ಕನ್ನಡ ಸಾಹಿತ್ಯ ಲೋಕದಲ್ಲಿ ನಮ್ಮ ಭಾಗದಿಂದ ಮತ್ತು ನಮ್ಮ ನಡುವಿನಿಂದ ದೊಡ್ಡದಾಗಿ ಗುರುತಿಸಿಕೊಳ್ಳುತ್ತಿರುವ ಹೆಸರು ಡಾ.ಮಲ್ಲಿನಾಥ ಎಸ್. ತಳವಾರ. ಇತ್ತೀಚೆಗೆ "ರತ್ನರಾಯಮಲ್ಲ" ಕಾವ್ಯನಾಮದಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ನನ್ನ ಸ್ನೇಹಿತರು ಆಗಿರುವ ಮಲ್ಲಿನಾಥರನ್ನು ತೀರಾ ಹತ್ತಿರದಿಂದ ಬಲ್ಲವನಾಗಿದ್ದೇನೆ.
ಸದಾ ಸಾಹಿತ್ಯದ ಚಟುವಟಿಕೆಯಲ್ಲೇ ಇರುವ ಅದರಲ್ಲೆ ಕಳೆದು ಮುಳುಗಿ ಹೋಗುವ ಅಪರೂಪದ ವ್ಯಕ್ತಿತ್ವ. ಅದರಲ್ಲೂ ಕಳೆದ ಒಂದು ಒಂದುವರೆ ವರ್ಷದ ಅವಧಿಯಲ್ಲಿ ಮಲ್ಲಿನಾಥ ತಳವಾರ ಸಾಕಷ್ಟು ಬದಲಾಗುತ್ತಿದ್ದಾರೆ, ಬೆಳೆಯುತ್ತಿದ್ದಾರೆ ಮತ್ತು ಪಕ್ವವಾಗುತ್ತಿದ್ದಾರೆ. ಕಾರಂತರ ಕಾದಂಬರಿಗಳಲ್ಲಿ ಸ್ತ್ರೀಪ್ರಪಂಚ ಎಂಬ ವಿಶಾಲ ಮತ್ತು ಗಂಭೀರ ವಿಷಯದ ಮೇಲೆ ಪಿಹೆಚ್ಡಿ ಮಾಡುವಾಗಲೇ ಅವರ ಜ್ಞಾನದ ಮಟ್ಟ, ಓದಿನ ಹರವು, ಸಾಹಿತ್ಯದ ಆಸಕ್ತಿ ಅರಿತಿದ್ದೆ. ಆ ಮಹಾಪ್ರಬಂಧದ ನಂತರವು ಅದರ ಹರವು ಹೆಚ್ಚಾಗಿದೆ. ಹಲವು ಕೃತಿಗಳು ಲೆಕ್ಕವಿಲ್ಲದಷ್ಟು ಲೇಖನಗಳು, ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ಗಜಲ್ ಗಳು ಇದಕ್ಕೆ ಸಾಕ್ಷಿ. ಇನ್ನೊಂದು ಹೆಚ್ಚಿನ ಖುಷಿ ಮತ್ತು ಹೆಮ್ಮೆ ತರಿಸುವುದೆಂದರೆ ಅದೆಷ್ಟೋ ಗಜಲ್ ಹೊತ್ತಿಗೆಗಳಿಗೆ ಗಜಲ್ ಕಾರರು ಡಾ.ಮಲ್ಲಿನಾಥ ಎಸ್.ತಳವಾರ ಅವರಿಂದ ಬರೆಯಿಸುತ್ತಿರುವ ಮುನ್ನುಡಿಗಳು. ಸಿಕ್ಕಾಗಲೆಲ್ಲ ತಮಾಷೆಯಾಗಿ ಹೇಳಿತ್ತಿರುತ್ತೇನೆ ನಿಮ್ಮ ಮುನ್ನುಡಿಗಳನ್ನೆ ಸಂಪಾದಿಸಿದರೆ ಒಂದೊಳ್ಳೆ ಪುಸ್ತಕವಾಗಬಹುದು ಅಂತ.
