ಪರಿಶ್ರಮ, ಶ್ರದ್ಧೆ ಹಾಗೂ ಕಾಯಕನಿಷ್ಠೆ ಇದ್ದರೆ ಶೂನ್ಯದಿಂದಲೂ ಒಂದು ಯಶಸ್ಸಿನ ಸಾಮ್ರಾಜ್ಯವನ್ನು ಖಂಡಿತ ಮುಟ್ಟಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ಶ್ರೀ ಜೀವನ್ ಪವಾರ್.
ಮಹಾರಾಷ್ಟ್ರದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿ, ಇಂದು ಜಾಗತಿಕ ಮಟ್ಟದ ಉದ್ಯಮ ರಂಗದಲ್ಲಿ ಗುರುತಿಸಿಕೊಂಡಿರುವ ಇವರು ಪ್ರಸ್ತುತ 'ವೃತ್ತಿ ಸೊಲ್ಯೂಶನ್ಸ್ ಲಿಮಿಟೇಡ್' ಸಂಸ್ಥೆಯ 'ವೈಸ್ ಪ್ರೆಸಿಡೆಂಟ್ - ಬ್ಯುಸಿನೆಸ್ ಡೆವಲಪ್‌ಮೆಂಟ್' (ಇಂಡಿಯಾ ಅಂಡ್ ಗ್ಲೋಬಲ್ ಮಾರ್ಕೆಟ್) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಯಿ ಗ್ರಾಮದ ಧೂಳಿನಿಂದ ಚಿಗುರಿದ ಕನಸು
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಲಾತೂರ್ ತಾಲ್ಲೂಕಿನ 'ಸಾಯಿ' ಎಂಬ ಪುಟ್ಟ ಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಜೀವನ್ ಪವಾರ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜಿಲ್ಲಾ ಪರಿಷತ್ತಿನ ಸರ್ಕಾರಿ ಶಾಲೆಯ ಧೂಳು-ಮಣ್ಣಿನ ನಡುವೆ ಮುಗಿಸಿದ ಇವರ ಕಣ್ಣುಗಳಲ್ಲಿ ಸದಾ ಆಕಾಶದಷ್ಟೇ ಎತ್ತರದ ಕನಸುಗಳಿದ್ದವು. ಇವರ ಬಾಲ್ಯದ ಇತಿಹಾಸವನ್ನು ಹತ್ತಿರದಿಂದ ಬಲ್ಲ ಗೆಳೆಯರು ನೆನಪಿಸಿಕೊಳ್ಳುವಂತೆ, ಜೀವನ್ ಅವರು ಸಾಯಿಯ ಗಲ್ಲಿಗಳಲ್ಲಿ ಆಟ ಆಡುತ್ತಾ, ಸಹಜ ಮೋಜು ಮಸ್ತಿ ಮಾಡುತ್ತಾ ಬೆಳೆದ ಅಪ್ಪಟ 'ಚಡ್ಡಿ ದೋಸ್ತ್'. ಅಂದು ಹಳ್ಳಿಯ ಪರಿಸರದಲ್ಲೂ ಎಲ್ಲರನ್ನೂ ಪ್ರೀತಿಯಿಂದ ಒಟ್ಟುಗೂಡಿಸುವ ಅವರ 'ಮನಮಿಡಿಯುವ' ಮತ್ತು 'ಸರಳ ವ್ಯಕ್ತಿತ್ವ'ವೇ ಇಂದು ಅವರನ್ನು ಒಬ್ಬ ಯಶಸ್ವಿ ನಾಯಕನನ್ನಾಗಿ ರೂಪಿಸಿದೆ.
