ಬೇಸಿಗೆಯ ಬಿಸಿಲು ಬಿಸಿಯುಸಿರನ್ನು ಕಾರುತ್ತ ಎಲ್ಲರ ಮೈಯಿಂದ ನೀರಾಗಿ ಇಳಿಯುತ್ತಿತ್ತು. ಆಗಾಗ ನದಿ ದಂಡೆಗೆ ಹೋಗುತ್ತಿದ್ದ ನನಗೆ ಇದಾವುದರ ಪರಿವೆಯೂ ಇರಲಿಲ್ಲ. ಸಂಜೆಗೆಂಪು ಬಿಸಿಲಿನಲ್ಲಿ ಹೊಳೆಯುವ ಕಣ್ಣುಗಳುಳ್ಳ ಆ ದುಂಡು ಮುಖವು ಥಟ್ಟನೆ ಕಣ್ಣಿಗೆ ಬೀಳುವಲ್ಲಿ ವಂಚಿಸುತ್ತಿರಲಿಲ್ಲ. ಚಿಪ್ಪುಗಳನ್ನು ಆರಿಸುತ್ತ ಹಿಡಿಕೆಯಲ್ಲಿ ತುಂಬಿಕೊಂಡು ತನ್ನ ಬಣ್ಣದ ಚಿಟ್ಟೆಯ ಲಂಗದೊಳಗೆ ತುಂಬಿ ಮತ್ತೆ ಆರಿಸುವುದರಲ್ಲಿಯೇ ತಲ್ಲೀನಳಾಗಿರುತ್ತಿದ್ದಳು. ಹೊತ್ತು ಮುಳುಗುವ ಮುಂಚಿನ ತನಕ ಎಷ್ಟು ಆರಿಸಿದರೂ ದಣಿವಿಲ್ಲವೆಂಬಂತೆ ಅವಳಲ್ಲಿ ಹುರುಪು ಹೆಪ್ಪುಗಟ್ಟಿರುವುದು ತೋರುತ್ತಿತ್ತು. ನೂರಾರು ಕನಸುಗಳಡಗಿರುವ ಆ ಕಣ್ಣುಗಳಲ್ಲಿ ಒಪ್ಪವಾದ ಚಿಪ್ಪುಗಳಲ್ಲಿ ಮತ್ತೆನನ್ನೋ ಹುಡುಕಾಡುತ್ತಿರುವುದು ನಾನು ಕಾಣುತ್ತಿದ್ದೆ.
ಸುತ್ತಲಿನವರೆಲ್ಲ ಅವರವರ ಘನತೆಗೆ ತಕ್ಕಂತೆ ಓಡಾಡಿಕೊಂಡೋ, ಮರಳಿನಲ್ಲಿ ಉರುಳಾಡಿಕೊಂಡೋ, ಹರಟೆಯಲ್ಲಿ ತೇಲಾಡಿಕೊಂಡೋ ಅಡ್ಡಾಡುತ್ತಿದ್ದರು. ಅವರು 'ಈ ದೇಹವೇನು, ಮೂಳೆ ಮಾಂಸಗಳ ತಡಿಕೆ ಮಾತ್ರ' ಎಂಬುದನ್ನು ತಾವಷ್ಟೆ ತಿಳಿದಿರುವಂತೆ ಕಂಡುಬರುತ್ತಿದ್ದರು. ಇದು ಮೆಗಾ ಧಾರಾವಾಹಿಯಂತೆ ದಿನಾ ನನಗೆ ಇದ್ದದ್ದೆ. ಆದರೂ ಈ ದೃಶ್ಯಗಳನ್ನು ನೋಡಲು ಜೊಲ್ಲು ಸುರಿಸಿಕೊಂಡು ಬರುವವರೇ ಅಲ್ಲಿ ಬಹಳ ಜನರಾಗಿದ್ದರು.
ನಾನು ಸುತ್ತಾಡಿ ತಿರುಗಿ ಬರುವವರೆಗೆ ಅವಳು ಚಿಪ್ಪುಗಳನ್ನೆಲ್ಲ ಗುಡ್ಡೆಯೊಟ್ಟಿ ಒಂದೊಂದೇ ಕೈಗೆತ್ತಿಕೊಂಡು ಎರಡು ಭಾಗ ಮಾಡಿ ಅದರೊಳಗೇನನ್ನೋ ಕಾತರದಿಂದ ಕಣ್ಣರಳಿಸಿ ನೋಡುತ್ತಿರುತಿದ್ದಳು. ಅದೂ ಖಾಲಿಯೇ'ಎಂದು ತಿಳಿದರೂ ನಿರಾಶಳಾಗದೆ ಮತ್ತೆ ಇನ್ನೊಂದನ್ನು ಕೈಗೆತ್ತಿಕೊಳ್ಳುತ್ತಿದ್ದಳು. ಎಲ್ಲವನ್ನೂ ನೋಡಿಯಾದ ಮೇಲೆ ಏನೂ ಸಿಗದೆ ನಿರಾಸೆಯಾದರೂ ಬೇಸರ ಮಾಡಿಕೊಳ್ಳದೆ ಹಿಂದಿರುಗಿ ಹೊರಟು ಹೋಗುತ್ತಿದ್ದಳು.
