಲಿಂಗದ ಇರುವಿಕೆಯನ್ನು ಅಲ್ಲಿನ ಹಸು ಅರಿತಿತ್ತು. ಆ ಹಸುವಿನ ಮೂಲಕ ಈ ಪ್ರದೇಶದ ಉತ್ಖನನ ಮಾಡಿದ್ದು ಅಲ್ಲಿನ ಭಾರತ ಮೂಲದ ಒಂದು ಹಿಂದು ಕುಟುಂಬ.
ಭಾರತದಿಂದ 5000 ಕಿಲೋ ಮೀಟರ್ ದೂರದಲ್ಲಿರುವ ಆಫ್ರಿಕಾ ಖಂಡದ ಒಂದು ದೇಶ ಕೀನ್ಯಾ. ಈ ದೇಶದಲ್ಲಿ ಅತ್ಯಂತ ಪ್ರಾಚೀನವಾದ ಶಿವಲಿಂಗವೊಂದು ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಈ ಶಿವಲಿಂಗವು ಹಿಂದೂ ಮಹಾಸಾಗರದ ದಡದಲ್ಲಿ ಇರುವ ಒಂದು ಗುಹೆಯಲ್ಲಿದೆ. ಆ ಗುಹೆ ಅದೆಷ್ಟೋ ವರ್ಷಗಳ ವರೆಗೆ ಅಗೋಚರವಾಗಿಯೇ ಇತ್ತು. ಅಂದರೆ ಮಣ್ಣಲ್ಲಿ ಹೂತು ಹೋಗಿತ್ತು. ಆದರೆ ಅಲ್ಲಿನ ಸ್ಥಳೀಯ ಗೋಮಾತೆಯಿಂದ ಗೋಚರಗೊಂಡು ಈಗ ಎಲ್ಲರ ದರ್ಶನಕ್ಕೆ ಲಭ್ಯವಾಗಿದೆ. ಆ ಗುಹಾಂತರ ಶಿವಲಿಂಗ ದೇವಾಲಯವೇ “ಗೊಂಬೇಶ್ವರ ಶಿವಲಿಂಗ”. ಈ ಗುಹಾಂತರ ಗೊಂಬೇಶ್ವರ ಶಿವಲಿಂಗ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ವಾಹಿಲಿ ಭಾಷೆಯಲ್ಲಿ ಗೊಂಬೆ ಎಂದರೆ “ಹಸು”. ಗೊಂಬೇಶ್ವರ ಎಂದರೆ ಹಸುಗಳ ಪ್ರಭು ಎಂದರ್ಥ. ಈ ಗುಹಾಂತರ ಶಿವಲಿಂಗಕ್ಕೆ ಈ ಹೆಸರು ಬರಲು ಕಾರಣ ತುಂಬಾ ಸ್ವಾರಸ್ಯಕರವಾಗಿದೆ. ಮುಂದೆ ಓದಿ.
ಮೊಂಬಾಸಾ ಹಿಂದೂ ಮಹಾಸಾಗರದ ದಡದಲ್ಲಿರುವ ಕೀನ್ಯಾ ದೇಶದ ಕರಾವಳಿ ಪ್ರದೇಶದ ನಗರವಾಗಿದೆ. ಈ ಮೊಂಬಾಸಾ ನಗರವನ್ನು ಕೀನ್ಯಾದಲ್ಲಿ ಬಿಳಿ ಮತ್ತು ನೀಲಿ ನಗರ ಎಂದು ಕರೆಯಲಾಗುತ್ತದೆ. ಇದು ಕೀನ್ಯಾ ದೇಶದ ಅತ್ಯಂತ ಹಳೆಯ (ಸಿರ್ಕಾ 900 ಕ್ರಿ.ಶ.) ಮತ್ತು ಎರಡನೇ ಅತಿದೊಡ್ಡ ನಗರ (ರಾಜಧಾನಿ ನೈರೋಬಿಯ ನಂತರ) ಆಗಿದೆ. ಈ ಮೊಂಬಾಸಾ ನಗರದ ಸಮೀಪದಲ್ಲಿಯೇ ಹಿಂದು ಮಹಾಸಾಗರದ ದಡದಲ್ಲಿ ಗುಹೆಯೊಂದರಲ್ಲಿ ಗೊಂಬೇಶ್ವರ ಶಿವಲಿಂಗವಿದೆ.