2001ರ ಹೋರಾಟದ ದಿನಗಳು: ಸೈಕಲ್‌ನಿಂದ ಆರಂಭವಾದ ಪಯಣ
ಉನ್ನತ ಶಿಕ್ಷಣಕ್ಕಾಗಿ ಲಾತೂರ್ ನಗರಕ್ಕೆ ಕಾಲಿಟ್ಟಾಗ ಜೀವನ್ ಪವಾರ್ ಅವರ ಅಸಾಮಾನ್ಯ ಉದ್ಯಮಶೀಲತೆಯ ಪಯಣ ಆರಂಭವಾಯಿತು. ಅದು 2001 ರ ಸಮಯ. ಲಾತೂರಿನ ಒಂದು ಸಣ್ಣ ಗಲ್ಲಿಯಲ್ಲಿ 'ಜೆಪಿ ಕಂಪ್ಯೂಟರ್ ಅಂಡ್ ಕನ್ಸಲ್ಟೆಂಟ್' ಎಂಬ ಪುಟ್ಟ ಕಂಪ್ಯೂಟರ್ ಅಂಗಡಿಯೊಂದನ್ನು ಇಟ್ಟುಕೊಂಡು ಹಗಲಿರುಳು ಬೆವರು ಹರಿಸುತ್ತಿದ್ದರು. ಆ ದಿನಗಳಲ್ಲಿ ಹಳ್ಳಿಯ ಗಲ್ಲಿಯಿಂದ ಹಿಡಿದು ನಗರದ ಅಂಗಡಿಯವರೆಗೆ ಪ್ರತಿದಿನ ಹತ್ತು ಕಿಲೋ ಮೀಟರ್ ಸೈಕಲ್ ಮೇಲೆ ಪಯಣ ಮತ್ತು ಐದು ಕಿಲೋ ಮೀಟರ್ ಗಳ ಕಾಲ್ನಡಿಗೆಯಿಂದ ಸಾಗುತಿದ್ದ ಅವರ ಬದುಕು, ಕಠಿಣ ಪರಿಶ್ರಮದ ಕಾರಣದಿಂದಾಗಿ ಇಂದು ದೇಶ-ವಿದೇಶಗಳಿಗೆ ವಿಮಾನದ ಮೂಲಕ ಹಾರಾಟ ನಡೆಸುವ ಹಂತಕ್ಕೆ ಬಂದು ತಲುಪಿದೆ! ಇದು ಸೈಕಲ್‌ನಿಂದ ಸಾಗಿದ ಸತತ ಪ್ರಯತ್ನದ ವಿಮಾನದ ಯಶೋಗಾಥೆ ಎನ್ನಬಹುದು.ಗುರು ಮಾರ್ಗದರ್ಶನ ಮತ್ತು ಆಡಿಯೋ ಕ್ರಾಂತಿಯ ಜನ್ಮ
ಜೀವನ್ ಪವಾರ್ ಅವರ ಬದುಕಿನಲ್ಲಿ ಹೊಸ ಶಕೆ ಆರಂಭವಾಗಿದ್ದೇ ದೂರದರ್ಶಿ ಮಾರ್ಗದರ್ಶಕರಾದ ವೃತ್ತಿ ಸೊಲ್ಯೂಶನ್ಸ್ ಲಿಮಿಟೇಡ್ ನ ಸಿಇಓ ಶ್ರೀ ವೀರೇಂದ್ರ ಜಮ್ದಾಡೆ ಸರ್ ಅವರ ಭೇಟಿಯ ನಂತರ. ವೀರೇಂದ್ರ ಜಮ್ದಾಡೆ ಹಾಗೂ ಸಂಗೀತಾ ಜಮ್ದಾಡೆ ಅವರ ಅದ್ಭುತ ಬೆಂಬಲ ಮತ್ತು ಅಚಲವಾದ ವಿಶ್ವಾಸದೊಂದಿಗೆ, 2006 ರಲ್ಲಿ ಲಾತೂರ್‌ನಲ್ಲಿ ಜೀವನ್ ಪವಾರ್ ಅವರ ಪರಿಕಲ್ಪನೆಯಲ್ಲೇ ಮೊದಲ ಆಡಿಯೋ ವಾಲಾ ಬಸ್ ಸ್ಟ್ಯಾಂಡ್ ಮಾಧ್ಯಮ ಜನ್ಮತಾಳಿತು. ಪುಣೆಯ ಸ್ವಾರಗೇಟ್, ಶಿವಾಜಿನಗರ ಸೇರಿದಂತೆ ಇಡೀ ಮಹಾರಾಷ್ಟ್ರವನ್ನು ಈ ಕ್ರಾಂತಿಕಾರಿ ಮಾಧ್ಯಮದ ಮೂಲಕ ವ್ಯಾಪಿಸಿದ ಕೀರ್ತಿ ಸಂಪೂರ್ಣವಾಗಿ ಇವರಿಗೆ ಸಲ್ಲುತ್ತದೆ.
ಕನ್ನಡಾಂಬೆಯ ಮಡಿಲಿನಲ್ಲಿ ಜಾಗತಿಕ ವಿಸ್ತರಣೆ
ಛತ್ರಪತಿ ಶಿವಾಜಿ ಮಹಾರಾಜರ ಅಚ್ಚಳಿಯದ ಇತಿಹಾಸವಿರುವ ಮಹಾರಾಷ್ಟ್ರದ ಮಣ್ಣಿನಿಂದ ಬಂದ ಈ ಮಗನನ್ನು ತದನಂತರ ಹೆಮ್ಮೆಯ ಕನ್ನಡಾಂಬೆ ತನ್ನ ಮಗನನ್ನಾಗಿಸಿಕೊಂಡಳು. 2013 ರಲ್ಲಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಆಗಿನ NEKRTC ಅಡಿಯಲ್ಲಿ ಮೊದಲ ಆಡಿಯೋ ಬಸ್ ಸ್ಟ್ಯಾಂಡ್ ಆರಂಭವಾಯಿತು.