ಅಂದು ಅವಳು ಹೋದ ಮೇಲೂ ನನಗೇಕೋ ಇನ್ನು ರೂಮಿನಿಡೆಗೆ ಕಾಲು ನೂಕಲು ಮನಸ್ಸಾಗಲಿಲ್ಲ. ಇದ್ಯಾವುದನ್ನೂ ನೋಡದೆ ಸೂರ್ಯ ಪಶ್ಚಿಮದಲ್ಲಿ ಗುಡ್ಡಗಳ ಒಡಲೊಳಗೆ ಅಡಗಿಕೊಳ್ಳಲು ತಡಕಾಡುತ್ತಿದ್ದ. ಹಕ್ಕಿಗಳು ಗೂಡು ಸೇರಿಕೊಳ್ಳಲು ಅವನೊಂದಿಗೆ ಸ್ಪರ್ಧೆಗಿಳಿದಿರುವಂತೆ ವೇಗದೋಟದ ರೆಕ್ಕೆ ಬಡಿತದಿಂದ ಭಾಸವಾಗುತ್ತಿತ್ತು. ಸುತ್ತಲಿನ ಜನರೂ ಕತ್ತಲಾಗುವ ಮೊದಲೇ ಜಾಗ ಖಾಲಿ ಮಾಡತೊಡಗಿದ್ದರು. ಗಗನವೆಲ್ಲ ಕೆಂಪು ಕೆಂಪಾಗಿತ್ತು. ಜಲಧಿಯ ಅಲೆಗಳು ತಕಧಿಮಿತ ಮಾಡುತಿದ್ದವು. ದೂರದ ಮಾರುತಗಳಿಂದ ಮಂದಾನಿಲವು ಜಾರಿಕೊಂಡು ತಣ್ಣಗೆ ಮೈ ಚುಚ್ಚುತ್ತ ಚುಮುಚುಮು ಚಳಿಯನ್ನು ಚಿಮ್ಮಿಸುತ್ತಿತ್ತು. ಆ ತಂಪುಗಾಳಿ ಬಡಿದಾಗೊಮ್ಮೆ ಶರೀರ ಪೂರ್ತಿ ಕೆಂಪು ಚುಕ್ಕೆಮಯವಾಗಿ ಮೈ ಜುಮ್ಮೆನ್ನುವಂತಾಗಿತ್ತು. ಕೈಕಟ್ಟಿ ಬೆಂಚಿನ ಮೇಲೆ ಕಾಲೆಳೆದುಕೊಂಡು ಕುಳಿತುಕೊಂಡೆ. ನೆನಪಿನಲೆಗಳು ಸಾಲಿನಂತೆ ಬಂದು ಸ್ಮೃತಿಪಟಲಕ್ಕೆ ಅಪ್ಪಳಿಸತೊಡಗಿದವು. ನೆನೆದು ಒದ್ದೆಯಾದ ಹೊದಿಕೆಯಿಂದ ಒಂದೊಂದೇ ಹನಿಗಳು ತೊಟ್ಟಿಕ್ಕತೊಡಗಿದವು. ಸುತ್ತಲೆಲ್ಲ ಅದರ ಸಿಂಚನ ಹಾರಿಕೊಂಡಿತ್ತು.
***
ಕಾಲೇಜೋದಿಗೆಂದು ಹಳ್ಳಿಯ ತಿಳಿ ಹೊದಿಕೆಯಿಂದ ಎದ್ದುಬಂದ ನಾನು ಇಲ್ಲಿನ ವರ್ಣಮಯ ಬದುಕಿಗೆ ಬೆರಗಾಗಿದ್ದೆ. ಅಪ್ಪ-ಅಮ್ಮ ಕಳಿಸಿಕೊಡುತ್ತಿದ್ದ ದುಡ್ಡಿನಲ್ಲಿ ಉಡುಗೆ ತೊಡುಗೆ ಬೆಡಗಿಗೇನೂ ಕಮ್ಮಿ ಮಾಡಿಕೊಂಡಿರಲಿಲ್ಲ. ಹುಟ್ಟಿದ ಅಷ್ಟೂ ಮಕ್ಕಳನ್ನು ಸಾಕುವುದರಲ್ಲಿ ಅವರೂ ಎಂದು ಸೋತಿರಲಿಲ್ಲ. ನಮ್ಮ ಮೇಲೆ ಎಲ್ಲಾ ತಾಯಿ-ತಂದೆಯರಿಗಿಂತ ಹೆಚ್ಚಿನ ಆಶಾಗೋಪುರವನ್ನು ಕಟ್ಟಿಟ್ಟುಕೊಂಡು ಕುಳಿತಿದ್ದರು. ಒಬ್ಬ ತಮ್ಮ ಓದು ಬಿಟ್ಟು ಊರಿನ ಪೋಕರಿಗಳ ಗುಂಪು ಸೇರಿಕೊಂಡು ತಾನು ಮಾಡದೆ ಇರುವುದು ಯಾವುದೂ ಉಳಿದಿರಲಿಲ್ಲ. ಇನ್ನು ಉಳಿದವರು ಬದುಕಿನ ಬಗ್ಗೆ ಚಿಂತೆ ಮಾಡುವಷ್ಟು ಬೆಳೆದಿರಲಿಲ್ಲ. ತಂಗಿಯಂತೂ ಅಪ್ಪ-ಅಮ್ಮರ ಜೊತೆ ಕೈಕೂಡಿಸಿಕೊಂಡಿದ್ದಳು. ಹೀಗಾಗಿ ನನ್ನ ಮೇಲೆಯೇ ಅವರ ಬೆಟ್ಟದಾಸೆ ಬೆಳೆದಿತ್ತು.
ಬಣ್ಣದ ಲೋಕದಲ್ಲಿ ಬೆಣ್ಣೆ ಸವಿಯುವ ಕನಸುಗಳನ್ನು ಕಾಣುತ್ತಿದ್ದವನಿಗೆ ಓದು-ಬರಹ ಮಾಡಬೇಕಾದರೆ ಸಮರವೇ ನಡೆಯುತ್ತಿತ್ತು. ಕಾಲೇಜಿನ ಕ್ಲಾಸಿನಲ್ಲೆಲ್ಲ ಶಕುಂತಲೆಯರ ಶೃಂಗಾರ ವರ್ಣನೆಯ ಉಪನ್ಯಾಸಗಳೇ ಉಲಿಯುತ್ತಿದ್ದವು. ರೂಮುಗಳನ್ನು ಸೇರಿಕೊಂಡರೆ ಹರಟೆ ಕೊಚ್ಚುವುದರಲ್ಲೇ ಮಗ್ನ. ಮಧ್ಯರಾತ್ರಿ ಕಳೆದು ಎಚ್ಚರಿಸಿದಾಗಲೂ ಬೆಚ್ಚಿಬೀಳುತ್ತಿರಲಿಲ್ಲ. ಟೂರು, ಪಿಕ್ನಿಕ್ಕುಗಳೆಂದರೆ ಸಾಕಾಗಿತ್ತು. ಎಲ್ಲರೂ ಪುಳಕಿತರಾಗಿ ಬಿಡುತ್ತಿದ್ದೆವು. ಪ್ರೀತಿ-ಪ್ರೇಮದ ಹುಸಿಮೋಹಕ್ಕೆ ಒಳಗಾಗಿ ಹೂಮಾಲೆಯಂತೆ ಇಷ್ಟೇ ದಿವಸ ಕೊರಳಲ್ಲಿಟ್ಟುಕೊಂಡು ಮರುದಿವಸ ಮತ್ತೊಂದು ಹೂಮಾಲೆಗಾಗಿ ಕೊರಳು ಒಡ್ಡಲು ರೆಡಿಯಾಗಿರುತಿದ್ದವು. ಲಂಗು ಲಗಾಮಿಲ್ಲದ ಹರೆಯದ ಪೊಗರು ಬೆರಗಾಗುವಷ್ಟು ! ಆದರೆ ಚಿಗುರಬೇಕಾದ ಭವಿಷ್ಯಕ್ಕೆ ಪೊಳ್ಳು ಬುನಾದಿ ಕಟ್ಟುತ್ತಿರುವೆವು ಎಂಬ ಅರಿವು ಇರಲಿಲ್ಲ.