ಹಿನ್ನೆಲೆ: ಈ ಗುಹಾಂತರ ದೇವಾಲಯದ ಹಿಂದಿನ ಕಥೆ ತುಂಬಾ ಸ್ವಾರಸ್ಯಕರವಾಗಿದೆ. ಬಹಳ ಹಿಂದೆಯೇ ಅಲ್ಲಿನ ಸ್ಥಳೀಯ ಗೋಪಾಲಕನೊಬ್ಬ ತನ್ನ ಹಸುಗಳನ್ನು ಈ ಪ್ರದೇಶದಲ್ಲಿ ಮೇಯಿಸಲು ಕರೆದೊಯ್ಯುತ್ತಿದ್ದ. ಅದರಲ್ಲಿ ಒಂದು ನಿರ್ದಿಷ್ಟ ಹಸು ಪ್ರತಿಸಲವು ಒಂದು ನಿರ್ದಿಷ್ಟ ಸ್ಥಳದಲ್ಲಿ ತನ್ನ ಕೆಚ್ಚಲಿನ ಎಲ್ಲಾ ಹಾಲನ್ನು ಸುರಿಸುತ್ತಿತ್ತಂತೆ. ಆ ಸ್ಥಳೀಯ ಗೋಪಾಲಕನಿಗೆ ಆ ಹಸುವಿನ ನಡೆ ಕುತೂಹಲ ತರಿಸಿ ಅಲ್ಲಿಯೇ ಹತ್ತಿರದಲ್ಲಿದ್ದ ಭಾರತೀಯ ಹಿಂದೂ ಕುಟುಂಬವನ್ನು ಸಂಪರ್ಕಿಸಿ ಆ ಸಂಗತಿಯನ್ನು ತಿಳಿಸುತ್ತಾನೆ. ಆಗ ಆ ಕುಟುಂಬ ಆ ಸ್ಥಳದ ಉತ್ಖನನ ಮಾಡಲು ತಿಳಿಸುತ್ತಾರೆ. ಅವರ ಮಾತಿನಂತೆ ಸ್ಥಳೀಯರು ಆ ಪ್ರದೇಶದ ಕೆಳಗೆ ಅಗೆಯಲು ಪ್ರಾರಂಭ ಮಾಡುತ್ತಾರೆ. ಆ ಜಾಗವನ್ನು ಸಂಪೂರ್ಣವಾಗಿ ಅಗೆದು ನೋಡಿದಾಗ ಅಲ್ಲಿ ಆಶ್ಚರ್ಯವೇ ಕಾದಿತ್ತು. ಒಂದು ಕಾಲದಲ್ಲಿ ಭವ್ಯಾವಾಗಿದ್ದ ಗುಹಾಂತರ ದೇವಾಲಯವೊಂದು ಸುರಕ್ಷಿತ ಸ್ಥತಿಯಲ್ಲಿಯೆ ಇತ್ತು. ಅದರಲ್ಲಿ ಈ ಶಿವ ಲಿಂಗ ಮತ್ತು ಈ ಸುಂದರವಾದ ಗುಹೆಯ ದರ್ಶನವಾಯಿತು.
ಈ ಸುಂದರವಾದ ಗುಹೆ ಮತ್ತು ಶಿವಲಿಂಗದ ದರ್ಶನಕ್ಕೆ ಕಾರಣವಾದ ಹಸುವಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಈ ಸ್ಥಳವನ್ನು ಗೊಂಬೇಶ್ವರ ಗುಹಾಂತರ ಶಿವಲಿಂಗವೆಂದು ಕರೆಯಲಾಯಿತು. ಈಗ ಇದು ಅಲ್ಲಿನ ಅತ್ಯಂತ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲಿ ದಿನಾಲು ಪೂಜೆ-ಪುನಸ್ಕಾರ ನಡೆಯುತ್ತದೆ. ಆನರು ಭಕ್ತಿಯಿಂದ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ಗೊಂಬೇಶ್ವರನ ದರ್ಶನ ಪಡೆಯುತ್ತಾರೆ. ಅಲ್ಲದೆ ಈ ಗುಹೆಯಲ್ಲಿ ನಿಂತು ಹಿಂದು ಮಹಾಸಾಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಾರೆ.
ನಮಗಂತು ಕಿನ್ಯಾ ದೇಶದ ಮೊಂಬಾಸಾ ನಗರಕ್ಕೆ ಹೋಗಿ ಈ ಗೊಂಬೇಶ್ವರ ಶಿವಲಿಂಗದ ದರ್ಶನ ಪಡೆಯುವುದು ಆಗಲಿಕ್ಕಿಲ್ಲ. ಆದರೆ ಇಲ್ಲಿಂದನೆ ಈ ವಿಡಿಯೋ ನೋಡಿ ದರ್ಶನ ಪಡೆದು ಧನ್ಯರಾಗಿ.
ಫೇಸ್‍ಬುಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