ಸದ್ಯ ಗಜಲ್ ನ ಆಳಕ್ಕಿಳಿದಿರುವ ರತ್ನರಾಯಮಲ್ಲ ವರ್ಷದ ಹಿಂದೆ ಬರೆದ ಕವನಗಳಿಗೆ ಅನಾಥ ಮಾಡದೇ ಓದುಗರ ಒಡಲಿಗೆ ಅರ್ಪಿಸಿದ್ದಾರೆ. ಹೀಗಾಗಿ ೫೬ ಕವನಗಳ ಒಂದು ಸುಂದರ ಹೂಗುಚ್ಛ "ಪ್ರೀತಿಯಿಲ್ಲದೆ ಬದುಕಿದವರ‍್ಯಾರು" ಕವನ ಸಂಕಲನವಾಗಿ ಈಗ ನಮ್ಮ ಕೈಯಲ್ಲಿದೆ.ವಾಸ್ತವದ
ತಳದ ಮೇಲೆ ಬದುಕುವ, ಬದುಕಬೇಕಿರುವ ಪರಿಯನ್ನು ತಳವಾರರು ಅಚ್ಚುಕಟ್ಟಾಗಿ ತಮ್ಮ ಕವನಗಳ ಮೂಲಕ ಈ ಸಂಕಲನದಲ್ಲಿ ಹಿಡಿದಿಟ್ಟಿದ್ದಾರೆ.
ಇವರ ಮೊದಲ ಕವನವೇ ರೈತನ ಕುರಿತದ್ದು. ಕಾಕತಾಳೀಯ ಎಂಬಂತೆ ಸದ್ಯ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ತಾಳೆ ಹಾಕುವಂತಿದೆ.
ನೀನು ಬದುಕುವ
ಜೊತೆಗೆ
ಜಗ ಬದುಕಲಿ
ಎಂಬ
ನಿನ್ನ
ಧರ್ಮ
ನೀನೆ ಬದುಕದಂಗಾಗೈತಿ
ಅವರ ಪಾಲಿಸಿಗಳ
ಮರ್ಮ
ಈ ಸಾಲುಗಳು ದೆಹಲಿಯ ಗಡಿಯಲ್ಲಿ ಬೀಡುಬಿಟ್ಟ ರೈತರು ನಡೆಸುತ್ತಿರುವ ಹೋರಾಟದ ಸದ್ಯದ ಚಿತ್ರಣವನ್ನು ಬಿಚ್ಚಿ ತೋರಿಸುವಂತಿದೆ.
ಕವಿಯ ಮನಸಿನ ಹಾತೊರೆಯುವಿಕೆ ಕವನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಅವರಿಗಿರುವ ಜೀವನ ಪ್ರೀತಿ, ಸಮಾಜದ ಬಗೆಗಿನ ಕಾಳಜಿ, ಇರುವ ನಿರೀಕ್ಷೆಗಳು ಇಲ್ಲಿನ ಅದೆಷ್ಟೋ ಕವನಗಳು ಸಾಕ್ಷಿ ಹೇಳುತ್ತವೆ. ಪರಿಸ್ಥಿತಿಯ ಬಗ್ಗೆ ಬೇಸರವು ಹೊರ ಹಾಕಿವೆ. ಬದಲಾಯಿಸುವ ಉಪಾಯವನ್ನು ಹೇಳಿವೆ. ಕೆಲವೊಮ್ಮೆ ಅಸಹಾಯಕತೆ ಕೂಡಾ ಹೊರ ಹಾಕಿವೆ. ಜೀವನದ ಎಲ್ಲಾ ಮಜಲುಗಳನ್ನು ಸರಳವಾಗಿ ಅಷ್ಟೆ ಮಾರ್ಮಿಕವಾಗಿ ಹೇಳಲು ಇಲ್ಲಿ ಕವಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆ, ಚಿತಾಪುರ ತಾಲೂಕಿನ ರಾವೂರಿನವರಾದ ಡಾ.ಮಲ್ಲಿನಾಥ ಎಸ್ ತಳವಾರ ಅವರು ಕಲಬುರಗಿಯಲ್ಲಿ ಪ್ರತಿಷ್ಠಿತ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಗೆ ಹಿರಿಯ ಮಗನಾಗಿ, ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡವರು. ಜೀವನದ ಆ ಎಲ್ಲಾ ಅನುಭವಗಳ ಸಾರವನ್ನು ಅಲ್ಲಲ್ಲಿ ತಮ್ಮ ಕವನಗಳಲ್ಲಿ ಬಿಂಬಿಸಿದ್ದಾರೆ.