"ಆಡಿಯೋವಾಲಾ ಬಸ್ ಸ್ಟ್ಯಾಂಡ್" ಪರಿಕಲ್ಪನೆಯನ್ನು ಅಕ್ಷರಶಃ ನಿಜವಾಗಿಸಿ, ಗ್ರಾಮೀಣ ಭಾರತವನ್ನು ಆಧುನಿಕ ಭಾರತದೊಂದಿಗೆ ಜೋಡಿಸುವ 'ಶುದ್ಧ ದೇಶಿ ಕಮ್ಯುನಿಕೇಶನ್ ಪ್ಲಾಟ್‌ಫಾರ್ಮ್' ಆಗಿ ಪರಿವರ್ತಿಸಿದರು. ಮುಂದೆ ಕೇವಲ ಧ್ವನಿ ಜಾಹೀರಾತಾಗಿದ್ದ ಈ ಮಾಧ್ಯಮವನ್ನು ಇಡೀ ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅದ್ಭುತ 'ಆಡಿಯೋ-ವಿಷುಯಲ್' ಕ್ರಾಂತಿಯನ್ನಾಗಿಸಿದರು. ರಾಜ್ಯದ 31 ಜಿಲ್ಲೆಗಳ ಸುಮಾರು 237ಕ್ಕೂ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಡಿಜಿಟಲ್ ಪರದೆಗಳಲ್ಲಿ ಆಡಿಯೋವಾಲಾ ಬಸ್ ಸ್ಟ್ಯಾಂಡ್ ರಾರಾಜಿಸುತ್ತಿದೆ.
ಲಾತೂರ್‌ನಿಂದ ಪುಣೆ, ಪುಣೆಯಿಂದ ಬೆಂಗಳೂರು... ಹೀಗೆ ಸಾಗಿದ ಇವರ ಉದ್ಯಮ ಸಾಮ್ರಾಜ್ಯ ಈಗ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ತಮ್ಮ ಅದ್ಭುತ ಚಾಕಚಕ್ಯತೆಯಿಂದ ವ್ಯವಹಾರವನ್ನು ದೇಶದ ಗಡಿ ದಾಟಿಸಿ ವಿದೇಶಗಳಲ್ಲೂ (Global Market) ಯಶಸ್ವಿಯಾಗಿ ವಿಸ್ತರಿಸುತ್ತಿದ್ದಾರೆ.
ದಿನಕ್ಕೆ 48 ಗಂಟೆಗಳ ಹಂಬಲ ಮತ್ತು ನುಡಿದಂತೆ ನಡೆಯುವ ಛಲ
ಕೆಲಸದ ವಿಷಯದಲ್ಲಿ ಜೀವನ್ ಪವಾರ್ ಅವರು ಅಪ್ಪಟ ಬದ್ಧತೆ ಹೊಂದಿರುವ (Highly Committed) ಲೀಡರ್. ಅವರು ಒಂದು ಮಾತು ಕೊಟ್ಟರೆ, ಆಡಿದ ಮಾತಿನಂತೆ ನಡೆದೇ ತೀರುತ್ತಾರೆ. ಜೀವನ್ ಸರ್ ಅವರು ಸದಾ ಒಂದು ಮಾತು ಹೇಳುತ್ತಾರೆ: "ನನಗೆ ಕೆಲಸ ಮಾಡಲು ದಿನದ 24 ಗಂಟೆಗಳು ಸಾಲುತ್ತಿಲ್ಲ, ದಿನಕ್ಕೆ 48 ಗಂಟೆಗಳು ಇರಬೇಕಿತ್ತು!" ಕಠಿಣ ಪರಿಶ್ರಮಕ್ಕೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದನ್ನು ನಂಬಿದ ಇವರು, "ನಾವು ಕೇವಲ ಪರಿಶ್ರಮ ಪಡಬೇಕು, ಅದಕ್ಕೆ ವೀರೇಂದ್ರ ಸರ್ ಅವರ ಬುದ್ಧಿವಂತಿಕೆಯ ಐಡಿಯಾ ಜೊತೆಯಾಗಬೇಕು" ಎನ್ನುತ್ತಾರೆ. ತಮ್ಮ ಯಶಸ್ಸಿನ ಉತ್ತುಂಗದಲ್ಲೂ ಗುರುಗಳನ್ನು ನೆನೆಯುವ ಅವರ ವಿನಮ್ರತೆ ಪ್ರತಿಯೊಬ್ಬರಿಗೂ ಮಾದರಿ.ಸಮಯ ಮತ್ತು ಅವಕಾಶವನ್ನು ಎಂದಿಗೂ ಬಿಟ್ಟುಕೊಡದೆ ಪ್ರತಿ ಕ್ಷಣವನ್ನೂ ಚಿನ್ನವಾಗಿಸುವ ಈ ಅದ್ಭುತ ಕಾಯಕ ಯೋಗಿ ಜೀವನ್ ಪವಾರ್ ಅವರ ಪಯಣ ಹೀಗೆಯೇ ಮುಂದುವರಿಯಲಿ, ಇವರ ಯಶೋಗಾಥೆ ಕೋಟ್ಯಂತರ ಯುವಕರಿಗೆ ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ.
-ರಾಘವೇಂದ್ರ ಎಂ. ಬೊಗಲೆ




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