ಓದು ಮುಗಿಯುತ್ತಾ ಬಂತು, ಮುಂದೇನು? ಎಂಬ ಬಗ್ಗೆ ಕೊಂಚವಾದರೂ ಹಂಚಿಕೆ ಹಾಕುವ ಹವಣಿಕೆ ನಡೆಸಲಿಲ್ಲ. ಮುಂದಡಿಯಿಡುವ ಎಡೆಗೆ ದೃಷ್ಟಿ ಚುರುಕುಗೊಳಿಸದೆ, ಇರುವಿಕೆಯ ಹುಸಿ ಹಸಿರಿನಲ್ಲಿಯೇ ತೆವಳುವುದು ಬಲು ಮೋಜೆನಿಸುತ್ತಿತ್ತು. ವೇಗದ ಬದುಕಿನಲ್ಲಿ ದಾಂಗುಡಿಯಾಗಿ ಹೋಗುತ್ತಿರುವವರ ಜೊತೆ ಮೇಲೆದ್ದು ಬರುವ ಆವೇಶ ಹೆಚ್ಚಬೇಕಾದುದು ದೂರವೇ ಉಳಿದು, ಉದ್ಭವಿಸಲೇ ಇಲ್ಲ.
ಥಟ್ಟನೆ ಎಚ್ಚರವಾಯಿತು. ತೊಟ್ಟಿಕ್ಕುತ್ತಿದ್ದ ನೆನಪಿನ ಹೊದಿಕೆ ಒಣಗಿಯಾಗಿತ್ತು. ಸುತ್ತಲೂ ನೋಡಿದೆ, ಕಪ್ಪು ಕತ್ತಲು ಕಣ್ಣಿಗೆ ಮರೆಮಾಚುತ್ತಿದೆ. ಮೇಲೆದ್ದು ರೂಮಿಗೆ ಬಂದಾಗ ಊರಿನಿಂದ ಕಾಗದ ಬಂದಿತ್ತು- 'ಅಪ್ಪನಿಗೆ ಹುಷಾರಿಲ್ಲ...ಬಹಳ ಸಿರಿಯಸ್ಸು ....ಅಮ್ಮ ಗಾಬರಿಗೊಂಡಿದ್ದಾಳೆ. ಬೇಗನೆ ಊರಿಗೆ ಬಂದುಬಿಡು'. ಬರೆದಿರುವ ಸಾಲು ಓದಿ, 'ಅದಕ್ಕೇ ಈ ತಿಂಗಳು ದುಡ್ಡು ಕಳಿಸಲಿಲ್ಲ ನೀವು' ಎಂದು ಬೇಸರವಾಯಿತು. 'ನನಗೀಗ ಊರಿಗೆ ಬರಲು ಸಮಯವಿಲ್ಲ. ಅಪ್ಪನಿಗೆ ಎಲ್ಲಾದರೂ ತೋರಿಸಿ'- ಒಂದೇ ಸಾಲಲ್ಲಿ ಆಗಲೇ ಬರೆದಿಟ್ಟು ಮರುದಿನ ಪೋಸ್ಟ್‌ಬಾಕ್ಸ್‌ನಲ್ಲಿ ತಳ್ಳಿ ಬಂದೆ.
ಅಂದೇಕೋ ಮೈ ತಣ್ಣೀರಿನಲ್ಲಿ ನೆನೆದಂತಾಗಿ ಹಾಸಿಗೆಯಿಂದ ಬಿಡಿಸಿಕೊಳ್ಳಲು ಬಯಸಲಿಲ್ಲ. ಅವತ್ತು ರವಿವಾರವೂ ಆಗಿದ್ದರಿಂದ ಅನಿವಾರ್ಯವಾಗಿ ಮನಸ್ಸು ಮತ್ತಷು ಹಟಮಾರಿಯಾಗಿತ್ತು. ಮಧ್ಯಾಹ್ನ ಮಾಗುವವರೆಗೆ ಮಲಗಿ, ಎದ್ದು ಸ್ನಾನ,ಊಟೋಪಚಾರಗಳನ್ನು ಮುಗಿಸಿಕೊಂಡು ಸಾಯಂಕಾಲದ ಹೊತ್ತಿಗೆ ನದಿ ದಂಡೆಯ ಕಡೆಗೆ ಹೊರಟುಬಿಟ್ಟೆ.
ಎಂದಿನಂತೆ ಜನರು ಜಲದಾಣದ ಅಡಿಯ ಬದಿಯಲೆಲ್ಲ ಓಡಾಡುವುದರಲ್ಲಿ ತೊಡಗಿದ್ದರು. ಅದರ ನಡುವೆ ಚಿಪ್ಪಾರಿಸುವ ಚಿಟ್ಟೆಗೆ ಪತ್ತೆ ಹಚ್ಚಲು ಬೆಟ್ಟ ಹತ್ತಬೇಕಾಗಲಿಲ್ಲ. ಅವಳು ಚಿಪ್ಪಾರಿಸುವುದರಲ್ಲಿಯೇ ತನ್ನ ಚಿತ್ತವನ್ನು ಮುಚ್ಚಿಟ್ಟುಕೊಂಡಿದ್ದಳು.