ತಂದೆ
ತೀರಿ ಒಂಟಿಯಾದ ನೋವನ್ನು ಅವರು ನೆನಪಾದಾಗ ಆಗುವ ಯಾತನೆಯನ್ನು "ಬಾಬಾ" ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
ನಿನಗೆ ಉಣಬಡಿಸಿ,
ಹಾಸಿಗೆಯಾಸಿ
ಮಲಗಿಸುವುದೆಂದರೆ ನನಗೆ
ಬಲು
ಪ್ರೀತಿ
ತಂದೆಯೊಂದಿಗಿನ
ಇಂಥ ಅಮೂಲ್ಯ ಕ್ಷಣಗಳ ನೆನಪುಗಳನ್ನು ಮೆಲಕು ಹಾಕಿ
ನೀನಿಲ್ಲದ ಸಂಭ್ರಮ
ಸೂತಕದ
ಕಳೆಗಟ್ಟಿದೆ
ಮನದಾಗ
ಅಸಂಖ್ಯಾತ ಜನ
ಬಂಧು-ಬಾಂಧವರಿದ್ದರು
ಅನಾಥಪ್ರಜ್ಞೆ ಕಾಡುತ್ತಿದೆ
ನನ್ನೊಳಗೆ
ಬಾಬಾ
ನೀನಿಲ್ಲದೆ
ನಾ
ತಬ್ಬಲಿಯಾದೆ
ಬಾಬಾ...
ತಬ್ಬಲಿಯಾದೆ!
ಎಂದು ದುಃಖ ಪಡುತ್ತಾರೆ.
ಕವಿ
ಡಾ.ಮಲ್ಲಿನಾಥ ಎಸ್. ತಳವಾರ ಅವರು ಬದುಕಿನ ಇನ್ನೊಂದು ಮುಖವನ್ನು ತಮ್ಮ ಇತಿಹಾಸ ಕವನದಲ್ಲಿ ತೋರಿಸಿದ್ದಾರೆ.
ಹೆತ್ತವರ ಭಾವಚಿತ್ರ
ಗೋಡೆ
ಮೇಲೆ
ಅವರ ಬದುಕು
ಬೀದಿ
ಮೇಲೆ
ಎಂದು
ಮಮ್ಮಲ ಮರುಗುತ್ತಾರೆ. ಬದುಕಿನ ಹಲವು ಮುಖಗಳ ತಳುಕಿನಲ್ಲಿ ಸಿಲುಕಿ ಒದ್ದಾಡಿದ್ದಾರೆ. ಆದರೆ ಸಮಾಜದ ಮುಖವಾಡ ಕಳಚುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದಾರೆ ತಮ್ಮ ಕೈ ಮುಗಿಯದಿರಿ
ಕವಿತೆಯಲ್ಲಿ
ಎಂದೆಂದು ಕೈ
ಮುಗಿಯದಿರಿ
ಮೌಢ್ಯದ ಅಂಧ
ಶ್ರದ್ಧೆಗಳಲಿ
ಮತ್ತು ಉಪಚಾರ
ಕವಿತೆಯಲ್ಲಿ
ಬದುಕಿದ್ದಾಗ ಪಾಪಿಯೆಂದವರು
ಸತ್ತಾಗ ಪಾಪ
ಎಂದರು
ಸಾಲುಗಳಲ್ಲಿ ಕಿಡಿಕಾರಿದ್ದಾರೆ.
ನಾಡು-ನುಡಿಯ ಬಗ್ಗೆ, ಪ್ರೀತಿ-ಸ್ನೇಹದ ಬಗ್ಗೆ ಹೆರಳ ಕವಿತೆಗಳು ಇಲ್ಲಿ ಮುದ ನೀಡುತ್ತವೆ. ಸಂಬಂಧಗಳ ಸಂಕೋಲೆಯಲ್ಲಿ ಕೆಲವು ಕವಿತೆಗಳು ಬಂಧಿಯಾಗಿವೆ. ಇನ್ನು ಕೆಲವು ಕವಿತೆಗಳು ಹೆಣ್ಣಿನ ಅಂತರಾಳವನ್ನು ಅರಿಯಲು ಪ್ರಯತ್ನಿಸಿದ್ದು ಖುಷಿ ಕೊಡುತ್ತವೆ.
