ಮಧ್ಯಪ್ರದೇಶದ ರಾಜಧಾನಿ ಭೋಪಾಲನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಭೋಜಪುರದಲ್ಲಿ ಈ ದೇವಸ್ಥಾನ ಇದೆ. ಇದನ್ನು ಭೋಜಪುರ ಮಂದಿರ, ಭೋಜೇಶ್ವರ ಮಂದಿರ ಎಂದೆಲ್ಲ ಕರೆಯುತ್ತಾರೆ. ತುಂಬಾ ವಿಶಾಲವಾದ ದೇವಾಲಯ ಮತ್ತು ಶಿವಲಿಂಗ ಇದಾಗಿರುವುದರಿಂದ ಇಲ್ಲಿನ ಭಕ್ತಾದಿಗಳ ಪಾಲಿಗೆ ಇದು ಈ ಭಾಗದ ಸೋಮನಾಥ ಮಂದಿರ ಎಂದೇ ಪ್ರಸಿದ್ಧವಾಗಿದೆ. ಇದೇ ದೇವಸ್ಥಾನದಲ್ಲಿ ನಿಂತು ಭಕ್ತಿ ಪರವಶರಾಗಿ ಶಿವತಾಂಡವ ಸ್ತೋತ್ರವನ್ನು ಕಾಲಿಚರಣ ಮಹಾರಾಜ ಅವರು ಹಾಡುತ್ತಾರೆ.

ಭೋಜಪುರದಲ್ಲಿರುವ ಈ ಭವ್ಯ ಶಿವ ಮಂದಿರ ಪೂರ್ಣಗೊಳಿಸದೆ
ಅರ್ಧಕ್ಕೆ ಬಿಟ್ಟದ್ದು. ಹೌದು ಇದು ಅಪೂರ್ಣ ದೇವಾಲಯ. ಈ ದೇವಸ್ಥಾನವನ್ನು
ನೋಡಿದಾಗ ಒಮ್ಮೆಲೆ ಇದರ ಕಟ್ಟಡ ಕಾಮಗಾರಿಯನ್ನು ಕೊನೆಗಳಿಗೆಯಲ್ಲಿ
ಪೂರ್ಣಗೊಳಿಸದೆ ನಿಲ್ಲಿಸದಂತೆ ಕಾಣಿಸುತ್ತದೆ. ಆದರೆ ಯಾವ ಕಾರಣಕ್ಕಾಗಿ ಇದನ್ನು ಪೂರ್ಣಗೊಳಿಸದೇ
ಉಳಿಸದರು ಎಂಬ ಬಗ್ಗೆ ಇತಿಹಾಸವನ್ನು ಕೆದಕಿ ನೋಡಿದಾಗ ಉತ್ತರ ನಿಖರವಾಗಿ ತಿಳಿದು ಬರುವುದಿಲ್ಲ. ಆದರೆ ಕೆಲವರ ಪ್ರಕಾರ ಈ ಶಿವಲಿಂಗ ಮಂದಿರದ ನಿರ್ಮಾಣ ಒಂದೇ ರಾತ್ರಿಯಲ್ಲಿ ಪೂರ್ಣಗೊಳಿಸುವ
ಅನಿವಾರ್ಯತೆ ಇತ್ತು ಹೀಗಾಗಿ ಪೂರ್ಣವಾಗುವ ಮುಂಚೆ ಅಂದರೆ ದೇವಸ್ಥಾನದ ಮೇಲ್ಛಾವಣಿ ಕೆಲಸ ಶುರುಮಾಡುವ ಮುಂಚೆಯೆ ಬೆಳಗಾಗಿದ್ದರಿಂದ,
ಆ ಕೆಲಸ ಎಲ್ಲಿವರೆಗೆ ಇತ್ತೋ ಅಲ್ಲಿಗೆ ಮುಗಿಸಿ ಬಿಡಲಾಯಿತು ಎನ್ನಲಾಗುತ್ತದೆ.
ಕೆಲವು ಇತಿಹಾಸಕಾರರ ಅನುಮಾನದ ಪ್ರಕಾರ ಈ ದೇವಾಲಯ ಪೂರ್ಣಗೊಳಿಸಲು
ಬೇಕಾದ ಅಗತ್ಯ ಸರಕು ಸಾಮಗ್ರಿಗಳು ಅಭಾವ ಆಗಿರಬೇಕು ಅಥವಾ ನೈಸರ್ಗಿಕ ಆಪತ್ತು ಎದುರಾಗಿರಬೇಕು
ಇಲ್ಲವೆ ಆ ಸಮಯ ರಾಜ್ಯದಲ್ಲಿ ಯುದ್ಧ ಆರಂಭವಾಗಿರಬೇಕು.
ಹೀಗಾಗಿ ಈ ಕಾರ್ಯ ಪೂರ್ಣಗೊಳ್ಳಲಿಲ್ಲ.
ಅಥವಾ ಆ ಸಮಯ ಈ ರಾಜ್ಯದ ಅಧಿಪತಿ ನಿಧನವಾಗಿರಬಹುದು ಹೀಗಾಗಿ ಕೆಲಸ ಅಲ್ಲಿಗೆ ನಿಲ್ಲಿಸಿರಬಹುದು ಎನ್ನುತ್ತಾರೆ.