ದಿನಕರನ ಕೆಂಗಿರಣದಿಂದ ಸುತ್ತಲೆಲ್ಲ ಸಿಡಿದಿದ್ದ ಕೆಂಪು ರಂಗು ಮಂಕಾಗತೊಡಗಿತ್ತು. ಪಡುವಣದ ಮುಗಿಲ ಮೇಲೆ ಅಸ್ಪಷ್ಟ ಕೆಂಪು ಗೆರೆಗಳು ನಿತ್ರಾಣದ ಸ್ಥಿತಿಯನ್ನು ತಲುಪುತಿದ್ದಂತೆ, ಸಂಜೆಗತ್ತಲು ಒತ್ತೊತ್ತಾಗಿ ಸೇರಿಕೊಳ್ಳಲು ಬಡಿದಾಟ ನಡೆಸಿತ್ತು. ಆ ಕಪ್ಪು ಕತ್ತಲಿನ ನಡುವಿನಿಂದ ಬಿಳಿಮಿಶ್ರಿತ ಕಪ್ಪು ಕೂದಲಿನ ಮುಖವಾಡ ಧರಿಸಿರುವನೋ ಎಂಬಂಥ ಮುಖದವನು ಬಂದು 'ಅಣ್ಣಾ... ಈ ಮೂಟೆಗೆ ಸ್ವಲ್ಪ ಕೈ ಹಚ್ಚು. ಎಂಟು ದಿವಸ ಬಂದಿರಲಿಲ್ಲ, ಬಹಳ ಜಮಾಯಿಸಿದ್ವು. ಎಲ್ಲ ತುಂಬಿ ಕೊಂಡಿದ್ದೀನಿ... ಬಹಳ ಭಾರವಾಗಿ ಬಿಟ್ಟಿದೆ. ಎತ್ತಿಕೊಳ್ಳಲು ಆಗ್ತಾ ಇಲ್ಲ' ಎಂದ. ಅವನು ಕೈ ಮಾಡಿದ ಕಡೆ ಎದ್ದು ನಿಂತು ಕಣ್ಣಿನ ದೃಷ್ಟಿ ಬಲವಾಗಿ ನೂಕಿದೆ. ಚಿಪ್ಪುಗಳ ಗುಡ್ಡೆ ಚೀಲದೊಳಗೆ ಅಡಗಿಕೊಂಡಿರುವುದು ಮನವರಿಕೆಯಾಗಲು ತಡವಾಗಲಿಲ್ಲ. ಬಹುಶಃ ಚಿಪ್ಪಾಯ್ದವಳು ಇವನ ಮಗಳೇ ಆಗಿರಬೇಕು ಎಂದುಕೊಂಡು 'ಸರಿ ಬಾ, ಎತ್ತುತ್ತೀನಿ' ಅಂತ ಹೋದೆ. ಅವನು ಟವೆಲ್ ಸುತ್ತಿ ತಲೆ ಮೆಲಿಟ್ಟುಕೊಂಡ. 'ಚಿಪ್ಪಾಯ್ದವಳು ನಿಮಗೇನಾಗಬೇಕು ?'- ಮೂಟೆ ಎತ್ತುತ್ತ ಧೈರ್ಯ ತಂದುಕೊಂಡು ಕೇಳಿದೆ. 'ಅವಳ್ಯಾರೋ ಕೋಗಿಲೆ! ದಿಕ್ಕಿಲ್ಲದವಳು, ದಿನಾ ಬಂದು ಚಿಪ್ಪಾರಿಸಿಟ್ಟು ಹೋಗ್ತಾಳೆ. 2-3 ದಿವಸಕ್ಕೊಂದ್ಸಲ ನಾನು ಬಂದು ತುಂಬಿಕೊಂಡು ಹೋಗಿ ಮಾರಿ ಬರ‌್ತೀನಿ. ನಾನು, ನನ್ನ ಹೆಂಡ್ತಿ ಮಕ್ಳು ಒಂದುಹೊತ್ತಿನ ಊಟ ಅವಳ ಹೆಸರಿನಲ್ಲೇ ಮಾಡ್ತೀವಿ' ಎನ್ನುತ್ತ ದಾಪುಗಾಲು ಹಾಕಿ ನಡೆದನು.
ಅವನ ಮಾತು ಕೇಳಿ ನನ್ನ ಮನಸ್ಸು ಯಾಕೋ ಮರಗುವಂತಾಯ್ತು. ಆದರೆ ಅವಳು ಯಾರು? ಎಲ್ಲಿಯವಳು? ಚಿಪ್ಪುಗಳನ್ನೇಕೆ ಆರಿಸುತ್ತಾಳೆ? ಅದರಲ್ಲೆನು ಅರಸುತ್ತಾಳೆ? ಇನ್ನಷ್ಟು ಕುತೂಹಲ ಹೆಚ್ಚಾಗಿ ಅವಳನ್ನು ಕೇಳಿಯೇ ಬಿಡಬೇಕೆಂದು ಆತುರ ಏಣಿ ಏರತೊಡಗಿತು. ನಾಳೆ ಕೇಳಿದರಾಯಿತು ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡು ರೂಮಿನ ಕಡೆ ಕಾಲಿಗೆ ಜೀವ ಕೊಟ್ಟೆ.
***
ಅಂದು ಗೆಳೆಯರ ಗುಂಪು ನನ್ನ ರೂಮಿಗೆ ದೌಡಾಯಿಸಿತು. ಎಲ್ಲರೂ ಕೂಡಿಯೇ ಅವತ್ತು ನದಿ ದಂಡೆಗೆ ಹೋಟೆಲ್‌ನಿಂದ ತಿಂಡಿ ಕಟ್ಟಿಕೊಂಡು ಹೋಗುವ ನಿರ್ಧಾರವಾಯಿತು. ಸಂಜೆ ಐದು ಗಂಟೆ ಸುಮಾರಿಗೆ ಅಲ್ಲಿ ಬಂದು ಸೇರಿಕೊಂಡೆವು. ಊಟಕ್ಕೆ ಉಪ್ಪಿನಕಾಯಿ ಮರೆತು ತರಲಿಲ್ಲವೆಂದು ಬೇಸರ ಮಾಡಿಕೊಳ್ಳದೆ ಸುತ್ತಲಿನ ಸವಿಯನ್ನು ಚಪ್ಪರಿಸುತ್ತ ಊಟ ಗಂಟಲಿಗಿಳಿಸಿಕೊಂಡೆವು.