ಡಾ.ಮಲ್ಲಿನಾಥ ಎಸ್.ತಳವಾರ ಅವರ ಈ ಕವನ ಸಂಕಲನದ ಶಿರ್ಷಿಕೆಯಲ್ಲೇ ಪ್ರೀತಿ ಇರುವುದರಿಂದ ಈ ಹೊತ್ತಿಗೆಯಲ್ಲಿ ಪ್ರೀತಿ ಹದವಾಗಿ ಮತ್ತು ಮೆದುವಾಗಿ ಬೆರೆತು ಕವನಗಳಾಗಿ ಸುಂದರವಾಗಿ ಮುಡಿಬಂದಿವೆ. ಅದರೊಂದಿಗೆ ಸ್ನೇಹ ಗೆಳೆತನದ ಬಗ್ಗೆ ಕೆಲವು ಕವಿತೆಗಳು ನಮ್ಮನ್ನೆ ಪ್ರತಿಬಿಂಬಿಸಿವೆ ಏನೋ ಎಂಬ ಭಾವ ಮುಡಿಸುತ್ತವೆ. ಅಷ್ಟರ ಮಟ್ಟಿಗೆ ಇಲ್ಲಿನ ಕವಿತೆಗಳು ಓದುಗನಿಗೆ ಹತ್ತಿರವಾಗುತ್ತವೆ.
ಈ ಕವನ ಸಂಕಲನದಲ್ಲಿ ಪ್ರೀತಿಯ ವಿವಿಧತೆಯಿದೆ. ಸಂಬಂಧಗಳ ಸಂಘರ್ಷವಿದೆ. ಸಮಾಜದ ಅಂಕು ಡೊಂಕಿದೆ. ಅದಕ್ಕೆ ದಿಟ್ಟ ಕನ್ನಡಿಯು ಹಿಡಿದಿವೆ. ಸಾಧಾರಣ ವ್ಯಕ್ತಿಯ ಪ್ರಜ್ಞಾವಂತನ ಬದುಕಿನ ಹಲವು ಮಜಲುಗಳ ಅನಾವರಣ ಇಲ್ಲಿನ ಕವಿತೆಗಳಾಗಿವೆ.
ಹಿರಿಯರು ಹಾಗೂ ಖ್ಯಾತ ಮಕ್ಕಳ ಸಾಹಿತಿಗಳಾದ ಎ.ಕೆ. ರಾಮೇಶ್ವರ ಅವರು ಇದಕ್ಕೆ ಮುನ್ನುಡಿ ಬರೆದಿದ್ದಾರೆ. ತಮ್ಮ ಬರವಣಿಗೆಯನ್ನು "ಡಾ.ಮಲ್ಲಿನಾಥ ತಳವಾರ ಅವರು ಭರವಸೆ ಮೂಡಿಸುವ ಉದಯೋನ್ಮುಖ ಕವಿ. ಅವರ ಮಾತಿನಲ್ಲಿ ನಯವಿದೆ. ಕಾವ್ಯದಲ್ಲಿ ಪ್ರಖರತೆ ಇದೆ. ಅವರ ಬರಹ-ಬದುಕಿನಲ್ಲಿ ಪ್ರೀತಿ ಹಾಸುಹೊಕ್ಕಾಗಿದೆ" ಎಂಬ ಮಾತುಗಳೊಂದಿಗೆ ಪ್ರಾರಂಭಿಸಿದ್ದಾರೆ. ಇನ್ನು ಬೆನ್ನುಡಿಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ ಎಂ.ಎಸ್. ಪಾಟೀಲ ಅವರು "ಬರಹ ಅವನಿಗೆ ಸಾಧಿಸಿದಷ್ಟು ಇನ್ನಾರಿಗೂ ಅದು ಸಾಧ್ಯವಾಗಿಲ್ಲ" ಎಂದಿರುವುದು ಮಲ್ಲಿನಾಥರ ಬರವಣಿಗೆಯಲ್ಲಿವ ಶಕ್ತಿ.
ಸಾಹಿತ್ಯದಲ್ಲಿ
ಸಾಕಷ್ಟು ಭರವಸೆ ಹುಟ್ಟಿಸುತ್ತಿರುವ ಡಾ.ಮಲ್ಲಿನಾಥ ಎಸ್.
ತಳವಾರ ಅವರು ಇನ್ನಷ್ಟು ಬೆಳೆಯಲ್ಲಿ, ಬೃಹತ್ ಮರವಾಗಲಿ ಎಂದು ಆಶೀಸುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