ಇನ್ನು ಕೆಲವು ಪುರಾತತ್ವ ಇಲಾಖೆಯವರು ಹೇಳುವಂತೆ ಈ ದೇವಾಲಯದ ನಿರ್ಮಾಣದಲ್ಲಿ ವಾಸ್ತು-ಲೆಕ್ಕಾಚಾರ ಏರುಪೇರಾಗಿನೋ ಇಲ್ಲ ಕಾಮಗಾರಿಯಲ್ಲಿ
ದೋಷ ಕಂಡುಬಂದಿದ್ದರಿಂದಲೋ
ಪುನರ್ನಿರ್ಮಾಣ ಮಾಡದೆ ಅದನ್ನು ಅಲ್ಲಿಗೇ ಸ್ಥಗಿತಗೊಳಿಸಿರಲು ಬಹುದು. ಆದರೆ ಈ ಎಲ್ಲಾ ಸಂಗತಿಗಳ ಬಗ್ಗೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಹೀಗಾಗಿ ನಂಬಲು ಕಷ್ಟ.
ಆದರೆ ಇಲ್ಲಿನ ಸ್ಥಳೀಯರು ಮತ್ತು ಈ ದೇವಸ್ಥಾನದ ನಿಕಟವರ್ತಿಗಳು
ಹೇಳುವ ಮಾಹಿತಿಗಳೇ ಬೇರೆ. ಈ ಕುರಿತು ಎರಡು ದಂತ ಕತೆಗಳು ಇಲ್ಲಿ ಜನಜನಿತ. ಅದರಲ್ಲಿ ಒಂದು ಈ ದೇವಾಲಯವನ್ನು ಪಾಂಡವರು ತಮ್ಮ ವನವಾಸದ ಸಮಯದಲ್ಲಿ ನಿರ್ಮಿಸುತ್ತಾರೆ. ಈ ಭವ್ಯವಾದ ಶಿವಲಿಂಗದ ಮುಂದೆ ವಿಶಾಲ ಕಾಯದ ಭೀಮ ಮಂಡಿಯೂರಿ ಕುಳಿತು ಪುಷ್ಪಾರ್ಚನೆ ಮಾಡುತ್ತಿದ್ದನಂತೆ.
ಈ ಪಂಚ ಪಾಂಡವರು ಮಾತೆ ಕುಂತಿಯ ಪೂಜೆಗಾಗಿ ಈ ವಿಶಾಲ ಶಿವಮಂದಿರವನ್ನು ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡುತ್ತಾರೆ. ಬೆಳಗಾಗುವವರೆಗೆ ಮಂದಿರವನ್ನು ನಿರ್ಮಿಸಿ ಬೆಳಗಾಗುತ್ತಿದ್ದಂತೆ
ಎಲ್ಲಿವರೆಗೆ ಆಗಿತ್ತೋ ಅಲ್ಲಿಗೆ ಬಿಟ್ಟು ಹೊರಟುಹೋದರಂತೆ. ಹೀಗಾಗಿ ಈ ಶಿವಲಿಂಗ ಮಂದಿರ ಅಪೂರ್ಣವಾಗಿಯೇ
ಉಳಿಯಿತು ಎನ್ನುವ ಪ್ರತೀತಿ ಇದೆ. ಇನ್ನೊಂದು ದಂತಕಥೆಯ ಪ್ರಕಾರ ಮಧ್ಯ ಭಾರತದ ರಾಜಾ ಭೋಜರಾಜ ಹನ್ನೊಂದನೇ ಶತಮಾನದಲ್ಲಿ ಈ ದೇವಾಲಯವನ್ನು ಕಟ್ಟಿಸದನಂತೆ. ಈ ದೇವಸ್ಥಾನದ ವಿಡಿಯೋ ವೀಕ್ಷಿಸಿ
ಈ ಎಲ್ಲಾ ನಂಬಿಕೆ, ಊಹಾಪೋಹ, ಪ್ರತೀತಿ, ಕಾಲ್ಪನಿಕ ಕಥೆಗಳ ಮಧ್ಯೆ ಈ ವಿಶಾಲ ಮತ್ತು ಭವ್ಯ ಶಿವಲಿಂಗ ಮಂದಿರವಂತು ಈಗಲೂ ಗತಕಾಲದ ಕುರುಹಾಗಿ, ಐತಿಹಾಸಿಕ ಸ್ಮಾರಕವಾಗಿ ಎಲ್ಲರ ಆಕರ್ಷಣೀಯ ಕೇಂದ್ರವಾಗಿರುವುದಂತೂ ನಿಜ. ಅದರಲ್ಲೂ ಕಾಲಿಚರಣ್ ಮಹಾರಾಜ ಅವರು ಈ ಶಿವಲಿಂಗದ ಎದುರು ಭಕ್ತಿಪರವಶರಾಗಿ
ಶಿವತಾಂಡವ ಸ್ತೋತ್ರವನ್ನು
ಪ್ರಸ್ತುತಪಡಿಸುವ ಮೂಲಕ ಇಡೀ ದೇಶದ ತುಂಬಾ ಈ ಸ್ಥಳದ ಮಹಿಮೆಯನ್ನು ಅದರ ಇರುವಿಕೆಯನ್ನು
ತಿಳಿಸಿದ್ದಾರೆ.
-ಕಾವ್ಯಾನುರಾಗ