ಸಂಜೆ ಆರರ ಸಮಯವನ್ನು ಸಮೀಪಿಸುತ್ತಿತ್ತು. ನದಿಯ ದೂರ ತೀರದ ಬೆಟ್ಟದ ಮುಡಿಯ ಮೇಲೆ ಕೆಂಪು ಚಕ್ರದಂತೆ ಸುಳಿ ಮಿಂಚು ಬೀರುತ್ತಿರವ ಸೂರ್ಯ ಇಂಚಿಂಚಾಗಿ ಮುಚ್ಚಿಕೊಳ್ಳಲೆತ್ನಿಸುತ್ತಿದ್ದನು. ಇಲ್ಲಿ ಚಿಪ್ಪಾರಿಸುತ್ತಿದ್ದ ಹುಡುಗಿ ಇನ್ನೂ ಚಿಪ್ಪುಗಳನ್ನರಸುತ್ತ ನೀರಿಗಿಳಿದಿದ್ದಳು. ಬಹುಶಃ ಇವಳು ಒಳಬರುವುದನ್ನೇ ಕಾದು ಕುಳಿತಂತಿದ್ದ ಭಯಂಕರ ಅಲೆಯೊಂದು ಬಂದು ದಡಕ್ಕೆ ಬಡಿದು ಹಿಂದಿರುಗುವಾಗ ಅವಳನ್ನೂ ಒಳಗೆಳೆದುಕೊಂಡು ಹೊರಟಿತು. ಸುತ್ತಲಿನವರೆಲ್ಲ ಕಣ್ಣಗಲಿಸಿ ತುಟಿಗಳ ಮೆಲೆ ನಾಲ್ಕು ಬೆರಳುಗಳನ್ನಿಟ್ಟುಕೊಂಡು ನೋಡುತ್ತಿದ್ದರೇ ವಿನಾ ಮುಷ್ಟಿ ಬಿಗಿದು ಯಾರೂ ಮುಂದೆ ಬರುವ ಧೈರ್ಯ ಮಾಡಲಿಲ್ಲ. ಸಾವಿನ ಬಾಯಿಯಲ್ಲಿ ತುತ್ತಾಗಿ ಹಿಂಜಾಡುತ್ತ ಇಷ್ಟಷ್ಟೆ ಅದರ ಹೊಟ್ಟೆಯೊಳಗೆ ಸರಿಯುತ್ತಿದ್ದಳು. ಅವಳ ಪುಟ್ಟ ಬಾಯಿಯಿಂದ ಸಣ್ಣದಾಗಿ 'ಕಾಪಾಡಿ ನನ್ನನ್ನು ಯಾರಾದರೂ, ಕಾಪಾಡಿ' ಎಂಬ ಅರ್ತನಾದ ಸುಳಿಸುಳಿಯಾಗಿ ಎಲ್ಲರ ಕಿವಿಯಲ್ಲಿ ಸುತ್ತಿಬಳಸಿ ಬಡಿಯುತ್ತಿತ್ತು. ಆದರೆ ಅಲ್ಲೇ ನಿಂತಿದ್ದ ನಾನೂ ನನ್ನ ಗೆಳೆಯರೂ ಬೆದರುಗೊಂಬೆಗಳಾಗಿದ್ದೆವು.
ಕ್ಷಣಗಳು ಉರುಳುತ್ತಿದ್ದವು. ಅವಳ ಚೀರಾಟವಿನ್ನೂ ಗುಟುಕು ಹಾಕುತ್ತಿತ್ತು.
ಅಷ್ಟರಲ್ಲೇ ಗೋಣಿ ಚೀಲ ಹಿಡಿದುಕೊಂಡು ಬರುತ್ತಿದ್ದ 'ಆ ಮನುಷ್ಯ' ದಟ್ಟೈಸಿ ನಿಂತ ಜನರ ದೃಷ್ಟಿ ನೆಟ್ಟ ಕಡೆಗೆ ತನ್ನ ನೋಟವ ಹರಿಸಿದ. ಅವಳು ಬಹಳ ಎನ್ನುವಷ್ಟು ದೂರ ಹೋಗಿದ್ದಳು. ಇವನು ಕೈ ಮೀರಿ ಹೋದ ಸ್ಥಿತಿಯನ್ನು ಮೀರಿಸಿ ತರುವೆನೆಂಬ ದೃಢ ಮನಸ್ಸಿನಿಂದ ನೀರಿನೊಳಗೆ ಜಿಗಿದು ಮುನ್ನುಗ್ಗಿ ನಡೆದನು. ಅವಳು ಮುಂದೆ ಮುಂದೆ ನಡೆದೇ ಇದ್ದಳು. ಇವನು ನೀರಿನಲೆಗಳೊಂದಿಗೆ ಸೇರಿಕೊಂಡು ಹಿಂದೆ ವೇಗದಲ್ಲಿ ಸಾಗಿದನು. ಅವಳನ್ನು ಸಮೀಪಿಸಿ ಹಿಡಿದು ಬೆನ್ನ ಮೆಲೆ ಹಾಕಿಕೊಂಡು ಇನ್ನೇನು ಹಿಂದಿರುಗಬೇಕು ಅಂತ ಪ್ರಯತ್ನಿಸಿದ. ಆದರೆ ಆಗಲಿಲ್ಲ. ಅಲೆಗಳಲ್ಲಿ ತರಗೆಲೆಯಾಗಿದ್ದ. ತಾನಾದರೂ ಉಳಿಯಬೇಕೆಂದು ಅವನ ಜೀವ ಪರಿತಪಿಸಲಿಲ್ಲ. ಇಬ್ಬರೂ ಕೂಡಿಯೇ ಹೊರಟರು. ಒಳಗೆ ಇನ್ನೂ ಒಳಗೆ, ಹಿಂದಿರುಗಿ ಬಾರದ ಆಳಕ್ಕೆ.
ಅವನ ಋಣ ತೀರಿತು. ಅವಳು ಹಚ್ಚಿದ ಕನಸಿನ ದೀಪ ನಂದಿತು. ಪಡುವಣದಲ್ಲಿ ಸೂರ್ಯ ಪೂರ್ಣವಾಗಿ ಆಸ್ತಂಗತನಾದ.
ಎಲ್ಲರೂ ಭಯಭೀತರಾಗಿ ಕಳಾಹೀನ ಮುಖ ಹೊತ್ತು ಮನೆ ಕಡೆಗೆ ಭಾರವಾದ ಹೆಜ್ಜೆಗಳನ್ನು ಎತ್ತಿಡತೊಡಗಿದ್ದರು. ಎಲ್ಲರಂತೆ ನನಗೂ ಬಹಳ ಕಸಿವಿಸಿಯಾಗುತ್ತಿತ್ತು. ಕಾಲೇಜು ಚೆಲುವೆಯರೆದುರು ತೋರಿಸುತ್ತಿದ್ದ ಪೊಗರು ಇಂದೇಕೆ ಇವಳಿಗಾಗಿ ಬಿಸಿರಕ್ತ ಕುದಿಯಲಿಲ್ಲ ಅಂತ ಕೈ ಹಿಸುಕಿಕೊಳ್ಳುತ್ತಿದ್ದೆ.
ಅಂದು ರಾತ್ರಿ ಗೆಳೆಯರ ರೂಮಿನಲ್ಲಿಯೇ ಉಳಿದುಕೊಂಡೆ. ಮನಸಿಗೆ ಯಾವುದೂ ನಿರಾಳ ಅನಿಸುತಿರಲಿಲ್ಲ. ರಾತ್ರಿಯೆಲ್ಲ ಆ ಕರಾಳ ದೃಶ್ಯವೇ ಕಣ್ಣೆದುರು ಬರುತ್ತಿತ್ತು.
ಹೀಗೆಯೇ ಐದು ದಿವಸಗಳು ಐದು ವರ್ಷಗಳಂತೆ ಕಳೆದಿದ್ದವು.
***
ಸಮಯ ಸಾಯಂಕಾಲದ ನಾಲ್ಕನ್ನು ಮುಟ್ಟಿ ಮುಂದೋಡುತ್ತಿದ್ದರೂ ಬಿಸಿಲು ತನ್ನ ತೇಜ ಕಿರಣಗಳೆಸೆತವನ್ನಿಷ್ಟೂ ಕಡಿಮೆ ಮಾಡಿರಲಿಲ್ಲ. ನುಣ್ಣನೆಯ ಟಾರು ರಸ್ತೆ ಮೇಲೆ ನಡೆದು ಬರುತಿದ್ದರೆ ಮುಂದೆಲ್ಲ ಹಸಿಹಸಿಯಾಗಿ ಕಂಡು ಮುಖಕ್ಕೆ ಮಿಂಚು ಹೊಡೆಯುತ್ತಿತ್ತು. ನನ್ನ ದೇಹವೂ ಇದಕ್ಕೆ ಹೊರತಾಗಿರಲಿಲ್ಲ. ಬಾಯಾರಿಕೆಯಿಂದ ನಾಲಿಗೆ ತುಟಿಗಳ ಮಧ್ಯೆ ಒದ್ದಾಡುತಿದ್ದರೆ, ಬೆವರು ಏಕಾಂಗಿ ಹೊರಾಟ ನಡೆಸಿತ್ತು. ಆ ಬಿರುಬಿಸಿಲಿನಲ್ಲಿ ಏದುಸಿರು ಬಿಡುತ್ತ ಬಿರಬಿರನೆ ನಡೆದುಕೊಂಡು ಮನೆ ಸೇರಿಕೊಂಡಾಗ ದೇಹ ಸುಸ್ಥಿತಿಗೆ ಬಂದಿದ್ದರೂ ಮನಸ್ಸಿನ್ನೂ ಒದ್ದಾಡುತ್ತಲೇ ಇತ್ತು. ಹಾಸಿಗೆ ಬೀಸಿ ಮೇಲೆ ಹೊರಳಾಡಿ ಮೈ ಮುರಿದುಕೊಂಡು ನಿದ್ದೆಗಾಗಿ ಕಾದರೂ, ಹಾದು ಹೋಗುವ ಹುಸಿ ಸನ್ನೆಯೂ ನನ್ನ ಮನಸ್ಸಿನ ವಿಚಲತೆಯ ಹೊಯ್ದಾಟವನ್ನರಿತ ಅದು ಮಾಡಲಿಲ್ಲ.
ಕಣ್ಣಿನಲ್ಲಿ ಬಿದ್ದಿರುವ ಹರಳು ಪದೇಪದೇ ಕಣ್ಣನ್ನು ತಿವಿದು ನೋವು ತರುವಂತೆ ಅವಳ ನೆನಪು ನನ್ನನ್ನು ಪದೇಪದೇ ಬಂದು ಕಾಡುತ್ತಿತ್ತು. ಹಗಲು ಹೊತ್ತುದೂಡಲು ತಿರುಗಾಟದ ಕೆಲಸ ಇದ್ದರೂ ರಾತ್ರಿ ಕಳೆಯಲು ಸೊಳ್ಳೆಗಳ ಒದರಾಟದ ನಡುವೆ ಅವಳ ಮತ್ತು ಅವನ ನಲಿದಾಟಕ್ಕೆ ಕಣ್ಣು ದಣಿಯುವುದೇ ವಿರಳ. ಅಪ್ಪಿತಪ್ಪಿ ದಣಿದು ಕಣ್ಣು ಮುಚ್ಚಿದರೆ ಕನಸಿನ ಲೋಕದಲ್ಲಿ ಅವರಿಬ್ಬರದೇ ಸರ್ವಾಧಿಕಾರ. ಇದರಿಂದ ಸುಖವಾದ ನಿದ್ದೆ ಎಂದರೇನು ಎಂಬ ಕಲ್ಪನೆಯೂ ನನಗೆ ಮೂಡದಂತಾಗಿತ್ತು.
ಬರುತ್ತ ದಾರಿಯಲ್ಲಿ ಸಿಕ್ಕಿದ ಪೋಸ್ಟ್‌ಮನ್ ಎರಡು ಪತ್ರಗಳನ್ನು ಕೊಟ್ಟಿದ್ದನ್ನು ನೆನಪಿಸಿಕೊಂಡೆ. ಒಂದು, ಊರಿನಿಂದ ಬಂದಿತ್ತು. ಇನ್ನೊಂದು, ಯಾವುದೋ ಸರಕಾರಿ ಆಫೀಸಿನಿಂದ ಕಳಿಸಿರುವಂತೆ ತೋರಿತು. ಕುತೂಹಲದಿಂದ ಮೊದಲು ಅದನ್ನೇ ಒಡೆದು ಕಣ್ಣಾಡಿಸಿದೆ. ಆನಂದಾಶ್ಚರ್ಯಗಳು ಒಡಮೂಡಿ ಬಂದವು. ಧನ್ಯನಾದೆನೆಂದು ಮನದಲೇ ಬೀಗಿದೆ. ಹೆತ್ತವರನ್ನು ನೆನಪಿಸಿಕೊಳ್ಳಬೇಕೆನಿಸಿತು. ಅದು ಸರಕಾರಿ ಆಫೀಸೊಂದರಲ್ಲಿ ಕೆಲಸಕ್ಕೆ ನನ್ನನ್ನು ಸೇರಿಸಿಕೊಳ್ಳಲು ಕರೆಯೋಲೆಯಾಗಿ ಬಂದಿತ್ತು.
ನನಗಾಗಿ ಕಷ್ಟ ಕೋಟಲೆಗಳಲ್ಲಿ ಮುಸುಕಿಕೊಂಡಿದ್ದ ಹೆತ್ತವರಿಗೆ ಇಂದು ಬಿಡುಗಡೆಗೊಳಿಸುವೆ ಅನ್ನೋ ಆನಂದ ಆವರಿಸಿತು. ದುಡಿದು ದಣಿದಿರುವ ತಾಯಿತಂದೆಯರನ್ನು ಅಂಗೈಯಲಿಟ್ಟು ಪೂಜಿಸಬೇಕು ಅನಿಸಿತು. ನನ್ನ ಮೇಲಿರುವ ಅವರ ಋಣದ ಭಾರ ತೀರಿಸಲು ಸಾಧ್ಯವಾಗದಷ್ಟು. ಆದರೆ ಅಣುವಿನಲ್ಲಿ ಒಂದು ಕಣವನ್ನಾದರೂ ತೀರಿಸಲು ನನ್ನನ್ನು ಅಣಿಮಾಡಿಕೊಳ್ಳಬೇಕು ಅನಿಸಿತು. ಸಮುದ್ರದ ನೀರಲ್ಲಿ ಲೀನರಾಗಿ ನನಗೆ ಮಾದರಿಯಾದ ಆ ಇಬ್ಬರು ದೇವತೆಗಳಿಗೂ ಚಿರಋಣಿಯಾಗಬೇಕು. ಬದುಕಿನ ಬಗ್ಗೆ ಚಿಂತಿಸುವಂತೆ ಮಾಡಿದ ಅವರಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಅಣು ಮಾತ್ರವೇ! ಈ ಪತ್ರ ಅಸಹಾಯಕತೆಯಿಂದ ನೊಂದು ಬೆಂದು ಕೊಚ್ಚಿ ಹೋಗುತ್ತಿದ್ದವನ ಮನಸ್ಸಿಗೆ ಇಂಬಾಗಿ ಬಂದಿತ್ತು. ನಾನು ಧನ್ಯನಾದೆ ಅಂದುಕೊಂಡೆ. ಹರುಷಗೊಂಡ ಮನಸ್ಸು ಸೂತ್ರ ಹರಿದ ಗಾಳಿಪಟದಂತೆ ಏನೇನೋ ಆಡಿಕೊಂಡು ಹಾರಾಡಿತು.
ಆ ಪತ್ರವನ್ನು ಕೆಳಗಿಟ್ಟು ಇನ್ನೊಂದು ಪತ್ರದಲ್ಲಿ ಏನಿರಬಹುದು ಅಂತ ಕುತೂಹಲದಿಂದ ಓದಲು ತೊಡಗಿದೆ. ಸಂತೋಷದಿಂದ, ಉಲ್ಲಾಸದಿಂದ ಕುಣಿಯುತ್ತಿರುವಾಗ ಭೂಮಿಯೇ ಬಾಯಿಬಿರಿದು ಒಳಸೆಳೆದುಕೊಂಡಂತೆ, ಈ ಕ್ಷಣವೇ ಹರುಷಗೊಂಡು ಹೃದಯ ತುಂಬಿ ನಲಿಯುತ್ತಿರುವಾಗ ಒಮ್ಮೆಲೆ ದುಃಖದ ಪಾತಾಳಕ್ಕಿಳಿಯುವಂತಾಯಿತು. ಉಲ್ಲಾಸದಲ್ಲಿ ಉಬ್ಬಿ ಹೋಗಿದ್ದ ನಾನು ಬಲೂನಿನ ಗಾಳಿ ಬಿಟ್ಟಂತೆ ಜರ‌್ರನೆ ಇಳಿದು ಕುಸಿದು ಹೋದೆ.
'ಅಪ್ಪ ಜ್ವರದಿಂದ ಹಾಸಿಗೆ ಹಿಡಿದಿದ್ದ. ಇದರಿಂದ ಅಮ್ಮ ನಿಸ್ತೇಜಳಾಗಿದ್ದಳು. ದುಡ್ಡು ಸಿಗದೆ ಡಾಕ್ಟರ್ ಹತ್ತಿರ ಕರೆದೊಯ್ಯಲು ಆಗಲಿಲ್ಲ. ಇಬ್ಬರೂ ನಿನ್ನ ಮುಖ ನೋಡಲು ಎರಡು ದಿವಸ ಕಣ್ಣಲ್ಲೇ ಜೀವ ಹಿಡಿದುಕೊಂಡಿದ್ದರು. ಕೊನೆಗೆ ಅಪ್ಪ ಹಾಸಿಗೆಯಲ್ಲೇ ಚಿರನಿದ್ರೆಗೆ ಜಾರಿದ. ಅಮ್ಮ ಅವನ ಜೊತೆಯಲ್ಲಿಯೇ ಗರತಿಯಾಗಿ ಹೋದಳು...'.
ಈ ಒಂದೊಂದು ಶಬ್ದಗಳನ್ನೂ ಓದುವಾಗ ತುಟಿಗಳು ಅದುರಿ ಹೋಗುತಿದ್ದವು. ದುಃಖ ಉಕ್ಕಿ ಉಕ್ಕಿ ಬಂದು ಸಂತೋಷವನ್ನೆಲ್ಲ ಸವರಿ ನೆಕ್ಕಿ ಬಿಟ್ಟಿತು. ಕುರುಡಾಗಿ ಅರ್ಧ ಬಾಳುವೆ ಸವೆಸಿದವನಿಗೆ ಕ್ಷಣ ಹೊತ್ತು ಕಣ್ಣು ಕೊಟ್ಟು, ಅವನು ಲೋಕದಚ್ಚರಿಗೆ ಬೆರಗಾಗಿ ನಿಂತಿರುವಾಗ ಸೊಬಗು ಪೂರ್ತಿ ಸವಿಯುವ ಮೊದಲೇ ಕಣ್ಣು ಮರಳಿ ಕಿತ್ತುಕೊಂಡಂತಾಗಿತ್ತು ನನ್ನ ಪರಿಸ್ಥಿತಿ.
ಕಣ್ಣ ಮುಂದೆ ಕತ್ತಲಾವರಿಸಲು ಶುರುವಾಯಿತು. ಯಾವ್ಯಾವೋ ಅಸ್ಪಷ್ಟ ಚಿತ್ರಗಳು ಕಣ್ಣೆದುರು ಓಡಾಡತೊಡಗಿದವು. ಏನೇನೋ ಒದರತೊಡಗಿದೆ.
ಆ ನದಿಯ ದಂಡೆಯ ಮೇಲೆ ಚಿಪ್ಪುಗಳನ್ನಾರಿಸುತ್ತಿದ್ದ 'ಓ... ಚಿಟ್ಟೆ, ನೀನು ನೀರಿಗೆ ಬಿದ್ದ ಕ್ಷಣದಲ್ಲೇ ನಾನು ಕಾರ್ಯಪ್ರವೃತ್ತನಾಗಿದ್ದರೆ ನಿನ್ನನ್ನು ಉಳಿಸಬಹುದಿತಲ್ಲ? ಛೀ... ನಿಂತು ನೋಡುತಿದ್ದೆ ನಿನ್ನ ದುರ್ಗತಿಯನ್ನು. ಅವನಾದರೂ ನಿನ್ನನ್ನು ಬದುಕಿಸಬೇಕಾಗಿತ್ತು. ಆದರೆ ಕಾಲ ಮಿಂಚಿದ ಮೇಲೆ ಬಂದನಲ್ಲವೆ. ನೀನು ಹೋದೆ ಅವನೂ ನಿನ್ನ ಜೊತೆಗೆ ಬಂದ... ಅವನನ್ನಾಶ್ರಯಿಸಿದವರ ಬಾಳು ಬರೀ ಗೋಳಲ್ಲವೆ?
ಏನಾಗಿದೆ ನನಗೆ?' ಅಂತ ಎಚ್ಚರವಾಗಲು ಪ್ರಯತ್ನಿಸಿದೆ. ಕೈಗೇನೋ ಸಿಕ್ಕಿತ್ತು. 'ಹ್ಞಾಂ! ಏನಿದು ಪತ್ರದ ಕೆಳಗೆ?' ಎಂದು ನೋಡಿದಾಗ ನನ್ನ ಕುಟುಂಬದ ಫೋಟೋ ಕಂಡಿತು. ಅದರಲ್ಲಿ ಮುದ್ದಾದ ತಂಗಿ ನಗುತ್ತಿದ್ದಳು. ಕೈ ಜಾರಿ ಹೋಗುತ್ತಿರುವ ತಮ್ಮ ಹಿಂದೆ ಹಮ್ಮಿನಿಂದ ನಿಂತ ಹಾಗನ್ನಿಸುತ್ತಿತ್ತು. ಭವಿಷ್ಯದಲ್ಲಿ ಬೆಳಗಬೇಕಾಗಿರುವ ಉಳಿದ ತಮ್ಮಂದಿರು 'ನಿನ್ನ ದಾರೀನೇ ಕಾಯ್ತಾ ಇದ್ದೀವಣ್ಣಾ... ಬೇಗ ಬಂದು ಬಿಡು ನಮ್ಮ ನಡುವೆ. ಬಿಟ್ಟು ಹೋಗಿರುವ ಅಪ್ಪ-ಅಮ್ಮನ ಪ್ರತಿರೂಪವಾಗಿ' ಎಂದು ಕಾತರಿಸುತ್ತಿರುವಂತೆ ಅವರ ಕಣ್ಣುಗಳು ನನ್ನನ್ನು ನೋಡಿ ಹೇಳುತಿದ್ದವು. ಆವಾಗ ಎಚ್ಚರವಾದೆ ಅನ್ನಿಸಿತು. ಕಣ್ಣೀರು ಒರೆಸಿಕೊಂಡೆ. 'ಇಲ್ಲ! ಇವರ ಬಾಳು ಗೋಳಾಗದಿರಲಿ' ಎಂದಿತು ನನ್ನ ಅಂತರಂಗ. ಆ ಕ್ಷಣದಲ್ಲಿ ನನಗೆ, ದೇವರು ಹಾರುವ ಶಕ್ತಿ ಕೊಡಬಾರದೇ ಎಂಬ ಆತುರ ತಾಳಲಾರದಷ್ಟು ಅವತರಿಸಿಬಿಟ್ಟಿತ್ತು.
--------------

ಈ ಕಥೆ ವಿಜಯ ಕರ್ನಾಟಕ ಪತ್ರಿಕೆಯ ’ಸಾಪ್ತಾಹಿಕ ವಿಜಯ’ ದಲ್ಲಿ ದಿನಾಂಕ 21 ಏಪ್ರಿಲ್ 2013 ರಂದು ಪ್ರಕಟಗೊಂಡಿದೆ. ಅಲ್ಲಿಗೆ ಹೋಗಲು ಈ ಲಿಂಕ್ ಕ್ಲಿಕ್ಕಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